Tuesday, March 31, 2009

ಕತೆ ಎನ್ನಿಸಿಕೊಳ್ಳಲು ಅಯೋಗ್ಯವಾದ ಕತೆಗಳು......

ಹುಬ್ಬಳ್ಳಿ ಇನ್ನೇನು ಬಂದೆ ಬಿಟ್ಟಿತು... ರೈಲು ಇಳಿಯುವ ತಯಾರಿಯಲ್ಲಿದ್ದ ಅವನನ್ನು ಅವಳು ಕೇಳಿದಳು "ನಿಮ್ಮ ಕಾಂಟಾಕ್ಟ್ ನಂಬರ್ ಕೊಡುವಿರಾ?" ಧ್ವನಿಯಲ್ಲಿ ಸ್ವಲ್ಪ ಭಯ ಸ್ವಲ್ಪ ಕಾತರತೆ ಇತ್ತು. ಇವಳನ್ನು ನೋಡಿ ನಸುನಗೆಯೊಂದನ್ನು ನಕ್ಕ ಅವನು. "ಈಗಲೇ ನಾಲ್ಕು ಗಂಟೆಗಳ ನೆನಪುಗಳ ಋಣವನ್ನು ಹೊತ್ತಿದ್ದೇನೆ ನಾನು, ಮತ್ತೂ ಋಣವನ್ನು ಹೊರಿಸಬೇಡಿ ನನ್ನ ಮೇಲೆ. ಈ ಬಂಧಕ್ಕೆ ಹೆಸರಿನ ಹಂಗು ಬೇಡ. ಹಣೆಯಲ್ಲಿ ಬರೆದಿದ್ದರೆ ಇನ್ನೊಮ್ಮೆ ಭೇಟಿಯಾಗುವ" ಎಂದು ಕಣ್ಣು ಮಿಟುಕಿಸಿ ರೈಲನ್ನು ಇಳಿದೆ ಬಿಟ್ಟ. ತಾನು ಸೋತೆನೋ ಗೆದ್ದೇನೋ ಎಂದು ತಿಳಿಯದೆ ನಿಟ್ಟುಸಿರು ಬಿಟ್ಟು ಇವಳೂ ಬ್ಯಾಗ್ ಇಳಿಸತೊಡಗಿದಳು. ಹೀಗೆ ಶುರುವಾಗುವ ಮೊದಲೇ ಪ್ರೇಮ ಕತೆಯೊಂದು ಕೊನೆಗೊಂಡಿತು....


ಪ್ರತೀ ಬಾರಿಯೂ ಊರಿಗೆ ಹೋಗುವಾಗ ಹಾದಿ ಬದಿಯಲ್ಲಿದ್ದ ಆ ಮನೆಯ ಕಟ್ಟೆಯ ಮೇಲೆ ಇರುತ್ತಿದ್ದ ಅವಳು ಕುತೂಹಲ ಹುಟ್ಟಿಸುತ್ತಿದ್ದಳು. ಅವಳ ಹಾವ ಭಾವಗಳು ಆಶ್ಚರ್ಯ ತರುತ್ತಿದ್ದವು.. ಬಹುಶ ನನಗೆ ಆರೆಂಟು ವರ್ಷ ಆದಗಲಿಂದ ನೋಡುತ್ತಿದ್ದೆ ಅವಳನ್ನು. ಅವಳು ಬುದ್ದಿಮಾಂದ್ಯ ಎಂದು ತಿಳಿದದ್ದು ನಾನು ಹೈಸ್ಕೂಲ್ ಮೆಟ್ಟಿಲು ಹತ್ತಿದ ಮೇಲೆಯೇ.. ಮೊನ್ನೆ ಊರಿಗೆ ಹೋಗುವಾಗ ಎಂದಿನಂತೆ ಆ ಮನೆಯತ್ತ ಕಣ್ಣು ಹರಿಯಿತು.. ಆದರೆ ಅವಳು ಅಲ್ಲಿ ಇರಲಿಲ್ಲ.. ಅಲ್ಲಿಗೆ ನನ್ನ ಕುತೂಹಲಕ್ಕೂ ತೆರೆ ಬಿದ್ದಿತ್ತು.



"ಅಪ್ಪನನ್ನು ಕಳೆದುಕೊಂಡು ಒಂದು ತಿಂಗಳೂ ಆಗಲಿಲ್ಲ ನೋಡಿ ಹೇಗೆ ಬಾಯ್ತುಂಬ ನಗುತ್ತಿದ್ದಾನೆ" ಎಂದ ಜನಕ್ಕೆ, ಪ್ರತೀ ರಾತ್ರಿ ಅವನ ತಲೆದಿಂಬು ಕಣ್ಣೀರಿನಿಂದ ಒದ್ದೆ ಆಗುತ್ತಿದ್ದದ್ದು ತಿಳಿಯಲೇ ಇಲ್ಲ.


"ಸಾಫ್ಟ್ ವೇರ್ ಬಿದ್ದೋಯ್ತು ಬಿಡ್ರಿ, ಇಂಜಿನಿಯರಿಂಗ್ ಮಾಡೋದೇ ವೇಸ್ಟ್" ಎಂದು ಬಾಯಿ ತುಂಬಾ ಎಲೆ ಅಡಿಕೆ ಹಾಕಿಕೊಂಡು ಹೇಳಿದವರಿಗೆಲ್ಲ, ಅವರ ಮಗನೋ ಮಗಳೋ ಇಂಜಿನಿಯರಿಂಗ್ ಮುಗಿಸುವ ವೇಳೆಗೆ ರಿಸೆಶನ್ ಆದಾಗಲೇ ಗೊತ್ತಾಗಿದ್ದು "ಆತಂಕ" ಎಂದರೇನು ಎಂದು.

14 comments:

PARAANJAPE K.N. said...

ನಿಮ್ಮ ಲೇಖನದೊಳಗಿನ ಧ್ವನಿ ಅರ್ಥಪೂರ್ಣವಾಗಿದೆ. ತಮಗೆ ಕಷ್ಟ ಬ೦ದಾಗ ಮಾತ್ರ ಅದರ ಆಳ ಅರಿವಾಗುತ್ತದೆ. ಬೇರೆಯವರಿಗೆ ಕಷ್ಟ ಬ೦ದಾಗ ನಮಗದು ಕಟ್ಟೆ ಮೇಲೆ ಕೂತು time pass ಗೆ ಮಾತನಾಡುವ ಸರಕಾಗುತ್ತದೆ. ಚೆನ್ನಾಗಿದೆ.

hEmAsHrEe said...

nice short stories !
imagery is good !

any how title seems to be not relevant :)

ಮಲ್ಲಿಕಾರ್ಜುನ.ಡಿ.ಜಿ. said...

ಶರತ್ ಅವರೆ,
ನೀವು ಬರೆದಿರುವುದು ನನ್ನ ದೃಷ್ಟಿಯಲ್ಲಿ ಕಥೆಗಳಂತೆಯೇ ಇವೆ.
ಹಾಗೂ ತುಂಬಾ ಚೆನ್ನಾಗಿವೆ. ಈ ರೀತಿ ಗುಚ್ಛಗಳನ್ನು ಮಾಡಿ ಒಟ್ಟಿಗೇ ಕೊಡಿ(ಒಂದೇ ಭಾವದ್ದು).

Anonymous said...

ಒಳ್ಳೇ ಪ್ರಯೋಗ ಶರತ್.

ಇನ್ನಷ್ಟು ಮೂಡಿ ಬರಲಿ.

Anonymous said...

ಹ್ಮ್.... ನೀವೊಬ್ಬರು ಕಮ್ಮಿ ಇದ್ರಿ !
ತಮಾಷೆಗಂದೆ.. ಚಂದಕ್ಕಿದೆ ಕಥೆಗಳು... ಹೀಗೇ ಬರೀತಾ ಇರಿ :) ಗುಡ್ ಲಕ್!

ಪ್ರೀತಿಯಿಂದ
ವೈಶಾಲಿ

Anonymous said...

ನೀವು ತುಂಬಾ ಅಂತರ್ಮುಖಿ ಅಂತ ಅನ್ಸುತ್ತೆ.

Ittigecement said...

ಶರತ್....

ತುಂಬಾ ಚೆನ್ನಾಗಿ ಬಂದಿದೆ...
ನಿಮ್ಮ ಹೊಸತನದ ಪ್ರಯೋಗ ಇಷ್ಟವಾಯಿತು..

ಇನ್ನಷ್ಟು ಬರೆಯಿರಿ...

ಅಭಿನಂದನೆಗಳು..

ಧರಿತ್ರಿ said...

ಕಥೆನೋ?ನಿಮ್ಮೊಳಗಿನ ಭಾವವೋ? ಒಟ್ಟಿನಲ್ಲಿ 'ಬದುಕಿನ ಭಾವ'ಗಳನ್ನು ಅರ್ಥಪೂರ್ಣವಾಗಿ ತೆರೆದಿಟ್ಟಿದ್ದೀರಿ.
-ಧರಿತ್ರಿ

ತೇಜಸ್ವಿನಿ ಹೆಗಡೆ said...

ಶರತ್,

"ಅಯೋಗ್ಯವಾದ ಕಥೆಗಳಿವು" ಎಂದು ನೀನೇ ಇಷ್ಟೋಳ್ಳೆ ಹನಿ ಕಥೆಗಳನ್ನು ತೆಗೆಳಿದ್ದಿ. ಇದು ಸರಿಯಲ್ಲ. ನಿಜಕ್ಕೂ ಮಿನಿ ಮಿನಿ ಕಥೆಗಳು ಅದೆಷ್ಟೋ ಸೂಕ್ಷ್ಮತೆಗಳನ್ನು ತೆರೆದಿಟ್ಟು ತೆರೆದಿಡದಂತಹ ಭಾವವನ್ನು ಬಿಂಬಿಸುತ್ತವೆ. ಇಂತಹ ಯೋಗ್ಯ ಕಥೆಗಳು ಮತ್ತಷ್ಟು ಹೊರಬರಲಿ. :)

ಹಾಂ... ಕಥೆ ಬರ್ದು ಎಲ್ಲಿ ಮಾಯವಾದೆ? ಪ್ರತಿಕ್ರಿಯೆಗಳೆಲ್ಲಾ ನಿನ್ನೇ ಕಾಯ್ತಾ ಇದ್ವು :)

ಮನಸ್ವಿ said...

ಹ್ಮ್.. ಕಾಂಟಾಕ್ಟ್ ನಂಬರ್ ಕೊಡುವಿರಾ.. ಅವಳು ಅವನನ್ನು ಕೇಳಿದ್ಲಾ.. ಅವನು ಅವಳ ನಂಬರ್ ಕೇಳದು ಯಾವಾಗ??! ಒಂದು ತಿಂಗಳ ಗಡವು ನೆನಪಿದ್ದಾ! ಅದೊಂದು ಅದ್ಬುತ ಪ್ರೇಮ ಕತೆಗೆ ನಾಂದಿಯಾಗಲಿ.. ಆಲ್ ದಿ ಬೆಸ್ಟ್ ಗೆಳೆಯಾ... ;).. ಭಾವಯಾನಿಯ ಮತ್ತೊಂದು ಭಾವನೆಗಳ ಬೋರ್ಗರೆತ.. ೨ನೇ ಪ್ಯಾರ ಓದಿ ಎನ್ ಕಣ್ಣುಗಳು ಒದ್ದೆಯಾಗ ಹಂಗೆ ಮಾಡ್ಬಿಟ್ಯಲಲೇ... ನೀಳ್ಗತೆಗಳು ನಿನ್ನಿಂದ ಹೊರ ಹೊಮ್ಮಲಿ...

ಶರಶ್ಚಂದ್ರ ಕಲ್ಮನೆ said...

ಪರಾಂಜಪೆ ಅವರೇ,
ಧನ್ಯವಾದಗಳು ನನ್ನ ಬರಹಕ್ಕೆ ಪ್ರತಿಕ್ರಿಯಿಸಿದ್ದಕ್ಕೆ... ನೀವು ಹೇಳಿದ್ದು ಸರಿ, ಕಷ್ಟ ನಮಗೆ ಬಂದಾಗ ಮಾತ್ರ ಅದರ ಬಿಸಿ ತಟ್ಟುವುದು..


ಹೇಮಶ್ರೀ,
ನನ್ನ ಬ್ಲಾಗ್ ಓದಿ, ಕಾಮೆಂಟಿಸಿದ್ದಕ್ಕೆ ವಂದನೆಗಳು... ಟೈಟಲ್ ಸ್ವಲ್ಪ ವಿಭಿನ್ನವಾಗಿದೆ ಅಷ್ಟೇ :)


ಮಲ್ಲಿ ಅಣ್ಣ,
ಇದೊಂದು ಹೊಸ ಪ್ರಯೋಗ, ಹೇಗೆ ಬರುವುದೋ ಎಂಬ ಆತಂಕವಿತ್ತು.. ಉದ್ದೇಶಪೂರ್ವಕವಾಗಿ ಮಾಡಿದ ಪ್ರಯೋಗ ಅಲ್ಲ, ಆದರೆ ತರಗತಿಯಲ್ಲಿ ಕುಳಿತು ಪಾಠ ಇಷ್ಟವಾಗದೆ ಹೋದಾಗ, ಮಾಡಲು ಏನೂ ಕೆಲಸ ಇಲ್ಲದೆ ಹೋದಾಗ ಬರುವ ಯೋಚನೆಗಳಿಗೆ ಬರಹದ ಬಣ್ಣವನ್ನು ಹಚ್ಚಿದ್ದೇನೆ.... ನಿಮ್ಮ ಪ್ರೋತ್ಸಾಹಕ್ಕೆ ಚಿರ ಋಣಿ.



ರಂಜಿತ್,
ನಿಮ್ಮ ಪ್ರೋತ್ಸಾಹ ಎಂದೂ ಹೀಗೆ ಇರಲಿ... ತಾಯ್ನಾಡಿಗೆ ಏನು ಪಯಣ ?? ನಿಮ್ಮನ್ನು ಭೇಟಿಯಾಗಲು ಕಾಯುತ್ತಿದ್ದೇನೆ, ನನ್ನ ಜೊತೆಗೆ ರಾಜೇಶ್ ಅವ್ರು ಇದಾರೆ :)



ವೈಶಾಲಿ ಅವ್ರೆ,
ಧನ್ಯವಾದಗಳು ಓದುವ ಸಾಹಸ ಮಾಡಿದ್ದಕ್ಕೆ :)



ಅನಾಮಧೇಯರೇ,
ಹೌದು ನಾನು ಕೊಂಚ ಅಂತರ್ಮುಖಿಯೇ... ಇದು ನಮ್ಮನ್ನು ನಾವು ಅರಿತುಕೊಳ್ಳಲು ಬಹಳ ಸಹಾಯ ಮಾಡುತ್ತದೆ ಎಂದು ನನ್ನ ನಂಬಿಕೆ.


ಪ್ರಕಾಶಣ್ಣ,
ಪ್ರತಿಕ್ರಿಯೆಗೆ ಧನ್ಯವಾದಗಳು :)



ಧರಿತ್ರಿ,
ಕಥೆಯೂ ಹೌದು, ನನ್ನೊಳಗಿನ ಭಾವವೂ ಹೌದು :) ಬದುಕೇ ಕಥೆ, ಕಥೆಯೇ ಬದುಕು... ಬದುಕಿನ ಭಾವಗಳನ್ನು ತೆರೆದಿಡುತ್ತಾ ಹೋದರೆ ಬದುಕು ವಿಸ್ಮಯ ಎನ್ನಿಸತೊಡಗುತ್ತದೆ... ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ..



ತೇಜಕ್ಕ,
ಪ್ರತಿ ಸಲ ತಪ್ಪು ಮಾಡಿದಾಗಲೂ ತಿದ್ದಿದವ ನೀನು, ಮುಂದಿನ ಸಲ ಟೈಟಲ್ "ಯೋಗ್ಯ" ಅಂತ ಹಾಕ್ತಿ :) ಪ್ರತಿಕ್ರಿಯೇಗೆಲ್ಲ ಒಟ್ಟಿಗೆ ಉತ್ತರ ಕೊಡನ ಅಂತ ಸುಮ್ನೆ ಇದ್ದಿದ್ದಿ.... ನೀ ಎಂತೂ ಬರಿತಾನೆ ಇಲ್ಯಲೇ ಮಾರಾಯ್ತಿ..


ಆದಿತ್ಯ,
ಮಾರಾಯ ಎಲ್ಲ ನೆನಪಿದ್ದು, ನಿಂಗೆ ಒಂದು ತಿಂಗ್ಳು ಒಳಗೆ ಕೊಟ್ರೆ ಆತಲ :) ಅದ್ಭುತ ಪ್ರೇಮ ಕಥೆ ಎಲ್ಲ ನಿರೀಕ್ಷೆ ಮಾಡಡ. ಪುರುಸ್ಹೊತ್ತು ಮಾಡ್ಕಂಡು ಕಾಮೆಂಟ್ ಬರದ್ದಕ್ಕೆ ಥ್ಯಾಂಕ್ಸ್ ಮಗ :P

Rajesh Manjunath - ರಾಜೇಶ್ ಮಂಜುನಾಥ್ said...

ಶರತ್,
ಭಾವಯಾನದಲ್ಲಿ ತೇಲಿದ ಅನುಭವ. ನೋವುಗಳಿಂದ ಆದಷ್ಟು ಬೇಗ ಸಂಪೂರ್ಣವಾಗಿ ಹೊರ ಬನ್ನಿ ಎಂದು ಹಾರೈಸುತ್ತೇನೆ. ಅಯೋಗ್ಯ ಎಂದು ಹೇಳುವಂತೆನು ಇಲ್ಲ, ಬರಹದ ಸೊಗಡನ್ನು ಅವಮಾನಿಸದಿರಿ.

Veena DhanuGowda said...

its good :)

ಶ್ರೀನಿಧಿ.ಡಿ.ಎಸ್ said...

liked it sharath. chanagiddu.