Friday, November 26, 2010

ಸಣ್ಣದೊಂದು ಸಂತಸ... ನಿಮ್ಮೆಲ್ಲರಿಂದಾಗಿ

ದಿನಾಂಕ ೨೪ ನವೆಂಬರ್, ೨೦೧೦ ರ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆಯ ವೆಬ್ಬಾಗಿಲು ಅಂಕಣದಲ್ಲಿ ಭಾವಯಾನದ ಬಗ್ಗೆ ಬಂದಿತ್ತು. ನನಗೆ ಇದೊಂದು ಸಂತಸದ ವಿಷಯ. ಇದೆ ಮೊದಲ ಬಾರಿಗೆ ಪತ್ರಿಕೆಯೊಂದರಲ್ಲಿ ನನ್ನ ಹೆಸರು ಕಾಣಿಸಿಕೊಂಡಿದೆ. ಕೆಲವರಿಗೆ ಇದು ತೀರಾ ಸಿಲ್ಲಿ ವಿಷಯ ಅನ್ನಿಸಬಹುದು. ನನಗೂ ಕೆಲವು ಸಲ ಸಿಲ್ಲಿ ವಿಷಯವಾಗೆ ಕಾಣಿಸಿತ್ತು. ಆದರೂ ನನ್ನ ಚಿತ್ರಗಳು ಹಾಗು ನನ್ನ ಹೆಸರು ಒಂದು ಪತ್ರಿಕೆಯಲ್ಲಿ ಬಂದಿದೆ ಎಂದರೆ ಹೇಳಲಾಗದ ಅನುಭವ ಅಥವಾ ಪ್ರಥಮ ಬಾರಿ ಬಂದಿದ್ದರಿಂದ ಈ ಅನುಭವ. ಬಹುಮಾನ ಬಂದಾಗ ಪುಟ್ಟ ಹುಡುಗನೊಬ್ಬ ಬಹುಮಾನವಾಗಿ ಬಂದ ವಸ್ತುವನ್ನು ಅಕ್ಕಪಕ್ಕದವರಿಗೆಲ್ಲ ತೋರಿಸಿ ಸಂತೋಷ ಪಟ್ಟಂತೆ ಗೆಳೆಯ ಗೆಳತಿಯರಿಗೆಲ್ಲ ಸಂದೇಶ ಕಳಿಸಿ ಸಂಭ್ರಮಿಸಿದ್ದೇನೆ. ಇದು ಯಾವ ಸಾಧನೆಯೂ ಅಲ್ಲವೆಂದು ಗೊತ್ತು. ಆದರೆ ಇದು ಜೀವನದ ಒಂದು ಸಣ್ಣ ಸಂತಸದ ಕ್ಷಣ. ಈ ಸಂತಸಕ್ಕೆ ಕಾರಣರಾದ ಹಾಗು ನನಗೆ ಪ್ರೋತ್ಸಾಹಿಸುತ್ತಾ ತಮ್ಮ ಗೆಳೆತನದ ಒಡಲಲ್ಲಿ ತುಂಬಿಕೊಂಡ ನನ್ನೆಲ್ಲಾ ಸ್ನೇಹಿತ-ಸ್ನೇಹಿತೆಯರು, ಸಹ ಬ್ಲಾಗಿಗರು, ಹಾಗು ನನಗೆ ಒಳ್ಳೆಯದನ್ನು ಬಯಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಮುಂದೆಯೂ ಹೀಗೆ ಪ್ರೋತ್ಸಾಹಿಸುತ್ತ ನನ್ನ ತಪ್ಪುಗಳನ್ನು ತಿದ್ದುತ್ತಾ ನನ್ನ ನಗುವಿಗೆ ಕಾರಣರಾಗಿರುವಿರೆಂದು ಭಾವಿಸುತ್ತೇನೆ.

ಅಂದ ಹಾಗೆ ಈ ಹಿಂದಿನ ಪೋಸ್ಟ್, ಬ್ಲಾಗಿನಲ್ಲಿ ನನ್ನ ೫೦ ನೇ ಪೋಸ್ಟ್ ಆಗಿತ್ತು. ತಡವಾಗಿ ಗಮನಿಸಿದೆ. ಎರಡೂವರೆ ವರ್ಷಗಳಲ್ಲಿ ೫೦ ಪೋಸ್ಟ್. ರಾಹುಲ್ ದ್ರಾವಿಡ್ ಬ್ಯಾಟಿಂಗ್ ಥರ ಆಯಿತು. ಹಲವಾರು ಬಾರಿ ಇಷ್ಟು ದೂರ ಸಾಗುವ ಎಣಿಕೆಯೂ ಇರಲಿಲ್ಲ. ಭಾವಯಾನವನ್ನು ಎಲ್ಲಿಯೂ ನಿಲ್ಲಲು ಕೊಡದೆ ನಿರಂತರವಾಗಿರಲು ಸ್ಫೂರ್ತಿ ಹಾಗು ಪ್ರೋತ್ಸಾಹ ನೀಡಿದ್ದೂ ನೀವೇ. ಹಾಗಾಗಿ ಇನ್ನೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳು.








Sunday, November 14, 2010

ವರ್ಣ ಚಿತ್ರ - ಒಂದು ಪ್ರಯತ್ನ

ನಾನು ಚಿಕ್ಕವನಿರುವಾಗ ವರ್ಣ ಚಿತ್ರಗಳನ್ನು ಬಿಡಿಸುತ್ತಿದ್ದೆ. ಸ್ಕೆಚ್ ಪೆನ್ನು, ಪೇಷ್ಟೇಲ್ ಗಳು, ಜಲ ವರ್ಣಗಳು, ಬಣ್ಣದ ಪೆನ್ಸಿಲ್ಗಳು ಎಲ್ಲವನ್ನು ಉಪಯೋಗಿಸುತ್ತಿದ್ದೆ. ಹೈ ಸ್ಕೂಲ್ ಮುಗಿಸಿ ಕಾಲೇಜಿನ ಮೆಟ್ಟಿಲು ಹತ್ತಿದ ಮೇಲೆ ಅದೇಕೋ ಬಣ್ಣಗಳ ಸಹವಾಸವೇ ದೂರವಾಗಿ ಹೋಯಿತು. ಕೇವಲ ಕಪ್ಪು-ಬಿಳಿಗಳ ಮಧ್ಯೆ ಮನಸ್ಸು ಉಳಿದು ಹೋಯಿತು. ಪೆನ್ಸಿಲ್ ಸ್ಕೆಚಿಂಗ್ ಹಾಗು ಶೇಡಿಂಗ್ ಒಂದು ರೀತಿಯಲ್ಲಿ ಸುಲಭವೂ ಹೌದು ಒಂದು ರೀತಿಯಲ್ಲಿ ಕಷ್ಟವೂ ಹೌದು. ವ್ಯಕ್ತಪಡಿಸಬೇಕಾದ ಚಿತ್ರವನ್ನು ಕೇವಲ ಕಪ್ಪು ಬಿಳುಪಿನಲ್ಲೇ ಹೇಳುವುದರಿಂದ ಬಣ್ಣಗಳ ಆಯ್ಕೆ ಹಾಗು ವಿನ್ಯಾಸಗಳ ತಲೆ ನೋವು ಇರುವುದಿಲ್ಲ ಸ್ಕೆಚಿಂಗ್ನಲ್ಲಿ. ಆದರೆ ಕೇವಲ ಎರಡೇ ಬಣ್ಣಗಳಲ್ಲಿ ಚಿತ್ರದ ಆಳ, ಸೂಕ್ಷ್ಮತೆ, ಹಾಗು ಭಾವನೆಗಳನ್ನು ತೋರಿಸುವುದೂ ತ್ರಾಸದಾಯಕವೇ. ಆದ್ದರಿಂದ ಯಾರಾದರೂ ಕೇಳಿದರೆ ಸ್ಕೆಚಿಂಗ್ ಕಷ್ಟವೋ ಸುಲಭವೋ ಎಂದು ಈಗಲೂ ಹೇಳಲಾರೆ.

ಕೆಲವು ತಿಂಗಳುಗಳ ಮಧ್ಯೆ ಹಲವಾರು ಗೆಳೆಯರು ನೀನು ಪೇಂಟಿಂಗ್ ಏಕೆ ಮಾಡುವುದಿಲ್ಲ ಎಂದು ಕೇಳಿದ್ದರು. ಅವರೆಲ್ಲರಿಗೂ ಒಂದು ಸಮಜಾಯಿಷಿಯ ಉತ್ತರ ಕೊಟ್ಟೆನಾದರೂ, ನನ್ನನ್ನೇ ನಾನು ಕೇಳಿಕೊಂಡಾಗ ಉತ್ತರ ನನ್ನಲ್ಲೂ ಇರಲಿಲ್ಲ. ಅದರ ಬಗ್ಗೆ ಜಾಸ್ತಿ ಯೋಚಿಸಲೂ ಇಲ್ಲ ಎನ್ನಿ. ನಿನ್ನೆ ಸುಮ್ಮನೆ ಕುಳಿತಿದ್ದಾಗ ಒಂದು ಯೋಚನೆ ಬಂದಿತು, ಯಾಕೆ ಒಂದು ವರ್ಣಚಿತ್ರ ರಚಿಸಬಾರದು ಎಂದು. ಆಗ ಮೂಡಿದ್ದೇ ಈ ಕೆಳಗಿನ ಚಿತ್ರ. ಇದನ್ನು ಒಂದು ರಫ್ ವರ್ಕ್ ಎನ್ನಬಹುದು. ಸುಮ್ಮನೆ ಒಂದು ಪ್ರಯತ್ನ ಮಾಡಿದ್ದೇನೆ. ಈ ಚಿತ್ರ ರಚನೆಗೆ ಸ್ಕೆಚ್ ಪೆನ್, ಕ್ರೆಯಾನ್ಸ್, ಕಲ್ಲಿದ್ದಲು, ಹಾಗು ಪೆನ್ಸಿಲ್ ಬಳಸಿದ್ದೇನೆ. ವರ್ಣ ಚಿತ್ರ ಬಿಡಿಸಿದೆನೆಂದು ಮುಂದೆ ನನ್ನಿಂದ ವರ್ಣಚಿತ್ರಗಳನ್ನೇ ನಿರೀಕ್ಷಿಸಬೇಡಿ... ನನಗೆ ಈಗಲೂ ಕಪ್ಪು-ಬಿಳುಪಿನ ನಡುವಿನ ಆಟವೇ ಪ್ರಿಯವೆನಿಸುತ್ತಿದೆ. ವರ್ಣ ಚಿತ್ರಗಳನ್ನು ಬಿಡಿಸಿದರೂ ನಿಮ್ಮ ಮುಂದೆ ಇರಿಸುವೆ.





Monday, November 1, 2010

ಬಾಡಿ ಲಾಂಗ್ವೇಜ್

ಬಹಳ ಹಿಂದೆ ಬಿಡಿಸಿದ ಚಿತ್ರವಿದು. ಇದನ್ನು ಪೆನ್ಸಿಲ್ ಬದಲಾಗಿ ಚಾರ್ಕೋಲ್ ಉಪಯೋಗಿಸಿ ಬಿಡಿಸಿದ್ದು. ಹೇಗಿದೆ ಹೇಳಿ :) ಚಿತ್ರವನ್ನು ದೊಡ್ಡದಾಗಿ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ...