Wednesday, August 5, 2009

ಕಥೆ ಹೇಳುತ್ತಿವೆ ಸಾಲುಗಳು...

ಅಪ್ಪನೊಂದಿಗೆ ಬೈಕಿನಲ್ಲಿ ಕುಳಿತಿದ್ದ ಪುಟ್ಟನೊಬ್ಬ ಕೈಯಿಂದ ಜಾರಿ ಬೀದಿಪಾಲಾದ "ಸೂಪರ್ ಮ್ಯಾನ್" ನ ಸ್ಟಿಕ್ಕರ್ ರಸ್ತೆಯಲ್ಲಿ ಅನಾಥವಾಗುತ್ತಿರುವುದನ್ನು ಕಂಬನಿಗಣ್ಣಲ್ಲಿ ನಿರುಪಾಯನಾಗಿ ನೋಡತೊಡಗಿದ.


ಸಂಜೆ ಮಗಳ ಚೀಲ ತೆಗೆದ ತಾಯಿ, ಊಟದ ಡಬ್ಬಿಯಲ್ಲಿನ ಊಟ ಹಾಗೆ ಇದ್ದುದನ್ನು ಕಂಡು ನಖಶಿಖಾಂತ ಕೋಪಗೊಂಡಳು. ಹಸಿವಾದರೂ ಅನೇಕ ಕೆಲಸಗಳ ಮಧ್ಯೆ ಊಟ ಮಾಡಲಾಗದೆ ಮನೆಗೆ ಬಂದು ಮಲಗಿದ್ದ ಮಗಳ ಹೊಟ್ಟೆಯಲ್ಲಿ ಹಸಿವು ಅಣಕವಾಡುತ್ತಿತ್ತು.


ಹೊರಗೆ ಹುಚ್ಚು ಮಳೆ, ಉಂಡು ಬೆಚ್ಚಗೆ ಹಾಸಿಗೆಯಲಿ ಮಲಗಿಹೆನು. ಜಗತ್ತಿನಲಿ ಹಲವಾರು ಜನಕ್ಕೆ ಈ ಭಾಗ್ಯವಿಲ್ಲ. ಕೆಲವರಿಗೆ ಊಟವೆಂದರೆ ಗೊತ್ತಿಲ್ಲ. ಕೆಲವರು ಹಾಸಿಗೆಯನ್ನು ಕಂಡಿಲ್ಲ. ಕೆಲವರು ಬದುಕನ್ನು ಬದುಕಲೇ ಇಲ್ಲ.


ಬೈಕಿನಲ್ಲಿ ಶರವೇಗದಲ್ಲಿ ಸಾಗುತ್ತಿದ್ದ ಯುವಕನ ಕಂಗಳು ರಸ್ತೆ ಬದಿಯಲ್ಲಾದ ಅಪಘಾತದ ಕಡೆ ತಿರುಗಿತು. ನುಜ್ಜುಗುಜ್ಜಾದ ಬೈಕನ್ನು ನೋಡಿ ಬೆಚ್ಚಿಬಿದ್ದ ಅವನ ಕೈಗಳು ಅದುರತೊಡಗಿದವು. ಆವರಿಸುತ್ತಿದ್ದ ಭಯ ಅವನ ಬೈಕಿನ ವೇಗವನ್ನು ತಗ್ಗಿಸತೊಡಗಿತು...


ಹಳ್ಳಿಯ ಮನೆ ಬಿಟ್ಟು ಓಡಿಬಂದು ಹತ್ತಿದ ಬಸ್ಸು, ಬಣ್ಣ ಕಳೆದುಕೊಂಡ ಗಡಿಬಿಡಿಯ ಗೂಡಾದ ಸಿಟಿಗೆ ತಂದು ಎಸೆದಿದೆ. ಕೇವಲ ಒಂದು ರಾತ್ರಿ ಕಳೆಯುವುದರಲ್ಲಿ ಬದಲಾದ ಈ ಪರಿಸರವನ್ನು ನೋಡುತ್ತಿದ್ದ ಹುಡುಗನ ಕಣ್ಣಲ್ಲಿ ಆತಂಕ ಎಂಬ ಪದ ಅರ್ಥ ಪಡೆದುಕೊಳ್ಳುತ್ತಿದೆ.


ನೋಡು, ನೀನು ನನ್ನನ್ನು ಬಿಟ್ಟು ಹೋಗದೆ ಇದ್ದಿದ್ದರೆ ಈಗ ನಾನು ಕಂಬನಿ ಮಿಡಿಯುವ ಪ್ರಸಂಗವೇ ಇರುತ್ತಿರಲಿಲ್ಲ. ಗೆಳೆಯ-ಗೆಳತಿಯರು ಅವರ ಹುಡುಗಿಯ ಬಗ್ಗೆಯೋ, ಅವರ ಹುಡುಗನ ಬಗ್ಗೆಯೋ ಹೇಳಿಕೊಳ್ಳುವಾಗ ನನ್ನಲ್ಲಿ ಅನಾಥಭಾವ. ನೀನು ನನಗೆಂದು ಬಿಟ್ಟು ಹೋದದ್ದು ಒಂದು ಹಿಡಿ ನೆನಪುಗಳು... ಒಂದಿಷ್ಟು ಕಂಬನಿಗಳು... ಇಷ್ಟೇ...