Friday, August 24, 2012

ನಾನು ಮತ್ತು ಚಿತ್ರಕಲೆ - ೨

ಸ್ವಾತಂತ್ರ ದಿನಾಚರಣೆಗೆಂದು ನಮ್ಮ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ ಇಟ್ಟಿದ್ದರು.  ನಾನೂ ಸೇರಿದ್ದೆ.  ಒಂದು ಮೊಟ್ಟೆಯ ಚಿತ್ರ ಬಿಡಿಸಿ ಆ ಮೊಟ್ಟೆಗೆ ಬ್ರಿಟಿಷ್ ಭಾವುಟವನ್ನು ಬಿಡಿಸಿ ಅದನ್ನು ಸೀಳಿಕೊಂಡು ಹೊರಬರುತ್ತಿರುವ ಭಾರತದ ಭಾವುಟವನ್ನು ಹಿಡಿದ ಕೈಯ್ಯೊಂದನ್ನು ಬಿಡಿಸಿದ್ದೆ.  ತುಂಬಾ ಕ್ಯಾಶುವಲ್ ಆಗಿ ಬಿಡಿಸಿದ್ದ ಚಿತ್ರವಾಗಿತ್ತು ಅದು.  ನನ್ನ ಸಹಪಾಟಿಯೊಬ್ಬ ಗಾಂಧೀಜಿಯ ಚಿತ್ರವನ್ನು ತುಂಬಾ ಅಂದವಾಗಿ ಬಿಡಿಸಿದ್ದ.  ಅವನ ಚಿತ್ರ ನೋಡಿ, ಅವನಿಗೆ ಮೊದಲ ಬಹುಮಾನ ಖಂಡಿತ ಎಂದು ನಾನಂದುಕೊಂಡಿದ್ದೆ.  ಆದರೆ ಆಶ್ಚರ್ಯವೆಂಬಂತೆ ನನ್ನ ಚಿತ್ರಕ್ಕೆ ಮೊದಲ ಬಹುಮಾನ ಬಂದಿತ್ತು.  ಬಹುಮಾನ ಅವನಿಗೆ ಸಿಗದೇ ಇದ್ದುದಕ್ಕೆ ನನಗೆ ಬೇಸರವಾಗಿತ್ತು.  ಇದಾದ ನಂತರ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಗೆದ್ದು ಜಿಲ್ಲಾ ಮಟ್ಟ ತಲುಪಿದೆ.  ಜಿಲ್ಲಾಮಟ್ಟದ ಸ್ಪರ್ಧೆಗಾಗಿ ನಮ್ಮ ಮೆಚ್ಚಿನ ಭಟ್ ಮಾಸ್ಟರ್ ನಮ್ಮನ್ನು ಮಡಿಕೇರಿಗೆ ಕರೆದುಕೊಂಡು ಹೋದರು.  ನಾನು ಚಿತ್ರಕಲೆಯಲ್ಲೂ, ಇನ್ನೊಬ್ಬ ಚರ್ಚಾ ಸ್ಪರ್ಧೆಯಲ್ಲೂ ಭಾಗವಹಿಸುವವರಿದ್ದೆವು.  ಅಲ್ಲಿ ಹೋದ ಮೇಲೆ ಚಿತ್ರಕಲಾ ಸ್ಪರ್ಧೆ ಮಧ್ಯಾಹ್ನ ಎಂದು ತಿಳಿಯಿತು.  ಬೆಳಿಗ್ಗೆ ಇದ್ದ ಚರ್ಚಾ ಸ್ಪರ್ಧೆಯನ್ನು ನೋಡುತ್ತಾ ಕುಳಿತೆ.  ಅದರ ನಂತರ ಊಟಕ್ಕೆಂದು ಒಂದು ಮೆಸ್ಸ್ ಗೆ ಕರೆದುಕೊಂಡು ಹೋಗಿ ಗಡದ್ದಾಗಿ ಊಟ ಹಾಕಿಸಿದರು ನಮ್ಮ ಸರ್.  ಹೊಟ್ಟೆ ತುಂಬಾ ಉಂಡಿದ್ದಕ್ಕೋ ಅಥವಾ ಬಿರು ಬಿಸಿಲಲ್ಲಿ ಸುತ್ತಿದ್ದಕ್ಕೋ ನನಗೆ ಮಧ್ಯಾಹ್ನ ಚಿತ್ರ ಬಿಡಿಸುವ ಮೂಡೇ ಹೋಗಿ ಎಲ್ಲಾದರೂ ಮಲಗಿಬಿಡೋಣ ಅನ್ನಿಸತೊಡಗಿತ್ತು.  ಆದರೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತೂಕಡಿಸುತ್ತಲೇ ಏನೇನೋ ಬಿಡಿಸಿ ಎಲ್ಲೆಲ್ಲೋ ಬಣ್ಣ ತುಂಬಿ ಚಿತ್ರವನ್ನು ಬಣ್ಣದ ಗೊಬ್ಬರ ಗುಂಡಿ ಮಾಡಿ ಸೋತು ಮೂತಿ ಕೆಳಗೆ ಮಾಡಿಕೊಂಡು ವಾಪಾಸಾಗಿದ್ದೆ.  ಮಾವನಿಗೆ ಸಂಜೆ ಪೇಟೆಯಲ್ಲಿ ಸಿಕ್ಕ ಭಟ್ ಮಾಸ್ಟರ್ "ಯಾಕೋ ಶರತ್ ಇವತ್ತು ಚಿತ್ರವನ್ನು ಮನಸ್ಸು ಕೊಟ್ಟು ಬಿಡಿಸಲೇ ಇಲ್ಲ" ಎಂದು ಹೇಳಿದ್ದರಂತೆ.  ಇದಾದ ನಂತರ ಯಾವುದೇ ಸ್ಪರ್ಧೆಗಳಲ್ಲಿ ನಾನು ಭಾಗವಹಿಸಲೇ ಇಲ್ಲ.  

ಹೈಸ್ಕೂಲು ಮುಗಿಸಿ ಕಾಲೇಜ್ ಮೆಟ್ಟಿಲು ಹತ್ತಿದ ಮೇಲೆ ಪೇಂಟಿಂಗ್ ಮಾಡುವುದನ್ನೇ ನಿಲ್ಲಿಸಿಬಿಟ್ಟೆ.  ಬರೀ ಸ್ಕೆಚಿಂಗ್ ನಲ್ಲಿ ತೊಡಗಿದೆ.  ಪೇಂಟಿಂಗ್ ಬಿಡಲು ಸ್ಪಷ್ಟವಾದ ಕಾರಣ ಏನು ಇರಲಿಲ್ಲ.  ಬಹುಶ ಇನ್ನಷ್ಟು ಸೋಮಾರಿಯಾಗತೊಡಗಿದ್ದೆ ನಾನು.  ಪೇಂಟಿಂಗ್ ಗೆ ಹೋಲಿಸಿದರೆ ಸ್ಕೆಚಿಂಗ್ ಸುಲುಭ.  ಬಣ್ಣಗಳ ಆಯ್ಕೆ, ಬಿಡಿಸಿದ ಚಿತ್ರ ಒಣಗುವವರೆಗೆ ಕಾಯುವ ತಾಪತ್ರಯ ಸ್ಕೆಚಿಂಗ್ನಲ್ಲಿ ಇಲ್ಲ.  ಜಲವರ್ಣದಲ್ಲಿ ಟೈಮಿಂಗ್ ಸ್ವಲ್ಪ ಹೆಚ್ಚು ಕಡಿಮೆಯಾದರೂ ಚಿತ್ರವನ್ನು ಮುದ್ದೆ ಕಟ್ಟಿ ಎಸೆದು ಮತ್ತೆ ಹೊಸತಾಗಿ ಶುರು ಮಾಡಬೇಕು.  ಆದರೆ ಸ್ಕೆಚಿಂಗ್ ನಲ್ಲಿ ತಪ್ಪಾದರೆ ಅಳಿಸಿ ಮತ್ತೆ ಸರಿಪಡಿಸಬಹುದು.

ಕಾಲೇಜಿನ ನೋಟ್ ಪುಸ್ತಕಗಳಲ್ಲಿ ಮತ್ತೆ ಚಿತ್ರಗಳು ಮೂಡಿದವು.  ಆದರೆ ಈ ಬಾರಿ ಹಿಂದಿನ ಪುಟಗಳ ಜೊತೆ ಮುಂದಿನ ಪುಟಗಳಲ್ಲಿಯೂ ಚಿತ್ರಗಳು ಮೂಡಿದವು.  ಈ ಮಧ್ಯೆ ಗೆಳೆಯನೊಬ್ಬನಿಂದ ಕ್ಯಾಲಿಗ್ರಫಿ ಕಲಿತು ಸುಮಾರಷ್ಟು ದಿನ ಅದರಲ್ಲೇ ಮುಳುಗಿದ್ದೆ.  ನನ್ನ ಹ್ಯಾಂಡ್ ರೈಟಿಂಗ್ ಅಂದವಾಗಿದ್ದರಿಂದ ಗೆಳೆಯರು- ಸಹಪಾಟಿಗಳು ನನ್ನ ನೋಟ್ಸ್ ಗಳನ್ನು ನಕಲು ಮಾಡಲು ಎರವಲು ಪಡೆಯುತ್ತಿದ್ದರು.  ಹೀಗಾಗಿ ಸಣ್ಣ ಮಟ್ಟದಲ್ಲಿ ನನಗೂ ಫ್ಯಾನ್ ಗಳು ಇದ್ದರು.  ನನ್ನ ಓದು ಎಂದಿನಂತೆ ಸಾಗಿತ್ತು.  ಆರಕ್ಕೇರದೆ ಮೂರಕ್ಕೆ ಇಳಿಯದಂತೆ.  ನಮಗೆ ಕೆಮಿಷ್ಟ್ರಿ ಮಾಡುತ್ತಿದ್ದ ನಂಜುಂಡಪ್ಪ ಸರ್ " ಲೇ ಎದುರಿಗೆ ನಿಂತ್ರೆ ಐದು ನಿಮಿಷದಲ್ಲಿ ನಂದೇ ಚಿತ್ರ ತಪ್ಪಿಲ್ಲದಂತೆ ಬಿಡಿಸುತ್ತೀಯ, ಇಕ್ವೇಶನ್ ಬ್ಯಾಲೆನ್ಸ್ ಮಾಡು ಅಂದ್ರೆ ತಪ್ಪು ಮಾಡ್ತೀಯ" ಎಂದು ಪ್ರೀತಿಯಿಂದ ಗದರುತ್ತಿದ್ದರು ಆಗಾಗ.  ಬಯಾಲಜಿ ನೋಟ್ ಪುಸ್ತಕದ ಮೊದಲ ಪುಟದಲ್ಲಿ ಬರೆದ ಚಾರ್ಲ್ಸ್ ಡಾರ್ವಿನ್ನನ ಚಿತ್ರ ಬಹಳ ಖ್ಯಾತಿ ಗಳಿಸಿತ್ತು.  ನಮಗೆ ಜೀವಶಾಸ್ತ್ರ ತೆಗೆದುಕೊಳ್ಳುತ್ತಿದ್ದ ಜಯಶ್ರೀ ಮೇಡಂ ಸ್ಟಾಫ್ ರೂಮಿಗೆ ಕರೆದು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. 

ನಿಮ್ಮ ಪ್ರತಿಭೆ ನಿಮ್ಮನ್ನು ಸಂಕಷ್ಟಕ್ಕೆ ತಳ್ಳಬಹುದು.  ಕ್ಲಾಸಿನಲ್ಲಿ ಸುಮಾರು ಜನರ ಬಯಾಲಜಿ ಲ್ಯಾಬ್ ರೆಕಾರ್ಡ್ ನಲ್ಲಿನ ಚಿತ್ರಗಳು ನಾನು ಬಿಡಿಸಿದ್ದೆ ಆಗಿದ್ದವು.  ನನ್ನ ಸಂಕೋಚ ಸ್ವಭಾವ ಹಾಗು ಅಂದದ ಗೆಳತಿಯರು ಕೇಳಿದಾಗ ಆಗಲ್ಲ ಎನ್ನಲಾರದ ವಯಸ್ಸು ನನ್ನ ಪೆನ್ಸಿಲ್ಲುಗಳು, ರಬ್ಬರುಗಳು, ಹಾಗು ಸಮಯವನ್ನು ಖಾಲಿ ಮಾಡಿದವು.  ತಮಾಷೆಯೆಂದರೆ, ಹೀಗೆ ನನ್ನಿಂದ ಚಿತ್ರ ಬಿಡಿಸಿಕೊಂಡ ಒಬ್ಬ ಗೆಳತಿಯೂ ಈಗ ನನ್ನ ಸಂಪರ್ಕದಲ್ಲಿ ಇಲ್ಲ.

(ಮುಂದುವರೆಯುವುದು...) 

Wednesday, August 15, 2012

ನಾನು ಮತ್ತು ಚಿತ್ರಕಲೆ - ೧


ನಾನು ಚಿತ್ರ ಬಿಡಿಸಲು ಶುರು ಮಾಡಿದ್ದು ಬಹಳ ಚಿಕ್ಕವನಿದ್ದಾಗ.  ಮೂರನೇ ತರಗತಿಯಲ್ಲಿದ್ದಾಗ ಭೀಮನು ಧುರ್ಯೋದನನ ಹೆಡೆಮುರಿ ಕಟ್ಟಿದ್ದ ಚಿತ್ರವನ್ನು ಬಿಡಿಸಿದ್ದೆ.  ನನಗಿನ್ನೂ ನೆನಪಿರುವ ನಾನು ಬಿಡಿಸಿದ ಮೊದಲ ಚಿತ್ರ ಅದು.  ಅಮರ ಚಿತ್ರಕಥೆಯ ಒಂದು ಪುಸ್ತಕ ನೋಡಿ ಆ ಚಿತ್ರವನ್ನು ಬಿಡಿಸಿದ್ದೆ.  ಹೀಗೆ ಆಗೀಗ ಚಿತ್ರವನ್ನು ಬಿಡಿಸುತ್ತಾ ಇರುತ್ತಿದ್ದೆ.  ನನ್ನ ನೆನಪಿನ ಪ್ರಕಾರ ನಾನು ಕಾಲ್ಪನಿಕ ಚಿತ್ರಗಳನ್ನು ಬಿಡಿಸಿದ್ದು ಕಡಿಮೆ.  ಯಾವುದಾದರೊಂದು ರೆಫೆರೆನ್ಸ್ ಚಿತ್ರ ಇಟ್ಟುಕೊಂಡು ಬಿಡಿಸಿದ್ದೆ ಜಾಸ್ತಿ.  ಹಾಗೆಂದು ನನ್ನ ಕಲ್ಪನೆಯ ಚಿತ್ರಗಳನ್ನು ಬಿಡಿಸಿದ್ದೆ ಇಲ್ಲ ಎಂದಲ್ಲ.  ನನ್ನ ಕಾಲ್ಪನಿಕ ಚಿತ್ರಗಳು ಕೇವಲ ನನ್ನ ಸ್ಕೂಲಿನ ನೋಟ್ ಬುಕ್ ಗಳ ಹಿಂದಿನ ಹಾಳೆಗಳಿಗಷ್ಟೇ ಮೀಸಲಾಗಿರುತ್ತಿದ್ದವು.  ಡ್ರಾಯಿಂಗ್ ಶೀಟ್ಗಳ ಮೇಲೆ ನನ್ನ ಕಾಲ್ಪನಿಕ ಚಿತ್ರಗಳು ಸ್ಥಾನ ಪಡೆಯಲು ವಿಫಲವಾದವು.  ಬಹುಶ ಡ್ರಾಯಿಂಗ್ ಶೀಟ್ ಮೇಲೆ ಬಿಡಿಸುವ ಚಿತ್ರ ಚೆನ್ನಾಗಿ ಬರಲೇ ಬೇಕು ಎಂಬ ಒತ್ತಡವನ್ನು ನನಗೆ ನಾನೇ ಹಾಕಿಕೊಂಡಿದ್ದೆ.  ಈಗಿನ ಹಾಗೆ ಅರ್ಧಂಬರ್ದ ಚಿತ್ರ ಬಿಡಿಸಿ ನಾಲ್ಕಾರು ಹಾಳೆಗಳನ್ನು ದಂಡ ಮಾಡುವಷ್ಟು ಆರ್ಥಿಕ ಪರಿಸ್ಥಿತಿಯೂ ಮನೆಯಲ್ಲಿ ಇರಲಿಲ್ಲ (ಹಾಗೆಂದು ಮನೆಯಲ್ಲಿ ನನ್ನ ಚಿತ್ರಕಲೆಗೆ ಎಂದೂ ಕಡಿಮೆ ಮಾಡಿದವರಲ್ಲ).  ಕೆಲವೊಮ್ಮೆ ವಯಸ್ಸಿಗೆ ಮೀರಿ ಮೆಚ್ಯೂರಿಟಿ ಇರಬಾರದು ಎಂದು ಅನ್ನಿಸುತ್ತದೆ.

ಶಾಲೆಯಲ್ಲೂ ನಾನು ಚಿತ್ರ ಬಿಡಿಸುತ್ತಿದ್ದದ್ದು ಹೆಚ್ಚಿನ ಸಹಪಾಠಿಗಳಿಗೆ ಗೊತ್ತಿರಲಿಲ್ಲ.  ನಾನಾಗೆ ಯಾರಿಗೂ ತೋರಿಸಿದ್ದೂ ಇಲ್ಲ.  ನಾನು ಐದನೇ ತರಗತಿಯಲ್ಲಿ ಇರುವಾಗ ಒಬ್ಬ ಹೊಸ ಗೆಳತಿ ಸಿಕ್ಕಳು.  ನನ್ನ ಪಕ್ಕದಲ್ಲಿ ಕೂರುತ್ತಿದ್ದ ಅವಳು ನನ್ನ ಚಿತ್ರಗಳನ್ನು ನೋಡಿ ಖುಷಿ ಪಡುತ್ತಿದ್ದಳು.  ನನ್ನ ಚಿತ್ರಗಳು ಇನ್ನೊಬ್ಬರಲ್ಲಿ ಸಂತಸ ತರಬಲ್ಲದು ಎಂದು ಗೊತ್ತಾಗಿದ್ದೆ ಆಗ.  ಕೊನೆಗೆ ಅವಳ ಸಂತೋಷಕ್ಕಾಗೆ ಚಿತ್ರಗಳನ್ನು ಬಿಡಿಸತೊಡಗಿದೆ.

ನಾನು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ತುಂಬಾ ಕಡಿಮೆ.  ಆರನೇ ತರಗತಿಯಲ್ಲೋ, ಏಳನೇ ತರಗತಿಯಲ್ಲೋ ಇರುವಾಗ ಒಮ್ಮೆ ಸಾಗರದ ಗಾಂಧಿ ಮೈದಾನದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದರು.  ಅಮ್ಮನ ಒತ್ತಾಯಕ್ಕೆ ಅಲ್ಲಿ ಹೋಗಿ ಕಾಟಾಚಾರಕ್ಕೆ ಬೇಗ ಬೇಗ ಚಿತ್ರ ಬಿಡಿಸಿ ಉಳಿದೆಲ್ಲಾ ಮಕ್ಕಳು ಏನೇನು ಬಿಡಿಸುತ್ತಿದ್ದಾರೆ ಎಂದು ನೋಡುತ್ತಾ ಕಾಲ ಕಳೆದಿದ್ದೆ.  ಏಳನೇ ತರಗತಿಯಲ್ಲಿ ಆ ಗೆಳತಿಯೂ ಬೇರೆ ಊರಿಗೆ ವರ್ಗವಾಗಿ ಹೋದ ನಂತರ ನಾನು ಚಿತ್ರಕಲೆಯನ್ನು ಮರೆಯುತ್ತಾ ಬಂದೆ.

ಹೈಸ್ಕೂಲ್ ಮೆಟ್ಟಿಲು ಹತ್ತಿದ ಮೇಲಂತೂ ಚಿತ್ರಕಲೆ ಮರೆತೇ ಹೋಯಿತು ಎನ್ನಬಹುದು.  ಮಿತಿಮೀರಿದ ಕ್ರಿಕೆಟ್ ಹುಚ್ಚು ಬೇರೆಲ್ಲಾ ಬಣ್ಣಗಳನ್ನು ಮಸಿ ನುಂಗಿದ ಹಾಗೆ ನನ್ನ ಚಿತ್ರಕಲೆಯನ್ನು ನುಂಗಿ ನೀರು ಕುಡಿಯಿತು.  ಆದರೂ ನೋಟ್ ಪುಸ್ತಕಗಳ ಹಿಂದೆ ಚಿತ್ರ ಬಿಡಿಸುವ ಕಾರ್ಯ ನಿರ್ವಿಘ್ನವಾಗಿ ಸಾಗಿತ್ತು.  ಮೀಸೆ ಚಿಗುರುತ್ತಿದ್ದ ಕಾರಣಕ್ಕೋ, ಧ್ವನಿ ಒಡೆದ ಧೈರ್ಯಕ್ಕೋ ಚಿತ್ರಗಳಾಗಿ ನಮ್ಮೆಲ್ಲ ಮಾಸ್ತರರೂ, ಮೇಡಂಗಳೂ ನನ್ನ ಪುಸ್ತಕದ ಕೊನೆ ಪುಟಗಳನ್ನು ತುಂಬಿದರು.  ಆದರೆ ನನ್ನಿಂದ ಒಂದೂ ಮೇನ್ ಸ್ಟ್ರೀಮ್ ಚಿತ್ರ ಬರೆಯಲಾಗಲಿಲ್ಲ.

ನಾನು ಓದುತ್ತಿದ್ದ ಹಾಗು ತೆಗೆಯುತ್ತಿದ್ದ ಅಂಕಗಳ ಚಂದ ನೋಡಿ ಮನೆಯಲ್ಲಿ ಭಯಗೊಂಡು ನನ್ನನ್ನು ಕೊಡಗಿನಲ್ಲಿದ್ದ ನನ್ನ ಮಾವನ ಮನೆಗೆ ಕಳುಹಿಸಿದರು.  ಅಣ್ಣ ಹೈಸ್ಕೂಲ್ ಅಲ್ಲೇ ಓದಿ ಒಳ್ಳೆಯ ಹೆಸರುಗಳಿಸಿದ್ದ.  ಮಾವ ಸಂಗ್ರಹಿಸಿದ್ದ ಚಿತ್ರಕಲೆಯ ಪುಸ್ತಕಗಳನ್ನು ನೋಡಿ, ಹೊಸ ಗೆಳೆಯರಿನ್ನೂ ಪರಿಚಯವಾಗದೇ ಇದ್ದಿದರಿಂದಲೂ, ಹಾಗು ಮೂರು ನಾಲ್ಕು ತಿಂಗಳು ಬಿಟ್ಟೂ ಬಿಡದೆ ಹೊಯ್ಯುತ್ತಿದ್ದ ಮಳೆಯಿಂದ ಹೊರಗೆ ಕಾಲಿಡಲಾಗದೆ ಕೈಗಳು ಮತ್ತೆ ಪೆನ್ಸಿಲ್ಗಳನ್ನು ಹುಡುಕಿದವು.

(ಮುಂದುವರೆಯುವುದು...)

Tuesday, August 7, 2012

ಅವ್ರಿಲ್ ಲವೀನ್

ಬಹಳ ದಿನಗಳ ನಂತರ ಒಂದು ಚಿತ್ರ ಬಿಡಿಸಲು ಸಾಧ್ಯವಾಯಿತು. ಕೆನಡದ ಪಾಪ್ ಗಾಯಕಿ ಅವ್ರಿಲ್ ಲವೀನಳ ಚಿತ್ರ ಇದು.

Monday, January 23, 2012

ಒಂಟಿ ನಕ್ಷತ್ರ...





ಇಂದೇಕೋ ಈ ಸಂಜೆ ಎಲ್ಲಾ ಸಂಜೆಗಳಂತೆನಿಸದೆ
ಕೊನೆಯ ಕಿರಣದವರೆಗೂ ನಾನು ಕಾದಂತೆ
ನಿನ್ನ ನೆನಪು ಒತ್ತರಿಸಿ ಬರುತಿರುವುದೇಕೆ?
ಪ್ರಾಣ ತೆಗೆಯುವ ನೋವಿನಂತೆ ನರನಾಡಿಗಳನ್ನೆಲ್ಲಾ ಆವರಿಸುತ್ತಾ...

ಸೂತ್ರ ಹರಿದ ಗಾಳಿಪಟದಂತೆನಿಸುತಿದೆ
ನನ್ನ ಮನಸು ನನ್ನ ಅಣತಿಗೂ ಕಾಯದೆ
ಕೈತಪ್ಪಿ ಓಡಿದ ಮೀನಿನಂತೆ
ನಿನ್ನನ್ನು ಹುಡುಕುತ್ತಾ ನಿನ್ನ ನಗುವಿನ ಲಯವನ್ನು ಅರಸುತ್ತಾ...

ನೀನು ಆಚೆ ತೀರದ ಅರಳುತಿರುವ ಹೂವು
ನಾನು ಬೇಸರದ ಬಾನಿನಲ್ಲಿ ಮಿನುಗುತಿರುವ ಒಂಟಿ ನಕ್ಷತ್ರ...