
ಇಂದು ಮುಂಜಾನೆ, ಇನ್ನೂ ಬೆಳಕು ಹರಿಯುವ ಮುನ್ನ, ಕನಸೊಂದು ಬಿದ್ದಿತ್ತು.. ವಿಚಿತ್ರ ಕನಸು.. ಈ ಕನಸುಗಳೇ ವಿಚಿತ್ರ ಬಿಡಿ... weird dream ಅನ್ನಬಹುದು.
ಯಾವುದೋ ಅಪರಚಿತ ಸ್ಥಳ. ಹಿಂದೆಂದೂ ನೋಡಿದ ನೆನಪಿಲ್ಲ. ಹಾಗೆ ಸುತ್ತಮುತ್ತಲೂ ಇರುವವರೂ ಕೂಡ, ಯಾರೂ ಪರಿಚಿತರಲ್ಲ. ಸಂಜೆ ಏಳರ ಸಮಯವಿರಬಹುದು. ಯಾವುದೋ ವಸ್ತುಗಳನ್ನು ಗಾಡಿಗೆ ಏರಿಸುತ್ತಿದ್ದಂತೆ ನೆನಪು. ಸ್ವಚ್ಚವಾದ ಕಪ್ಪು ಆಕಾಶದಲ್ಲಿ ನಕ್ಷತ್ರಗಳು. ನಿಮಿತ್ತವಿಲ್ಲದೆ ಆಗಸದೆಡೆಗೆ ನನ್ನ ಕಣ್ಣುಗಳು ಹೊರಳುತ್ತವೆ. ನೋಡುತ್ತಿದ್ದ ಹಾಗೆ ನಕ್ಷತ್ರವೊಂದು ಉದುರುತ್ತದೆ, ಅದರ ಹಿಂದೇ ಇನ್ನೊಂದು. ಅಲ್ಲೇ ಇದ್ದ ಪುಟ್ಟ ಹುಡುಗಿಗೂ ಹೇಳುತ್ತಿದ್ದೇನೆ "look at the falling stars in the sky". ಅವಳು ತನ್ನ ಬೆರಗುಗಣ್ಣಿನಿಂದ ಬೀಳುತ್ತಿರುವ ನಕ್ಷತ್ರವನ್ನು ನೋಡುತ್ತಾಳೆ. ನಕ್ಷತ್ರ ಬೀಳುವ ಸಮಯದಲ್ಲಿ ಮನದ ಬಯಕೆಯನ್ನು ಹೇಳಿಕೊಂಡರೆ ಅದು ನಿಜವಾಗುತ್ತದೆ ಎಂದು ನೆನಪಾಗುತ್ತದೆ. ಮೂರನೇ ನಕ್ಷತ್ರ ಬಿದ್ದರೂ ನನಗೆ ಏನನ್ನೂ ಕೇಳಿಕೊಳ್ಳಲು ಆಗಲಿಲ್ಲ. ನನಗೆ ಬೇಕಾದದ್ದು ಎಲ್ಲದೂ ನನ್ನ ಬಳಿಯೇ ಇರುವಾಗ ಏನನ್ನು ಕೇಳಿಕೊಳ್ಳಲಿ ನಾನು ?
ಮರುಕ್ಷಣದಲ್ಲೇ ಇನ್ನೊಂದು ದೃಶ್ಯದಲ್ಲಿ ಇದ್ದೇನೆ ನಾನು. ಕನಸುಗಳ ಮಜವೇ ಅದು. ಎಲ್ಲಿಂದ ಎಲ್ಲಿಗೆ ಬೇಕಾದರೂ ಕ್ಷಣದಲ್ಲೇ ಹಾರಿಬಿಡಬಹುದು. ಇರಲಿ ಕೇಳಿ ಮುಂದೆ....
ಈ ದೃಶ್ಯದಲ್ಲಿ ನಾನು ಸಾಯುತ್ತಿದೇನೆ. ದೊಡ್ಡ ಬಯಲು. ಬಯಲ ತುಂಬೆಲ್ಲ ನನ್ನ ಮೆಚ್ಚಿನ ಕಾರ್ಟೂನ್ ಕ್ಯಾರೆಕ್ಟೆರ್ ಗಳ ಬಲೂನುಗಳು. ಒಂದಷ್ಟು ಬಲೂನುಗಳನ್ನು ಎದೆಗೆ ಅವಚಿಕೊಂಡಿದ್ದೇನೆ. ಸ್ಲೋ ಮೋಶನ್ ಅಲ್ಲಿ ನಾನು ಬೀಳುತ್ತೇನೆ ನೆಲಕ್ಕೆ. ಪುಟ್ಟ ಹುಡುಗನೊಬ್ಬ ಬಂದು "ಕಾಕಾ ಕಾಕಾ" ಎಂದು ತಲೆ ಸವರಿ ನನ್ನನ್ನೇ ನೋಡುತ್ತಾನೆ, ನನ್ನ ಬಿಟ್ಟ ಕಣ್ಣುಗಳು ಚಲಿಸದೆ ಇದ್ದದ್ದನ್ನು ನೋಡಿ ಬೆದರಿ ಓಡಿ ಹೋಗುತ್ತಾನೆ. ಅಮ್ಮ ದೂರದಿನ ಕೂಗುತ್ತಾಳೆ "ಯಾಕೋ ಇನ್ನೂ ಮಲಗಿದ್ದೀಯ, ಎದ್ದೇಳು" ಎಂದು. ಇನ್ನೂ ಕುಡಿ ಪ್ರಾಣ ಉಳಿದಿದೆ. ಇನ್ನೇನು ಸಾವು ನನ್ನನ್ನು ಆವರಿಸಿಕೊಳ್ಳಲಿದೆ. ಯಾಕೆ ಸಾಯುತ್ತಿದ್ದೇನೆ ಎಂಬುದೂ ಗೊತ್ತಿಲ್ಲ, ಮುಂದಿನ ವಾರ ಪರೀಕ್ಷೆಗಳಿವೆ ಎಂಬ ನೆನಪೂ ಇಲ್ಲ, ಇನ್ನು ಕೆಲವೇ ದಿನಗಳಲ್ಲಿ ಇಂಜಿನಿಯರ್ ಆಗುತ್ತೇನೆ ಎಂಬ ಸಂತಸವೂ ಇಲ್ಲ, ಕೆಲಸ ಹುಡುಕಿಕೊಳ್ಳಬೇಕೆಂಬ ಆತಂಕವಿಲ್ಲ. ಮನೆ-ಕುಟುಂಬ-ಸ್ನೇಹಿತರು ಎಲ್ಲರನ್ನು ಬಿಟ್ಟು ಹೋಗುತ್ತಿದ್ದೇನೆ ಎಂಬ ನೋವೂ ಇಲ್ಲ. ಎಲ್ಲವನ್ನು ಬಿಟ್ಟು ನಿರಾಳವಾಗಿದ್ದೇನೆ. ಯಾವುದೇ ಬಂಧದಲ್ಲೂ ಇಲ್ಲ ನಾನು. ಸಾವೂ ಸಂತಸ ತರುತ್ತಿದೆ. ಇಲ್ಲಿಗೆ ಕನಸು ಮುಕ್ತಾಯಗೊಳ್ಳುತ್ತದೆ.
ಸಾವೂ ಇಷ್ಟು ಸಲೀಸಾಗಿ, ಆರಾಮಾಗಿ ಇರಬಹುದಾ ಎಂದು ಎಚ್ಚೆತ್ತ ಮೇಲೆ ಅನ್ನಿಸಿತು. ಎಲ್ಲಾ ಭಾವ ಬಂಧಗಳನ್ನು ಕಳೆದುಕೊಂಡಾಗ ಇರಬಹುದಾದ ಆನಂದವನ್ನು ಕೆಲಕ್ಷಣಗಳ ಮಟ್ಟಿಗಾದರೂ ಕನಸು ನೀಡಿತ್ತು. ಸಾವೂ ಅಪ್ಯಾಯಮಾನವಾಗುವಂತೆ ತೋರಿತ್ತು. ಆ ನಿರಾಳತೆಯನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ...
( ಮೇಲೆ ಬರೆದದ್ದು ಯಾವುದೂ ಕಾಲ್ಪನಿಕವಲ್ಲ)