Wednesday, November 5, 2008

ಹುಣ್ಣಿಮೆ ರಾತ್ರಿ

ಕಣ್ಣು ಚಾಚಿದಷ್ಟಕ್ಕೂ ದೂರ ಕಾಣುವ ಕತ್ತಲು, ಕತ್ತಲ ಬೆನ್ನು ಹತ್ತಿರುವ ಮೌನ, ಚಂದಿರನ ಬೆಳಕಲ್ಲಿ ಅಸ್ಪಷ್ಟವಾಗಿ ಕಾಣುವ ಬೆಟ್ಟದ ಸಾಲುಗಳು. ತಲೆಯೆತ್ತಿ ಆಗಸದೆಡೆಗೆ ನೋಡಿದೆನು, ನನ್ನ ದುರಾದೃಷ್ಟವೋ ಏನೋ ಇಂದು ಅಷ್ಟೊಂದು ನಕ್ಷತ್ರಗಳಿಲ್ಲ. ಆದರೂ ವೇಗವಾಗಿ ಸಾಗುತ್ತಿದ್ದ ಮೋಡಗಳು, ಮೋಡ ತಿಳಿಯಾದಾಗ ಕಾಣುವ ಪ್ರಕಾಶಮಾನ ಶಶಿಯನ್ನು ಇನ್ನು ನಾಲ್ಕಾರು ದಿನ ಮರೆಯಲಾರೆ. ಗಡಗುಟ್ಟಿಸುವ ಚಳಿ, ಕೆಲವೊಮ್ಮೆ ಹಿತವೆನಿಸುವ ತಂಗಾಳಿ, ಬೊಗಸೆಯಲ್ಲಿ ತುಂಬಿಕೊಳ್ಳುವಷ್ಟು ಮೌನ, ಕೊನೆಯಿಲ್ಲದ ಬೆಟ್ಟದ ಸಾಲುಗಳು, ಗವ್ವೆನ್ನುವ ಕಾಡು ಇದೆಲ್ಲ ಅನುಭವಿಸಿ ಎಷ್ಟು ದಿನಗಳಾಯಿತು ? ಬೆಂಗಳೂರಲ್ಲಿ ಇದೆ ಸಮಯದಲ್ಲಿ ದೇಹಕ್ಕೇ ಕಿಚ್ಚು ಹಚ್ಚಿಸಿಕೊಂಡು ಕೆಲಸದಲ್ಲಿ ಮುಳುಗಿರುತ್ತಿದ್ದೆ. ನಾಲ್ಕು ದಿನಗಳಲ್ಲಿ ಈ ಊರನ್ನು ಬಿಟ್ಟು ಮತ್ತೆ ಅದೇ ಇಷ್ಟವಿಲ್ಲದ ಜಾಗಕ್ಕೆ ಹೋಗಬೇಕಾದ ಅನಿವಾರ್ಯತೆಯ ನೆನಪಾಗಿ ಬೇಸರಗೊಂದೆ. ಮೋಡಗಳ ಮಧ್ಯದಿಂದ ಇಣುಕುತ್ತಿದ್ದ ಚಂದ್ರನ ಕಂಡು ಕುವೆಂಪು ಅವರ ಕವಿತೆಯೊಂದು ನೆನಪಾಯಿತು. ಕವಿತೆಯ ಹೆಸರು "ಹುಣ್ಣಿಮೆಯ ರಾತ್ರಿ" ಎಂದು. ಹೈಸ್ಕೂಲ್ ನಲ್ಲಿ ಇದ್ದಾಗ ಕನ್ನಡ ಪಠ್ಯ ಪುಸ್ತಕದಲ್ಲಿ ಇದ್ದ ನೆನಪು.

ಓ ನೋಡದೋ ರಂಜಿಸುತಿದೆ
ರಜನಿಯ ಕೈದೀಪ
ನೀಲದಿಯಲಿ ತೆಲುತ್ತಿಹ
ಜ್ಯೋತಿಯ ಸ್ವರ್ದೀಪ

ತೆಳ್ಳು ತೆಳ್ಳನೆ ಬೆಳ್ಳು ಬೆಳ್ಳನೆ
ಮುಗಿಲುಣ್ಣೆಯ ರಾಶಿ
ಹೊಂಜೋನ್ನದಿ ಮಿಂದಂತಿದೆ
ಜೆನ್ಮಳೆಯನೆ ಸೂಸಿ!

ಸಹ್ಯಾದ್ರಿಯ ಗಿರಿಪಂಕ್ತಿಯ
ಕೊನೆಗಾಣದ ಲೀಲೆ ;
ಬಹುಯೋಜನ ವಿಸ್ತೀರ್ಣದ
ವನರಾಜಿಯ ಮಾಲೆ

ಬಾಂದಳದಿಂದ ಇಳಿಯುತ್ತಿದೆ
ಬೆಳದಿಂಗಳ ಗಂಗೆ
ಹೊಳೆಯುತ್ತಿದೆ ಬರೆದಂದದಿ
ದೂರದಿ ನದಿ ತುಂಗೆ

ಅ: ಆಲಿಸು ! ಆಕಾಶದಿ
ತೇನೆಯ ಸುರವಾಣಿ;
ಜುಮ್ಮೆಂದಿದೆ ಅದನಾಲಿಸಿ
ಸಹ್ಯಾದ್ರಿ ಶ್ರೇಣಿ !

ಸೌಂದರ್ಯದ ಮಧುಪಾನದಿ
ವಿಶ್ವವೇ ಉನ್ಮತ್ತ !
ಧ್ಯಾನದ ರಸದಾನಂದದಿ
ಸೃಷ್ಟಿ ಸಮಾದಿಸ್ಥ !

ಏ ನೀರವಮೇಂ ನಿಶ್ಚಲ
ಮೀ ಹುಣ್ಣಿಮೆ ಇರುಳು
ತಿಂಗಳ ಬೆಳಕಿನ ಕಡಲಲಿ
ತೇಲಿದೆ ತಿರೆಯರಳು !

ಸುಧೆ ತುಂಬಿದ ವಿಧುಬಿಂಬದ
ಮಧು ಚಂದ್ರಿಕೆ ಮಾಯೆ
ನೆಲ ಬಾನ್ಗಳ ಒಲಿದೊಪ್ಪಿರೆ
ದ್ವೈತವು ಬರಿ ಛಾಯೆ

ಚೈತನ್ಯಕೆ ಜಡವೆಂಬುದು
ಕವಿಭಾವಕೆ ಭಾಷೆ
ಈ ಭುವನದ ಭವ್ಯಾಕೃತಿ
ಆತ್ಮನ ಒಂದಾಶೆ !

ಓ ರಾತ್ರಿಯೇ ಸಹ್ಯಾದ್ರಿಯೇ
ಹುಣ್ಣಿಮೆ ಶಶಿಕಾಂತಿ
ನಿಮ್ಮೆಲ್ಲರೆ ಸಾನಿಧ್ಯವೇ
ಪರಮಾತ್ಮನ ಶಾಂತಿ

- ಕುವೆಂಪು

5 comments:

Ragu Kattinakere said...

this is gud, but i do not know why i do not find this of the kuvempu class. :( donno why

ಅರುಣ್ ಹಂಪೆ said...

ತುಂಬ ಚೆನ್ನಾಗಿದ್ದು, ಊರಲ್ಲಿ ನಾವು ಕಳೆದ ಆ ದಿನಗಳು ಮತ್ತೆ ನೆನಪಾತು....

shivu.k said...

ಅನುಭವ ಮತ್ತು ನೆನಪುಗಳು ಆಗಾಗ ಹೊಸ ಉರುಪು ಉತ್ಸಾಹಗಳನ್ನು ಕೊಡುತ್ತವೆ. ನಿಮಗೂ ಹಾಗೆ ಆಗಲಿ.

ಪಲ್ಲವಿ ಎಸ್‌. said...

ನೀವು ಬರೆದ ಬರವಣಿಗೆ ಓದಿದರೆ, ನನಗೂ ಹುಣ್ಣಿಮೆ ಬಗ್ಗೆ ಬರೆಯಬೇಕೆನ್ನುವ ಹಂಬಲ ಉಂಟಾಗುತ್ತಿದೆ. ಹುಣ್ಣಿಮೆಯನ್ನು ವರ್ಣಿಸಬಹುದಿತ್ತಲ್ಲ?

- ಪಲ್ಲವಿ ಎಸ್‌.

ಶರಶ್ಚಂದ್ರ ಕಲ್ಮನೆ said...

ರಘು ಅವ್ರೆ,
ನನಗೇನು ಇದು ಕುವೆಂಪು ಅವ್ರ class ಆಗೇ ಕಾಣಿಸ್ತ ಇದೆ.


ಅರುಣ,
ನಾವು ಊರಲ್ಲಿ ಕಳೆದ ದಿನಗಳ ಬಗ್ಗೆ ಬರಿತ ಹೋದ್ರೆ ಬ್ಲಾಗ್ ಓದವ್ರಿಗೆ ಬೇಜಾರ್ ಬತ್ತು ಅಷ್ಟೆ. ಆ ಸುಂದರ ದಿನ (ರಾತ್ರಿ) ಗಳು ಮತ್ತೆ ಬತ್ತ ಇಲ್ಯ ಅನ್ನದೆ ನಂಗೆ ಯಾವಾಗ್ಲೂ ಕಾಡೋ ಪ್ರಶ್ನೆ. ಹುಣ್ಣಿಮೆ ರಾತ್ರಿಲಿ ಗುಡ್ಡದ ತುದಿಲಿ ಕೂತು ಹಂಚಿಕೊಂಡ ಮಾತುಗಳ ನೆನಪಿದ್ದ ನಿಂಗೆ ?


ಶಿವು ಅವ್ರೆ,
ಅನುಭವ ಹಾಗು ನೆನಪುಗಳು ಕೆಲವೊಮ್ಮೆ ಖಿನ್ನತೆಗೂ ದಾರಿ ಆಗುತ್ತವೆ :) ಯಾರಿಗೂ ಹಾಗೆ ಆಗದೆ ಇರಲಿ.


ಪಲ್ಲವಿ ಅವ್ರೆ,
ಬರೀರಿ ನೀವು. ಓದಿ ಸಂತೋಷ ಪಡೋಣ. ಹ್ಮ್ಮ್ಮ್..... ವರ್ಣಿಸಬಹುದಿತ್ತು. ಇತ್ತೇಚೆಗೆ ಯಾಕೋ ಬರವಣಿಗೆ ಬಗ್ಗೆ ಸನ್ಯಾಸತ್ವ ಬಂದಿದೆ ಅನ್ನಿಸತೊಡಗಿದೆ. ಪರೀಕ್ಷೆಗಳು ಹತ್ತಿರ ಬರುತ್ತಿರುವುದೂ ಕಾರಣವಿರಬಹುದು. ಮೊದಲಿನ ಹುರುಪಿಲ್ಲ ಬರವಣಿಗೆ ಬಗ್ಗೆ. ಹಂಚಿಕೊಳ್ಳಲು ವಿಷಯಗಳು ಸಾಕಷ್ಟಿವೆ, ಆದರೆ ಬರೆಯಲು ಕುಳಿತರೆ ಪದಗಳು ಕಣ್ಣಾಮುಚ್ಚಾಲೆ ಆಡ ತೊಡಗುತ್ತವೆ.