Friday, April 17, 2009

ಓಡಿ ಹೋದವನ ಒಂದು ಪತ್ರ.....ನೀವು ಈ ಪತ್ರ ಓದುತ್ತಿರುವ ಹೊತ್ತಿಗೆ ನಾನು ಎಲ್ಲಿ ಇರುತ್ತೇನೋ ನನಗೆ ಗೊತ್ತಿಲ್ಲ. ಈ ಪತ್ರ ಬರೆಯುವ ಅಗತ್ಯತೆ ಇರಲಿಲ್ಲ. ನನ್ನ ಮನದಲ್ಲಿ ಇದ್ದುದನ್ನು ಬಾಯಿಮಾತಲ್ಲಿ ಹೇಳಲಾಗದೆ ಅಕ್ಷರಗಳ ಸಹಾಯ ಪಡೆಯುತ್ತಿದ್ದೇನೆ. ನಾನು ಹೀಗೆ ಓಡಿಹೊಗುತ್ತಿರಲು ಈಗ ಜಿನುಗುತ್ತಿರುವ ಮಳೆಯೂ ಕಾರಣವಾಗಿರಬಹುದು. ಈ ಮಳೆಯೇ ಹೀಗೆ, ಎಲೆಯ ಮೇಲಿನ ಧೂಳನ್ನೆಲ್ಲ ತೊಳೆದಂತೆ ನೆನಪಿನ ಗಂಟನ್ನು ಸಡಲಿಸುತ್ತದೆ... ಇದೊಂದು ನೆಪವಷ್ಟೇ.

ಓಡಿ ಹೋಗುತ್ತಿರಲು ಕಾರಣ ಒಂದು ಬೇಕಲ್ಲವೇ... ಹೆದರಬೇಡಿ, ವೈರಾಗ್ಯ ಅಂತೂ ಬಂದಿಲ್ಲ. ಹ್ಞಾ! ತಾತ್ಕಾಲಿಕ ವೈರಾಗ್ಯ ಇದ್ದರೂ ಇರಬಹುದು. ಬೇಸತ್ತಿದ್ದೇನೆ ಈ ಜೀವನದಿಂದ. ಅದೇ ಅರ್ಥೈಸಿಕೊಳ್ಳಲು ಆಗದ ಜನರು, ಒಗ್ಗದ ಅವರ ತೋರಿಕೆಯ ಮಾತುಗಳು. ಇಲ್ಲಿ ನಂಬಿಕೆ, ಪ್ರೀತಿ, ಗೆಳೆತನ, ಆತ್ಮೀಯತೆ ಎಲ್ಲ ತೋರಿಕೆಗೆ ಮಾತ್ರ. ಬಹುಶ ಒತ್ತಡ ಹಾಗು ಪರಿಸ್ಥಿತಿಗಳು ಜನರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರಬಹುದು. ಹಾಗೆ ಆಗಿದ್ದೇ ಆದರೆ ನಾವು ಮಾನವರು ಎಂದು ಹೇಳಿಕೊಳ್ಳುವುದರಲ್ಲಿ ಯಾವ ಅರ್ಥವಿದೆ ?? ನನಗೇ ಯೋಗ್ಯತೆ ಇಲ್ಲದೆ ಇರಬಹುದು ಈ ಸಮಾಜದಲ್ಲಿ ಜೀವಿಸಲು.. ನಾನು ಕಲ್ಪಿಸಿಕೊಂಡಿರುವ ಜೀವನದ ಅರ್ಥವೇ ತಪ್ಪಿದ್ದರೂ ಇರಬಹುದು. ನನಗೇ ಏಕಾಂತದ ಅಗತ್ಯವಿದೆ ಎನ್ನಿಸತೊಡಗಿದೆ. ಇದು ಇಡಿ ಜೀವನಕ್ಕೂ ಅನ್ವಯಿಸುವುದಿಲ್ಲ, ಕೇವಲ ದಿನಗಳ ಮಟ್ಟಿಗೆ. ನನ್ನನ್ನು ನಾನು ಅರಿಯಲು ಅಥವಾ ಈ ಜಗತ್ತಿಗೆ ತಕ್ಕಂತೆ ಬದಲಿಸಿಕೊಳ್ಳುವವರೆಗೆ ನಾನು ಒಂಟಿಯಾಗಿರಬೇಕಿದೆ.

ಕಣ್ಣು ಮುಚ್ಚಿಕೊಂಡು ಕರ್ಣಾಟಕದ ಭೂಪಟದ ಮೇಲೆ ಬೆರಳು ಆಡಿಸುತ್ತಿರುವೆ, ಯಾವ ಜಾಗದಲ್ಲಿ ಬೆರಳು ನಿಲ್ಲುತ್ತದೆಯೋ ಅಲ್ಲಿಗೆ ನನ್ನ ಪಯಣ. ನನಗೇ ಆ ಊರು ಸುಂದರವಾಗಿರಬೇಕೆಂದು ಏನು ಇಲ್ಲ, ಇಲ್ಲಿಂದ ಮುಕ್ತಿ ಬೇಕಾಗಿದೆ ಅಷ್ಟೇ. ಭಯ ಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಹಿಂತಿರುಗುವೆ. ನನ್ನದೇ ಆದ ಮನಸ್ಸೊಂದಿದೆ, ಅದಕ್ಕೆ ಆದ ಅಗತ್ಯತೆಗಳಿವೆ. ನಿಮ್ಮೆಲ್ಲರ ಮಾತನ್ನೂ ಕೇಳಿದಂತೆ ನನ್ನ ಮನಸ್ಸಿನ ಮಾತನ್ನೂ ಕೇಳಬೇಕಿದೆ. ಬಿಟ್ಟು ಹೋದ ನಿರೀಕ್ಷೆಗಳಿಗೆ ನಾನೇ ಜವಾಬ್ದಾರ ಎಂಬ ಅರಿವು ನನಗಿದೆ.

ನಡೆದ ದಾರಿಯ ಮೇಲೆ ಹೋದ ಹೆಜ್ಜೆಯ ಸಾಲು
ದೂರ ಬೆಟ್ಟದ ಮೇಲೆ ಬೆಳಕುಗಳ ಬೀಡು
ತುಂಬು ಹೊಳೆಯಂತೆ ಗಂಭೀರವಾಗಿ ಹರಿಯುತ್ತಲೇ ಇದೆ
ಒಳಗೆ ಎಂದೂ ಮುಗಿಯದ ಹಾಡು
ಜಿ.ಎಸ್. ಶಿವರುದ್ರಪ್ಪ

ಇತಿ,
ನಿಮ್ಮ ಪ್ರೀತಿಯ.....

13 comments:

Anonymous said...

adbutha

ಶಿವಪ್ರಕಾಶ್ said...

"ಓಡಿ ಹೋದವನ ಒಂದು ಪತ್ರ....." ಚನ್ನಾಗಿದೆ ರೀ...
ನನೆನಾದ್ರು ಓಡಿ ಹೋಗೋ ಪ್ಲಾನ್ ಇದ್ರೆ, ಇದೆ ಪತ್ರದ ಒಂದು zerox ಇಟ್ಟು ಹೋಗ್ತೀನಿ :P

Sinchana said...

ಹೋಯ್! ಇಲ್ಲೇ ಇದ್ಯಾ...? :-)
ನಿಜಕ್ಕೂ ಎಲ್ಲರಿಗೂ ಇಂತದ್ದೊಂದು ಸಂದರ್ಭ ಸೃಷ್ಟಿಯಾಗಿರುತ್ತದೆ,ಮತ್ತು ಇಂತಹ ಅನುಭವವೂ ಆಗಿರುತ್ತದೆ ಎಂದು ನನ್ನ ಅನಿಸಿಕೆ...
ಇಂತದ್ದೊಂದು ಪಯಣ ಸಾಗಿ,ಮತ್ತೆ ನಿರೀಕ್ಷೆಗಳೆಲ್ಲ ನಿಜವಾಗಿ,ಹೊಸ ಹುರುಪು ತುಂಬಿ,ಜೀವನ ಸಾಗಬೇಕಿದೆ...

Anonymous said...

ಬರಹದಲ್ಲಿ ಪ್ರೌಢತೆ ಇದೆ..keep it up.

ಧರಿತ್ರಿ said...

ಶರತ್..ಏನ್ರೀ ಇದು ಪತ್ರ...ಹಿಂಗೆಲ್ಲಾ...ನಿರಾಶೆ..ಬೇಜಾರು..ಒಂಟಿತನ?!
ಬರಹ ಚೆನ್ನಾಗಿದೆ.
"ಒಂದು ಬಾಗಿಲು ಮುಚ್ಚಿದರೆ, ಇನ್ನೊಂದು ಬಾಗಿಲು ತೆರೆಯುತ್ತದೆ. ಅತ್ಯಂತ ಕ್ರೀಯಾಶೀಲ ಕ್ಷಣಗಳು ಮನುಷ್ಯನಿಗೆ ಧಕ್ಕೆ ಬಿಡುತ್ತವೆ. ನಾವೆಲ್ಲ ಚಹಾದ ಎಲೆಗಳಂತಹವರು. ಬಿಸಿನೀರಿಗೆ ಬಿದ್ದು ಕುದ್ದಾಗಲೇ ತಮ್ಮ ತಾಕಿತ್ತು ಏನು ಎನ್ನುವುದು ಅರ್ಥವಾಗೋದು" ರಸ್ಕಿನ್ ಬಾಂಡ್ ನ 'THE LITTLE BOOK OF COMFORT' ನಲ್ಲಿದ್ದ ಸಾಲುಗಳು..ಯಾಕೋ ಇಲ್ಲಿ ಬರೆಯೋಣ ಅನಿಸ್ತು.

-ಧರಿತ್ರಿ

ಸಾಗರದಾಚೆಯ ಇಂಚರ said...

ಅತ್ಯಧ್ಬುತ, ತುಂಬಾ ಹಿಡಿಸಿತು

ಶರಶ್ಚಂದ್ರ ಕಲ್ಮನೆ said...

ಅನಾಮಧೇಯರೇ,
ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು.. ಹೀಗೆ ಬರುತ್ತಿರಿ.

ಶಿವಪ್ರಕಾಶ್,
ಓಡಿ ಹೋಗುವ ಯೋಚನೆ ಯಾಕೆ ? ಪತ್ರ xerox ಮಾಡಿಟ್ಟು ಹೋಗಬೇಡಿ ಮಾರಾಯ್ರೇ, ಕೊನೆಗೆ ನನ್ನ ಹಿಡ್ಕೊಂಡು ಹೋಗ್ತಾರೆ ನಿಮಗೆ ಓಡಿ ಹೋಗಲು ಸ್ಫೂರ್ತಿ ಕೊಟ್ಟೆ ಅಂತ :)

ಸಿಂಚನ,
ಹೀಗೆ ಎಲ್ಲರಿಗೂ ಯೋಚನೆ ಬರುತ್ತದೋ ಇಲ್ಲವೊ ಗೊತ್ತಿಲ್ಲ, ಆದರೆ ಬಂದರೆ ತಪ್ಪೇನಿಲ್ಲ..... ಜೀವನದ ಪ್ರತಿಯೊಂದು ಘಳಿಗೆಯೂ ಕಲಿಯುವಂತ ಪಾಠಗಳೇ... ಧನ್ಯವಾದಗಳು ಕಮೆಂಟಿಸಿದ್ದಕ್ಕೆ.

ಮತ್ತೊಬ್ಬ ಅನಾಮಧೇಯರೇ,
ಬರಹ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು :) ನಿಮ್ಮ ಪ್ರೋತ್ಸಾಹ ಹೀಗೆ ಸಾಗಲಿ, ಆಗಾಗ ಬಂದು ಹೋಗುತ್ತಿರಿ.

ಧರಿತ್ರಿ,
ಇದು ನಿರಾಶೆ, ಬೇಜಾರು, ಒಂಟಿತನ ಏನಲ್ಲ... ಸೀರಿಯಸ್ ಆಗಿ ತಗೋಬೇಡಿ, ನಾನೆಲ್ಲೂ ಓಡಿ ಹೋಗಿಲ್ಲ :)

ಸಾಗರದಾಚೆಯ ಇಂಚರ,
ನನ್ನ ಬ್ಲಾಗ್ ಕಡೆ ಕಣ್ಣು ಹಾಯಿಸಿ ಮೆಚ್ಚಿದ್ದಕ್ಕೆ ಧನ್ಯವಾದಗಳು...

Anonymous said...

Good one....

- Vaishali

Anonymous said...

ಮುಕ್ತ ಎಫೆಕ್ಟ್ ನಿಂದ ಎಲ್ಲ ಮನೆಯ ಅಮ್ಮಂದಿರು ಮನೆಮಂದಿಗೆ ಊಟವನ್ನು ಅರ್ಧಘಂಟೆ ನಂತರ ಬಡಿಸುತ್ತಿದ್ದಾರಂತೆ...

ಇದು ಶಾಂತಿನಾಥ ದೇಸಾಯಿಯ "ಮುಕ್ತಿ" ಎಫೆಕ್ಟಾ?:)

ಏಕಾಂತ said...

ಅನಿರೀಕ್ಷಿತವಾಗಿ ನಿಮ್ಮ ಬ್ಲಾಗ್ಗೆ ಬೇಟಿಕೊಟ್ಟೆ. ಏಕಾಂತತೆ ನಿಮ್ಮನ್ನು ಬರೆಸಿಕೊಂಡ ರೀತಿ ನಿಜಕ್ಕೂ ಚೆನ್ನಾಗಿದೆ. ಹೀಗೇ ಬರೆಯುತ್ತಿರಿ.

ಧರಿತ್ರಿ said...

ಓಡಿಹೋದವ ಮತ್ತೆ ಬಂದಿಲ್ವಾ? ಏನಾದ್ರೂ ಬರೇರಿ ಮಾರಾಯ್ರೆ
-ಧರಿತ್ರಿ

suma said...

tumba cennagide baraha.keep it up.

ಪಾಚು-ಪ್ರಪಂಚ said...

ಇಂಥದ್ದೊಂದು ಆಸೆ ನನಗೂ ಇದೆ...!! ಸಂದರ್ಭ ಬಂದಾಗ ನಿಮ್ಮ ಕೈಯಾರೆ ಪತ್ರ ಬರೆಸುವೆ..!! :-)
ಚಂದದ ಬರಹ...

ಅಭಿನಂದನೆಗಳು
-ಪ್ರಶಾಂತ್ ಭಟ್