Monday, September 7, 2009

ವಿದಾಯ... ಹಾಗೆ ಸಣ್ಣದೊಂದು ನೋವು

"ಶರಶ್ಚಂದ್ರ ಕಲ್ಮನೆ ಬ್ಲಾಗ್ ಬರೆಯುವುದನ್ನು ನಿಲ್ಲಿಸಿದ್ದಾನೆ" ಈ ವಿಷಯ ತಿಳಿದರೆ ಏನನ್ನಿಸುತ್ತದೆ ನಿಮಗೆ ? ತೀರ ಹತ್ತಿರದ ಗೆಳೆಯರು ಕರೆ ಮಾಡುತ್ತಾರೆ .. "ಯಾಕ್ರೀ ಶರತ್ ಏನಾಯ್ತು, ಯಾಕೆ ಬರೆಯೋದು ನಿಲ್ಲಿಸಿದ್ದು " ಎಂದು. ಆಗಾಗ ಸಮಯ ಸಿಕ್ಕಾಗ ಬ್ಲಾಗ್ ಓದುವವರು "ಏನೋ ಸಮಸ್ಯೆ ಇರಬೇಕು, ಚಿತ್ರ ಚನ್ನಾಗಿ ಬಿಡಿಸುತ್ತಿದ್ದ, ಬರಹ ಪರವಾಗಿರಲಿಲ್ಲ" ಎಂದುಕೊಂಡಾರು. ಇನ್ನು ಕೆಲವರು "ಗೊತ್ತಿತ್ತು ಇವನ ಹಣೆ ಬರಹ ಇಷ್ಟೇ ಎಂದು.. ಇವನ ಬ್ಲಾಗ್ ಕಡೆ ಕಣ್ಣು ಹಾಯಿಸುವ ಕಷ್ಟ ತಪ್ಪಿತು" ಎಂದರೂ ಎನ್ನಬಹುದು..

ಹೌದು, ಇವೆಲ್ಲದಕ್ಕೂ ಸಿದ್ದನಾಗಿದ್ದೇನೆ... ನನ್ನ ಬ್ಲಾಗ್ ಅನಿರ್ದಿಷ್ಟ ಕಾಲದವರೆಗೆ ನಿರ್ಜೀವಗೊಳ್ಳಲಿದೆ. ಕಾರಣ ಹೇಳಿಕೊಳ್ಳುವಂತದ್ದು ಏನಿಲ್ಲ. ನನ್ನ ಬರವಣಿಗೆಗಳು ನನಗೇ ಸಂತೋಷ ನೀಡುತ್ತಿಲ್ಲ. ಇದು ಪ್ರಥಮ ಕಾರಣ. ಎರಡನೆಯ ಕಾರಣವೆಂದರೆ ನನಗೆ ಈಗೀಗ ಬರೆಯುವುದಕ್ಕಿಂತ ಓದುವುದೇ ಜಾಸ್ತಿ ಸಂತಸ ನೀಡುತ್ತಿದೆ. ಮನೆಯಲ್ಲಿ ಪುಸ್ತಕಗಳ ಹೊರೆಯೇ ಬಿದ್ದಿದೆ. ಓದಬೇಕು ಎಂಬ ಹಂಬಲ ಹಠಕ್ಕೆ ಬಿದ್ದಿದೆ. ಬ್ಲಾಗ್ ಬರೆಯುವುದನ್ನು ಬಿಟ್ಟೆನೆಂದರೆ ಓದುವುದನ್ನು ಬಿಡುವೆನೆಂದಲ್ಲ..... ನಿಮ್ಮೆಲ್ಲರ ಬರಹಗಳನ್ನು ಓದಿ ಆನಂದಿಸುವೆ.

ಒಂದು ವರ್ಷದಲ್ಲಿ ಬರೆದದ್ದು ಕೇವಲ ೨೮ ಬರಹಗಳು, ಅವುಗಳಲ್ಲಿ ಹಲವು ಚಿತ್ರಗಳು. ನಾನು ಎಣಿಸಿದ್ದಕ್ಕಿಂತ ಜಾಸ್ತಿಯೇ. ಬರೆಯಲೇ ಬೇಕೆಂಬ ಒತ್ತಡದಿಂದ ಎಂದೂ ಬರೆಯಲಿಲ್ಲ. ಬರೆದದ್ದನ್ನು ಎಲ್ಲರೂ ಓದಿ ಕಾಮೆಂಟ್ ಬರೆಯಬೇಕೆಂದು ನಿರೀಕ್ಷಿಸಿಯೂ ಇರಲಿಲ್ಲ. ನನ್ನ ಖುಷಿಗೆ ಬರೆದೆ.. ನೀವೆಲ್ಲ ಓದಿದಿರಿ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದಿರಿ. ನನ್ನ ಖುಷಿಯ ಭಾಗವಾದಿರಿ. ಅಷ್ಟು ಸಂತಸ ಸಾಕೆನಗೆ.

ಇಷ್ಟ ಪಟ್ಟು ಬರೆಯಲು ಪ್ರಾರಂಭಿಸಿದ ಎರಡು ಬರಹಗಳು ಕೊನೆಗಾನದೆ ಹಾಗೆ ನಿಂತಿವೆ. ತಾಳ್ಮೆಯನ್ನು ಮೈ ಮೇಲೆ ಎಳೆದುಕೊಂಡು ರಚಿಸಲು ಕುಳಿತ ಚಿತ್ರವೊಂದು ಕಪ್ಪು ಗೆರೆಗಳ ಮಧ್ಯೆ ಹಾಗೆ ಧ್ಯಾನಸ್ಥವಾಗಿದೆ. ಎಂದಾದರೂ ಇವೆಲ್ಲ ತಮ್ಮ ಕೊನೆಯ ತೀರವನ್ನು ಸೇರಿದರೆ, ನನಗೆ ಸಂತೃಪ್ತಿ ಕೊಟ್ಟರೆ ಮತ್ತೆ ಬ್ಲಾಗಿಗೆ ಜೀವ ಬಂದರೂ ಬರಬಹುದು. ಬ್ಲಾಗನ್ನು ಡಿಲೀಟ್ ಮಾಡುವುದಿಲ್ಲ. ಬರಹವನ್ನು ನಿಲ್ಲಿಸುವುದು ನನ್ನ ಉದ್ದೇಶವೂ ಅಲ್ಲ, ಅದು ನನ್ನಿಂದ ಸಾಧ್ಯವೂ ಇಲ್ಲ. ಈ ಯೋಜನೆ ನೆನ್ನೆ ಮೊನ್ನೆಯದಲ್ಲ. ಹಲವು ತಿಂಗಳುಗಳ ಮೊದಲೇ ಮೊಳಕೆಯೊಡೆದು ಮರವಾಗಿ ಬೆಳದದ್ದು.

ನಾನು ಬರೆಯಲು ಪ್ರಾರಂಭಿಸಿದಾಗಿನಿಂದ ನನ್ನನ್ನು ತಿದ್ದಿ-ತೀಡಿ, ನನ್ನ ಬರಹವನ್ನು ಓದಿ ಸಂತೋಷಪಟ್ಟು, ಚಿತ್ರಗಳಿಗೆ ಹೃದಯದಲ್ಲಿ ಜಾಗ ಒದಗಿಸಿ, ಕೇವಲ ಸಹಬ್ಲಾಗಿಗರಾಗಿ ಉಳಿಯದೆ ನನ್ನನ್ನು ಸ್ನೇಹದ ತೆಕ್ಕೆಯ ಒಳಗೆಳೆದುಕೊಂಡ ಸ್ನೇಹಿತರಿಗೆ ಹಾಗು ಬ್ಲಾಗ್ ಕಡೆ ಕಣ್ಣು ಹಾಯಿಸಿದ ಎಲ್ಲರಿಗೂ ಅನಂತಾನಂತ ವಂದನೆಗಳು. ನಿಮ್ಮ ಪ್ರೀತಿಗೆ ನಾನು ಚಿರ ಋಣಿ. ಮತ್ತೆ ಸಿಗುವೆ...


ಶರಶ್ಚಂದ್ರ ಕಲ್ಮನೆ

20 comments:

Rajesh Manjunath - ರಾಜೇಶ್ ಮಂಜುನಾಥ್ said...

ಪ್ರೀತಿಯ ಶರತ್,
ಬಹುತೇಕ ನಾನು ಇದೇ ಹಂತದಲ್ಲಿ ನಿಂತಿದ್ದೇನೆ, ಏನೇ ಬರೆದರು ತೃಪ್ತಿ ನೀಡುತ್ತಿಲ್ಲ. ಹಾಗಾಗಿ ನಿಮಗೆ ಹೆಚ್ಚೇನು ಹೇಳಲಾರೆ. ನೀವು ಬ್ಲಾಗ್ ಬರಹ ನಿಲ್ಲಿಸುತ್ತಿರುವುದು ಬೇಸರ ಮೂಡಿಸುತ್ತಿದೆ. ಆದರೆ ನಿಮ್ಮ ಸ್ವಂತ ಅಭಿಪ್ರಾಯದ ಬಗ್ಗೆ ಗೌರವವು ಇದೆ. ಎಲ್ಲಾ ಒಳಿತಾಗಲಿ...

ಮಲ್ಲಿಕಾರ್ಜುನ.ಡಿ.ಜಿ. said...

ಶರತ್,
ತಪ್ಪು ತಿಳಿಯಬೇಡಿ. ನೀವು ಬರೆಯಲೇ ಬೇಕೆಂದು ಒತ್ತಾಯಿಸುತ್ತಿಲ್ಲ. ನೀವು ಓದಬೇಕೆಂದಿಟ್ಟುಕೊಂಡಿರುವ ಪುಸ್ತಕಗಳ ಬಗ್ಗೆ ಕುತೂಹಲವಿದೆ. ಓದಿ. ನಿಮಗಿಷ್ಟವಾದ ಓದಿದ ಪುಸ್ತಕದ ನಾಲ್ಕು ಮಾತು ಅಥವಾ ಟಿಪ್ಪಣಿಗಳನ್ನಾದರೂ ಬರೆಯಿರಿ. ನಮಗೂ ಓದಲು ಹೊಸ ಪುಸ್ತಕದ ಬಗ್ಗೆ ತಿಳಿಯಲು ಪ್ರೇರಕವಾಗುತ್ತೆ. ಒಳ್ಳೆಯದನ್ನು ಹಂಚಿಕೊಳ್ಳುವುದರಲ್ಲಿ ತಪ್ಪಿಲ್ಲವಲ್ಲ.

Anonymous said...

ಏನಿದು ಶರತ್? "ಮುಕ್ತಿ"ಯ ಪ್ರಭಾವವೇ?

ವಿದಾಯಯದ ಕುರಿತು ಬರೆದಿರಿ, ಸಣ್ಣ ನೋವಿನ ಕುರಿತು ಏನೂ ಅಂದಿಲ್ಲ. ಅದು ನಿಮ್ಮ ಬರಹ ಓದಿದ ಮೇಲೆ ನನಗಾಯಿತು.

ಎಲ್ಲೋ ಒಂದು ಕಡೆ "ನಾವು ಬರೆಯುವುದು ಬೆಳೆಯುವುದಕ್ಕೆ" ಅಂತ ಬರೆದಿದ್ದೆ. ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಅತೃಪ್ತಿ, ಸೋಲಿನಂಥ ಭಾವನೆ, ಎಲ್ಲಾ ಸಾಮಾನ್ಯ. ಕಲಿಯುತ್ತಾ ಕಲಿಯುತ್ತಾ ಬೆಳ(ಬರ)ವಣಿಗೆ ಸಾಗಬೇಕು ಅನ್ನುವುದು ನನ್ನಭಿಪ್ರಾಯ.

ಯಾವುದಕ್ಕೂ ಇದರ ಕುರಿತು ಇನ್ನೊಮ್ಮೆ ಆಲೋಚಿಸಿ.

ನಮ್ಮೊಳಗಿನ ಭಾವದ ಬರವನ್ನು ತೊಡೆದುಹಾಕುತಿರಲಿ ಬರವಣಿಗೆ, ಓದುತ್ತಿರಿ, ಹಾಗೇ ಬರೆಯುತ್ತಲೂ ಇರಿ.

ಸುಶ್ರುತ ದೊಡ್ಡೇರಿ said...

:(

roopa said...

ಶರಶ್ಚಂದ್ರ ಸರ್,
ಇದು ನೀವು ತಮಾಷೆ ಮಾಡುತ್ತಾ ಇದ್ದೀರಿ ಎ೦ದು ಭಾವಿಸುತ್ತೇನೆ . ಇದು ನಿಜವಾದರೆ ಇನ್ನೊಮ್ಮೆ ಯೋಚಿಸಿ . ಇದು ಆತುರದ ನಿರ್ದಾರ ಎ೦ದು ನನ್ನ ಭಾವನೆ . ನೀವು ನಿಮಗೆ ಸಮಯವಿದ್ದಾಗ ಬರೆಯಿರಿ . ನಿಮ್ಮ ಕ್ರಿಯಾಶೀಲತೆಯನ್ನು ಬೆಳೆಸುವತ್ತ ಗಮನ ಕೊಟ್ಟು ಇದನ್ನು ಒಟ್ಟಿಗೆ ಮಾಡ ಬಹುದು ಎ೦ದು ನನ್ನ ಅನಿಸಿಕೆ . ಇನ್ನು ನಿರ್ದಾರ ನಿಮ್ಮದು .

Divya Mallya - ದಿವ್ಯಾ ಮಲ್ಯ said...

ಶರಶ್ಚಂದ್ರ,
"There is nothing permanent except changes" ಅನ್ನುವ ಮಾತಿನಂತೆ ಬದಲಾವಣೆ ಸಹಜ. ಇಂದು ಸಂತೋಷ ನೀಡುವ ವಿಷಯಗಳು ಎಂದಿಗೂ ಸಂತೋಷ ನೀಡಲಾರದೆ ಇರಬಹುದು. ಮನಸಿಗೆ ಏನು ಸಂತಸ ನೀಡುವುದೋ ಅದನ್ನೇ ಮಾಡಬೇಕಾದುದೂ ನಿಜ. ಆದರೆ, ಬ್ಲಾಗನ್ನು ನಿರ್ಜೀವಗೊಳಿಸುವ ನಿರ್ಧಾರಕ್ಕೆ ಬರಬೇಕಾಗಿರಲಿಲ್ಲವೇನೋ... ಅದೇನೇ ಇರಲಿ, ನಿಮಗೆ ಸಂತೃಪ್ತಿ,ಸಂತೋಷ ನೀಡುವ ಬರಹಗಳು, ನಿಮ್ಮಿಂದ ಶೀಘ್ರದಲ್ಲಿಯೇ ಮೂಡಿ ಬರುವಂತಾಗಲಿ ಎಂದು ಶುಭ ಹಾರೈಕೆ.
-ದಿವ್ಯಾ

ಸಿಮೆಂಟು ಮರಳಿನ ಮಧ್ಯೆ said...

ಶರತ್...

ಬರೆಯಿರಿ...
ಚೆನ್ನಾಗಿರುತ್ತದೆ...
ನಿಮ್ಮನೆ ಪಾಪು ಬಗೆಗೆ ಬರೆಯಿರಿ.... ಸಕತ್ ಆಗಿರುತ್ತದೆ...

ಯಾವ ಕಾರಣಕ್ಕೂ ನಿಲ್ಲಿಸ ಬೇಡಿ...

ಪ್ರಕಾಶಣ್ಣ...

ತೇಜಸ್ವಿನಿ ಹೆಗಡೆ- said...

ಶರಶ್ಚಂದ್ರ,

ಅಲ್ಪವಿರಾಮ ಎಲ್ಲ ರೀತಿಯಿಂದಲೂ ಒಳ್ಳೆಯದೇ. ಆದರೆ ಮಲ್ಲಿಕಾಜುನ ಅವರು ಹೇಳಿದ ಹಾಗೆ ನೀನು ಓದಿದ್ದನ್ನು ಎಲ್ಲರೊಂದಿಗೆ ಹಂಚಿಕೊಂಡರೆ ಬಹಳ ಉತ್ತಮ. ಆದಷ್ಟು ಬೇಗ ಭಾವಯಾನ ನಿರಂತರವಾಗಲೆಂದು ಹಾರೈಸುವೆ.

shivu said...

ಶರತ್,

ನಿಮ್ಮ ನಿಲುವು ಸರಿಯೆನಿಸುತ್ತೆ...ಏಕೆಂದರೆ ನಮಗಿಷ್ಟವಾಗಿಲ್ಲದ್ದನ್ನು ಮಾಡುವುದಕ್ಕಿಂತ ಇಷ್ಟಪಡುವುದನ್ನು ಮಾಡುವುದು ಮೇಲು. ಹಾಗಂತ ಬರೆಯುವುದನ್ನು ನಿಲ್ಲಿಸಿದ್ದು ಸರಿಯೆಂದಿಲ್ಲ...ಓದುವ ಆಸೆಗೆ ಬಿದ್ದಿದ್ದೀರಿ...ಚೆನ್ನಾಗಿ ಓದಿ...ಮತ್ತಷ್ಟು ಓದಿ....ಮುಂದೆ ಅದು ಸಾಕು ಅನ್ನಿಸಿದಾಗ ನಿಮ್ಮಲ್ಲಿ ಒಬ್ಬ ಹೊಸ ಬರಹಗಾರ ಹುಟ್ಟುತ್ತಾನೆ ಎನ್ನುವ ನಂಬಿಕೆ ನನ್ನದು. ಆಗ ನೀವು ಬೇಡವೆಂದರೂ ಬರಹಗಳು ಅವೇ ಬರೆಸಿಕೊಂಡುಬಿಡುತ್ತವೆ...
all the best...!

radhi said...

ನಾನು ಬಹಳ ಬರಹಗಳನ್ನು ಬರೆದಿಲ್ಲವಾದರು (ಬ್ಲಾಗ್ನಲ್ಲಿ?!) ಬರೆದ ಬರಹಗಳಲ್ಲಿ ಕೆಲವನ್ನು ಹೊರ ಜಗತ್ತಿಗೆ ಪ್ರದರ್ಶಿಸಲು ಸಿಕ್ಕ ಅವಕಾಶ ಮತ್ತು ತಾಣ "ಬ್ಲಾಗ್". ಆದರೆ ಇತ್ತೀಚಿಗೆ ಬ್ಲಾಗ್ ಅಪ್ಡೇಟ್ ಮಾಡಲು ಸಾಧ್ಯವಾಗಿಲ್ಲ. ಇಂತದ್ದೆ ಸಮಯದಲ್ಲಿ ನೀನು ಸಹ ಬ್ಲಾಗನ್ನು ಸಧ್ಯಕ್ಕೆ ನಿರ್ಜೀವಗೊಳಿಸುತ್ತಿರುವ ವಿಷ್ಯ...!
ಎಲ್ಲವು ಸುರಳೀತವಾಗಲಿ ಎಂದು ಆಶಿಸುವೆ.

ಧರಿತ್ರಿ said...

ತಲೆಬುರುಡೆ ಮಾರಾಯ್ರೆ...ನಿಮ್ಮ ಬರಹ ನಿಮಗೆ ಖುಷಿ ಕೊಡುತ್ತಿಲ್ಲ ಅಂದ ಮಾತ್ರಕ್ಕೆ ನಿಲ್ಲಿಸೋದು ಸರಿಯಲ್ಲ. ಬರೀತಾ ಹೋದಂತೆ ಖುಷಿ ಕೊಡುತ್ತೆ..ಬರೆಯದೇ ಇದ್ದರೆ ಖುಷಿ ಎಲ್ಲಿಂದ ಕೊಡೋದು? ಕೊನೆ ಪಕ್ಷ ನೀವು ಓದಿರೋ ಪು್ತಕಗಳ ಬಗ್ಗೆಯಾದ್ರೂ ಬರೆಯಿರಿ.
ಹುಚ್ಚರಂತೆ ನಿಲ್ಲಿಸ್ತೀನಿ ಅನ್ನಬೇಡಿ...
ಶುಭವಾಗಲೀ
-ಧರಿತ್ರಿ

sunaath said...

ಶರಚ್ಚಂದ್ರ,
ಇದು ಸರಿಯಲ್ಲ. ನಿಮಗೆ ತೋಚಿದಾಗ ಮಾತ್ರ, ತೋಚಿದ್ದನ್ನೇ ಬರೆಯಿರಿ. ನಾವು ಕಾಯುತ್ತಿರುತ್ತೇವೆ. ಆದರೆ ನಿಲ್ಲಿಸಬೇಡಿ.

ಮನಸ್ವಿ said...

"ಮತ್ತೆ ಬ್ಲಾಗಿಗೆ ಜೀವ ಬಂದರೂ ಬರಬಹುದು.

ನನ್ನ ಉದ್ದೇಶವೂ ಅಲ್ಲ, ಅದು ನನ್ನಿಂದ ಸಾಧ್ಯವೂ ಇಲ್ಲ"


ನೀನು ಬರೆದ ಈ ಸಾಲುಗಳೇ ನಿನಗೆ ಸ್ಪೂರ್ತಿಯಾಗಲಿ, ಶರಶ್... ನಿನಗೆ ಬರೆಯಬೇಕೆಂದಾಗಲೇ ಬರೆ.. ಯಾರದ್ದು ಒತ್ತಾಯವೇನಿಲ್ಲ.. ಆದರೆ ಬರೆಯುವುದನ್ನು ನಿಲ್ಲಿಸುತ್ತೇನೆ ಎನ್ನುವ ಮಾತನ್ನು ಮಾತ್ರ ಹೇಳಬೇಡ

ಏಕಾಂತ said...

ಬಹಳಷ್ಟು ಬಾರಿ ಹೀಗೆ ಯೋಚಿಸಿದ್ದೆ. ಉತ್ತರ ಸಿಕ್ಕಿರಲಿಲ್ಲ. ಬಹುಶಃ ಸಿಗುವುದೂ ಬೇಕಿಲ್ಲ. ಮತ್ಯಾವುದೂ ಸಣ್ಣ ಬೇಸರ ನಿಮ್ಮನ್ನು ಅಂಚಿಗೆ ದೂಕಿರಬಹುದು. ಸುಮ್ಮಗೆ ಯೋಚಿಸಿ ನೋಡಿ ನಮಗಿಷ್ಟವಾದದ್ದನ್ನು ಬರದಾಗ ನಮಗೆ ನಾವೇ ಶೇಕ್ಸ್‍ಪಿಯರ್! ಬರೆದು ಬದುಕುವವರು ಕೋಟಿ ಜನ. ಓದಿ ರದ್ದಿಯಗಿಸುವವರು ಅದಕ್ಕಿಂತ ಹೆಚ್ಚು. ಚಿಂತೆ ಬಿಡಿ. ಸುಮ್ಮನೆ ಬರೆದು ಬಿಡಿ. ನಾವಿದ್ದೇವೆ...

ಶಾಂತಲಾ ಭಂಡಿ said...

ಶರಶ್...
ಹತ್ತಾರು ಗೀಳನ್ನು ಅಂಟಿಸಿಕೊಂಡವರ ಪಾಡೇ ಇದು. ಹಾಡು, ಚಿತ್ರ, ಬರವಣಿಗೆ, ಓದು ಯಾವುದೂ ಬೇಡವೆನ್ನಿಸುವ ಕ್ಷಣ ಬಂದ ಹಾಗೆಯೇ ಗೀಚುತ್ತಲಿರುವ ಚಿತ್ರವನ್ನು ಅರ್ಧಕ್ಕೇ ಬಿಟ್ಟು ಯಾವುದೋ ಹಾಡುಗುನುಗುತ್ತ ಏನಾದರೂ ಕತೆ ಬರೆಯುವ ಆಸೆಯಾಗಿ ಎಲ್ಲ ಗೋಜಲು. ಇಂಥ ಗೋಜಲಿನ ನೋವು ಅನುಭವಿಸಿದಾಗಲೇ ಗೊತ್ತು ಆ ಬೇಸರದ ನೋವು.
ನಾನೂ ಹೀಗೆಯೇ ಅಂದುಕೊಳ್ಳುವ, ಅಂದುಕೊಂಡ ಕ್ಷಣಗಳೆಷ್ಟೋ ಬಂದುಹೋಗಿವೆ. ಆದರೂ ಕೈಗಂಟಿಗೊಂಡ ಈ ಚೆಂದನೆಯ ಗೀಳು ನಮ್ಮನ್ನು ತೊರೆದು ಹೋಗಲಾರದ್ದು. ನೀನು ಬಿಡಿಸಿಟ್ಟ ಪೂರ್ತಿಯಾದ ಚಿತ್ರಪಟಗಳನ್ನೊಮ್ಮೆ ತೆರೆದುನೋಡು. ನಿನ್ನ ಬೆನ್ನನ್ನೊಮ್ಮೆ ನೀನೂ ತಟ್ಟಿಕೊಳ್ಳುವಾಸೆಯಾಗದಿದ್ದರೆ ಹೇಳು. ನೀನು ಬರೆದ ಬರಹವನ್ನೊಮ್ಮೆ ಮತ್ತೆ ಓದಿನೋಡು, ಅರ್ಧ ಬರೆದಿಟ್ಟ ಲೇಖನ ಪೂರ್ತಿಯಾಗಿದಿದ್ದರೆ ಹೇಳು.
ಎಂದೋ ಬರೆದಿಟ್ಟ ಕತೆಯನ್ನು ಚಿತ್ರದೊಳಗೆ ಪೂರ್ತಿಯಾಗಿಸು, ಹೊಸತೆರನ ಕತೆ ಸೃಷ್ಟಿಯಾದಂತೆ ಖುಷಿಪಡು.
ಬರಹವಾದರೂ ಸರಿ, ಚಿತ್ರವಾದರೂ ಸರಿ, ಚಿತ್ರಲೇಖನವಾದರೂ ಸರಿ, ಚಿತ್ರಕತೆಯಾದರೂ ಸರಿ, ಬರೆಯುತ್ತಿರು.

Harish - ಹರೀಶ said...

ಶರತ್, ನಂಗೂ ಸುಮಾರು ದಿನದ ಹಿಂದೆ ಹಿಂಗೆ ಯೋಚನೆ ಬಂದು ಬರ್ಯದು ಬಿಟ್ಟಿದಿದ್ದಿ... ಆದರೆ ಬ್ಲಾಗ್ ಮಾತ್ರ ನಿಲ್ಸಲ್ಲೆ.. ಈಗ ಮತ್ತೆ ನಿಧಾನವಾಗಿ ಶುರು ಮಾಡಿದ್ದಿ.. ನಿಂಗೂ ಹಂಗೇ ಆಯ್ದು ಅಂತ ನನ್ನ ಅನಿಸಿಕೆ.. ಎಂದೋ ಒಂದು ದಿನ ಮತ್ತೆ ಬರ್ಯಕ್ಕು ಅಂತ ಅನ್ಸ್ತು... ಆಗ ಬರಿ..

ಚಕೋರ said...

ಶರಶ್ಚಂದ್ರ,

ನಿಮ್ಮ ಬ್ಲಾಗು ಓದಿದೆ.

ಮೀನಾದರೂ ಸರಿ, ನೀರು ಇಷ್ಟವಾಗದಿದ್ದರೆ ನೀರಿನಿಂದ ಹೊರಬರಬೇಕು ಎಂಬ ಥಿಯರಿ ನಂಬುವವನು ನಾನು. ಜಾಸ್ತಿ ಓದಿ. ಬರೆಯದೇ ಇರಲಾರೆ ಎಂಬ ಸ್ಥಿತಿ ಬಂದಾಗಲೇ ಬರೆಯಿರಿ. ಆಗಲೇ ಬರೆವ ಸುಖ, ಭಾವ ಹೆರುವ ಸುಖ ಅರಿವಾಗುವುದು.

ಒಳ್ಳೆಯದಾಗಲಿ.

mani said...

04/11/2009

hi sharathravare punaha banni. modala sala nodtha iddini. modale vidaaya annod nodi bejaraaythu. nimma blog odide kushiyaayitu. matte nimmanna beti maadtini ankondiddini. nodona

Pramod P T said...

ಹಾಯ್ ಶರತ್,

ಮೊನ್ನೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೀಟ್ ಆಗಿದ್ವಿ. ನೆನಪಿದ್ಯಾ? exam ಚೆನಾಗ್ ಮಾಡಿ. ಆಮೇಲೆ ಬರಿಯೋಕೆ ಶುರು ಮಾಡಿ :) ನಿಮ್ ಬ್ಲಾಗ್ ಸೂಪರ್!

ಶಿವಶಂಕರ ವಿಷ್ಣು ಯಳವತ್ತಿ said...

ಸಧ್ಯ ಬರೆಯುವುದನ್ನು ಮುಂದುವರೆಸಿದ್ದೀರಲ್ಲಾ. ಧನ್ಯವಾದಗಳು.