ನನ್ನ ಕಾಲಿಗೆ ಮುತ್ತಿದ್ದ ಉಂಬಳಗಳನ್ನೂ ನೋಡಿ, ಪರ್ವತ ಏರುವ ಹೊತ್ತಿಗೆ ಯಾರಾದರು ನನಗೆ ಒಂದು ಬಾಟಲಿ ರಕ್ತ ನೀಡುವ ವ್ಯವಸ್ಥೆ ಇದ್ದಿದ್ದರೆ ಚನ್ನಾಗಿರುತ್ತಿತ್ತು ಎನ್ನುವ ಭಯ ಕಾಡತೊಡಗಿತ್ತು. ಆಗಾಗ ಕೃಷ್ಣಪ್ಪನಲ್ಲಿ ಇನ್ನೂ ಎಷ್ಟು ದೂರದಲ್ಲಿ ಬಯಲು ಪ್ರದೇಶ ಸಿಗಬಹುದು ಎಂದು ಕೇಳುತ್ತಾ ನಮ್ಮ ರಕ್ತದಾನದ ಮೊತ್ತ ಎಷ್ಟಾಗಬಹುದು ಎಂದು ಪ್ರತಿಯೊಬ್ಬರೂ ಗುಣಾಕಾರ-ಭಾಗಾಕಾರದಲ್ಲಿ ತೊಡಗಿದರು.
ಇಲ್ಲಿಯವರೆಗೆ ನನ್ನ ಕಯ್ಯಿಂದಲೇ ನನ್ನ ವಸ್ತ್ರಾಪಹರಣ ಮಾಡಿಸಿದ್ದ ಉಂಬಳಗಳ ಬಗ್ಗೆ ವಿಪರೀತ ಸಿಟ್ಟು ಬಂದಿತ್ತು. ಕಾಡಿನ ಮಧ್ಯೆ ನಿಂತು ಉಂಬಳಗಳನ್ನು ಬಿಡಿಸಿಕೊಳ್ಳುವ ಯೋಚನೆ ಕೈ ಬಿಟ್ಟು ಎಷ್ಟಾದರೂ ಹತ್ತಲಿ, ಬಯಲು ಪ್ರದೇಶ ಬಂದ ಮೇಲೆ ಅವುಗಳನ್ನು ವಿಚಾರಿಸಿಕೊಂಡರೆ ಆಯಿತು ಎಂದು ನಾನು ತೀರ್ಮಾನಿಸಿದೆ. ಕಾಡು ಈಗ ಇನ್ನಷ್ಟು ದಟ್ಟವಾಗಿತ್ತು. ಅಲ್ಲೆಲ್ಲೂ ದಾರಿ ಎಂಬುದೇ ಇರಲಿಲ್ಲ. ಕೃಷ್ಣಪ್ಪನೂ ದಿಕ್ಕಿನ ಅಂದಾಜು ಮಾಡಿ ದಾರಿ ಮಾಡಿಕೊಳ್ಳುತ್ತಿದ್ದ ಎಂದು ನನ್ನ ಭಾವನೆ; ಅಷ್ಟೊಂದು ದಟ್ಟವಾಗಿತ್ತು ಕಾಡು. ಕೃಷ್ಣಪ್ಪನಿಲ್ಲದೆ ಆ ಕಾಡು ಹೊಕ್ಕರೆ ಬಹುಶ ಅಲ್ಲಿಂದ ಮರಳುವುದನ್ನಾಗಲೀ, ಹೊರಬರುವುದನ್ನಾಗಲೀ ಮರೆತು "ಪ್ಯಾಟೆ ಮಂದಿ ಕಾಡೀಗ್ ಬಂದು ಅಲ್ಲೇ ಕಳೆದು ಹೋದ್ರು" ಅನ್ನೋ ಕಾರ್ಯಕ್ರಮನ ನಾವೇ ಮಾಡಿ ನಾವೇ ನೋಡಿಕೊಳ್ಳುವ ಸಾಧ್ಯತೆಗಳು ಜಾಸ್ತಿ ಇದ್ದವು. ಇವೆಲ್ಲದುರ ಮಧ್ಯೆ ನಮ್ಮ ಜಿತೇಂದ್ರ ಕೃಷ್ಣಪ್ಪನಿಗಿಂತಾ ಮುಂದೆ ಹೋಗಿ, ಹಾದಿ ತಪ್ಪಿ, ನಾವು ಮತ್ತೆ ಮತ್ತೆ ಅವನನ್ನು ಕೂಗಿ ಕರೆದು, ಅವನು ಮತ್ತೆ ನಮ್ಮೊಂದಿಗೆ ಸೇರಿಕೊಳ್ಳುವುದು ನಡೆಯುತ್ತಿತ್ತು. "ಹುರಳಿ ಇಡ್ಲಿ" ಅವನ ದೇಹಕ್ಕೆ ಒಗ್ಗಿದೆ ಅಂತ ನಾವೆಲ್ಲಾ ಒಮ್ಮತಕ್ಕೆ ಬಂದೆವು.
ಈಗ ದಟ್ಟ ಕಾಡಿನ ಜೊತೆಗೆ ನಾವು ಗುಡ್ಡವನ್ನು ಏರುತ್ತಿದ್ದರಿಂದ ಚಾರಣ ಬಹು ಕಷ್ಟ ಎನ್ನಿಸತೊಡಗಿತ್ತು. ಬರ್ಕಣ ಜಲಪಾತದ ಹತ್ತಿರ ತುಂಬಿಕೊಂಡಿದ್ದ ನೀರೆಲ್ಲಾ ನಿಧಾನವಾಗಿ ಖಾಲಿಯಾಗುತ್ತಿದ್ದದ್ದು ನಮ್ಮ ಗಮನಕ್ಕೆ ಬಾರದೆ ಹೋಯಿತು. ಆಗುಂಬೆಯ ಕಾಡಿನ ಕಾಳಿಂಗ ಸರ್ಪದ ಬಗ್ಗೆ ನ್ಯಾಷನಲ್ ಜಿಯಾಗ್ರಫಿಕ್ ನಲ್ಲಿ ಬಂದಿದ್ದ ಕಾರ್ಯಕ್ರಮದ ಬಗ್ಗೆ ಹಠಾತ್ತಾಗಿ ನೆನಪಾಗಿ ಒಮ್ಮೆ ಕಾಲು ಬುಡದಲ್ಲೆಲ್ಲ ನೋಡಿಕೊಂಡೆ. ಸ್ವಲ್ಪ ದೂರದವರೆಗೂ ನಾವು ಅದರ ಬಗ್ಗೆಯೇ ಮಾತನಾಡುತ್ತ ನಡೆದೆವು. ಅಕ್ಕ ಪಕ್ಕದ ಬಳ್ಳಿಗಳೆಲ್ಲ ಕಾಳಿಂಗ ಸರ್ಪಗಳಾಗೆ ಕಾಣತೊಡಗಿದವು.
ಮುಂದಿನ ಕೆಲವು ನಿಮಿಷಗಳಲ್ಲಿ ಯಾರೂ ಮಾತನಾಡದೆ ಸುಮ್ಮನೆ ನಡೆದರು. ಮೌನ ಮುರಿಯಲು ಪ್ರವೀಣ್ "ಅಲ್ರೋ ಆ ಅಜ್ಜಿ, ಮನೆಯಲ್ಲಿ ತನ್ನ ಜೊತೆಗೆ ತನ್ನ ತಾಯಿಯೂ ಇರುತ್ತಾರೆ, ಆದರೆ ಲೆಕ್ಕಕ್ಕೆ ತಾನೊಬ್ಬಳೆ ಎಂದರಲ್ಲ ಅದು ಯಾವ ಲೆಕ್ಕ ಎಂದು ಗೊತ್ತಾಗಲಿಲ್ಲ" ಎಂದ. ತಮ್ಮದೇ ಯೋಚನೆಗಳಲ್ಲಿ ಮುಳುಗಿದ್ದ ನಾವೆಲ್ಲರೂ ಅವನ ತರ್ಕ ಕೇಳಿ ಗೊಳ್ಳನೆ ನಕ್ಕೆವು. ವಿನಯ್ ಹಾಗು ಸಂತೋಷ್ ಮೆಣಸಿನ ಚಟ್ನಿಯ ಅಥೆಂಟಿಸಿಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅಸಲಿಗೆ ಮೆಣಸಿನ ಚಟ್ನಿಗೆ ಮೆಣಸಿನಕಾಯಿ ಉಪಯೋಗಿಸಿಯೇ ಇರಲಿಲ್ಲ, ಮೆಣಸಿನ ಗಿಡದ ಎಲೆಗಳನ್ನೇ ರುಬ್ಬಿ ಚಟ್ನಿ ಮಾಡಲಾಗಿದೆ ಎನ್ನುವ ಸತ್ಯವನ್ನು ನಾವು ಮನಗಂಡೆವು. ಕಿಡಿ ತಾಕಿದ ಪಟಾಕಿ ಸರದಂತೆ ಎಲ್ಲರೂ ಮಾತನಾಡತೊಡಗಿದರು. ಹೀಗೆ ಎಷ್ಟು ದೂರ ನಡೆದೆವೋ ಏನೋ, ಕೊನೆಗೆ ೨.೧೫ ರ ಸುಮಾರಿಗೆ ಒಂದು ಹುಲ್ಲುಬಯಲ ಜಾಗ ತಲುಪಿದೆವು. ಇನ್ನು ಮುಂದೆ ಎಲ್ಲೂ ಕಾಡು ಸಿಗುವುದಿಲ್ಲ, ಬರಿ ಬೆಟ್ಟಗಳು ಎಂದು ಕೃಷ್ಣಪ್ಪನಿಂದ ಕನ್ಫರ್ಮ್ ಆದ ಮೇಲೆ ಕಾಲೇರಿ ಸುಖವಾಗಿ ರಕ್ತ ಹೀರುತ್ತಿದ್ದ ಉಂಬಳಗಳಿಗೆ ಮುಕ್ತಿ ಕಾಣಿಸೋಣ ಎಂದು ಕುಳಿತೆವು. ಬೆಳಗ್ಗಿನಿಂದ ಒಟ್ಟಿನಲ್ಲಿ ನನ್ನ ಕೌಂಟ್ ೧೬ಕ್ಕೆ ಏರಿತ್ತು.

ಕಾಲನ್ನು ಉಂಬಳ ಮುಕ್ತಗೊಳಿಸಿ ಸ್ವಲ್ಪ ವಿಶ್ರಮಿಸಿಕೊಂಡು ಹೊರೆಟಾಗಲೇ ನಮಗೆ ಅರಿವಾಗಿದ್ದು ನಮ್ಮಲ್ಲಿ ಅತ್ಯಲ್ಪ ನೀರು ಉಳಿದಿದೆಯೆಂದು. ಕೃಷ್ಣಪ್ಪನಲ್ಲಿ ಮುಂದೆ ಎಲ್ಲಿ ನೀರು ಸಿಗಬಹುದು ಎಂದು ಕೇಳಿದೆವು. ಇನ್ನು ಪರ್ವತದ ತುದಿಯಲ್ಲಿ ಅಲ್ಲದೆ ಬೇರೆಲ್ಲೂ ನೀರು ಸಿಗುವುದಿಲ್ಲ ಎಂದು ತಿಳಿದು ಎಲ್ಲರೂ ಬಿಳಿಚಿಕೊಳ್ಳತೊಡಗಿದರು. ಆಗಲೇ ನೆತ್ತಿ ಏರಿ ಕುಳಿತಿದ್ದ ಸೂರ್ಯ ನೀರಿಲ್ಲದ ನಮ್ಮನ್ನು ನೋಡಿ ಅಣಕಿಸಿದಂತೆ ಕಂಡಿತು.

ಕಾಡಿನಿಂದ ಹೊರಬಿದ್ದಿದ್ದ ನಮಗೆ ಇಲ್ಲಿನ ದೃಶ್ಯಗಳು ಚೇತೋಹಾರಿಯಾಗಿದ್ದವು. ಈಗ ಉಂಬಳಗಳ ಬಗ್ಗೆ ಭಯಪಡುವ ಅಗತ್ಯವೂ ಇರಲಿಲ್ಲ. ಮುಗಿಲನ್ನೆ ಬಗ್ಗಿಸುವ ತವಕದಲ್ಲಿದ್ದಂತೆ ಕಾಣುತ್ತಿದ್ದ ಎತ್ತರದ ಪರ್ವತ ಶ್ರೇಣಿಗಳು, ಕಂಡಷ್ಟು ದೂರಕ್ಕೂ ತುಂಬಿದ್ದ ಹಸಿರು, ನೀಲಾಗಸ, ತಣ್ಣನೆಯ ಗಾಳಿ ಎಲ್ಲವೂ ನಮ್ಮ ದಣಿವನ್ನು ಕ್ಷಣ ಮಾತ್ರದಲ್ಲಿ ಮರೆಯಾಗಿಸಿತ್ತು. ಇಷ್ಟು ಹೊತ್ತು ಸುಮ್ಮನಿದ್ದ ನಮ್ಮ ಕ್ಯಾಮೆರಾಗಳು ಕಾರ್ಯೋನ್ಮುಖವಾದವು.


ಹೀಗೆ ಮಾತಾಡುತ್ತ, ಫೋಟೋ ತೆಗೆಯುತ್ತಾ, ಒಂದೆರಡು ಗುಡ್ಡಗಳನ್ನು ಹಾಡು ಒಂದು ಎತ್ತರದ ಗುಡ್ಡದ ಬುಡಕ್ಕೆ ಬಂದೆವು. "ಈ ಗುಡ್ಡವನ್ನು ದಾಟಿದರೆ ಅದರ ಹಿಂದಿರುವುದೇ ನರಸಿಂಹ ಪರ್ವತ" ಎಂದು ಕೃಷ್ಣಪ್ಪ ಹೇಳಿದ. ನೀರಿಲ್ಲದೆ ನಾವೆಲ್ಲಾ ಬಸವಳಿದಿದ್ದೆವು. ಮತ್ತೊಮ್ಮೆ ಸ್ವಲ್ಪ ವಿಶ್ರಮಿಸಿಕೊಂಡು ಗುಡ್ಡವನ್ನು ಏರಲು ಶುರು ಮಾಡಿದೆವು. ಆದಷ್ಟು ಬೇಗ ತುದಿಯನ್ನು ತಲುಪುವ ಯೋಚನೆಯಲ್ಲಿದ್ದ ನನ್ನ ಎಣಿಕೆ ಸಂಪೂರ್ಣ ತಲೆಕೆಳಗಾಯಿತು. ಗುಡ್ಡದ ಇಳುಕಲು ಸುಮಾರು ೫೫ ರಿಂದ ೬೫ ಡಿಗ್ರಿ ಇತ್ತು. ಒಂದೊಂದು ಹೆಜ್ಜೆ ಇಡುವುದೂ ದುಸ್ತರವಾಗಿತ್ತು. ಬೆನ್ನಿಗೆ ಚೀಲದ ಭಾರ ಹಾಗು ೬೫ ಡಿಗ್ರಿಯಷ್ಟು ಇಳುಕಲಿದ್ದ ಗುಡ್ದದಿಂದಾಗಿ ಕಾಲುಗಳು ಥರಗುಟ್ಟಿದವು. ಕೇವಲ ಒಂದು ಸ್ಟ್ರೆಚ್ ಇದ್ದ ಗುಡ್ಡವನ್ನು ಏರಲು ನಾನು ಎರಡು ಬಾರಿ ಕೂತು ಸುಧಾರಿಸಿಕೊಳ್ಳಬೇಕಾಯಿತು. ಇದುವರೆಗೆ ಮಾಡಿದ ಪ್ರಯಾಣ ಒಂದು ಸವಾಲಾದರೆ, ಈ ಗುಡ್ಡವೇ ಇನ್ನೊಂದು ಸವಾಲು. ಉಸಿರು ಎಳೆದುಕೊಳ್ಳಲೂ ನಾವೆಲ್ಲಾ ಪರದಾಡಬೇಕಾಯಿತು. ಕೊನೆಗೂ ತುದಿ ತಲುಪಿ, ಒಂದು ಸಣ್ಣ ಕಾಡು ದಾಟಿ ನರಸಿಂಹ ಪರ್ವತದ ನೆತ್ತಿಯನ್ನು ತಲುಪಿಯೇ ಬಿಟ್ಟೆವು. ಸಮಯ ೪ ಗಂಟೆ ಆಗಿತ್ತು.


ಎಲ್ಲರೂ ನೀರು ಸಿಗುತ್ತದೆ ಎಂಬ ಖುಷಿಯಲ್ಲಿ ನೆತ್ತಿಗೆ ಓಡಿದರೆ ಅಲ್ಲಿದ್ದದ್ದು ಮಳೆಗಾಲದಲ್ಲಿ ನೀರು ನಿಂತ ಹೊಂಡವಾಗಿತ್ತು. ಆ ನೀರು ಯಾವುದೇ ರೀತಿಯಲ್ಲಿಯೂ ಕುಡಿಯಲು ಯೋಗ್ಯವಾಗಿರಲಿಲ್ಲ. ಕುಡಿಯಲು ಬಿಡಿ, ಮುಖ ತೊಳೆಯಲೂ ಅಯೋಗ್ಯವಾಗಿತ್ತು. ನಮ್ಮ ಆಸೆಯಲ್ಲ ಬತ್ತಿ ಹೋಯಿತು. ಸ್ವಲ್ಪ ಹೊತ್ತು ಎಲ್ಲರೂ ಸುಮ್ಮನೆ ಮಲಗಿದರು. ಬೇರೆ ಯಾರಾದರೂ ನೋಡಿದ್ದರೆ ಇದೊಂದು "ಸಾಮೂಹಿಕ ಶಾವಾಸನ" ಎಂದುಕೊಳ್ಳುತ್ತಿದರೋ ಏನೋ ಆ ರೀತಿಯಲ್ಲಿ ಎಲ್ಲರೂ ಬಿದ್ದುಕೊಂಡಿದ್ದೆವು. ಬೇರಾವುದೇ ದಾರಿ ಕಾಣದೆ ನಾವು ತಂದಿದ್ದ ರೊಟ್ಟಿ-ಚಪಾತಿ-ಚಟ್ನಿಗಳನ್ನು ತೆಗೆದೆವು. ವಿಪರೀತ ಹಸಿವಾದ್ದರಿಂದ ರೊಟ್ಟಿ-ಚಟ್ನಿ ಅಮೃತದಂತೆ ಅನ್ನಿಸಿತ್ತು. ಆವರಿಸಿಕೊಳ್ಳುತ್ತಿದ್ದ ಮೋಡ ತಂಪು ನೀಡಿತ್ತು.


ಊಟ ಮುಗಿಸಿ ಮತ್ತಷ್ಟು ಆರಾಮು ಮಾಡಿ ನಮ್ಮ ಅವರೋಹಣವನ್ನು ಪ್ರಾರಂಭಿಸಿದೆವು. ಈ ಹಾದಿ ನಾವು ಹತ್ತಿದ ದಾರಿಗೆ ತೀರಾ ವ್ಯತಿರಿಕ್ತವಾಗಿತ್ತು. ಇಲ್ಲಿ ಕಾಲು ಹಾದಿ ಇತ್ತು. ಉಂಬಳಗಳು ಇರಲಿಲ್ಲ. ಸುಲಭವಾಗಿ ಇಳಿಯಲು ಹೇಳಿ ಮಾಡಿಸಿದಂತಿತ್ತು. ಸುಮಾರು ೬ ಗಂಟೆಯ ಹೊತ್ತಿಗೆ ನಾವು ಕಿಗ್ಗಾ ಎಂಬ ಊರನ್ನು ತಲುಪಿದೆವು. ಅಲ್ಲಿ ನಮ್ಮನ್ನು ಹೊತ್ತೊಯ್ಯಲು ಸುಬ್ಬುವಿನ ಜೀಪು ತಯಾರಾಗಿತ್ತು.

ಕೊನೆಯಲ್ಲಿ : ದೊಡ್ಮನೆಯ ತಿಂಡಿ ಹಾಗು ಅಜ್ಜಿಯ ಘಟನೆಗಳನ್ನು ಸ್ವಲ್ಪ ಹಾಸ್ಯಮಯವಾಗಿ ಬರೆದಿದ್ದೇನೆ. ಜೋಕ್ಸ್ ಅಪಾರ್ಟ್, ಹೊಸ್ತಿಲು ದಾಟಲಾಗದ ಆ ವೃದ್ದೆ ತಿಂಡಿ ಮಾಡಿ ಹಾಕುವುದೂ ಕಷ್ಟದ ಕೆಲಸವೇ. ನಮ್ಮ ಗ್ರಹಚಾರಕ್ಕೋ ಏನೋ ಅಂದಿನ ತಿಂಡಿಗಳು ಚನ್ನಾಗಿರಲಿಲ್ಲ. ಹಾಗೆಂದು ಅಲ್ಲಿಯ ತಿಂಡಿ ಕೆಟ್ಟದಾಗೆ ಇರುತ್ತದೆ ಎಂದು ನಾನು ಹೇಳಲಾರೆ. ಮತ್ತೊಂದು ವಿಷಯವೆಂದರೆ, ನರಸಿಂಹ ಪರ್ವತದಂತಹ ಕಠಿಣ ಚಾರಣದ ಜಾಗಗಳಲ್ಲಿಯೂ ತಿಂದು ಬಿಟ್ಟ ಪೇಪರ್ ತಟ್ಟೆಗಳು, ಪ್ಲಾಸ್ಟಿಕ್ ಕವರ್ ಗಳು ಇದ್ದದ್ದು ನೋಡಿ ಬೇಸರವಾಯಿತು. ಅಷ್ಟೊಂದು ಸುಂದರ ಪರಿಸರದಲ್ಲಿ ಗಲೀಜು ಮಾಡಲು ಹೇಗಾದರೂ ಮನಸ್ಸು ಬರುತ್ತದೆ ಜನರಿಗೆ? ನೀವು ಎಂದಾದರೂ ಚಾರಣಕ್ಕೆ ಹೋಗುವುದಾದರೆ ನಮ್ಮ ತಂಡದಿಂದ ಒಂದು ಕೋರಿಕೆ. ದಯವಿಟ್ಟು ನೀವು ಉಪಯೋಗಿಸುವ ಪೇಪರ್ ತಟ್ಟೆಗಳು, ಪ್ಲಾಸ್ಟಿಕ್ ಕವರ್ ಗಳು, ಅಥವಾ ಏನೇ ತ್ಯಾಜ್ಯ ವಸ್ತುಗಳು ಉಳಿದರೂ ನಿಮ್ಮ ಚೀಲದಲ್ಲೇ ಹಾಕಿಕೊಂಡು ಬನ್ನಿ, ಎಲ್ಲಾದರೂ ಕಸದ ಬುಟ್ಟಿ ಕಂಡರೆ ಅದಕ್ಕೆ ಹಾಕಿ. ಪ್ರಜ್ನಾವಂತರಾಗಿ ನಮ್ಮಿಂದ ಪ್ರಕೃತಿಗೆ ಅಷ್ಟಾದರೂ ಮಾಡುವುದು ಕಷ್ಟವಲ್ಲ ಎಂದು ನಮ್ಮ ಅನಿಸಿಕೆ.