Sunday, January 2, 2011

ನರಸಿಂಹ ಪರ್ವತ ಚಾರಣ - ಭಾಗ ೨

ಕಣ್ಣು ಬಿಟ್ಟಾಗ ಕಡುನೀಲಿ ಆಗಸ, ಗುಡ್ಡಗಳು, ತೋಟಗಳೂ ಅಸ್ಪಷ್ಟವಾಗಿ ಕಾಣುತ್ತಿದ್ದವು. ಸುಬ್ಬು ತದೇಕಚಿತ್ತದಿಂದ ಜೀಪನ್ನು ಓಡಿಸುತ್ತಿದ್ದ. ಉಳಿದವರೆಲ್ಲಾ ತೂಕಡಿಸುತ್ತಲೋ ಅಥವಾ ನಿದ್ದೆಯಲ್ಲೋ ಇದ್ದರು. ಆಗಾಗ ರಸ್ತೆಯ ಗುಂಡಿಗಳಲ್ಲಿ ಇಳಿದು ಮೇಲೆ ಹತ್ತುತ್ತಿದ್ದ ಚಕ್ರದ ಹೊಡೆತಕ್ಕೆ ಎಚ್ಚರಾಗಿ ಒಮ್ಮೆ ಆಕಡೆ ಈಕಡೆ ನೋಡಿ ಮತ್ತೆ ತಲೆಯನ್ನು ಸೀಟಿಗೆ ಒರಗಿಸುತ್ತಿದ್ದ ಪ್ರವೀಣ್ ಹಾಗು ಅರುಣ ತಮಾಷೆಯಾಗಿ ಕಾಣುತ್ತಿದರು. ಜೀಪಿನ ಹೆಡ್ ಲೈಟ್ ಬೆಳಕಿಗೆ ಭಯ ಪಟ್ಟು ಮರಗಳ ಹಿಂದೆ ಕತ್ತಲು ಅಡಗಿಕೊಳ್ಳುವಂತೆ ಅನ್ನಿಸುತ್ತಿತ್ತು. ಕ್ಷಣ ಕ್ಷಣಕ್ಕೂ ಬಾನು ಬೆಳಗುತ್ತಾ ಜಗವನ್ನೇ ಗೆಲ್ಲುವ ತವಕದಲ್ಲಿ ರವಿಯು ಮೂಡಣದಲ್ಲಿ ಮೈಮುರಿಯುತ್ತಿದ್ದ ದೃಶ್ಯ ಅವರ್ಣನೀಯವಾಗಿತ್ತು. ಇನ್ನೂ ನಿದ್ದೆಗಣ್ಣಲ್ಲೇ ಇದ್ದುದ್ದರಿಂದಲೋ ಏನೋ, ಈ ಎಲ್ಲ ಕ್ರಿಯೆಗಳು ಕಿನ್ನರಲೋಕದಲ್ಲಿದ್ದಂತೆ ಭಾವನೆ ಮೂಡಿಸಿದ್ದವು.

ಸುಮಾರು ೭ ಗಂಟೆಯ ಹೊತ್ತಿಗೆ ನಾವು ಉಳಿಯಬೇಕಿದ್ದ ಅರೆಹಳ್ಳಿಯ ವಸಂತ್ ಕುಮಾರ್ ಅವರ ಮನೆ ತಲುಪಿದೆವು. ಆಗಲೇ ತಡವಾದ್ದರಿಂದ ಎಲ್ಲರೂ ಬೇಗಬೇಗನೆ ಹಲ್ಲುಜ್ಜಿ, ಮುಖ ತೊಳೆದು, ಬಿಸಿ ಬಿಸಿ ಕಾಫಿ ಹೀರಿ ಆಗುಂಬೆಯ ಕಡೆಗೆ ಪಯಣ ಬೆಳೆಸಿದೆವು. ಆಗುಂಬೆಯ 'ದೊಡ್ಮನೆ'ಯಲ್ಲಿ ಉಪಾಹಾರ ಮಾಡುವುದು ಎಂದು ಮೊದಲೇ ನಿರ್ಧರಿಸಿದ್ದೆವು.

ದೊಡ್ಮನೆಯ ಕಟ್ಟೆಯ ಮೇಲೆ ವಿನಾಯಕ ಹಾಗು ಜಿತೇಂದ್ರ

ದೊಡ್ಮನೆಯ ಒಳ ಅಂಕಣ
ಈ 'ದೊಡ್ಮನೆ' ಆಗುಂಬೆಯಲ್ಲಿ ಬಹಳ ಫೇಮಸ್. ಈ ಮನೆಯನ್ನು ಶಂಕರ್ ನಾಗ್ ಅವರ 'ಮಾಲ್ಗುಡಿ ಡೇಸ್' ನಲ್ಲಿ ಬಳಸಿಕೊಳ್ಳಲಾಗಿದೆ. ದಪ್ಪ ದಪ್ಪ ಕಂಬಗಳಿರುವ ಆ ಮನೆ ಹೊರಗಿನಿಂದ ಆಕರ್ಷಕವೆನಿಸಿತು. ಒಳಗಿನಿಂದ ತಿಂಡಿಗೆ ಕರೆ ಬಂದಿತು. ನಾನು ಹಿಂದಿನ ರಾತ್ರಿ ಹೊರಡುವ ಭರದಲ್ಲಿ ಸರಿಯಾಗಿ ಊಟ ಮಾಡಿಲ್ಲವಾದ್ದರಿಂದ ಭರ್ಜರಿ ತಿಂಡಿಯ ಕನಸು ಕಾಣುತ್ತಾ ಒಳನಡೆದೆ. ಮನೆಯ ಒಳಾಂಗಣ ಹೊರಗಿನಷ್ಟು ಖಾಸ್ ಅನ್ನಿಸಲಿಲ್ಲ. ಒಂದು ಪುಟ್ಟ ಅಂಗಳವಿತ್ತು ಒಳಗೆ. ಹಳೆ ಮಲೆನಾಡಿನ ಮನೆಗಳನ್ನು ನೆನಪಿಸುವಂತಿತ್ತು. ಒಳಗೆ ಕಾಲಿಟ್ಟಾಗ ನಾಲ್ಕಾರು ಉತ್ತರ ಭಾರತೀಯರು ತಿಂಡಿ ಸವಿಯುತ್ತಿದ್ದರು. ದೊಡ್ಮನೆಯನ್ನು ನೀವು ಹೋಟೆಲ್ ಎಂದು ತಪ್ಪು ತಿಳಿಯಬಾರದು. ಇಲ್ಲಿ ತಿಂಡಿಗೆ ಹೋಗುವುದಾದರೆ ಮೊದಲೇ ಕರೆ ಮಾಡಿ ತಿಳಿಸಿಡಬೇಕು. ಈ ಮನೆಯ ಒಡತಿ, ಸುಮಾರು ೬೦ ವರ್ಷದ ವೃದ್ದೆ, ನಿಮಗೆ ತಿಂಡಿ ಮಾಡಿ ಇಟ್ಟಿರುತ್ತಾರೆ. ಈಗ ತಿಂಡಿಯ ವಿಷಯಕ್ಕೆ ಮರಳೋಣ. ನನಗೆ ಮೊದಲಿಗೆ ಅವರೆಲ್ಲ ಏನು ತಿಂಡಿ ತಿನ್ನುತ್ತಿದ್ದಾರೆ ಎಂದು ಗೊತ್ತಾಗಲಿಲ್ಲ. ಅಂದು ದೊಡ್ಮನೆಯ ಸ್ಪೆಷಲ್ ಹುರುಳಿ ಇಡ್ಲಿ, ಮೆಣಸಿನ ಚಟ್ನಿ, ಹಾಗು ಉಪ್ಪಿಟ್ಟಾಗಿತ್ತು. ಜೊತೆಗೆ ಕುಡಿಯಲು ಕಷಾಯ. ಬಂದ ಉತ್ತರ ಭಾರತೀಯರಿಗೆ ಅಜ್ಜಿ ಇಂಗ್ಲಿಶ್-ಹಿಂದಿ ಮಿಶ್ರಿತ ಭಾಷೆಯಲ್ಲಿ ಅಂದಿನ ತಿಂಡಿಗಳ ಬಗ್ಗೆ ವಿವರಿಸುತ್ತಿದ್ದದ್ದು ಹಾಸ್ಯಾಸ್ಪದವಾಗಿತ್ತು. ಕಷಾಯಕ್ಕೆ ಅವರು ಕೊಟ್ಟ ಹೆಸರು ' ಆಯುರ್ವೇದಿಕ್ ಮಾಲ್ಟ್ ' ಹುರುಳಿ ಇಡ್ಲಿಯನ್ನು ಕಷ್ಟಪಟ್ಟು ಹೊಟ್ಟೆಗೆ ತಳ್ಳಿದ ಮೇಲೆ, ಉಪ್ಪಿಟ್ಟಿನ ಮೇಲೆ ಗಮನ ಹರಿಸೋಣ ಎಂದು ಎರಡು ತುತ್ತು ಉಪ್ಪಿಟ್ಟು ತಿಂದ ಮೇಲೆಯೇ ಗೊತ್ತಾಗಿದ್ದು ಉಪ್ಪಿಟ್ಟಿಗೆಂದು ಹುರಿದ ರವೆಯನ್ನು ಅಗತ್ಯಕ್ಕಿಂತ ಜಾಸ್ತಿಯೇ ಹುರಿಯಲಾಗಿದೆ ಎಂದು. ಅಲ್ಲಿಗೆ ಬೆಳಗಿನ ತಿಂಡಿ ಮುಗಿಸುವುದೇ ನಮಗೆ ಚಾರಣಕ್ಕಿಂತ ದೊಡ್ಡ ಸವಾಲಾಯಿತು. ಇಷ್ಟರ ಮಧ್ಯೆ ಪ್ರವೀಣ್ ಸುಮ್ಮನಿರಲಾರದೆ "ಈ ಮನೆಯಲ್ಲಿ ನೀವೊಬ್ಬರೇ ಇರುವುದೇ ?" ಎಂದು ಸಂದರ್ಶನ ಮಾಡುವ ಶೈಲಿಯಲ್ಲಿ ಪ್ರಶ್ನೆಯೊಂದನ್ನು ಕೇಳಿಯೇಬಿಟ್ಟ. ಅದಕ್ಕವರು "ಇಲ್ಲ, ನಾನು ಹಾಗು ನನ್ನ ತಾಯಿ ಇರುವುದು. ಆದರೆ ಲೆಕ್ಕಕ್ಕೆ ನಾನೊಬ್ಬಳೆ" ಎಂದರು. ಕಷಾಯ ಕುಡಿದು ಎಲ್ಲರೂ ತಿಂಡಿ ಎಂಬ ತಿಂಡಿಯನ್ನು ಮುಗಿಸಿ ದೊಡ್ಮನೆಯಿಂದ ಹೊರಬಿದ್ದೆವು.

ಆಗುಂಬೆಯಿಂದ ಮಲ್ಲಂದೂರಿಗೆ ತಲುಪಿ ಅಲ್ಲೆಲ್ಲಾ ನಮ್ಮ ಗೈಡ್ ಕೃಷ್ಣಪ್ಪನನ್ನು ಹುಡುಕತೊಡಗಿದೆವು. ನಾಲ್ಕಾರು ಮನೆ ಕೇಳುವಷ್ಟರಲ್ಲಿ ಕೃಷ್ಣಪ್ಪನ ಮನೆ ಸಿಕ್ಕಿತು. ಕೃಷ್ಣಪ್ಪ ಆಗಲೇ ನೀರಿನೊಂದಿಗೆ ಹೊರಡಲು ಅಣಿಯಾಗಿದ್ದ. ನಮ್ಮಲ್ಲಿ ಹಲವರು ಉಂಬಳಗಳನ್ನೂ ಎದುರಿಸಲು ಬೂಟಿಗೆಲ್ಲ ಸುಣ್ಣ ಬಳಿದುಕೊಂಡು ತಯಾರಾಗಿ ಕೃಷ್ಣಪ್ಪನನ್ನು ಹಿಂಬಾಲಿಸಿದೆವು. ವಿಧ್ಯುಕ್ತವಾಗಿ ಚಾರಣ ಈಗ ಶುರು ಆಗಿತ್ತು ಎನ್ನಬಹುದು. ಬರ್ಕಣ ಜಲಪಾತವನ್ನು ನೋಡಿ ಅಲ್ಲಿಂದ ನರಸಿಂಹ ಪರ್ವತ ಹತ್ತುವುದು ನಮ್ಮ ಪ್ಲ್ಯಾನ್ ಆಗಿತ್ತು.

ದಟ್ಟ ಕಾಡೊಳಗೆ ನುಗ್ಗುತ್ತಿರುವ ನಮ್ಮ ತಂಡ ( ಫೋಟೋ ಕೃಪೆ : ಪ್ರವೀಣ್ ಕೆ.ಆರ್)

ಇನ್ನು ಮುಂದಿನದನ್ನು ಸಂಕ್ಷೀಪ್ತವಾಗಿ ಹೇಳಬೇಕೆಂದರೆ ಬರ್ಕಣ ಜಲಪಾತ ತಲುಪುವವರೆಗೂ ನಾವು ಮಾಡಿದ್ದು ಉಂಬಳಗಳನ್ನೂ ಬಿಡಿಸುತ್ತಾ, ರಕ್ತ ಒರೆಸಿಕೊಳ್ಳುತ್ತಾ, ತಮಾಷೆ ಮಾಡುತ್ತಾ ಸಾಗಿದ್ದು ಅಷ್ಟೇ. ಕಾಡು ಎಷ್ಟು ದಟ್ಟವಾಗಿತ್ತೆಂದರೆ ಹಲವು ಕಡೆ ಬೆಳಕು ನೆಲವನ್ನೂ ತಾಕುತ್ತಿರಲಿಲ್ಲ. ಲಂಟಾನ ಜಿಗ್ಗುಗಳಲ್ಲಿ ನುಗ್ಗುತ್ತಾ ಕೃಷ್ಣಪ್ಪನ ಹಿಂದೆ ಕೆಲವು ಕಡೆ ಓಡಿದಂತೆ ನಡೆಯುತ್ತಿದ್ದವು. ಉಂಬಳಗಳು ನಮಗೆ ಎಲ್ಲೂ ನಿಲ್ಲಲು ಆಸ್ಪದ ನೀಡಲಿಲ್ಲ. ಒಂದು ಬಿಡಿಸಲು ನಿಂತರೆ ಹತ್ತು ಉಂಬಳಗಳು ಕಾಲನ್ನು ಮುತ್ತುತ್ತಿದ್ದವು. ಸುಮಾರು ೧೧ ಗಂಟೆ ಅಷ್ಟೊತ್ತಿಗೆ ಬರ್ಕಣ ಜಲಪಾತವನ್ನು ತಲುಪಿದೆವು. ನಾವು ಜಲಪಾತದ ಮೇಲ್ಬಾಗಕ್ಕೆ ಬಂದಿದ್ದರಿಂದ ಮೇಲಿನಿಂದಲೇ ಜಲಪಾತ ಬೀಳುತ್ತಿರುವುದನ್ನು ನೋಡಿ ಸಂತೋಷಪಡಬೇಕಾಯಿತು. ಜಲಪಾತದ ಪೂರ್ಣ ನೋಟ ಸಿಗದಿದ್ದಕ್ಕಾಗಿ ಬೇಸರವಾಯಿತು. ವಿನಯ್ ಜಲಪಾತ ನೋಡುವ ಭರದಲ್ಲಿ ಮಲಗಿದ್ದ ಒಂದು ಹಾವನ್ನು ತುಳಿಯುವವನಿದ್ದ. ನಾವೆಲ್ಲಾ ಜಲಪಾತದ ಹತ್ತಿರದ ಬಂಡೆಗಳ ಮೇಲೆ ಕುಳಿತು ಉಂಬಳಗಳನ್ನು ಬಿಡಿಸುವ ಕಾರ್ಯದಲ್ಲಿ ತೊಡಗಿದೆವು. ಅಲ್ಲೇ ಸ್ವಲ್ಪ ವಿಶ್ರಮಿಸಿಕೊಂಡು ಹಸಿದ ಹೊಟ್ಟೆಗೆ ಒಂದೊಂದು ರೊಟ್ಟಿ ಎಸೆದು ಚಾರಣವನ್ನು ಮುಂದುವರೆಸುವ ಯೋಚನೆ ಮಾಡಿದೆವು.

ಇಂಡಿಯನ್ ಪಿಟ್ ವೈಪರ್ (ಫೋಟೋ ಕೃಪೆ : ಪ್ರವೀಣ್ ಕೆ.ಆರ್)

ಬರ್ಕಣ ಜಲಪಾತದ ಮೇಲಿನಿಂದ ನೋಟ (ಫೋಟೋ ಕೃಪೆ : ಪ್ರವೀಣ್ ಕೆ.ಆರ್)

ಮುಂದುವರೆಯುವುದು....

14 comments:

ಮನದಾಳದಿಂದ............ said...

ಶರತ್,
ಕುತೂಹಲಕಾರಿಯಾಗಿ ಸಾಗುತ್ತಿದೆ ನಿಮ್ಮ ಚಾರಣದ ಕತೆ! ಕಾಡಿನ ಎಲ್ಲಾ ಸುಖ ದುಃಖವನ್ನು ಅನುಭವಿಸಿ ಸ್ವಾಮಿ.......

balasubramanya said...

ಶರತ್ ನಿಮ್ಮ ಚಾರಣದ ಅನುಭವ ಲೇಖನ ಚೆನ್ನಾಗಿ ಮೂಡಿಬರುತ್ತಿದೆ. ಚಾರಣದ ವಿವರಗಳನ್ನು ಚೆನ್ನಾಗಿ ದಾಖಲಿಸುತ್ತೀರಿ ಅದಕ್ಕೆ ಪೂರಕವಾಗಿ ಚಿತ್ರಗಳು ಸಹ ಮೂಡಿವೆ. ಹೆಚ್ಚಿನ ನಿರೀಕ್ಷೆಯೊಂದಿಗೆ ಮುಂದಿನ ಕಂತಿಗೆ ಕಾಯುತ್ತೇನೆ.

Hema Powar said...

cool man! ಟ್ರೆಕ್ಕಿಂಗ್ ಅಂತೆಲ್ಲಾ ಬರೆದು ಹೊಟ್ಟೆ ಉರಿಸ್ತಿದೀರಿ! :-(

sunaath said...

ಸ್ವಾರಸ್ಯಕರವಾದ ವಿಷಯಗಳನ್ನು ಹೇಳುತ್ತಿದ್ದೀರಿ. ಧನ್ಯವಾದಗಳು.

Karthik Kamanna said...

!!!!!

manju said...

nimma baraha umba chennagi idde oduvaga kutuhal untago hage baridididera,nivu helodananna kelatha iddare navu vandu sari allige bheti kodabeku antha ashe agatha idde

manju said...

nimma charan tumba kutuhalkari yagide ,allige vandu sari hogibaruva asheyannu tanda nimage dhanyavaadgalu

Mohan B.S said...

ಲೇಖನ ತುಂಬಾ ಚೆನ್ನಾಗಿದೆ,ಮುಂದುವರೆಸಿ ಅಂದ ಹಾಗೆ ನೀವು ಯಾವಾಗ ಹೋಗಿದ್ದು? ಹೋಗಲು ಅನುಮತಿ ಸಿಗುತ್ತಾ?

PARAANJAPE K.N. said...

lekhana tumbaa chenaagide, munduvarisi

ಶರಶ್ಚಂದ್ರ ಕಲ್ಮನೆ said...

@ಪ್ರವೀಣ್,
ಚಾರಣದಲ್ಲಿ ಕಷ್ಟವೂ ಸುಖವೇ :)

@ಬಾಲು ಸರ್,
ಶೀಘ್ರದಲ್ಲಿ ಮುಂದಿನ ಕಂತು ನಿಮ್ಮ ಮುಂದೆ ಇಡುತ್ತೇನೆ..

@ಹೇಮಾ,
ಈಗಲೇ ಖಾಲಿ ಮಾಡ್ಕೋಬೇಡಿ ಹೊಟ್ಟೆ ಉರಿಯನ್ನು... ಕಳೆದ ವಾರ ಚಾರ್ಮಾಡಿ ಘಾಟಿಗೆ ಹೋಗಿದ್ದೆವು ಚಾರಣಕ್ಕೆ :)

@ಸುನಾಥ್ ಸರ್,
ನಾನು ಏನೇ ಬರೆದರೂ ಎಂದಿನಂತೆ ಓದಿ ನನ್ನ ಬರಹಗಳನ್ನು ಪ್ರೋತ್ಸಾಹಿಸುವುದಕ್ಕೆ ನಾನು ಚಿರ ಋಣಿ.

@ಕಾರ್ತಿಕ್,
ಸಮಾಧಾನ :)

@ಮಂಜು,
ಸಾಧ್ಯಾವಾದರೆ ಒಮ್ಮೆ ಹೋಗಿಬನ್ನಿ, ನೋಡಲೇ ಬೇಕಾದ ಸ್ಥಳ. ನನ್ನ ಬ್ಲಾಗ್ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

@ಮೋಹನ್,
ನಾವು ನವೆಂಬರ್ ಕೊನೆಯ ವಾರದಲ್ಲಿ ಹೋಗಿದ್ದೆವು. ಹೋಗಲು ಅನುಮತಿ ಸಿಗುತ್ತದೆ, ಆದರೆ ಗುಡ್ಡದ ಮೇಲೆ ಉಳಿಯಲು ಅವಕಾಶವಿಲ್ಲ.

@ಪರಾಂಜಪೆ ಸರ್,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು :)

Praveen said...

ಸನ್ನಿವೇಶಗಳು ಕಣ್ಣ ಎದುರಿಗೆ ಬಂದು ಹೋಗುತ್ತಿವೆ... ತುಂಬಾ ಸೊಗಸಾದ ಸಂದರ್ಭಗಳ ವಿಶ್ಲೇಷಣೆ ... ತಿಂಡಿ ವಿಷಯ ಇನ್ನೂ ನಗು ಮೂಡಿಸುತ್ತಿದೆ :)

venkat.bhats said...

ಒಂದೇ ಗುಕ್ಕಿನಲ್ಲಿ ಎರಡೂ ಭಾಗ ಓದಿ ಮುಗಿಸಿದೆ,ಬೋರು ಹೊಡೆಸುವ ಬೇರೆ ಚಾರಣಿಗರ ಬರಹಕ್ಕಿಂತ ತುಂಬ ಭಿನ್ನ,ಚಾರಣದ ಕಥೆ ಹೇಳುವ ರೀತಿ ಇಷ್ಟ ಆತು,ಹಿಂಗೇ ಬರೀತೆ ಹೇಳಾದ್ರೆ ಮುಂದಿನ ಭಾಗಕ್ಕೆ ಕಾಯುವುದು ಅನಿವಾರ್ಯ ಎನಗೆ..

jithendra hindumane said...

:)

prasca said...

ನರಸಿಂಹ ಪರ್ವತ ಇನ್ನೂ ಕನಸಾಗೇ ಉಳಿದಿದೆ.......

ಚಾರಾಂಡಿ ಚಾರಣದ ಕಠನಕ್ಕಾಗಿ ಎದುರು ನೋಡುತ್ತಿದ್ದೇನೆ.