Sunday, March 8, 2009

ಸ್ತ್ರೀ ಅಂದರೆ ಅಷ್ಟೇ ಸಾಕೆ?

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಆಕೆಯ ಕೈಯ್ಯಷ್ಟು ಮೃದುವಾದ ಕೈ ಮತ್ತೊಂದಿಲ್ಲ. ಅವಳು ಪ್ರೀತಿಯಿಂದ ತಲೆಯ ಮೇಲೆ ಕೈ ಸವರುತ್ತಾಳೆ. ಜ್ವರ ಬಂದಾಗ ಅವಳ ಕೈ ಹಣೆ ಮುಟ್ಟಿದರೆ ಆ ಸ್ಪರ್ಶದಿಂದಲೇ ಅರ್ಧ ಜ್ವರ ಮಾಯವಾಗುತ್ತದೆ. ಆ ಮೃದು ಕೈಯ್ಯ ಹಿಂದೆ ಕಷ್ಟಗಳ ದೊಡ್ಡ ಕಥೆಯೇ ಇದೆ. ಕೆಲಸ ಮಾಡಿ ಮಾಡಿಯೇ ಕೈ ಸವೆದು ಇಷ್ಟು ಮ್ರುದುವಾಗಿದೆಯೇ ಎಂದು ಕೆಲವೊಮ್ಮೆ ನನಗೆ ಅನ್ನಿಸಿದ್ದೂ ಇದೆ. ಈ ವಯಸ್ಸಿನಲ್ಲೂ ತನ್ನ ಶಕ್ತಿ ಮೀರಿ ಕೆಲಸ ಮಾಡುತ್ತಾಳೆ. ಹಾಗೆ ಪ್ರೀತಿಯೂ ಕೂಡ, ಸಾಗರದಷ್ಟು ಆಳ, ವಿಶಾಲ. ಮೊಮ್ಮಗ ಫೋನ್ ಮಾಡಿದಾಗ ಮಾತನಾಡಿಸಿದರೆ ಅದನ್ನೇ ನಾಲ್ಕಾರು ದಿನ ನಾಲ್ಕಾರು ಜನಕ್ಕೆ ಹೇಳಿಕೊಂಡು ಸಂಭ್ರಮಿಸುವಷ್ಟು ಮುಗ್ಧೆ ಈಕೆ. ಆಕೆಗೆ ಆಕೆಯ ಕುಟುಂಬವೇ ಸರ್ವಸ್ವ, ಆಕೆಯ ಊರೇ ಪ್ರಪಂಚ. ಇಷ್ಟೊಂದು ಪ್ರೀತಿಯನ್ನು ಯಾವುದೇ ಅಪೇಕ್ಷೆ ಇಲ್ಲದೆ ನನಗೆ ನೀಡಿದ ಈಕೆ ನನ್ನ ಅಜ್ಜಿ.


ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಈಕೆಯ ಬಗ್ಗೆ ಏನು ಹೇಳಿದರೂ ಕಡಿಮೆಯೇ. ಈಕೆ ನನ್ನ ಸರ್ವಸ್ವ. ಈಕೆಯನ್ನು ಬಿಟ್ಟು ನಾನಿಲ್ಲ. ನನ್ನ ಜೀವನದಲ್ಲಿ ನಡೆದ ಎಲ್ಲ ಘಟನೆಗಳನ್ನೂ ಬಲ್ಲವಳು ಇವಳು. ನನ್ನ ಹೃದಯದ ತಳಮಳಗಳನ್ನು ಕಣ್ಣಲ್ಲಿ ಕಣ್ಣಿಟ್ಟು ತಿಳಿದುಕೊಳ್ಳಬಲ್ಲವಳು. ನನ್ನ ಕಣ್ಣು ತುಂಬಿದರೆ ಈಕೆ ಅಳುವಳು. ನನ್ನ ಮುಖದ ಮಂದಹಾಸ ಈಕೆಯ ಬಾಯ್ತುಂಬ ನಗೆಗೆ ಕಾರಣವಾಗುತ್ತದೆ. ನನ್ನ ಮನಸ್ಸನ್ನು ಸಂಪೂರ್ಣವಾಗಿ ಅರಿತವಳು. ನನ್ನಲ್ಲಿ ಏನೇನು ಒಳ್ಳೆಯ ಗುಣಗಳು ಇವೆಯೋ ಅದಕ್ಕೆಲ್ಲ ಕಾರಣ ಇವಳೇ. ಈಕೆಯ ಋಣವನ್ನು ನಾನೆಂದೂ ತೀರಿಸಲು ಆಗದು. ಈಕೆ ನನ್ನನ್ನು ಹೊತ್ತು, ಹೆತ್ತು, ಎತ್ತಾಡಿಸಿ, ಮುದ್ದಾಡಿಸಿ, ಇಷ್ಟೆತ್ತರಕ್ಕೆ ಬೆಳೆಸಿ ನಿಲ್ಲಿಸಿದ ನನ್ನ ಅಮ್ಮ.


ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಈಕೆ ನನ್ನೊಂದಿಗೆ ಭಯಂಕರ ಜಗಳ ಮಾಡುತ್ತಾಳೆ. ಜಗಳ ಮುಗಿದು ಮುನಿಸಿಕೊಂಡಾಗ ಕೈ ಹಿಡಿದು ಕೇಳುತ್ತಾಳೆ "ಹೇ ಸಾರಿ ಕಣೋ, ಇನ್ನೊದು ಸಲ ಜಗಳ ಮಾಡಲ್ಲ." ಮನೆಗೆ ಹೋದರೆ ನನಗೋಸ್ಕರ ಸಿಹಿ ಮಾಡುತ್ತಾಳೆ. ರಾತ್ರಿ ಒಂದರ ವರೆಗೆ ಹರಟುವಷ್ಟು ವಿಷಯಗಳಿರುತ್ತವೆ ಇವಳಿಗೆ. "ಏ ಆ ಹುಡುಗಿಗೆ ಲೈನ್ ಹೊಡೆಯೋ, ಚನ್ನಾಗಿದ್ದಾಳೆ" "ಇವಳು ಬೇಡ, ನಿಂಗೆ ಸರಿಯಾದ ಜೋಡಿ ಅಲ್ಲ ಬಿಡು" ಎಂದೆಲ್ಲ ತಮಾಷೆ ಮಾಡುತ್ತಾಳೆ. ಏನೂ ಕೆಲಸವಿಲ್ಲದಿದ್ದರೆ ಬಂದು ಮೈಗೆ ಒರಗುತ್ತಾಳೆ, ತೊಡೆಯ ಮೇಲೆ ತಲೆಯಿಟ್ಟು ನಿದ್ದೆ ಹೋಗುತ್ತಾಳೆ..... ನನ್ನ ತಂಗಿ ಈಕೆ.


ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಈಕೆಯ ಹೃದಯ ಆಗಷ್ಟೆ ಹುಟ್ಟಿದ ಮಗುವಿನಷ್ಟು ಪರಿಶುದ್ದ. ಕಪಟವನ್ನು ಅರಿಯದವಳೀಕೆ. ಮನಸ್ಸಿಗೆ ಬಂದಿದ್ದನ್ನು ನೇರವಾಗಿ ಹಾಗೆ ಹೇಳುವಳು. ನಾನು ಬೇಸರಗೊಂಡಅಗಲೆಲ್ಲ ಹುರಿದುಂಬಿಸುವಳು. ಪ್ರತಿಯೊಂದು ಮಾತನ್ನೂ ನಗು ತುಂಬಿಕೊಂಡು ಆಡುವಳು. ಇವಳು ಉತ್ಸಾಹದ ಚಿಲುಮೆ. ಹೊಂದಿಕೊಂಡು ಹೋಗುವ ಸರಳತೆಯಿದೆ ಇವಳಿಗೆ. ಸ್ವಚ್ಛ ಮನಸ್ಸಿಂದ ಪ್ರೀತಿಯನ್ನು ಹಂಚಿಕೊಳ್ಳುತ್ತಾಳೆ ಈಕೆ. ಯಾರಾದರು ನೋಯಿಸಿದರೆ ನನ್ನಲ್ಲಿ ಬಂದು ಕಣ್ಣೀರು ಹರಿಸಿ ನೋವನ್ನು ಕಳೆದುಕೊಳ್ಳುವವಳು. ಇವಳು ನನ್ನ ಗೆಳತಿ.(ಕವಿ ಜಿ.ಎಸ್. ಶಿವರುದ್ರಪ್ಪ ಅವರ ಈ ಕವಿತೆಯನ್ನು ಸಿ. ಅಶ್ವಥ್ ಅವರ ಕಂಠದಲ್ಲಿ ಕೇಳುತ್ತಿದ್ದಾಗ ನನ್ನಲ್ಲಿ ಮೂಡಿದ ಭಾವನೆಗಳ ಅಕ್ಷರ ರೂಪ ಈ ಬರಹ. ಸುಮಾರು ಎರಡು ವರ್ಷಗಳ ಹಿಂದೆ ಬರೆದಿದ್ದು. ಇದು ನಾನು ಬರೆದ ಮೊದಲ ಬರಹವೂ ಹೌದು. ಸಂಭಂದಗಳಿಗೆ ಹೆಸರು ಇರಲೇ ಬೇಕೆಂದೇನಿಲ್ಲ. ಎಷ್ಟೋ ಸಂಭಂದವಿಲ್ಲದ ಮಹಿಳೆಯರ ಎಷ್ಟೋ ಸಹಾಯಗಳನ್ನು, ಅವರ ಪ್ರಭಾವಗಳನ್ನು ಮರೆಯಲು ಸಾಧ್ಯವಿಲ್ಲ. ಈ ಮೇಲೆ ಬಂದ ವ್ಯಕ್ತಿಗಳು ಕೇವಲ ವ್ಯಕ್ತಿಗಳಾಗಿರದೆ ನನ್ನ ಜೀವನ, ವ್ಯಕ್ತಿತ್ವ, ನಡೆ, ನುಡಿ ರೂಪಿಸಿದ ಶಕ್ತಿಗಳಾಗಿದ್ದಾರೆ. ನನ್ನ ಜೀವನದ ಎಲ್ಲ ಸಂತೋಷಕ್ಕೆ ಕಾರಣರಾದ, ಹೃದಯ ತುಂಬಿ ಪ್ರೀತಿ ನೀಡಿದ, ಸೋತು ಕುಳಿತಾಗ ಉತ್ಸಾಹ ತುಂಬಿದ, ಮಮತೆಯ ಮಳೆಗೈದ, ನಾನು ಮಾಡಿದ ತಪ್ಪುಗಳನ್ನೆಲ್ಲ ಕ್ಷಮಿಸಿದ ನನ್ನ ಅಮ್ಮ, ಅಜ್ಜಿ, ಅತ್ತೆಯಂದಿರು, ಅತ್ತಿಗೆಯಂದಿರು, ಅಕ್ಕಂದಿರು, ತಂಗಿಯಂದಿರು, ಸ್ನೇಹಿತೆಯರು, ಹಾಗು ಹೆಸರೇ ಗೊತ್ತಿಲ್ಲದ ಅನೇಕ ಅಜ್ಞಾತ ಮಹಿಳೆಯರೆಲ್ಲರಿಗೂ ನನ್ನ ಹೃತ್ಪೂರ್ವಕ ನಮಸ್ಕಾರಗಳು. ನಿಮ್ಮ ಋಣವನ್ನು ಎಂದು ತೀರಿಸಲಾರೆನು).

11 comments:

ಸಿಮೆಂಟು ಮರಳಿನ ಮಧ್ಯೆ said...

ಶರತ್....

ತುಂಬಾ ಭಾವ ಪೂರ್ಣವಾಗಿ ಬರೆದಿದ್ದೀರಿ...

ಕವನದ ಸಾಲುಗಳಿಗೆ..
ವಿವರಣೆಗಳು ತುಂಬಾ ಚೆನ್ನಾಗಿವೆ..

ಅಂತೂ ದುಃಖದಿಂದ ಹೊರ ಬಂದೀರಲ್ಲ...!

ಬದುಕೆಂದರೆ ಇದೇ ತಾನೇ..?

ನೀವು ಮತ್ತೆ ಒಳ್ಳೆಯ ಬರಹ ಬರೆದು..

ಭಾವಯಾನದಲ್ಲಿ ವಿಹರಿಸಿದ್ದಕ್ಕೆ..

ಧನ್ಯವಾದಗಳು...
ಅಭಿನಂದನೆಗಳು...

ಮಲ್ಲಿಕಾರ್ಜುನ.ಡಿ.ಜಿ. said...

"ಸ್ತ್ರೀ" ಅಂದರೆ ಅಷ್ಟೇ ಸಾಕೆ?
ನಿಜಕ್ಕೂ ಅಕ್ಕ, ತಂಗಿ, ಅಮ್ಮ, ಅಜ್ಜಿ, ಗೆಳತಿ, ಮಗಳು...ಎಲ್ಲ ಹೆಸರುಗಳನ್ನೂ ಮೀರಿದ್ದು ಮತ್ತು ಎಲ್ಲದರಲ್ಲು ಇರುವ ಒಂದೇ ಬತ್ತದ ಚಿಲುಮೆಯಂತಹ ಪ್ರೀತಿ ಪ್ರೀತಿ ಪ್ರೀತಿ...
ತುಂಬಾ ಚೆನ್ನಾಗಿ ಬರೆದಿದ್ದೀರ ಶರತ್.

ತೇಜಸ್ವಿನಿ ಹೆಗಡೆ- said...

ಶರಶ್ಚಂದ್ರ,

ಸ್ತ್ರೀಯ ಕುರಿತು ನಿನಗಿರುವ ಉನ್ನತ, ಉತ್ತಮ ವಿಚಾರಗಳನ್ನು, ಭಾವನೆಗಳನ್ನು ಹಂಚಿಕೊಂಡದ್ದಕ್ಕೆ ತುಂಬಾ ಧನ್ಯವಾದಗಳು. ನನಗಂತೂ ತುಂಬಾ ಸಂತೋಷವಾಯಿತು. ಎಲ್ಲಾ ಪುರುಷರೂ ಇದೇ ರೀತಿಯ ಭಾವನೆಗಳನ್ನು ಹೊಂದಿದರೆ ಸ್ತ್ರೀ ಶೋಷಣೆ ಎಷ್ಟೋ ಕಡಿಮೆಯಾಗುವುದು. (ಇನ್ನು ಸ್ತ್ರೀ ಶೋಷಣೆಗೆ ಪುರುಷರೊಂದೇ ಕಾರಣ, ಅವರಿಂದ ಮಾತ್ರ ಶೋಷಿತಳಾಗುತ್ತಾಳೆ ಮಹಿಳೆ ಅನ್ನುವುದನ್ನು ಸುತಾರಾಂ ಒಪ್ಪೊಲ್ಲ.)

ನಿನ್ನ ಈ ಉನ್ನತ ವಿಚಾರಗಳು ಸದಾ ನಿನ್ನೊಂದಿಗಿರಲಿ ಎಂದೇ ಹಾರೈಸುವೆ.

ಧನ್ಯವಾದಗಳು.

ಶರಶ್ಚಂದ್ರ ಕಲ್ಮನೆ said...

ಪ್ರಕಾಶಣ್ಣ,
ಅಪ್ಪನ ಸಾವು ಧ್ರತಿಗೆಡಿಸಿದ್ದು ನಿಜ, ಆದರೆ ಜೀವನದ ಓಟದೊಂದಿಗೆ ಸೇರಿಕೊಂಡು ಓಡುವುದು ಕೂಡ ಅಷ್ಟೇ ಅನಿವಾರ್ಯ. ಅಪ್ಪನ ಅನುಪಸ್ಥಿತಿ ಎಂದಿಗೂ ಕಾಡುತ್ತಲೇ ಇರ್ತು. ಸುಖ - ದುಃಖಗಳನ್ನೂ ಸಮಾನವಾಗಿ ಕಾಣುವುದರಲ್ಲೇ ಬದುಕಿನ ಅರ್ಥ ಅಡಗಿದ್ದು ಅಂತ ನನ್ನ ಅನಿಸಿಕೆ. ಧನ್ಯವಾದಗಳು ಕಾಮೆಂಟಿಸಿದ್ದಕ್ಕೆ ಹಾಗು ನಿನ್ನ ಎಲ್ಲ ಸಹಾಯಗಳಿಗೆ, ಅವುಗಳಿಗೆ ಬೆಲೆ ಕಟ್ಟಲು ಆಗ್ತಲ್ಲೆ.


ಮಲ್ಲಿಕಾರ್ಜುನ ಸರ್,
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ನಮ್ಮ ಹುಟ್ಟಿನಿಂದ ಸಾವಿನ ವರೆಗೆ ಹೆಣ್ಣಿನ ಜೊತೆಗೆ ಒಂದೆಲ್ಲ ಒಂದು ಸಂಭಂದದಲ್ಲಿ ನಮ್ಮ ಜೀವನ ಬೆಸೆದುಕೊಂಡಿದೆ. ಅವರು ನೀಡುವ ಪ್ರೀತಿಗೆ ನಾವು ತಲೆ ಬಾಗಲೇ ಬೇಕು.


ತೇಜಕ್ಕ,
ಈ ವಿಚಾರಗಳು ನನ್ನ ಹೃದಯದಲ್ಲಿ ಚಾಪೋತ್ತಿದ್ದು ನನ್ನ ಅಮ್ಮ. ಅವ ಕಷ್ಟ ಪಟ್ಟಿದ್ದು ಕಣ್ಣಾರೆ ಕಂಡವ ನಾನು. ಈ ವಿಚಾರಗಳು, ಭಾವನೆಗಳು ಯಾವತ್ತೂ ಬದಲಾಗದಿಲ್ಲೇ. ನನ್ನಲ್ಲಿ ಏನೇನು ಒಳ್ಳೆ ಗುಣಗಳು ಇದ್ದೋ ಅದಕ್ಕೆಲ್ಲ ಅವಳೇ ಕಾರಣ. ಪ್ರಪಂಚದಲ್ಲಿ ಎಷ್ಟೋ ಕೆಟ್ಟ ಹೆಂಗಸರು ಇರ್ತ ಅಂತ ಕೇಳಿದ್ದಿ. ನನ್ನ ಪುಣ್ಯಕ್ಕೆ ನನ್ನ ಸುತ್ತ ಮುತ್ತಲೂ ಇದೂವರೆಗೂ ಅಂತವರು ಯಾರು ಬರ್ಲೆ. ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು :)

Rajesh Manjunath - ರಾಜೇಶ್ ಮಂಜುನಾಥ್ said...

ಶರತ್,
ಬರಹದ ಮನೋಜ್ಞ ವೈಖರಿ ಮನ ಸೆಳೆಯುತ್ತದೆ, ತುಂಬಾ ಚೆನ್ನಾಗಿದೆ.

shivu said...

ಶರತ್,

ಹೆಣ್ಣಿನ ವಿವಿಧ ಹಂತಗಳಾದ ಅಜ್ಜಿ, ಅಮ್ಮ, ತಂಗಿ, ಗೆಳತಿಯ ನಿಜಸ್ಥಿತಿಯನ್ನು ತುಂಬಾ ಅಪ್ತವಾಗಿ ಹೇಳಿದ್ದೀರಿ...ಅದಕ್ಕೆ ತುಂಬಾ ಸೂಕ್ತವಾದ ಕವನಗಳು..

ಒಳ್ಳೆಯ ಲೇಖನವನ್ನು ಕವನದ ಜೊತೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್...

ಮನಸ್ವಿ said...

ಸ್ತ್ರೀ ಅಂದರೆ ಮೊದಲನೇ ಸ್ಥಾನ ತಾಯಿಗೆ... ಅಂದರೆ ಅಲ್ಲಿ ಮಮತೆ ಪ್ರೀತಿ, ವಾತ್ಸಲ್ಯಕ್ಕೆ ಕೊರತೆಯೇ ಇಲ್ಲ.. ತುಂಬಾ ಚನ್ನಾಗಿ ಬರದಿದ್ದೀಯ... ಭಾವಯಾನಿಯ ಭಾವ ಪೂರ್ಣ ಬರಹ.. ಅಂದಂಗೆ ಇದನ್ನ ಕೇಳಲಾಗ ಮಾಡ್ಕಂಡಿದ್ದಿ ಆದ್ರೂ ಕೇಳತಿದ್ದಿ.. ತಪ್ಪು ತಿಳ್ಕಳಡ... ಕೆಲಸ ಮಾಡಿರೆ ಕೈ ಮೃದು ಆಗ್ತಾ ? :)

Anonymous said...

ಜಿ. ಎಸ್. ಶಿವರುದ್ರಪ್ಪ ರವರ ಈ ಕವನ ನಂಗೂ ಇಷ್ಟವಾದ್ದು.

ಅಶ್ವಥ್ ದನಿಯಲ್ಲಿ ಕವಿತೆಗಳನ್ನು ಕೇಳುವುದು ಭಾವದ ಭಂಗಿ ಕುಡಿದಂತಿರುತ್ತದೆ.

ಇವೆರಡನ್ನೂ ಮೇಳೈಸಿದಂತೆ ಚಂದಗೆ ಬರೆದ ನೀವು ನಮಗೆ " ಭಾವಯಾನ" ಮಾಡಿಸಿದಿರಿ.

- ರಂಜಿತ್

Sinchana said...

ಬಹಳ ದಿನದ ನಂತರ ಮತ್ತೆ ಬ್ಲಾಗ್ ಬರದ್ದೆ...ಅದೂ ಸ್ತ್ರೀ ಬಗ್ಗೆ ...ತುಂಬಾ ಚನಾಗಿದ್ದು... :-)

SAVI NENAPUGALU said...

ನಮಸ್ಕಾರ ಶರತ್...
ನಾನು ಇದೇ ಮೊದಲು ನಿಮ್ಮ ಭಾವಯಾನಕ್ಕೆ ಭೇಟಿ ಕೊಟ್ಟಿದ್ದು. "ಸ್ತ್ರೀ ಅಂದರೆ ಅಷ್ಟೇ ಸಾಕೆ..." ನನಗೆ ತುಂಬಾ ಇಷ್ಟವಾದ ಹಾಡು. ನಿಮ್ಮ ವಿವರಣೆ ಕೂಡ ಅಷ್ಟೇ ಭಾವಪೂರ್ಣವಾಗಿದೆ ಮತ್ತು ಮನಸ್ಸಿಗೆ ತಟ್ಟುವಂತಿದೆ. ಒಳ್ಳೆಯ ಬರಹಕ್ಕೆ ಧನ್ಯವಾದಗಳು.

sunaath said...

ಶಿವರುದ್ರಪ್ಪನವರ ಕವನಕ್ಕೆ ವೈಯಕ್ತಿಕವಾದ, ಆಪ್ತವಿವರಣೆಯನ್ನು ಕೊಟ್ಟಿರುವಿರಿ. ತುಂಬಾ ಚೆನ್ನಾಗಿದೆ.