Wednesday, December 28, 2011

ಮೈಹರ್ ಮೇಲ್ - ೨

ಇಂದು ನಿಮಗೆ ಮೈಹರ್ ನ ಬಸ್ ನಿಲ್ದಾಣದ ಕಥೆ ಹೇಳುತ್ತೇನೆ. ನಮ್ಮ ರೂಮಿನಿಂದ ಸ್ವಲ್ಪ ದೂರದಲ್ಲಿಯೆ ಮೈಹರ್ ಬಸ್ ನಿಲ್ದಾಣವಿದೆ. ಮೈಹರ್ ನ ಬಸ್ ನಿಲ್ದಾಣವೆಂಬುದು ಬಸ್ ನಿಲ್ದಾಣವೂ ಹೌದು ಹಾಗು ಸಾರ್ವಜನಿಕ ಬಾರ್ ಕೂಡ ಹೌದು. ಈ ಊರು ಶಾರದಾದೇವಿ ಮಂದಿರದಿಂದ ಪ್ರಸಿದ್ಧವಾಗಿರುವ ಕಾರಣ ಇಲ್ಲಿ ಬಾರುಗಳು ಹಾಗು ಮಾಂಸಹಾರಿ ಹೋಟೆಲುಗಳು ಬೆರಳೆಣಿಕೆಯಷ್ಟಿವೆ. ಈ ಕಾರಣದಿಂದ ಮದಿರಾಪ್ರಿಯರು ಎಣ್ಣೆ, ಗ್ಲಾಸು, ಮತ್ತು ಕುರುಕಲು ತಿಂಡಿಗಳ ಜೊತೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಾರೆ. ರಾತ್ರಿಯಾಗುತ್ತಿದ್ದಂತೆ ಇಲ್ಲಿ ಜನರು ಗುಂಪು ಸೇರುತ್ತಾರೆ. ಊರಿನಿಂದ ಸ್ವಲ್ಪ ಹೊರಗೆ ಇರುವುದರಿಂದಲೋ ಏನೋ, ಇಲ್ಲಿ ಯಾರೂ ಹೇಳುವವರು-ಕೇಳುವವರು ಇಲ್ಲ. ಈಗ ೧೫ ದಿನಗಳಿಂದ ವಿಪರೀತ ಚಳಿ ಇರುವುದರಿಂದ ಬಸ್ ನಿಲ್ದಾಣ ಕೇವಲ ಬಸ್ ನಿಲ್ದಾಣವಾಗಿಯೇ ಇದೆ. ಮದ್ಯಪ್ರಿಯರೆಲ್ಲ ಮನೆಯಲ್ಲೇ ಉಳಿದು ಮದ್ಯ ಸವಿಯುವ ಅಥವಾ ತಾತ್ಕಾಲಿಕವಾಗಿ ಮದ್ಯಸೇವನೆ ತ್ಯಜಿಸುವ ನಿರ್ಧಾರ ಮಾಡಿದಂತಿದೆ.

ಇಲ್ಲಿ ಬಸ್ಸುಗಳ ಸಂಖ್ಯೆ ಕಡಿಮೆ. ಎಲ್ಲರೂ ಪ್ರಯಾಣಕ್ಕೆ ರೈಲನ್ನೇ ಅವಲಂಬಿಸಿದ್ದಾರೆ. ವಿಶೇಷವೆಂದರೆ, ಇದುವರೆಗೂ ನಾನು ಮಧ್ಯಪ್ರದೇಶ ಸಾರಿಗೆಯ ಒಂದು ಬಸ್ಸನ್ನೂ ನೋಡಿಲ್ಲ. ಎಲ್ಲ ಪ್ರೈವೇಟ್ ಬಸ್ಸುಗಳದೆ ದರ್ಬಾರು. ತಾಲೂಕು ಕೇಂದ್ರವಾಗಿ ಇಲ್ಲಿಗೆ ಒಂದೂ ರಾಜ್ಯ ಸಾರಿಗೆಯ ಬಸ್ಸು ಇರದೆ ಇರುವುದು ಆಶ್ಚರ್ಯವೇ ಸರಿ.

ಇನ್ನು ಮುಂಜಾನೆಯ ಸಮಯದಲ್ಲಿ ಬಸ್ ನಿಲ್ದಾಣ "ಸಾರ್ವಜನಿಕ ಬಿಸಿಲು ಕಾಯಿಸುವ ಜಾಗ" ಆಗಿ ಮಾರ್ಪಾಡುಗೊಳ್ಳುತ್ತದೆ. ತಮಾಷೆಯೆಂದರೆ ಅಕ್ಕ-ಪಕ್ಕದಲ್ಲಿರುವ ಮನೆಯ ಹೆಂಗಸು-ಮಕ್ಕಳಾದಿಯಾಗಿ ಎಲ್ಲರೂ ಬೆಳ್ಳಂಬೆಳಗ್ಗೆ ಕುರ್ಚಿಗಳನ್ನು ಹಾಕಿಕೊಂಡು ಬಿಸಿಲು ಕಾಯಿಸುತ್ತಾ-ಪಟ್ಟಾಂಗ ಹೊಡೆಯುತ್ತಾ ಕುಳಿತಿರುತ್ತಾರೆ. ಇವರೇನು ತಿಂಡಿ ತಿನ್ನುವುದಿಲ್ಲವೇ? ತಿನ್ನುವುದಾದರೆ ಯಾವಾಗ ತಯಾರು ಮಾಡುತ್ತಾರೆ? ಮಕ್ಕಳೆಲ್ಲ ಎಷ್ಟು ಹೊತ್ತಿಗೆ ಸ್ಕೂಲಿಗೆ ಹೋಗುತ್ತಾರೆ, ಗಂಡಸರು ತಮ್ಮ ಕೆಲಸಕ್ಕೆ ಎಷ್ಟೊತ್ತಿಗೆ ತೆರಳುತ್ತಾರೆ? ಇಂತ ಪ್ರಶ್ನೆಗಳೆಲ್ಲ ನನ್ನ ಮನದಲ್ಲಿ ಮೂಡಿ ತಲೆ ಕೆರೆದುಕೊಂಡಿದ್ದೇನೆ.

ಮೈಹರ್ ನಲ್ಲಿ ಈಗ ವಿಪರೀತ ಚಳಿ. ಬೆಳಿಗ್ಗೆಯಿಂದ ಸಂಜೆವರೆಗೆ ಉಷ್ಣಾಂಶ ೧೫ ಡಿಗ್ರೀ ಸೆಲ್ಷಿಯಸ್ ಇಂದ ೨೨ ಡಿಗ್ರಿಯವರೆಗೆ ಇರುತ್ತದೆ. ಸಂಜೆಯಾಯಿತೆಂದರೆ ಕೊರೆಯುವ ಚಳಿ ಶುರು. ರಾತ್ರಿಯ ಉಷ್ಣಾಂಶ ೬ಕ್ಕೆ ಇಳಿದಿದ್ದೂ ಇದೆ. ರಾತ್ರಿಯಲ್ಲಿ ತಣ್ಣೀರಿಗೆ ಕೈಹಾಕುವ ಹಾಗಿಲ್ಲ. ಅಪ್ಪಿತಪ್ಪಿ ತಣ್ಣೀರು ಮುಟ್ಟಿದರೆ ಕರೆಂಟ್ ಶಾಕ್ ಹೊಡೆದ ಅನುಭವವಾಗುತ್ತದೆ.

ನಾವು ಉಳಿದುಕೊಂಡಿರುವ ಲಾಡ್ಜಿನಲ್ಲಿ ಸ್ನಾನಕ್ಕೆ ಬೆಳಿಗ್ಗೆ ಬಿಸಿನೀರು ಬರುತ್ತದೆ. ಬರುತ್ತದೆ ಎಂದರೆ ನಲ್ಲಿಯಲ್ಲಿ ಬರುವುದಿಲ್ಲ, ರೂಂ ಬಾಯ್ ಬಕೆಟ್ನಲ್ಲಿ ತಂದುಕೊಡುತ್ತಾನೆ. ಈ ರೂಂ ಬಾಯ್ ಬೆಳಿಗ್ಗೆ ೫ ಗಂಟೆಗೆ ಬಿಸಿ ನೀರು ತಂದು ನಮಗೆಲ್ಲ ತೊಂದರೆ ಕೊಡಲು ಶುರು ಮಾಡಿದ್ದ. ಇವನು ಯಾವ ಪರಿಯಲ್ಲಿ ಬಾಗಿಲು ಬಡಿಯುತ್ತಾನೆಂದರೆ ನೀವು ಎಂತದೆ ನಿದ್ರೆಯಲ್ಲಿದ್ದರೂ ಹಾರಿ ಏಳಬೇಕು. ಜೊತೆಗೆ "ಭೈಯ್ಯಾ ಗರಂ ಪಾನಿ" ಎಂಬ ಅರ್ತನಾದದಂತಹ ಕೂಗು. ಇಂತ ಚಳಿಯಲ್ಲಿ ಬೆಚ್ಚಗೆ ಬೆಚ್ಚನೆಯ ಕನಸುಗಳನ್ನೂ ಕಾಣುತ್ತಾ ಮಲಗಿರುವ ಬ್ಯಾಚಲರ್ ಇಂಜನಿಯರ್ ಗಳಾದ ನಮಗೆ ಇದು ಬರಸಿಡಿಲಿನಂತೆ ಭಾಸವಾಗುತ್ತದೆ.

ಒಂದು ಬೆಳಿಗ್ಗೆ ಹೀಗೆ ಧಡ ಧಡ ಎಂದು ಬಾಗಿಲು ಬಡಿತದ ಶಬ್ದದಿಂದ ಎದ್ದ ನನ್ನ ಸಹೋದ್ಯೋಗಿ ಇದಕ್ಕೊಂದು ಪೂರ್ಣವಿರಾಮ ಹಾಕಲೆಬೇಕೆಂದು, ಬೆಳ್ಳಂಬೆಳಗ್ಗೆ ಕೋಪಗೊಳ್ಳುವುದು ಸರಿಯಲ್ಲವೆಂದು, ಬಂದ ಸಿಟ್ಟನ್ನು ಹತ್ತಿಕ್ಕುತ್ತಾ ಸಮಾಧಾನವಾಗಿ ಅವನಿಗೆ ಇಷ್ಟು ಬೇಗ ನೀರು ತರಬೇಡ ಎಂದೂ, ನಮಗೆ ೭ ಗಂಟೆಗೆ ನೀರು ಕೊಡಬೇಕೆಂದೂ ತನ್ನ ಹರುಕು-ಮುರುಕು ಹಿಂದಿಯಲ್ಲಿ ಸುಮಾರು ೫ ನಿಮಿಷಗಳ ತಿಳುವಳಿಕೆ ನೀಡಿದ. ೫ ನಿಮಿಷಗಳೂ ಹೇಳಿದ್ದನ್ನು ತನ್ಮಯನಾಗಿ ಕೇಳಿದ ರೂಂ ಬಾಯ್ ಕೊನೆಯಲ್ಲಿ ತನಗೇನು ಕೇಳಿಸಿಲ್ಲವೆಂದು ಸಂಜ್ಞೆಯ ಮೂಲಕ ಹೇಳಲು ನನ್ನ ಸಹೋದ್ಯೋಗಿ ಏನೂ ಮಾಡಲು ತಿಳಿಯದೆ "ಅಡಾ ಪಾವಿ, ಪೋಡ" (ಅಯ್ಯೋ ಪಾಪಿ, ಹೋಗೋ) ಎಂದು ತಮಿಳಿನಲ್ಲಿ ಕೂಗಿದ. ಇದನ್ನು ನೋಡುತ್ತಿದ್ದ ನನಗೆ ತಡೆಯಲಾರದಷ್ಟು ನಗು ಬಂದು ನಗತೊಡಗಿದೆ. ರೂಂ ಬಾಯ್ ಗೆ ನಾನೇಕೆ ನಗುತ್ತಿದ್ದೇನೆ ಎಂಬುದೇ ಯಕ್ಷ ಪ್ರಶ್ನೆಯಾಗಿ ನನ್ನನ್ನೇ ವಿಸ್ಮಯದಿಂದ ನೋಡತೊಡಗಿದ. ನಾನು ಸಾವರಿಸಿಕೊಂಡು ಅವನಿಗೆ ಮತ್ತೊಮ್ಮೆ ತಿಳಿಹೇಳಿದೆ. ನನ್ನ ಮಾತನ್ನು ಕೇಳಿದ ಬಳಿಕವೂ ಅವನು ನೀರಿನ ಬಕೇಟನ್ನು ಬಾತ್ ರೂಂ ಅಲ್ಲಿ ಇಡಲು ಒಳಗೆ ನುಗ್ಗಿದ. ಈಗ ನಗುವ ಸರದಿ ನನ್ನ ಸಹೋದ್ಯೋಗಿಯದಾಗಿತ್ತು. ಬೆಳಿಗ್ಗೆ ೫ ಗಂಟೆಗೆ ಇಂಥಹ ತಮಾಷೆಗಳನ್ನು ಅರಗಿಸಿಕೊಳ್ಳುವುದನ್ನು ನಾವು ಬೇರೆ ದಾರಿಯಿಲ್ಲದೆ ಕಲಿಯಲೇಬೇಕಾಯಿತು.

5 comments:

sunaath said...

ನಿಮ್ಮ ಲೇಖನ ಸ್ವಾರಸ್ಯಪೂರ್ಣವಾಗಿದ್ದು, ಮುಂದಿನ ಕಂತುಗಳಿಗಾಗಿ ಕುತೂಹಲಿಯಾಗಿದ್ದೇನೆ.

Sandhya said...

ಅಬ್ಬಾ...!!! ಇನ್ನೆಷ್ಟು ಶಾಕ್ ಗಳು ಕಾದಿದ್ದು ಶರಶ್....
ಮಹೈರ್ ಮೇಲ್-೧ ರಲ್ಲಿ ಸಮೋಸ ಬೆಳಗಿನ ತಿಂಡಿ ಅಂದಾಗಲೇ ಅಯ್ಯೋ ಅನಿಸಿತ್ತು..
ಈಗ ಇದನ್ನ ಓದಿದರೆ ಮತ್ತೂ ಶಾಕ್ ಆಗ್ತಿದ್ದು.. ಮುಂದಿನ ಭಾಗದಲ್ಲಿ ಇನ್ನೆಂತಾ ಕಾದಿದ್ದು ..?
ಬೇಗ ತಿಳಿಸು,,

Divya Mallya Kamath - ದಿವ್ಯಾ ಮಲ್ಯ ಕಾಮತ್ said...

Interesting.. Nice narration as well :)

ರಾಘವೇಂದ್ರ ಜೋಶಿ said...

ಲಹರಿ ಚೆನ್ನಾಗಿದೆ.ಓದಿಸಿಕೊಂಡು ಹೋಗುತ್ತಿದೆ...

Vinayak Bhat said...

ಹೆ ಹೆ ಮೈಹರ್ ಮೇಲ್...
ಉತ್ತರ ಭಾರತದ ಊರುಗಳ ಮೈಹರಿ ಧೂಳು, ಬೆಳಗಿನ ತಿಂಡಿ- ಸಮೋಸ, ಜಿಲೇಬಿ, ಖಮನ್, ಕಾಕ್ರಾ, ಧೋಕ್ಲಾ.. ನೆನೆಸಿಕೊಂಡರೆ ಕಣ್ಣಲ್ಲಿ ಬಳಬಳ ನೀರು ಬತ್ತು. ಬರವಣಿಗೆ ಏನೋ ಚಂದದ್ದೇ. ಆದರೆ ಅನುಭವ ಮಾತ್ರ ಮತ್ತೆ ಬೇಡ ಅನ್ನಿಸ್ತು.