Sunday, January 10, 2010

ಒಂದು ಹಿಡಿ ವಿರಹ....

ನನ್ನ ಕಂಗಳ ಕೊಳದಿ ಬಂಧಿ ನೀನು
ಹೊರಹೋಗ ಬಯಸಿದರೆ ಚುಚ್ಚಿಬಿಡು ಈ ಕಂಗಳ
ಕಣ್ಣೀರಿನೊಂದಿಗೆ ದಯಪಾಲಿಸುವೆ ಮುಕ್ತಿಯನು....


ಈ ಕನಸಿನ ಗೋಪುರ ಒಂದುದಿನ ಬೀಳುವುದು
ಎಂದು ಗೊತ್ತಿದ್ದೂ ಕಟ್ಟಿದ್ದು ನನ್ನದೇ ತಪ್ಪು
ನಿನ್ನ ಕನಸಿನ ಚಿತ್ತಾರದ ಬಣ್ಣಗಳಲ್ಲೇ ಲೀನವಾಗಿದ್ದೆ
ಹೃದಯವೇ ಆಳುತ್ತಿತ್ತು; ಬುದ್ದಿಗೆ ಒಂದಿನಿತೂ ಅವಕಾಶವೀಯದೆ


ನಿನ್ನ ನೆನಪಲ್ಲಿ ಬಂದ
ನನ್ನ ನಿಟ್ಟುಸಿರ ತೇವಕ್ಕೆ
ಕಿಟಕಿಯ ಗಾಜೆಲ್ಲ ಮಂಜಾಗಿ...
ಹೊರಗಿನ ವಿಶ್ವವೇ ಅಗೋಚರವಾಗಿ...


ಮೋಡಗಳ ಮಧ್ಯದಿಂದ ತೂರಿಬರುವ
ಸಂಜೆಗೆಂಪಿನ ಸೂರ್ಯನ ಕಿರಣಗಳು ನೀನು....
ಆ ಕಿರಣಗಳ ಪ್ರಖರತೆಗೆ ಕರಗುವ
ಮಂಜಿನ ಬಿಂದುವಾಗಿ ನಾನು...



ನಿನ್ನೆಗಳ ಬಗ್ಗೆ ಏಕೆ ಬೇಸರ
ನಾಳೆಗಳ ಬಗ್ಗೆ ಏಕೆ ಕಾತರ
ಇಂದು ಎಂಬ ಇಂದನ್ನು ಬಾಳು ಹರುಷದಿಂದ
ನಡಿ ಮುಂದಕೆ ಎಂದೂ ಬತ್ತದ ಹುರುಪಿನಿಂದ.


ನಿನ್ನೆ ನೀನು ಕಿವಿಯಲ್ಲಿ ಹೇಳಿದ ಗುಟ್ಟು ...
ನಿನ್ನ ಬಿಸಿಯುಸಿರ ಬೆಚ್ಚನೆಯ ಭಾವ...
ನನ್ನ ಅಂಗಿಗಂಟಿದ ನಿನ್ನ ಕೂದಲಿನ ಕಂಪು..
ನನ್ನ ಎದೆಯಲ್ಲೇ ಉಳಿದ ಒಂದು ಹಿಡಿ ನೆನಪು...
ನಾನು, ನಕ್ಷತ್ರ, ಹಾಗು ಅಗಾಧ ಆಗಸಗಳಷ್ಟೇ ಇಂದು...

14 comments:

Anonymous said...

ಮತ್ತೆ ಬ್ಲಾಗಿಂಗ್ ಗೆ ವಾಪ್ಸು ಬಂದಿದ್ದು ಖುಷಿಯಾಯ್ತು.

ಕವಿತೆ ಬಿಡಿ ಬಿಡಿ ಹೂವಗಳಂತೆ ಅನ್ನಿಸಿತು. ಜತೆಕಟ್ಟಿಸಿದ್ದು ವಿರಹದ ದಾರವೇ ಅಲ್ಲವೇ?
ಒಟ್ಟಾರೆಯಾಗಿಯೂ ಮತ್ತೆ "ನಿನ್ನ ನೆನಪಲ್ಲಿ ಬಂದನನ್ನ ನಿಟ್ಟುಸಿರ ತೇವಕ್ಕೆಕಿಟಕಿಯ ಗಾಜೆಲ್ಲ ಮಂಜಾಗಿ...ಹೊರಗಿನ ವಿಶ್ವವೇ ಅಗೋಚರವಾಗಿ..." ಸ್ಪೆಶಲ್ ಆಗಿ ಹಿಡಿಸಿತು.
ಬರೆಯುತ್ತಿರಿ.

sunaath said...

ಭಾವಪೂರ್ಣವಾದ ಕವನ.

ಚುಕ್ಕಿಚಿತ್ತಾರ said...

ಚೆ೦ದದ ಕವಿತೆ....
ತಿರುಗಿ ಬ೦ದುದು ಸ೦ತಸ ತ೦ದಿದೆ...
ಅಲ್ ದಿ ಬೆಸ್ಟ್..

ಮನಸ್ವಿ said...

ತುಂಬಾ ಸಮಯದ ನಂತರ ಅತ್ಯುತ್ತಮ ಕವನ, ಹೀಗೆ ಬರೆಯುತ್ತಿರಿ.. ಶರಶ್ಚಂದ್ರ ಅವರೇ.. ತಾವು ನಮ್ಮನ್ನು ಮರೆತಂತಿದೆ, ಗೂಗಲ್ಲಿನಲ್ಲೂ ಇಲ್ಲಾ ಮೊಬೈಲ್ ಗೂ ( ಫ್ರೀ ಮೆಸೇಜ್ ಇದ್ರೂ)ಒಂದು ಮೆಸೇಜ್ ಇಲ್ಲಾ.. ಆರ್ಕುಟ್ಟಿನಲ್ಲಿ ಇದ್ದೀರಿ ಆದರೂ ಸ್ಕ್ರ್ಯಾಪ್ ಇಲ್ಲಾ.. ಬಹಳಾ ಬ್ಯುಸಿ ಅನಿಸುತ್ತೆ ನೀವು.


ಲೇಯ್ ಸ್ವಲ್ಪ ನಮ್ಮನ್ನ ನೆನಪು ಮಾಡ್ಕ್ಯಳಲೇ ;)

ಗೌತಮ್ ಹೆಗಡೆ said...

welcome back:)

ದಿವ್ಯಾ ಮಲ್ಯ ಕಾಮತ್ said...

ಶರಶ್ಚಂದ್ರ,
ಭಾವಪೂರ್ಣ ಕವನ! ಚೆನ್ನಾಗಿದೆ..

ಪಾಚು-ಪ್ರಪಂಚ said...

ಚಂದದ ಕವಿತೆ ಶರತ್, ಭಾವಯಾನ ಹೀಗೆ ಮುಂದುವರಿಯಲಿ.
-ಪ್ರಶಾಂತ್

ಶಿವಪ್ರಕಾಶ್ said...

ಬಹಳ ದಿನಗಳ ನಂತರ ಒಂದು ಸುಂದರ ಕವನದೊಂದಿಗೆ ಬಂದಿದ್ದಿರಿ..
ಪುನಃ ಮರೆಯಾಗಬೇಡಿ.... :)

ದೀಪಸ್ಮಿತಾ said...

ನಿಜ, ನಿನ್ನೆ ನಾಳೆಗಳ ಬಗ್ಗೆ ಚಿಂತಿಸದೆ ಇಂದಿನದನ್ನು ಅನುಭವಿಸಬೇಕು. ಒಳ್ಳೆಯ ಕವನ

ಸಾಗರದಾಚೆಯ ಇಂಚರ said...

ತುಂಬಾ ತುಂಬಾ ಚಂದದ ಪದ್ಯ
ಏನು ಅರ್ಥಗರ್ಭಿತವಾಗಿದೆ
ವಿರಹವೇ? ಯಾಕೆ?

ಶರಶ್ಚಂದ್ರ ಕಲ್ಮನೆ said...

ಮೊದಲಿನಷ್ಟೇ ಸಂತೋಷದಿಂದ ಓದಿ ಹಾರೈಸಿದ ಎಲ್ಲ ಬ್ಲಾಗ್ ಗೆಳೆಯರಿಗೂ ಧನ್ಯವಾದಗಳು :)

Anonymous said...

ಅಂತೂ back to pavilion ! :) ಗುಡ್ ಗುಡ್! :)

vaishaali

Radhika Nadahalli said...

ನಾಲ್ಕು ತಿಂಗಳ ನಂತರ ಮತ್ತೆ ಬ್ಲಾಗ್ ಅಪ್ಡೇಟ್ ಮಾಡಿದ್ದು ಖುಷಿ ಆತು..
"ನಿನ್ನ ನೆನಪಲ್ಲಿ ಬಂದ
ನನ್ನ ನಿಟ್ಟುಸಿರ ತೇವಕ್ಕೆ
ಕಿಟಕಿಯ ಗಾಜೆಲ್ಲ ಮಂಜಾಗಿ...
ಹೊರಗಿನ ವಿಶ್ವವೇ ಅಗೋಚರವಾಗಿ..."
ಈ ಸಾಲುಗಳು ತುಂಬಾ ಇಷ್ಟ ಆತು :-)

Soumya. Bhagwat said...

last few lines are just amazing sharath....