Monday, April 21, 2008

ಬಾ ಮಳೆಯೆ ಬಾ

ಎರಡು ಮೊರು ದಿನಗಳ ಹಿಂದೆ ಟಿವಿಯಲ್ಲಿ ಒಂದು ಕನ್ನಡ ಹಾಡನ್ನು ಕೇಳಿದೆ. ಆಕ್ಸಿಡೆಂಟ್ ಚಿತ್ರದ ಹಾಡು "ಬಾ ಮಳೆಯೆ ಬಾ." ತಕ್ಷಣ ಈ ಹಾಡನ್ನು ಮೊದಲೆಲ್ಲೊ ಕೇಳಿದ್ದೇನಲ್ಲ ಎಂದೆನೆಸಿತು. ಹೀಗೆ ನನ್ನ ನೆನಪಿನ ಮೋಟೆಯನ್ನು ಬಿಚ್ಚಿ ಹುಡುಕತೊಡಗಿದೆ. ಹತ್ತು ನಿಮಿಷದ ನಂತರವೂ ಉತ್ತರ ದೊರಕದೆ ಇದ್ದಾಗ ಪ್ರಯತ್ನವನ್ನು ಕೈ ಬಿಟ್ಟು ಸುಮ್ಮನಾದೆ.

ನಿನ್ನೆ ಬಸ್ಸಿನಲ್ಲಿ ಹೋಗುವಾಗ ರೇಡಿಯೊದಲ್ಲಿ ಮತ್ತೆ ಅದೇ ಹಾಡು. ಈ ಬಾರಿ ಬಿಡಬಾರದೆಂದು ಮತ್ತೆ ಹುಡುಕಾಟ ಶುರು ಮಾಡಿದೆ. ಸ್ವಲ್ಪ ಹೊತ್ತಿನಲ್ಲೆ ನೆನಪಾಯಿತು , ಆದರೆ ಪೂರ್ತಿಯಾಗಿ ಅಲ್ಲ. ಅದೊಂದು ಭಾವಗೀತೆಯೆಂದಷ್ಟೆ ನೆನಪಾಯಿತು. ಅಷ್ಟರಲ್ಲೆ ನಾನು ಇಳಿದುಕೊಳ್ಳಬೇಕಿದ್ದ ಸ್ಥಳ ಬಂದಿದ್ದುದರಿಂದ ಅನ್ವೇಷಣೆಯನ್ನು ಅಲ್ಲಿಗೆ ನಿಲ್ಲಿಸಬೇಕಾಯಿತು. ಸಂಜೆ ಮನೆಗೆ ಬಂದವನೇ ನನ್ನ ಭಾವಗೀತೆಗಳ ಸಿಡಿಗಳನ್ನೆಲ್ಲ ಹರವಿಕೊಂಡು ಕುಳಿತೆ. ಎಲ್ಲವನ್ನು ಹುಡುಕಿದ ಮೇಲೆ ನನ್ನಲ್ಲಿ ಆ ಹಾಡು ಇಲ್ಲವೆಂಬುದು ಜ್ನಾನೋದಯವಾಯಿತು. ಮತ್ತೆ ನೆನಪಿನ ಬೇಟೆ ಶುರುವಾಯಿತು. ಆಗ ನೆನಪಿಗೆ ಬಂದಿದ್ದು ವರ್ಲ್ಡ್ ಸ್ಪೇಸ್ ರೇಡಿಯೊ. ಆಗ ವರ್ಲ್ದ್ ಸ್ವೇಸ್ ನಲ್ಲಿ ಬೆಳಿಗ್ಗೆ ೧೦ ರಿಂದ ೧ ರ ವರೆಗೆ ಭಾವಗೀತೆಗಳು ಪ್ರಸಾರವಾಗುತ್ತಿತ್ತು. ಆಗ ಆ ಹಾಡನ್ನು ಕೇಳಿದ್ದೆ.

ಇಂದು ಹೇಗಾದರೂ ಮಾಡಿ ಆ ಹಾಡನ್ನು ಕೇಳಲೇ ಬೇಕೆಂದು http://www.kannadaaudio.com/ ಅನ್ನು ಹೊಕ್ಕೆ. ಅಲ್ಲಿ ಭಾವಗೀತೆಗಳ ವಿಭಾಗದಲ್ಲಿ ಇದ್ದ ಸಂಗ್ರಹವನ್ನು ನೋಡಿ ಇದು ಆಗುಹೋಗುವ ಕೆಲಸವಲ್ಲ ಎಂದುಕೊಂಡೆ. ಆದರೂ ೩-೪ ದಿನದಿಂದ ಹಿಂಬಾಲಿಸಿ ಇದನ್ನು ಇಲ್ಲಿಗೆ ಬಿಡುವುದು ಸರಿಯಲ್ಲವೆಂದೆನಿಸಿತು. ಹಾಗೆ ವೆಬ್ ಪುಟವನ್ನು scroll down ಮಾಡಿದಾಗ ಅದೃಷ್ಟವಶಾತ್ search option ಕಂಡಿತು. ನಾಲ್ಕಾರು result ಗಳು ದೊರೆಯಿತು. ರಾಜು ಅನಂತಸ್ವಾಮಿ ಅವರ ಸಂಗೀತ ಹಾಗು ಧ್ವನಿಯಲ್ಲಿ ಮೊಡಿದ್ದ ಹಾಡನ್ನು ಕೊನೆಗೂ ಕಂಡು ಹಿಡಿದಿದ್ದು ಬಹಳ ಸಂತೋಷ ತಂದಿತ್ತು. ಸಾಹಿತ್ಯ ಬಿ.ಆರ್. ಲಕ್ಷ್ಮಣರಾವ್ ಅವ್ರದ್ದು ಎಂದು ತಿಳಿದಕೂಡಲೆ ಕುತೂಹಲ ಇನ್ನೂ ಹೆಚ್ಚಿತು. ಬಹುಶ ಇದು ಒನ್ ಆಫ್ ದಿ ಬೆಸ್ಟ್ ರೊಮ್ಯಾಂಟಿಕ್ ಸಾಂಗ್ಸ್ ಎಂದು ನನ್ನ ಅನಿಸಿಕೆ. ಇಂಥ ಅಧ್ಬುತ ಸಾಹಿತ್ಯದ ಹಾಡನ್ನು ಹಲವಾರು ಬಾರಿ ಕೇಳಿ ಸಂತೋಷಪಟ್ಟೆ. ಹಾಗೇ ಅಲ್ಲೇ ಲಭ್ಯವಿದ್ದ ಆಕ್ಸಿಡೆಂಟ್ ಚಿತ್ರದ ಹಾಡನ್ನೂ ಕೇಳಿದೆ. ಸೋನು ನಿಗಮ್ ರ ಸ್ವರದಲ್ಲಿ ಹಾಡು ಕೇಳಲು ಇಂಪಾಗಿದೆ. ಆದರೆ ಅಲ್ಲಲ್ಲಿ ಪದಗಳ ತಪ್ಪು ಉಚ್ಚಾರಣೆ ಕೇಳುಗರಿಗೆ ಅಹಿತವೆನಿಸುತ್ತದೆ. ಹಾಡಿನ ರಾಗಕ್ಕೋಸ್ಕರ ಸಾಹಿತ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. "ಅಷ್ಟು" ಹೋಗಿ "ಅಟ್ಟು" ಆಗಿದೆ. "ತೆಕ್ಕೆ" "ತೆಕೆ" ಆಗಿದೆ. "ಬೇಗ" "ಬೆಗ" ವಾಗಿದೆ. ಇದೇ ಹಾಡನ್ನು ಕನ್ನಡಿಗನಲ್ಲಿ ಹಾಡಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸಿತು. ಒಟ್ಟಿನಲ್ಲಿ ಒಂದು ಅಧ್ಬುತ ಸಾಹಿತ್ಯದ ಹಾಡನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದ್ದಕ್ಕೆ http://www.kannadaaudio.com/ ಗೂ ಹಾಗು ಕನ್ನಡಕ್ಕೆ ಇಂಥ ಒಳ್ಳೆ ಗೀತೆಯನ್ನು ನೀಡಿದ್ದಕ್ಕೆ ಬಿ.ಆರ್. ಲಕ್ಷ್ಮಣ್ ರಾವ್ ಅವರಿಗೂ ಸಾವಿರ ವಂದನೆಗಳು.

"ಬಾ ಮಳೆಯೆ ಬಾ" ಮೊಲ ಗೀತೆಯನ್ನು ಕೇಳಬೇಕಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ http://www.kannadaaudio.com/Songs/Bhaavageethe/home/HrudayavaNinageNeedide.php

ಹಾಡಿನ ಸಾಹಿತ್ಯ :
ಬಾ ಮಳೆಯೆ ಬಾ
ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ

ಬಾ ಮಳೆಯೆ ಬಾ........

ಓಡು ಕಾಲವೆ ಓಡು
ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆ ನಿಲ್ಲು ಕಾಲವೆ ನಿಲ್ಲು
ನನ್ನ ತೆಕ್ಕೆ ಸಡಿಲಾಗದಂತೆ

ಬಾ ಮಳೆಯೆ ಬಾ.........

ಬೀಸು ಗಾಳಿಯೆ ಬೀಸು
ನನ್ನೆದೆಯ ಆಸೆಗಳ
ನಲ್ಲೆ ಹೃದಯಕ್ಕೆ ತಲುಪಿಸು
ಹಾಸು ಹೂಗಳ ಹಾಸು
ಅವಳು ಬಹ ದಾರಿಯಲ್ಲಿ
ಕಲ್ಲುಗಳು ತಾಗದಂತೆ

ಬಾ ಮಳೆಯೆ ಬಾ..........

ಬೀರು ದೀಪವೆ ಬೀರು
ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ
ಆರು ಬೇಗನೆ ಆರು
ಶೃಂಗಾರ ಶಯೆಯಲ್ಲಿ
ನಾಚಿ ನೀರಾಗದಂತೆ

ಬಾ ಮಳೆಯೆ ಬಾ.........

ಯಾನದ ಪ್ರಾರಂಭದಲ್ಲಿ ನಾಲ್ಕು ಮಾತುಗಳು

ನಾನು ಬ್ಲಾಗ್ ಲೋಕಕ್ಕೆ ಕಾಲಿಟ್ಟು ಇನ್ನೂ ತಿಂಗಳಷ್ಟೇ ಆಯಿತು. ಇಲ್ಲಿನ ಆಗಾಧತೆಯನ್ನು ಕಂಡು ಬೆಚ್ಚಿದ್ದೇನೆ ಹಾಗು ಕನ್ನಡದಲ್ಲಿ ಇಷ್ಟೊಂದು ಒಳ್ಳೆಯ ಬರವಣಿಗೆಗಳನ್ನು ಓದಲು ಸಿಕ್ಕಿದ್ದಕ್ಕೆ ಸಂತಸಗೊಂಡಿದ್ದೇನೆ. ನಾನು ಬರೆಯಲು ಪ್ರಾರಂಭಿಸಿದ್ದು ಇತ್ತೀಚೆಗೆ. ನನಗೆ ಬರೆಯಲು ಪ್ರೇರಣೆ ನೀಡಿದ್ದು ಶಿವುರವರ "ಹರಟೆ"ಗಳು. ಶಿವುರವರ ಪ್ರೇರೇಪಣೆ, ಅಮ್ಮ ಮತ್ತು ಜಯಂತ್ ಸರ್ ಅವರ ಪ್ರೋತ್ಸಾಹ ನಾನು ನಾಲ್ಕು ಅಕ್ಷರಗಳನ್ನು ಗೀಚಲು ಸಾಧ್ಯವಾಗಿಸಿದವು. ನನ್ನ ದಿನಚರಿಗಷ್ಟೆ ಸೀಮಿತವಾಗಿದ್ದ ನನ್ನ ಬರಹಗಳು ಈಗ ಬ್ಲಾಗ್ ಲೋಕದ ಕಟ್ಟೆ ಹತ್ತಿವೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ನಾನು ಈವರೆಗೆ ಓದಿದ್ದು ಅತ್ಯಲ್ಪ. ಇನ್ನೂ ಓದಬೇಕು. ಕವನಗಳನ್ನು ಬರೆಯಲು ಪ್ರಯತ್ನಿಸಿದ್ದೆನಾದರೂ, ಬರೆದ ಕವನಗಳೆಲ್ಲ ತೀರಾ ಬಾಲಿಶವೆನಿಸಿ ಅದನ್ನು ಅಲ್ಲಿಗೆ ಕೈ ಬಿಟ್ಟಿದ್ದೇನೆ. ನನ್ನ ಬರಹಗಳನ್ನು ಓದಿ ಅದರ ಬಗೆಗಿನ ನಿಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ತಿಳಿಸಿದರೆ ನನ್ನನ್ನು ನಾನು ತಿದ್ದಿಕೊಂಡು ಇನ್ನೂ ಉತ್ತಮವಾಗಿ ಬರೆಯಲು ಸಾಧ್ಯವಾಗುತ್ತದೆ. ಚರ್ಚೆಗೆ ಮುಕ್ತ ಅವಕಾಶವಿದೆ.