Saturday, August 16, 2008

ಅಗಲುತ್ತಿರುವ ಗೆಳೆಯನ ಬಗ್ಗೆ....


ಕೋರಮಂಗಲದ ಮೆಗಾಮಾರ್ಟ್ ನಲ್ಲಿ ನನ್ನ ಬಳಗಕ್ಕೆ ಅವನು ಸೇರಿದಾಗ ಅವನು ಇಷ್ಟೊಂದು ವರ್ಷಗಳು ನನ್ನೊಂದಿಗೆ ಇರುತ್ತಾನೆ, ಇಂಥ ಬಾಂಧವ್ಯವೊಂದು ಬೆಸೆದುಕೊಳ್ಳುತ್ತದೆ ಎಂಬ ಒಂದು ಸಣ್ಣ ಸುಳಿವೊ ಇರಲಿಲ್ಲ. ಮೊದಮೊದಲು ಅವನ ಬಗ್ಗೆ ನನಗೆ ತೀವ್ರ ಅಸಮಾಧಾನವಿತ್ತು. ಅವನನ್ನು ಅಷ್ಟೊಂದು 'ಹಚ್ಚಿ'ಕೊಂಡಿರಲಿಲ್ಲ. ಅವನ ಬಳಕೆಯೂ ಅಷ್ಟಕ್ಕಷ್ಟೆ ಅನ್ನುವಷ್ಟು ಇತ್ತು. ಈ ಮಾನವನ ಮನಸ್ಸು ವಿಚಿತ್ರ. ಯಾವ ಹೊತ್ತಿಗೆ ಏನು ಆಗುತ್ತದೊ ಗೊತ್ತಿಲ್ಲ. ನನಗೂ ಹಾಗೆ ಆಗಿದ್ದು. ಯಾವುದೊ ಘಳಿಗೆಯಲ್ಲಿ ಅವನ ಮೇಲೆ ಆತ್ಮೀಯತೆ ಹುಟ್ಟಿದ್ದು. ಇಂಥ ಘಟನೆ ನನ್ನ ಜೀವನದಲ್ಲಿ ಆದ ನಂತರ ಅವನು ತುಂಬಾ ಹತ್ತಿರವಾಗಿಬಿಟ್ಟ. ಮೊನ್ನೆ ಮೊನ್ನೆವರೆಗೊ ತನ್ನ ಸ್ಥಾನವನ್ನು ಯಾರಿಗೊ ಬಿಟ್ಟು ಕೊಡಲೂ ಇಲ್ಲ. ಬೇರೆಯವರನ್ನು ಆ ಸ್ಥಾನಕ್ಕೆ ಏರಿಸಲು ನನಗೂ ಇಷ್ಟವಿರಲಿಲ್ಲ. ನಂಬುತ್ತೀರೊ ಇಲ್ಲವೊ, ಕಳೆದ ಮೂರು ವರ್ಷಗಳಿಂದ ಸತತವಾಗಿ ನನ್ನೊಂದಿಗೆ ಇದ್ದವನು ಈತ. ಈತನಿಗೆ ವಿಶ್ರಾಂತಿ ಎನ್ನುವ ಪದವನ್ನೇ ಕೇಳದಂತೆ ಮಾಡಿದ್ದೆ ನಾನು. ಮದುವೆ, ಪಾರ್ಟಿ, ಕಾಲೇಜ್, ಊರು ಎಲ್ಲಿ ಹೋದರೂ ನನ್ನೊಂದಿಗೆ ಇರಬೇಕು ಇವನು. ಆರು ತಿಂಗಳ ಹಿಂದೆ ಇವನ ಪಾಡನ್ನು ಕಂಡು ಇವನಿಗೊಂದು ಲಾಂಗ್ ರೆಸ್ಟ್ ಕೊಡೋಣ ಅಂದುಕೊಂಡೆ. ಆದರೆ ಅವನ ಮೇಲಿನ ಪ್ರೀತಿ, ಅವನ ಅನಿವಾರ್ಯ, ಅವನಿಲ್ಲದಿದ್ದರೆ ಆಗೋದೇ ಇಲ್ಲ ಎನ್ನುವ ನನ್ನ ಮನೋಭಾವ ಇಲ್ಲಿಯವರೆಗೂ ಅವನನ್ನು ನನ್ನೊಂದಿಗೆ ಉಳಿಸಿಕೊಂಡು ಬಂದಿತು. ಬಹುಶ ಅವನಿಗೆ ಮಾತಾಡಲು ಬಾಯಿ ಇದ್ದಿದ್ದರೆ ಅವನೇ ಕೇಳುತ್ತಿದ್ದನೋ ಏನೊ. ಅಂತೂ ಅವನಿಗೆ ಇಂದು ಬಿಡುಗಡೆ. ಅವನು ಇನ್ನೆಂದಿಗೂ ನನ್ನೊಂದಿಗೆ ಬರಲಾರ.


ಇಷ್ಟು ಹೊತ್ತು ಹೇಳಿದ "ಅವನು" ಯಾರೆಂದು ನೀವು ಯೋಚಿಸುತ್ತಿರಬಹುದು. ಆಶ್ಚರ್ಯವಾಗಬಹುದು, "ಅವನು" ಅವನಲ್ಲ. "ಅದು" ನನಗೆ "ಅವನು" ಆಗಿದ್ದಾನೆ. "ಅವನು" ನನ್ನ ಪ್ರೀತಿಯ "newport jeans." ಐದು ವರ್ಷಗಳ ಹಿಂದೆ ಕೊಂಡಿದ್ದ ಆ ಜೀನ್ಸನ್ನು ವಾರ್ಡ್ರೊಬ್ ಸೇರಿಸಿದ್ದೇ ಅಪರೂಪ. ಉಪಯೋಗಿಸುವುದು, ತೊಳೆಯುವುದು, ಮತ್ತೆ ಇಸ್ತ್ರಿ ಮಾಡಿ ತೊಡುವುದು. ಅದನ್ನು ತೊಟ್ಟರೆ ನನಗೆ ತುಂಬಾ comfortable ಅನ್ನಿಸುತ್ತಿತ್ತು. ಇಷ್ಟು ವರ್ಷಗಳಲ್ಲಿ ನಾನು ಯಾವುದೇ ಬಟ್ಟೆಯನ್ನು ಇಷ್ಟು ಮೆಚ್ಚಿಕೊಂಡಿರಲಿಲ್ಲ.
ಇಂದು ತೊಳೆದು ನೀಟಾಗಿ ಇಸ್ತ್ರಿ ಮಾಡಿ ಅವನನ್ನು ಮನೆ ಸೇರಿಸುತ್ತಿದ್ದೇನೆ. ನಿಂಗೆ ಇನ್ನು ಸಂಪೂರ್ಣ ರೆಸ್ಟ್ ಅಂತ ಪ್ರಾಮಿಸ್ ಮಾಡಿದ್ದೇನೆ. "promises are meant to be broken" ಅಂಥಾರೆ. ಇಸ್ತ್ರಿ ಮಾಡುವಾಗ ಹಾಗೆ ಅವನ ಮೇಲೆ ಕೈಯಾಡಿಸಿದೆ. ಏನೋ ಕಳೆದುಕೊಳ್ಳುತ್ತಿರುವ ಭಾವ ಮೊಡುತ್ತಿದೆ. ಪ್ಯಾಂಟನ್ನು ಮಡುಚಿ ಒಳಗೆ ಇಡುತ್ತಿದ್ದದ್ದನ್ನು ನೋಡಿ ನನ್ನ ಕಸಿನ್ "rest in peace" ಅ ಅಂದ. ಪಿಚ್ಚೆನಿಸಿತು ನನಗೆ. ಹೌದು ಅವನಿಗೆ ರೆಸ್ಟ್, ಆದರೆ ನೀನು ಹೇಳೊ ರೀತಿ ಅಲ್ಲ ಅಂದೆ. ಮಳೆ ಛಳಿಗಳಲ್ಲಿ ಬೆಚ್ಚಗೆ ಇಟ್ಟ, ಕಲ್ಲು ಮುಳ್ಳುಗಳಿಂದ ಕಾಪಾಡಿದ, ಕಳೆದ ಐದು ವರ್ಷಗಳಿಂದ ನನ್ನನ್ನು ಸುಂದರಗೊಳಿಸಿದ ಈ ನನ್ನ ಗೆಳೆಯನಿಗೆ ವಿದಾಯ ಹೇಳಲು ನೋವಾಗುತ್ತಿದೆ. I really miss you......
(ಫೋಟೋ : ನನ್ನ ಪ್ರೀತಿಯ ಜೀನ್ಸ್ ನೊಂದಿಗೆ ನಾನು)

Friday, August 15, 2008

ಬಾಲದಂಡೆ ಹಕ್ಕಿ (Asian Paradise Flycatcher)


ಸಂಸ್ಕೃತದಲ್ಲಿ ಅರ್ಜುನಕ ಎಂದೂ, ಕೊಡವ ಭಾಷೆಯಲ್ಲಿ ರಾಜನೂಕರೆ ಎಂದೂ ಕರೆಯಲ್ಪಡುವ ಈ ಹಕ್ಕಿ ಭಾರತದಲ್ಲಿ ಕಂಡುಬರುವ ಅತೀ ಸುಂದರ ಪಕ್ಷಿಗಳಲ್ಲಿ ಒಂದು. ಈ ಹಕ್ಕಿಯು ೨೦ ಸೆಂಟಿಮೀಟರ್ ದೇಹವನ್ನೂ ಹಾಗು ೫೦ ಸೆಂಟಿಮೀಟರ್ ಉದ್ದದ ಬಾಲವನ್ನು ಹೊಂದಿರುತ್ತದೆ. ಬಾಲದಲ್ಲಿ ಎರಡು ಗರಿಗಳಿರುತ್ತವೆ. ಹೆಣ್ಣು ಹಕ್ಕಿಗಳಿಗೆ ಬಾಲದ ಗರಿಗಳಿರುವುದಿಲ್ಲ. ಈ ಹಕ್ಕಿಯು ಉದುರೆಲೆ, ಬಿದಿರುಕಾಡುಗಳು, ತೋಟ, ಜನವಸತಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಅತ್ಯಂತ ಚಟುವಟಿಕಯಲ್ಲಿ ತೊಡಗಿರುತ್ತವೆ. ಕೀಟಗಳು ಇವುಗಳ ಮುಖ್ಯ ಆಹಾರ. ಇವು ಮರ, ಪೊದೆ, ಬಿದಿರು ಮೆಳೆಗಳ ನಡುವೆ ಗೂಡನ್ನು ನಿರ್ಮಿಸುತ್ತವೆ. ಹುಲ್ಲು, ನಾರುಗಳಿಂದ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತವೆ. ಗೂಡಿನ ಹೊರಮೈಗೆ ಜೇಡರ ಬಲೆಯನ್ನು ಸುತ್ತುತ್ತವೆ. ಈ ಹಕ್ಕಿಯ ಸಂತಾನೋತ್ಪತ್ತಿ ಕಾಲ ಫೆಬ್ರವರಿಯಿಂದ ಜುಲೈವರೆಗೆ. ಕೆಂಪು ಮಿಶ್ರಿತ ಕಂದು ಚುಕ್ಕೆಗಳಿರುವ ಮೊರರಿಂದ ಐದು ತಿಳಿ ಗುಲಾಬಿ ಮೊಟ್ಟೆಗಳನ್ನು ಇಡುತ್ತದೆ. ಗಂಡು ಪಕ್ಷಿಯು ಹಾರುವಾಗ ಬಿಳಿ ಗರಿಗಳು ಗಾಳಿಪಟದ ಬಾಲಂಗೋಚಿಗಳಂತೆ ಆಕರ್ಷಕವಾಗಿ ಕಾಣುತ್ತದೆ. ಈ ಪಕ್ಷಿಯು ಮಧ್ಯಪ್ರದೇಶದ ರಾಜ್ಯಪಕ್ಷಿ.
(ಚಿತ್ರವನ್ನು ದೊಡ್ದದಾಗಿ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ)