Saturday, May 24, 2008

ರಶ್ಮಿ

ಸೋತಿಹೆನು ಕತ್ತಲಿನಾ ಪರೀಕ್ಷೆಯಲಿ
ನಯನಗಳು ನಿನ್ನದೇ ನಿರೀಕ್ಷೆಯಲಿ

ಸಾಕಾಗಿದೆ ಈ ಇರುಳು
ಕಹಿಯಾಗಿದೆ ಈ ನೋವು

ಕಾದಿಹವು ಅರಳಲು ಸುಮವನಗಳು
ಪರಿತಪಿಸುತಿವೆ ಸಹ್ಯಾದ್ರಿಯ ಗಿರಿಪಂಕ್ತಿಗಳು

ಇನ್ನಾದರೂ ಬರಬಾರದೇ
ಭುವಿಯನ್ನೂ, ನನ್ನ ಮನವನ್ನು ಬೆಳಗಬಾರದೇ?

Thursday, May 22, 2008

ಹುಚ್ಚನೊಬ್ಬನ ಅಸಂಭದ್ದ ಪ್ರಲಾಪ





ಇಡೀ ಕೇರಿಗೆ, ಊರಿಗೆ, ಬೀದಿ ನಾಯಿಗಳಿಗೆ ಆಗಲೆ ಅರ್ಧ ರಾತ್ರಿ ಮುಗಿದುಹೋಗಿದೆ. ನಿದ್ದೆಯು ನನ್ನಲ್ಲಿ ಸಮರ ಹೂಡಿದೆ. ಪೂರ್ಣಚಂದ್ರನು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಅರ್ಧ ಪಾಳಿಯನ್ನು ಮುಗಿಸಿದ್ದಾನೆ. ನನಗೆ ನಿದ್ದೆಯಿಲ್ಲ. ಹಾಗಂತ ಹೇಳಿಕೊಳ್ಳುವಂಥ ಯೋಚನೆಗಳೂ ಏನಿಲ್ಲ. ಹುಚ್ಚನಿಗೆಲ್ಲಿಯ ಯೋಚನೆ? ಖಾಲಿ ಹಾಳೆಯಂತಾಗಿದೆ ಮನಸ್ಸು. ನನಗೇ ಗೊತ್ತಿಲ್ಲದಂತೆ ಹೊಸ ಸ್ಥಿತಿಯೊಂದನ್ನು ತಲುಪಿದ್ದೇನೆ. ಕಷ್ಟಸಾಧ್ಯವಾಗಿ ದೊರಕುವಂತ ಈ ಸ್ಥಿತಿ ನನಗೆ ಬೇಡದೇ ದೊರೆತಿದೆ. ಬಯಸದೇ ಬಂದ ಭಾಗ್ಯ. ಭಾಗ್ಯವೋ ಏನು ಸುಡುಗಾಡೋ ಯಾರಿಗೆ ಗೊತ್ತು. ಒಟ್ಟಿನಲ್ಲಿ ಈ ಅಪರಾತ್ರಿ ಸಮಯದಲ್ಲಿ ಏನೋ ಒಂದು ಆಗಿದೆ ಎನ್ನಬಹುದಷ್ಟೆ.

ಹಾಸಿಗೆಯಿಂದ ಎದ್ದು ಕಿಟಕಿಯ ಬಳಿಸಾರಿದೆ. ಪೂರ್ಣಚಂದಿರನ ಹಾಲು ಬೆಳಕನ್ನು ತನ್ನ ಮೇಲೆ ಸುರಿದುಕೊಂಡಿದ್ದ ಕಾಡು ಕಂಡಿತು. ಮೌನವನ್ನು ಅಪ್ಪಿ ಹಿಡಿದಿತ್ತು ಕಾಡು. ನಿಗೂಢ ಎಂಬ ಪದವನ್ನು ಕೇಳಿದಾಗಲೆಲ್ಲ ನೆನಪಾಗುತ್ತಿತ್ತು ಈ ಕಾಡು. ಲಕ್ಷಾಂತರ ಕೀಟಗಳು ಈ ನಿಗೂಢ ಪ್ರಪಂಚದ ಪ್ರತಿನಿಧಿಗಳಂತೆ ಆಗೊಮ್ಮೆ ಈಗೊಮ್ಮೆ ಟರ ಟರ ಗುಟ್ಟಿ ಮೌನಕ್ಕೊಮ್ಮೆ ಎಚ್ಚರಿಕೆ ನೀಡುತ್ತಿದ್ದವು. ಕಿಟಕಿಯ ಸರಳನ್ನು ಹಿಡಿದು ನಿಗೂಢತೆಯನ್ನು ಅವಲೋಕಿಸುತ್ತಿದ್ದ ಹುಚ್ಚನಿಗೆ ಅರ್ಥಾತ್ ನನಗೆ ಬೇಸರ ಮೂಡತೊಡಗಿದೆ. ಆದರೇನು ಮಾಡುವುದು, ನಿದ್ದೆಗೆ ನನ್ನ ಮೇಲೆ ಬೇಸರ ಬಂದಿದೆ.

ಬಾಗಿಲು ತೆರೆದು ಅಟ್ಟವನ್ನೇರಿದೆ. ಸಾವಿರಾರು ಬೆಳ್ಳಿ ಚುಕ್ಕೆಗಳನ್ನು ತನ್ನೊಡಲಲ್ಲಿ ತುಂಬಿಕೊಂಡಿತ್ತು ಆಕಾಶ. ಅದೆಷ್ಟೋ ಹೊತ್ತು ಹಾಗೇ ಆಕಾಶವನ್ನು ನೋಡುತ್ತ ಕುಳಿತಿದ್ದೆ, ನಿಮಿತ್ತವಿಲ್ಲದೆ. ಎಂದಾದರೂ ಮಾಯಾನೌಕೆಯೊಂದು ಬಂದು ನನ್ನನ್ನು ಹೊತ್ತೊಯ್ಯಬಹುದೆಂಬ ನಿರೀಕ್ಷೆಯಲಿ. ನಿರೀಕ್ಷೆ ಸರಿಯಾದ ಪದವಲ್ಲ. "ಆಸೆ" ಎಂದು ಬದಲಾಯಿಸಿದರೆ ಸರಿಯಾದೀತು. ಮನೆ ಮುಂದಿನ ಕಲ್ಪವೃಕ್ಷವೊಂದು ಆಗಾಗ ಗರಿಗಳನ್ನು ಆಡಿಸುತ್ತಿದೆ. ತಾನಿನ್ನೂ ಸಜೀವವಾಗಿದ್ದೇನೆ ಎಂದು ತೋರಿಕೊಳ್ಳಲೋ ಏನೋ? ಅಥವಾ ಗಾಳಿಯು ತನ್ನ ಇರುವನ್ನು ವ್ಯಕ್ತಪಡಿಸುತ್ತಲೂ ಇರಬಹುದು. ಊಹೂಂ....... ಇನ್ನೂ ನಿದ್ದೆಯ ಸುಳಿವಿಲ್ಲ. ನಿಗೂಢದ ಆಚೆಗಿರುವ ಬೆಟ್ಟವನ್ನು ಆರೋಹಿಸುವ ಆಲೋಚನೆಯೊಂದು ಮನದಲ್ಲಿ ಮಿಂಚಿ ಮಾಯವಾಗುತ್ತದೆ. ಇಂಥ ಹುಚ್ಚು ಆಲೋಚನೆಗಳು ನನ್ನಲ್ಲಿ ಬರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹುಚ್ಚು ಆಲೋಚನೆಗಳು ಹುಚ್ಚರಿಗಲ್ಲದೆ ಬೇರೆ ಯಾರಿಗೆ ಬರಲು ಸಾಧ್ಯ ಅಲ್ಲವೇ? ಆಲೋಚನೆಯೊಂದು ಸುಳಿದಿದ್ದೇ ನಿಜವಾದ ಮೇಲೆ ಅದನ್ನು ಕಾರ್ಯಗತಗೊಳಿಸದೇ ಹೋದರೆ ಹುಚ್ಚುತನಕ್ಕೂ ಮರ್ಯಾದೆ ಇರುವುದಿಲ್ಲ.

ಮುಂದಿನ ಕೆಲವೇ ಕ್ಷಣಗಳಲ್ಲಿ ಕಾಡಿನ ಹಾದಿಯಲ್ಲಿ ನನ್ನ ಪಯಣ ಶುರುವಾಗುತ್ತದೆ. ದಾರಿತೋರಲು ಪೂರ್ಣಚಂದ್ರನಿದ್ದಾನೆ. ಅವನಿಲ್ಲದಿದ್ದರೂ ನಡೆದೀತು. ಚಿಕ್ಕಂದಿನಿಂದ ಅದೆಷ್ಟು ಬಾರಿ ಈ ಹಾದಿಯನ್ನು ಸವೆಸಿದ್ದೇನೋ? ಆದರೂ ಈ ಕಾಡು ನನಗೆ ನಿಗೂಢವೇ. ಎಲ್ಲಿಯೂ ಎಡವಲಿಲ್ಲ. ಗುಡ್ದದ ಬುಡ ಬಂದೇ ಬಂದಿತು. ಗುಡ್ಡದ ಹುಲ್ಲು ಹಾಸಿನ ಮೇಲೆ ಹೊರಳುವ ಮನಸಾಯಿತು. ಆಸೆ ಹೆಮ್ಮರವಾಗಿ ಇನ್ನು ಸಾಧ್ಯವೇ ಇಲ್ಲವೆಂದೆನಿಸಿ ಹೊರಳಿದೆ. ಇಲ್ಲಿ ಯಾರೂ ಇಲ್ಲ ನನ್ನನ್ನು ನೋಡಿ ನಗಲು. ಇದ್ದರೂ ನನ್ನ ಹುಚ್ಚಾಟದಲ್ಲಿ ಪಾಲ್ಗೊಳ್ಳುವ ಸಾಹಸ ಯಾರೂ ಮಾಡಲಾರರು. ಗುಡ್ಡದ ನೆತ್ತಿಯನ್ನು ನೋಡುವೆ, ಇನ್ನು ತುದಿಯನ್ನು ತಲುಪುವ ಕಾಯಕವೊಂದೆ ಬಾಕಿ ಉಳಿದಿರುವುದು. ಉತ್ಸಾಹಕ್ಕೇನು ಕೊರತೆಯಿಲ್ಲ. ನಿದ್ದೆಗೂ ನನಗೂ ವಿರಸ. ಸರಿ, ಯಾರ ಹಂಗೂ ಇಲ್ಲದ ಮೇಲೆ ತುದಿ ತಲುಪೇ ತೀರುವೆ. ಅಗೋ................ನೆತ್ತಿ ಬಂದೇ ಬಿಟ್ಟಿತು. ಎದುರುಸಿರೂ ಇಲ್ಲ. ಆಶ್ಚರ್ಯವಲ್ಲದೆ ಮತ್ತೇನು, ಇಷ್ಟೆತ್ತರದ ಗುಡ್ಡದ ತುದಿಯನ್ನು ಎದುರುಸಿರು ಇಲ್ಲದೆ ಹತ್ತುವುದು ತಮಾಷೆಯ ವಿಷಯವೇ? ಪ್ರಶಸ್ತಿಯನ್ನೇನು ಯಾರೂ ಪ್ರಕಟಿಸಿಲ್ಲ. ಗಾಳಿಯು ಬೀಸುತ್ತಲೇ ಇದೆ, ಗತ್ಯಂತರವಿಲ್ಲದೆ. ದೂರದಲ್ಲೊಂದು ಊರು, ತಾಳಗುಪ್ಪವೊ ಏನೊ ಅದರ ಹೆಸರು. ಬಿಡಿ ಯಾವ ಊರಾದರೇನಂತೆ. ಇನ್ಯಾವುದೋ ದೊಡ್ದ ಪಟ್ಟಣವನ್ನು ಬೆಳಗಲು ಇಲ್ಲೊಂದು ಗ್ರಿಡ್ ನಿರ್ಮಾಣವಾಗಿದೆ. ಆ ಗ್ರಿಡ್ ನ ಕೇಸರಿ ದೀಪಗಳು ಆ ಕಡೆಯ ಆಗಸವನ್ನು ಕೆಂಪಾಗಿಸಿವೆ. ಕಿನ್ನರ ಲೋಕವೊಂದರ ನಕಲಿನಂತೆ ಗೋಚರಿಸುತ್ತಿದೆ. ಹಾಗೆ ನೋಡುತ್ತ ಕೂರುತ್ತೇನೆ ಕಿನ್ನರ ಲೋಕದೆಡೆಗೆ ಬೆಳಗಿನ ನಿರೀಕ್ಷೆಯಲಿ. ಇನ್ನೂ ನಿದ್ದೆಯ ವಿಳಾಸವಿಲ್ಲ. ನೋಡುತ್ತ ಕುಳಿತಿರುತ್ತೇನೆ ಅನಂತಾಕಾಶವನ್ನು, ನಿದ್ದೆಯು ನನ್ನನ್ನು ಅಪ್ಪುವವರೆಗೂ. ಹೀಗೆ ಅವಸಾನಗೊಳ್ಳುತ್ತಿದೆ ಹುಚ್ಚನೊಬ್ಬನ ಪೌರ್ಣಿಮೆಯ ರಾತ್ರಿ.

Friday, May 16, 2008

ಯುಗ

ಮಳೆ ಮರಣಿಸಿ ದಿನಗಳೇ ಸಂದವು
ಛಳಿ ಮೈನೆರೆದು ಇಂದಿಗೆ ಹನ್ನೆರಡು ದಿನಗಳು
ಅವಳನ್ನು ನೋಡಿ ವರ್ಷಗಳೇ ಉರುಳಿದವು
ಅವಳ ನೆನಪಲ್ಲಿ ಕಳೆದ ದಿನಗಳೆಲ್ಲಾ ಯುಗಗಳು

Wednesday, May 7, 2008

ಯಾರು ಹಿತವರು ನಿನಗೆ ಈ ಮೊವರೊಳಗೆ











ಮೇಲೆ ಎರಡು ಜಾಹೀರಾತುಗಳ ಚಿತ್ರಗಳಿವೆ. ಮೊನ್ನೆ (ಸೋಮವಾರ ೫, ೨೦೦೮) ಡೆಕ್ಕನ್ನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಕ್ರಮವಾಗಿ ೨ ಹಾಗು ೫ ನೇ ಪುಟದಲ್ಲಿ ಪ್ರಕಟವಾದ ಚುನಾವಣಾ ಪ್ರಚಾರದ ಜಾಹೀರಾತುಗಳು. ನಮ್ಮ ರಾಜಕೀಯ ಪಕ್ಷಗಳು ಎಷ್ಟು ಕೆಳಮಟ್ಟಕ್ಕೆ ಇಳಿದಿವೆ ಎಂಬುದನ್ನು ಸೂಚಿಸುತ್ತಿವೆ ಇವು.

ಕಾಂಗ್ರೆಸ್ ಪಕ್ಷದ ಜಾಹೀರಾತಿಗೆ ಮೊದಲು ಬರೋಣ. ಇಡೀ ಭಾರತ ದೇಶವೇ ತಲೆತಗ್ಗಿಸುವಂತ ಘಟನೆ ಕಂದಾಹಾರಿನ ಪ್ರಕರಣ. ಬಿಜೆಪಿ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಎಂಬುದು ಕಾಂಗ್ರೆಸ್ಸಿಗರ ಆರೋಪ. ಹೌದು ಈ ಪ್ರಕರಣದಲ್ಲಿ ರಕ್ಷಣಾ ಲೋಪ ಇದ್ದದ್ದು ನಿಜ. ಆದರೆ ಒಂದು ದೇಶ ತಲೆತಗ್ಗಿಸುವಂತೆ ಮಾಡಿದ ವಿಷಯವನ್ನು ಜಾಹೀರಾತಿನಲ್ಲಿ ಹಾಕಿಕೊಳ್ಳುವ ತೆವಲು ಇವರಿಗೆ ಏನಿತ್ತೋ ಕಾಣೆ. ಇದನ್ನು ನೋಡಿದರೆ ಇವರಿಗೂ ಈ ದೇಶಕ್ಕೊ ಏನೂ ಸಂಭಂದವೇ ಇಲ್ಲ ಎಂದಾಯ್ತು. ದೇಶದ ಜನರು ನೆನಪಿಸಿಕೊಳ್ಳಬಾರದ ವಿಷಯವನ್ನು ಜಾಹೀರಾತಿಗೆ ಬಳಸಿಕೊಂಡ ಕಾಂಗ್ರೆಸಿನ ನೈತಿಕತೆಗೆ ಹಿಡಿದ ಕನ್ನಡಿ ಈ ಜಾಹೀರಾತು. ಒಂದೊಮ್ಮೆ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದಿದ್ದರೆ ಪ್ರಯಾಣಿಕರು ಸತ್ತರೆ ಸಾಯಲಿ ಎಂದು ಮಸೂದ್ ಅಜರ್ ನನ್ನು ಬಿಡುಗಡೆಗೊಳಿಸದೆ ಇರುತ್ತಿದ್ದರೆ? ತಪ್ಪು ಆಗಿದ್ದರ ಬಗ್ಗೆ ಇವರಿಗೆ ಯಾವ ಯೋಚನೆಯೂ ಇಲ್ಲ. ಬದಲಾಗಿ ಅದನ್ನು ತಮ್ಮ ಉಪಯೋಗಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬ ಕೀಳು ಯೋಚನೆ ಇವರದ್ದು.

ಅಕ್ಷಾಯ್ ಚಿನ್ ಹೆದ್ದಾರಿ ಪತ್ತೆಯಾದಾಗ ' ಹುಲ್ಲುಕಡ್ಡಿಯು ಬೆಳೆಯದ ಜಾಗವದು ' ಎಂದಿದ್ದ ನೆಹರೂ ತಮ್ಮ ಮೊರ್ಖತನದಿಂದ ಇಡೀ ದೇಶದ ಮರ್ಯಾದೆಯನ್ನು ಹರಾಜು ಹಾಕಿದ್ದರು. 'ಭಾರತ-ಚೀನಾ ಭಾಯಿ ಭಾಯಿ' ಎಂದು ಜಪಿಸುತ್ತಾ ೧೯೬೨ರಲ್ಲಿ ದೇಶವನ್ನು ಚೀನಾದ ಪಾದಕ್ಕೆ ಬಿಟ್ಟುಕೊಟ್ಟ ನೆಹರೂ ಕಾಂಗ್ರೆಸ್ಸಿಗರೆ ಅಲ್ಲವೆ? ತನ್ನ ಮಗಳು ಇಂದಿರಾ ಗಾಂಧಿಯನ್ನು ಗದ್ದುಗೆಗೆ ಏರಿಸಲೋಸ್ಕರ ಶಾಸ್ತ್ರಿಯವರನ್ನು ಕಾಡಿದ ನೆಹರೂಗೆ ಎಷ್ಟು ನೈತಿಕತೆ ಇತ್ತು ? ಹೀಗೆ ಬರೆಯುತ್ತ ಹೋದರೆ ಪುಟಗಳಷ್ಟು ಬರೆಯಬಹುದು. ಇನ್ನೊಬ್ಬರ ಬಗ್ಗೆ ಬೆರಳು ತೋರುವ ಮೊದಲು ತಮ್ಮ ಕಚ್ಚೆ ಗಟ್ಟಿ ಇದೆಯೆ ಎಂದು ನೋಡಿಕೊಳ್ಳುವುದು ಒಳಿತು. ಹಣದುಬ್ಬರವನ್ನು ಕಟ್ಟಿಹಾಕಲು ಹೆಣಗುತ್ತಿರುವ ಇವರಿಗೆ ಇನ್ನೊಬ್ಬರ ಐಬು ಹುಡುಕೋ ಚಪಲ.

ನಾನು ಬಲಪಂಥೀಯನೂ ಅಲ್ಲ, ಕಾಂಗ್ರೆಸ್ ವಿರೋಧಿಯೂ ಅಲ್ಲ. ಆದರೆ ಈ ಜಾಹೀರಾತುಗಳನ್ನು ನೋಡಿ ಇವರ ಮಟ್ಟ ಇಷ್ಟು ಇಳಿದುಹೋಗಿದೆಯಲ್ಲ ಎಂದೆನಿಸಿತು. ಚುನಾವಣೆಯಲ್ಲಿ ಜನರನ್ನು ಆಕರ್ಷಿಸಲೇ ಬೇಕಂದರೆ ತಮ್ಮ ಸಾಧನೆಗಳನ್ನ ತೋರಿಕೊಳ್ಳಲಿ, ಮಾಡಿದ ಅಭಿವೃದ್ಧಿಗಳನ್ನು ಬಣ್ಣಿಸಿಕೊಳ್ಳಲಿ. ಅದನ್ನು ಬಿಟ್ಟು ಇನ್ನೊಂದು ಪಕ್ಷದ ಮೇಲೆ ಗೂಬೆ ಕೂರಿಸುವುದರಿಂದ ಯಾವ ಪ್ರಯೋಜನವೂ ಆಗಲಾರದು. ಅಷ್ಟಕ್ಕೂ ಇವರಿಗೆ ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲು ಸಾಧನೆ ಮಾಡಿದ್ದರೆ ತಾನೆ?

ಇನ್ನು ಬಿಜೆಪಿಯ ಜಾಹೀರಾತು. ಯಾವುದೊ ಬಡ್ಡಿದರದ ಬಗ್ಗೆ ಇವರ ಚೌಕಾಸಿ. ಇವರ ಜಾಹೀರಾತು ನೋಡಿದರೆ ಎಲ್ಲರೂ ಜೀವನ ನಡೆಸಲು ಸಾಲವನ್ನೆ ನಂಬಿಕೊಂಡಿದ್ದಾರೆನೋ ಎಂಬ ಅನುಮಾನ ಮೊಡುತ್ತದೆ. ಕಾಂಗ್ರೆಸ್ ಪಕ್ಷ ಬ್ರಷ್ಟಗೊಳ್ಳಲು ೫೦ ವರ್ಷ ಬೇಕಾದರೆ ಇವರಿಗೆ ೫ ವರ್ಷಗಳು ಸಾಕಾದವು. ಹಗರಣಗಳ ಪಟ್ಟಿ ಮಾಡಲು ಹೋದರೆ ಕೊನೆ ಮೊದಲೆನ್ನುವುದೇ ಇರುವುದಿಲ್ಲ. ಮತೀಯತೆಯ ಮೇಲೆ ಪಾಕಿಸ್ತಾನದ ಜನನಕ್ಕೆ ಕಾರಣನಾದ ಜಿನ್ನಾನನ್ನು ' ಸೆಕ್ಯೂಲರ್ ' ಎಂದು ಕರೆದ ಅಡ್ವಾಣಿ ಬಿಜೆಪಿಯವರೆ ಅಲ್ಲವೆ? ಅಧಿಕಾರಕ್ಕೊಸ್ಕರ ಪಕ್ಷದ ಧ್ಯೇಯ, ಸಿದ್ಧಾಂತಗಳನ್ನೇ ಬಲಿಕೊಟ್ಟ ಇವರೆಷ್ಟು ಸಂಭಾವಿತರು ?

ಇನ್ನು ಜೆಡಿಎಸ್ ಬಗ್ಗೆ ಮಾತಾಡುವುದಕ್ಕಿಂತ ಮಾತನಾಡದಿದ್ದರೇನೆ ಒಳಿತು. ೨೦ ತಿಂಗಳ ಅಧಿಕಾರ ಅನುಭವಿಸಿ ನಂತರ ಕೈ ಎತ್ತಿ , ನೈತಿಕತೆ ಎಂಬ ಪದದ ಅರ್ಥವೇ ಗೊತ್ತಿಲ್ಲವೆಂದು ಸಾಬೀತುಪಡಿಸಿದೆ ಈ ಪಕ್ಷ. ಮಂಗಣ್ಣನಂತೆ ಆ ಪಕ್ಷ ಆದಕೂಡಲೆ ಈ ಪಕ್ಷ, ಇದಾದ ಕೂಡಲೆ ಇನ್ನೊಂದು ಎಂದು ಮೈತ್ರಿಗೋಸ್ಕರ ಹಾರುವ ಕೆಟ್ಟ ಹವ್ಯಾಸ ಇವರಿಗೆ. ಒಟ್ಟಿನಲ್ಲಿ ಸದಾಕಾಲ ಅಧಿಕಾರದ ಚುಕ್ಕಾಣಿ ಇವರ ಕೈಯ್ಯಲ್ಲಿದ್ದರೆ ಇವರಿಗೆ ಸಮಾಧಾನ. ಮೊದಮೊದಲು ಭರವಸೆ ಮೊಡಿಸಿದ್ದ ಕುಮಾರಣ್ಣ ಕೊನೆಗೆ ಹತ್ತರೊಟ್ಟಿಗೆ ಹನ್ನೊಂದಾದರು.

ದಿನ ಬೆಳಗಾದರೆ ಪತ್ರಿಕೆ, ಟಿವಿ, ರೇಡಿಯೊಗಳಲ್ಲಿ ಮತ ಚಲಾವಣೆ ನಿಮ್ಮ ಹಕ್ಕು ಎಂದು ಕೂಗಿಕೂಗಿ ಹೇಳುತ್ತಾರೆ. ಪುಢಾರಿಗಳಿಂದ ಮೊದಲ್ಗೊಂಡು ಸಿನೆಮಾ ನಟರವರೆಗೆ ಎಲ್ಲರೂ ಹೇಳುವವರೆ, ರಾಜ್ಯದ ಭವಿಷ್ಯ ನಿಮ್ಮ ಕೈಯಲ್ಲಿದೆಯೆಂದು. ಇರುವ ಎಲ್ಲರೂ ಫಟಿಂಗರಾದರೆ ಯಾರನ್ನು ಚುನಾಯಿಸುವುದು? ಯಾರು ಹಿತವರು ಈ ಮೊವರೊಳಗೆ ? ಹಸ್ತವೊ, ಕಮಲವೊ, ಹೊರೆ ಹೊತ್ತ ಮಹಿಳೆಯೊ ? (ಉಳಿದ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ನನ್ನ ಅನುಮಾನ).

(ಕೃಪೆ: ಪ್ರತಾಪ್ ಸಿಂಹರ ಬೆತ್ತಲೆ ಜಗತ್ತು)

Friday, May 2, 2008

ಮತ್ತದೇ ಮಳೆ ಮತ್ತವಳದೇ ನೆನಪು

ಹೌದು, ಅಂದೂ ಕೂಡ ಹೀಗೆ ಮಳೆ ಇತ್ತು. ಎಲ್ಲಾ ನೆನಪಿದೆ. ಅಂದೂ ಮೇ ತಿಂಗಳು. ಇದೇ ರೀತಿ ಸಂಜೆಗೆ ಮೊದಲೇ ಕತ್ತಲಾಗಿ, ಮೋಡಗಳು ಆಕಾಶವನ್ನೆಲ್ಲಾ ಆಚ್ಛಾದಿಸಿ ಮಳೆ ಯಾವಾಗಲಾದರೂ ಬರಬಹುದು ಎನ್ನುವ ಸಮಯದಲ್ಲೇ ಅವಳ ಕರೆ ಬಂದಿದ್ದು.

"ಕಾಲೇಜ್ ಬಳಿ ಇರೋ ಮೈದಾನಕ್ಕೆ ಬಾ. ಸ್ವಲ್ಪ ಮಾತಾಡೋದಿದೆ."

ನಾನು ಫೋನ್ ಹಿಡಿದುಕೊಂಡೇ ಕಿಟಕಿಯಿಂದ ಹೊರಗಿಣುಕಿ "ಮಳೆ ಬರೊ ಹಾಗಿದೆಯಲ್ಲೇ, ಸಂಜೆ ಸಿಕ್ಕಿದ್ರೆ ಆಗಲ್ವ" ಎಂದೆ.

"ಇಲ್ಲ, ಸ್ವಲ್ಪ ಅರ್ಜೇ೦ಟು, ಈಗಲೇ ಬಾ" ಎಂದಳು.

ಅವಳ ಮಾತುಗಳು ಎಂದಿನ ಹಾಗಿರಲಿಲ್ಲ. ಯಾವಾಗಲೂ ಮಾತಿನ ಕೊನೆಗೆ ಸೇರಿಸುತ್ತಿದ್ದ "ಕಣೊ" "ಬಾರೋ" "ಹೇಳೊ" ಗಳು ಇಂದು ಮಾಯವಾಗಿದ್ದನ್ನು ನಾನು ಗಮನಿಸದೆ ಇರಲಿಲ್ಲ. ಆದರೂ ಅವಳು ಕೆಲವೊಮ್ಮೆ ಚಿಕ್ಕ ವಿಷಯವನ್ನೂ ಗಂಭೀರವಾಗಿಸಿಕೊಂಡು ಹೀಗೆ ಮಾತಾಡುವುದು ಇದ್ದೇ ಇದೆ.

ನಾನು ಅಂಗಳಕ್ಕೆ ಹೋಗಿ ಇನ್ನೊಮ್ಮೆ ಆಗಸದತ್ತ ದೃಷ್ಟಿಸಿದೆ. ಇಂದು ಮತ್ತೆ ಮಳೆ ಬರುವುದು ಗ್ಯಾರೆಂಟಿ ಎಂದೆಣಿಸಿ ಉಲ್ಲಸಿತನಾದೆ. ಈಗ ಮೊರ್ನಾಲ್ಕು ದಿನಗಳಿಂದ ಸಂಜೆ ಮಳೆ ಬೀಳುತ್ತಿತ್ತು. ಅದೂ "ಹಳೆಮಳೆ" ಅಂದ್ರೆ ನನಗೆ ಇನ್ನೂ ಸಂತೋಷ. "ಭಾನುವಾರನೂ ಬಿಡೋದಿಲ್ಲ ಈ ಮಳೆ" ಅಂತ ಅಮ್ಮ ಬರಲಿರುವ ವರುಣನನ್ನು ಶಪಿಸಿದಳು. ಶಾರದಾಂಬ ದೇವಸ್ಥಾನದ ಭಜನೆ ಎಲ್ಲಿ ತಪ್ಪಿ ಹೋಗುವುದೋ ಎಂದು ಅಮ್ಮನಿಗೆ ಆತಂಕವಾಗಿತ್ತು. ಸರಸರನೆ ಪ್ಯಾಂಟ್ ಏರಿಸುತ್ತಿದ್ದ ನನ್ನನ್ನು ನೋಡಿದ ಅಮ್ಮ "ಈಗ ಎಲ್ಲಿಗೋ? ಆಕಾಶ ನೋಡು ಸಗಣಿ ಬಳಿದಂತೆ ಕಪ್ಪಾಗಿದೆ, ಮಳೆ ಬರುತ್ತೆ. ಎಲ್ಲಿಗೂ ಹೋಗಬೇಡ" ಅಂದರು. ಅಮ್ಮನಿಗೆ ಮಳೆಯ ಮೇಲಿನ ಹುಸಿ ಕೋಪ ಅವಳ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. "ಫ್ರೆಂಡ್ ಮನೆಗೆ, ಸ್ವಲ್ಪ ಹೊತ್ತಿನಲ್ಲೇ ಬಂದು ಬಿಡುತ್ತೇನೆ " ಎಂದು ಹೇಳಿ ಅಮ್ಮನ ಪ್ರತಿಕ್ರಿಯೆಗೂ ಕಾಯದೆ ಮನೆಯಿಂದ ಹೊರಬಿದ್ದೆ.

ಗಾಳಿ ಜೋರಾಗಿ ಬೀಸುತ್ತಲಿತ್ತು. ಗಾಳಿಯ ವೇಗಕ್ಕೆ ರಸ್ತೆಯ ಕಸ, ಧೂಳೆಲ್ಲ ಮಿಶ್ರಗೊಂಡು ಆಕಾಶದಲ್ಲಿ ಹಾರಾಡುತ್ತಿದ್ದವು. ಜನರೆಲ್ಲ ಮನೆ ಸೇರಿಕೊಳ್ಳುವ ತವಕದಲ್ಲಿದ್ದರು. "ಛೆ, ಇವತ್ತು ತಲೆ ಸ್ನಾನ ಮಾಡಿದ್ದೆ ದಂಡ" ಎಂದು ನನ್ನಷ್ಟಕ್ಕೆ ಅಂದುಕೊಂಡೆ. ಮಳೆ ಬರೋದ್ರೊಳಗೆ ಕಾಲೇಜ್ ತಲುಪಬೇಕೆಂದು ವೇಗವಾಗಿ ಹೆಜ್ಜೆ ಹಾಕತೊಡಗಿದೆ. ಹೆಚ್ಚೂ ಕಡಿಮೆ ಓಡಿದಂತೆ ನಡೆದು ಮೈದಾನಕ್ಕೆ ಹತ್ತಿರಗೊಂಡೆ. ಮೈದಾನದ ಇನ್ನೊಂದು ತುದಿಯಲ್ಲಿ ಭೂತಾಕಾರವಾಗಿ ಬೆಳೆದಿದ್ದ ಸಂಪಿಗೆ ಮರದ ಬುಡದಲ್ಲಿ ಅವಳು ನಿಂತಿದ್ದಳು. ಸಂಪಿಗೆ ಮರ ಗಾಳಿಗೆ ತೂರಾಡುತ್ತ ಇನ್ನಷ್ಟು ಭಯಾನಕವಾಗಿ ತೋರುತ್ತಿತ್ತು. ಇವಳಿಗೆ ಅರ್ಥನೇ ಆಗಲ್ಲ, ಗಾಳಿ ಈ ರೀತಿ ಬೀಸುತ್ತಿದೆ, ಮರದ ಕೆಳಗೆ ನಿಂತಿದ್ದಾಳೆ ಎಂದು ಗದರಿಸಲು ಸಜ್ಜಾಗುತ್ತಾ ಅವಳತ್ತ ಧಾವಿಸಿದೆ. "ಏನೇ ಇಷ್ಟೊತ್ತಲ್ಲಿ ಬರ ಹೇಳಿದೆ, ಅದೂ ಅರ್ಜೆ೦ಟ್ ಅಂಥ" ಎಂದಿನಂತೆ ಮಾತಾಡಿದೆ. ಉತ್ತರ ಬರಲಿಲ್ಲ. ಅವಳು ನೆಲವನ್ನೆ ದಿಟ್ಟಿಸುತ್ತಿದ್ದಳು. ಏನೋ ಹೇಳೊಕೆ ಹೊರಟವನು ಸಂಪಿಗೆ ಮರದ ಹೊಯ್ದಾಟದಿಂದ ಭಯಗೊಂಡು "ನಡಿ ಇಲ್ಲಿ ನಿಲ್ಲುವುದು ಬೇಡ, ಕಾಲೇಜ್ ಬಳಿ ಹೋಗೋಣ" ಎಂದೆ. ನಾವು ಮರೆಯಿಂದ ಹೊರ ಬಂದಿದ್ದೇ ತಡ, ನೆಲ್ಲಿಕಾಯಿ ಗಾತ್ರದ ಮಳೆ ಹನಿಗಳು ಒಂದೊಂದಾಗೆ ಭೂಮಿಯ ಕಡೆಗೆ ಶರವೇಗದಲ್ಲಿ ಬೀಳತೊಡಗಿದವು. "ಓಡು ಓಡು, ಈ ಮಳೆಗೆ ತಲೆ ಕೊಟ್ರೆ ತಲೇನೆ ತೂತಾಗೋ ಚಾನ್ಸ್ ಇದೆ" ಎನ್ನುತ್ತ ಕಾಲೇಜ್ ಕಡೆಗೆ ಓಡತೊಡಗಿದೆ. ಅವಳು ದುಪಟ್ಟ ತಲೆಗೇರಿಸಿಕೊಂಡು ನನ್ನನ್ನು ಹಿಂಬಾಲಿಸತೊಡಗಿದಳು. ಹಂಚಿನ ಮಾಡಿಯ ಮೇಲೆ ಬೀಳುತ್ತಿದ್ದ ಮಳೆ ಹನಿಗಳ ಶಬ್ದ ಕಲ್ಲುಗಳು ಬಿದ್ದಂತೆ ಭಾಸವಾಗುತ್ತಿತ್ತು.

"ಏನೊ ಹೇಳ್ಬೇಕು ಅಂದ್ಯಲ್ಲ, ಈಗ ಹೇಳು, ಏನಂಥ ಸೀರಿಯಸ್ ವಿಷಯ ?"
"........................................."
"ಏನು ಹೇಳ್ತಿಯೊ ಇಲ್ವೊ? "
"........................................ ಏನೂ ಇಲ್ಲ."
"ಅರೆ ಇದೊಳ್ಳೆ ಕಥೆ ಆಯ್ತಲ್ಲ. ಏನೂ ಇಲ್ದೆ ಮತ್ತೇಕೆ ಕರೆದೆ. ಅಕ್ಷಯ್ ಕುಮಾರ್-ರವೀನಾ ತರ ಮಳೇಲಿ ಡ್ಯೂಯೆಟ್ ಹಾಡ್ಬೇಕು ಅನ್ನಿಸ್ತೇನೆ?" ಅಣಕವಾಡಿದೆ.

ಮಳೆ ಜೋರಾಯಿತು. ಮೈದಾನದಲ್ಲೆಲ್ಲ ತಿಳಿ ಬಿಳಿಯ ಪರದೆಯನ್ನು ಬಿಟ್ಟಂತೆ ಕಂಡುಬಂತು. ನನ್ನ ಮೆಚ್ಚಿನ ಮಳೆಯನ್ನು ನೋಡುತ್ತ ಕ್ಷಣಾರ್ಧದಲ್ಲೆ ಜಗವನ್ನು ಮರೆತು ಮಳೆಯ ಪ್ರಲಾಪದಲ್ಲಿ ಲೀನಗೊಂಡೆ. ಮಳೆ ಒಂದೇ ಸಮನೆ ಹೆಚ್ಚಾಗತೊಡಗಿತು. ಗಾಳಿ ಮೊದಲಿನಷ್ಟು ಇರಲಿಲ್ಲ. ನೋಡನೋಡುತ್ತಿದ್ದಂತೆ ಚರಂಡಿಗಳೆಲ್ಲ ಕೆಂಪು ಮಿಶ್ರಿತ ನೀರಿನಿಂದ ತುಂಬಿ ಹೋದವು. ಮಳೆಯ ರೌದ್ರತೆಗೆ ನನ್ನನ್ನು ನಾನೆ ಕಳೆದುಕೊಂಡೆ. ಐದಾರು ನಿಮಿಷಗಳೆ ಕಳೆದಿರಬೇಕು.

"ಇಲ್ಲಿ ಕೇಳು...................................." ನಾನು ಮಳೆಯ ಮೋಡಿಯಿಂದ ಹೊರಬಂದೆ.
"ಕರೆದ್ಯಾ?........... ಏನೋ ಹೇಳ್ಬೇಕು ಅಂದೆ....." ಅವಳನ್ನು ನೆನಪಿಸಿದೆ.
"......................................." ಅವಳ ಮೌನ ಮತ್ತೆ ಮಳೆಯೆಡೆಗೆ ಗಮನ ಹರಿಸಲು ಅವಕಾಶ ಮಾಡಿಕೊಟ್ಟಿತು.
"ನನ್ನನ್ನು ಮರೆತುಬಿಡು......"
"ಏನು!!!!!.........." ಭ್ರಮಾಲೋಕದಿಂದ ಎಚ್ಚೆತ್ತವನಂತೆ ಪ್ರಶ್ನಿಸಿದೆ.
"ನನ್ನ ಬಳಿ ಸಮಯವಿಲ್ಲ. ಮನೇಲಿ ಸುಳ್ಳು ಹೇಳಿ ಬಂದಿದೀನಿ, ನನ್ನನ್ನು ಮರೆತುಬಿಡು. ನಮ್ಮ ಸಂಭಂದ ಇಲ್ಲಿಗೆ ನಿಲ್ಲಿಸೋಣ" ಅಳತೊಡಗಿದಳು.
"ಏನ್ ತಮಾಷೆ ಮಾಡ್ತೀಯಾ? " ಆತಂಕಗೊಂಡಿದ್ದೆ.
"..........................." ಮತ್ತೆ ಮೌನ. ಕಣ್ಣೀರು ಅವಳ ಕಪಾಲಗಳನ್ನು ತೋಯಿಸಿದ್ದವು.
"......... ಇನ್ನೆರಡು ದಿನಗಳಲ್ಲಿ ನನ್ನ ನಿಶ್ಚಿತಾರ್ಥ. ನನ್ನ ಮನೆಯವರನ್ನು ಎರುರಿಸಲು ನನ್ನಿಂದಾಗಲಿಲ್ಲ. ಕ್ಷಮಿಸಿಬಿಡು" ಬಿಕ್ಕತೊಡಗಿದಳು.
ನನಗೆ ಮಾತೇ ಹೊರಡಲಿಲ್ಲ. ತಲೆ ಸುತ್ತುವಂತೆನಿಸಿ ಗೋಡೆಯನ್ನು ಹಿಡಿದು ಕೂರಲೆತ್ನಿಸಿದೆ. ನನ್ನ ಪರಿಸ್ಥಿತಿಯನ್ನರಿತ ಅವಳು ಹತ್ತಿರ ಬಂದು ಕೈ ಹಿಡಿದುಕೊಂಡಳು.
"ಯಾಕೇ ಹೀಗ್ ಮಾಡ್ದೆ......" ತಡೆಯಲಾರದೆ ಕಣ್ಣೀರು ಜಿನುಗಿತು.
"ಕ್ಷಮಿಸಿಬಿಡೋ................." ಅಪರಾಧಿ ಮನೋಭಾವ ಅವಳಲ್ಲಿತ್ತು.
ನನ್ನ ಕಣ್ಣೀರು ಒರೆಸಿ, ತಾನೂ ಕಣ್ಣೀರು ಒರೆಸಿಕೊಂಡು "ನನಗಿಂತ ಒಳ್ಳೇ ಹುಡುಗಿ ಸಿಕ್ತಾಳೆ ಬಿಡು" ಎಂದು ಸಾಂತ್ವಾನಿಸಿದಳು.
ಸನಿಹ ಬಂದು ಹಣೆಯನ್ನೊಮ್ಮೆ ಚುಂಬಿಸಿ "ಈ ಪಾಪಿನ ಯಾವತ್ತೂ ನೆನಪಿಸಿಕೊಳ್ಳಬೇಡ" ಎಂದು ಹೇಳಿ ಛತ್ರಿ ಬಿಡಿಸಿ ಓಡತೊಡಗಿದಳು. ಮಳೆಗೆ ಇದಾವುದರ ಪರಿವೆಯೇ ಇರಲ್ಲಿಲ್ಲ. ಇಂತಹ ಎಷ್ಟು ಅಂತ್ಯಗಳನ್ನು ಕಂಡಿತ್ತೋ ಈ ಮಳೆ.

ಬಯಲು ದಾಟಿ ಮನೆ ಹಾದಿ ಹಿಡಿದಾಗ ಮಳೆ ತೃಪ್ತಿಗೊಂಡು ನಿಲ್ಲತೊಡಗಿತು. ಒಂದೂವರೆ ವರ್ಷದಿಂದ ಪ್ರೀತಿಯ ಮಳೆಗೈದು ಬೆಳೆಸಿದ್ದ ಸಂಭಂದವನ್ನು ಕೇವಲ ಹತ್ತು ಮಾತಾಡಿ, ನಿಮಿಷಗಳಲ್ಲೇ ಮರೆಯುವುದು, ಭಾವನೆಗಳನ್ನು ಬಟ್ಟೆ ಬದಲಿಸಿದಂತೆ ಬದಲಿಸುವುದು ಸಾಧ್ಯವೇ ಎನ್ನಿಸಿತು. ಕರ್ಚೀಫಿನಿಂದ ಹಿಡಿದು ಪೆನ್ನು, ಪುಸ್ತಕ, ತಿಂಡಿ, ಮನಸ್ಸು, ಭಾವನೆ, ಕನಸುಗಳವರೆಗೆ ಎಲ್ಲವನ್ನೂ ಹಂಚಿಕೊಂಡಿದ್ದ ನಾವು ಇನ್ನು ಮುಂದೆ ಯಾವುದೇ ಸಂಭಂದವಿಲ್ಲದೆ ಬಾಳುವುದನ್ನು ನನಗೆ ಚಿತ್ರಿಸಿಕೊಳ್ಳಲ್ಲೂ ಆಗಲಿಲ್ಲ. ಅವಳಲ್ಲಿ ಈ ಎಲ್ಲಾ ಪ್ರಶ್ನೆಗಳನ್ನೊ ಕೇಳಬೇಕೆಂದೆನಿಸಿ ಕರೆ ಮಾಡಿದೆ. ಆ ಕಡೆಯಿಂದ ಉತ್ತರ ಬರಲಿಲ್ಲ. ಅವಳೂ ಇಂಥದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಳೇನೊ. ಕೊನೆಗೆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ದಿನಕಳೆದ ಹಾಗೆ ಎಲ್ಲವೂ ಭೂತಕಾಲವನ್ನು ಹೊಕ್ಕವು. ಕೆಲವೊಮ್ಮೆ ಇಷ್ಟು ಸುಲುಭವಾಗಿ ಸೋತೆನಲ್ಲ ಎಂದೆನಿಸುತ್ತದೆ. ನಿಜವಾಗಲೂ ಯಾವುದು ಸೋಲು, ಯಾವುದು ಗೆಲುವು ಅನ್ನೊದೆ ಗೊತ್ತಾಗದ ಸ್ಥಿತಿ ತಲುಪಿದ್ದೇನೆ.

ಮಳೆ ನೋಡುತ್ತ ಕಿಟಕಿಯ ಮುಂದೆ ನಿಂತಿದ್ದ ನನಗೆ ಮಳೆ ನಿಂತಿದ್ದು ಅರಿವಿಗೇ ಬರಲಿಲ್ಲ. ಮಳೆ ನಿಂತಿದೆ. ಆದರೆ ನೆಲವೆಲ್ಲಾ ಕೆಸರಾಗಿದೆ. ನನ್ನ ಮನಸೂ ಕೂಡ. ಕೆಸರು ಒಣಗಿ ಗಟ್ಟಿಯಾಗಲು ಇನ್ನೂ ಎರಡು ದಿನಗಳಾದರೂ ಬೇಕು, ಅದೂ ಮತ್ತೊಮ್ಮೆ ಮಳೆ ಬಾರದಿದ್ದರೆ.