Thursday, December 30, 2010

ನರಸಿಂಹ ಪರ್ವತ ಚಾರಣ - ಭಾಗ ೧

ಚಾರಣ ನನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ನನಗನ್ನಿಸಿದ ಮಟ್ಟಿಗೆ ಪ್ರವಾಸ ಕಥನಗಳನ್ನು ಬರೆಯುವುದು ಸ್ವಲ್ಪ ಕಷ್ಟದ ಕೆಲಸ. ಅಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನು ಬರೆಯುತ್ತಾ ಹೋದರೆ, ಓದುವವರಿಗೆ ಬೇಸರ ಬರುತ್ತದೆ. ಘಟನೆಗಳನ್ನು ತಿಳಿಸದೇ ಬರೀ ಸ್ಥಳ ಮಹಾತ್ಮೆ ತಿಳಿಸುವುದು ಕೇವಲ ಮಾಹಿತಿಯಾಗಿ ಉಳಿದುಬಿಡುವ ಸಾಧ್ಯತೆಗಳೇ ಜಾಸ್ತಿ. ಮೊದಲ ಬಾರಿಗೆ ಚಾರಣದ ಅನುಭವಗಳನ್ನು ಹೇಳಲು ಪ್ರಯತ್ನಿಸುತ್ತಿದ್ದೇನೆ. ಓದಿ ಹೇಗಿದೆಯೆಂದು ಹೇಳಿ.

ನರಸಿಂಹ ಪರ್ವತ ಆಗುಂಬೆ ಹಾಗು ಶೃಂಗೇರಿಯ ಮಧ್ಯೆ ಹರಡಿಕೊಂಡಿರುವ ಪರ್ವತ ಶ್ರೇಣಿಗಳಲ್ಲಿ ಒಂದು. ನರಸಿಂಹ ಪರ್ವತ ಹತ್ತಬೇಕೆಂದು ಈಗೊಂದು ವರ್ಷದಿಂದ ಎಣಿಕೆ ಹಾಕುತ್ತ ಕುಳಿತಿದ್ದೆ. ಗೆಳೆಯ ಜಿತೇಂದ್ರ ಹಾಗು ಅರುಣ ಇಬ್ಬರೂ ಎಲ್ಲಾದರೂ ಟ್ರೆಕ್ಕಿಂಗ್ ಹೋಗೋಣ ಎಂದಾಗ ನರಸಿಂಹ ಪರ್ವತವನ್ನು ಸೂಚಿಸಿದೆ. ಎಂದಿನಂತೆ ನಾಲ್ಕಾರು ಬೇರೆ ಸ್ಥಳಗಳ ಪರಿಶೀಲನೆ ನಡೆದು, ಅದು ಬೇಡ-ಇಲ್ಲಿ ಮಳೆ- ಮತ್ತೊಂದು ನೋಡಿದ ಜಾಗ ಅಂತೆಲ್ಲ ಮಾತನಾಡುತ್ತಿರುವಾಗ ಮತ್ತೊಬ್ಬ ಗೆಳೆಯ ಪ್ರವೀಣ್ ಕರೆ ಮಾಡಿ ಅವರು ಹೋಗಬೇಕೆಂದಿದ್ದ ನರಸಿಂಹ ಪರ್ವತ ಚಾರಣಕ್ಕೆ ನಾಲ್ಕು ಜನ ಬರುತ್ತಿಲ್ಲವೆಂದೂ, ನೀವು ಜೋತೆಯಾಗುವಿರೋ ಎಂದು ಕೇಳಿದ. (ಇದೆ ಸಮಯದಲ್ಲಿ ಪ್ರವೀಣನೂ ಅವನ ಗೆಳೆಯರೊಂದಿಗೆ ನರಸಿಂಹ ಪರ್ವತ ಚಾರಣಕ್ಕೆ ಪ್ಲ್ಯಾನ್ ಮಾಡಿದ್ದ).
ಆಗ ಜಾಗದ ಆಯ್ಕೆ ಕಾರ್ಯಕ್ರಮವನ್ನು ಅಲ್ಲಿಗೆ ನಿಲ್ಲಿಸಿ ಪ್ರವೀಣನ ಜೊತೆಗೂಡಲು ತೀರ್ಮಾನ ಕೈಗೊಂಡೆವು. ಪ್ರವೀಣ್ ಆಗಲೇ ಉಳಿಯುವ ಹಾಗು ಆಹಾರದ ವ್ಯವಸ್ಥೆ ಮಾಡಿದ್ದರಿಂದ ನಮಗೆ ಸಿದ್ದತೆಯ ತಲೆಭಾರವೂ ಕಡಿಮೆಯಾಯಿತು.

ನಾವು ನಾಲ್ವರು ( ನಾನು, ಅರುಣ, ಜಿತೇಂದ್ರ, ಹಾಗು ವಿನಾಯಕ) ಪ್ರವೀಣ ಹಾಗು ಅವನ ಸ್ನೇಹಿತರಾದ ವಿನಯ್ ಹಾಗು ಸಂತೋಷ್ ಅವರನ್ನು ಮಜೆಸ್ಟಿಕ್ ನಲ್ಲಿ ಸೇರಿಕೊಂಡೆವು. ಪ್ರವೀಣನ ಇನ್ನೊಬ್ಬ ಗೆಳೆಯ ಸುಬ್ರಮಣ್ಯ ಹಾಸನದಲ್ಲಿ ಸೇರಿಕೊಳ್ಳುತ್ತಾನೆ ಎಂಬುದು ಮೊದಲೇ ನಿಗದಿಯಾಗಿತ್ತು.

ಇನ್ನೇನು ಹೊರಟೆಬಿಟ್ಟಿತು ಎಂದು ನಮ್ಮನ್ನು ಬಸ್ ಹತ್ತಿಸಿದ ಕಂಡಕ್ಟರ್ ಬಸ್ ಇಳಿದು ಹೋದವನು ಅದೃಶ್ಯನಾಗಿ ಹೋದ. ಮಜೆಸ್ಟಿಕ್ ಬಸ್ ಸ್ಟ್ಯಾಂಡ್ ಎಂಬ ಸಂತೆಯಲ್ಲಿ ಡ್ರೈವರ್ ಗಳ ಜಗಳ-ಬೈದಾಟ ನೋಡುತ್ತಾ ನಾವೂ ನಗುತ್ತಾ, ಹರಟುತ್ತಾ, ನಮ್ಮ ಬಸ್ ಡ್ರೈವರ್ ನನ್ನು ಕಿಚಾಯಿಸುತ್ತಾ ಸ್ವಲ್ಪ ಸಮಯ ಕಾಲ ಹರಣ ಮಾಡಿದೆವು. ಇಷ್ಟು ಹೊತ್ತಾದರೂ ಕಂಡಕ್ಟರ್ ಬರದೆ ಇದ್ದುದ್ದನ್ನು ನೋಡಿ ಬೇಸತ್ತು ಜಿತೇಂದ್ರ ಕಂಡಕ್ಟರ್ ನನ್ನು ಹುಡುಕಿ ತರುವೆನೆಂದು ಬಸ್ ಇಳಿದು ಹೋದ. ಅವನು ಹೋದ ಸ್ಟೈಲ್ ನೋಡಿ ಇವನೆಲ್ಲಿ ಕಂಡಕ್ಟರ್ ಗೆ ಥಳಿಸಿ ಎಳೆದುಕೊಂಡು ಬರುವನೋ ಎಂದು ಹೆದರಿದೆ. ಕೊನೆಗೂ ಕಂಡಕ್ಟರ್ ಬಂದು ಬಸ್ ಹೊರಡುವ ವೇಳೆಗೆ ಗಡಿಯಾರ ೧೦.೪೫ ತೋರಿಸುತ್ತಿತ್ತು. ೯ ಗಂಟೆಗೆ ಹೊರಡಬೇಕಾದ ನಾವು ಸರಿಯಾಗಿ ಒಂದೂ ಮುಕ್ಕಾಲು ಗಂಟೆ ತಡವಾಗಿ ಹೊರಟಿದ್ದೆವು.

ಹಾಗೂ ಹೀಗೂ ಬಸ್ ಹೊರಟ ನಂತರ ನಮ್ಮ ಹೊಸ ಗೆಳೆಯರ ಪರಿಚಯ, ಹರಟೆ, ಜೋಕುಗಳ ಮಧ್ಯೆ ಒಂದು ನಿದ್ದೆ ತೆಗೆಯುವ ಎಂದು ನಿದ್ದೆಗೆ ಜಾರುವಷ್ಟರಲ್ಲೇ ಬಸ್ಸನ್ನು ಬದಿಯಲ್ಲಿರುವ ಡಾಬದ ಕಡೆಗೆ ತಿರುಗಿಸಿದ ಡ್ರೈವರ್. ಸರಿ, ಒಂದು ಕಾಫಿನೋ, ಟೀನೋ ಹೊಟ್ಟೆಗೆ ಹಾಕಿ ಮಲಗಿದರಾಯಿತು ಎಂದು ನಾವೆಲ್ಲರೂ ಇಳಿದೆವು. ಬೆಳಗ್ಗಿನಿಂದ ಒಲೆಯಲ್ಲಿ ಕುದ್ದು ವಿಚಿತ್ರ ರುಚಿ ಪಡೆದಿದ್ದ ಟೀ ಕುಡಿದು ನಮ್ಮಲ್ಲಿ ನಾಲ್ವರು ಕೃತಾರ್ತರಾದೆವು, ಉಳಿದ ಮೂವರು ಏನೂ ಕುಡಿಯದೆ ಜಾಣರಾದರು.

ಬಸ್ ಹತ್ತಿ ಮಲಗಲು ಸಿದ್ಧತೆ ನಡೆಸುತ್ತಿರುವಾಗಲೇ ಕಂಡಕ್ಟರ್ ಬಂದು ಡ್ರೈವರ್ ನ ಕಿವಿಯಲ್ಲಿ ಏನೋ ಉಸುರಿ ಹೋದ. ಅದರ ಬೆನ್ನಲ್ಲೇ ಪ್ರಯಾಣಿಕರ ಸೀಟಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಬಂದು ಡ್ರೈವರ್ ಸೀಟನ್ನು ಆಕ್ರಮಿಸಿದ್ದೂ, ಡ್ರೈವರ್ ಹೋಗಿ ಕೊನೆಯ ಸೀಟಿನಲ್ಲಿ ಮಲಗಿದ್ದೂ ನೋಡಿ ನಾವೆಲ್ಲಾ ಹೌಹಾರಿದೆವು. ಕೊನೆಗೆ ಲೈಟ್ ಎಲ್ಲಾ ನಂದಿಸಿದ ಮೇಲೂ ಎಲ್ಲರೂ ಮಲಗಿದ ಹಾಗೆ ನಟಿಸಿದರೆ ಹೊರತು ಯಾರೂ ಮಲಗಲಿಲ್ಲ. ಆಗಾಗ ನಮ್ಮ ಬಸ್ ನ "ಹೊಸ" ಚಾಲಕ ಗೇರ್ ಬದಲಿಸಲು ಹೆಣಗಾಡುತ್ತಾ, ಕೆಲವೊಮ್ಮೆ ಶಕ್ತಿ ಸಾಲದೇ ಸ್ಟೇರಿಂಗ್ ಇಂದ ಕೈ ತೆಗೆದು ಎರಡೂ ಕೈ ಉಪಯೋಗಿಸಿ ಗೇರ್ ಬದಲಿಸುತ್ತಿದ್ದದ್ದು ನೋಡಿದ ಮೇಲೂ ಯಾರಿಗೂ ನಿದ್ದೆ ಹತ್ತದೆ ಇದ್ದದ್ದು ಆಶ್ಚರ್ಯವೇನೂ ಆಗಲಿಲ್ಲ. ನಾವೆಲ್ಲರೂ ಮಲಗಲು ಶತಪ್ರಯತ್ನ ಮಾಡುತ್ತಾ ತೂಕಡಿಸುತ್ತಾ ಇರುವಾಗಲೇ ಹಾಸನ ಬಂದಿತು. ಎಲ್ಲರೂ ಧರ್ಮಸ್ಥಳದ ಮಂಜುನಾಥನಿಗೆ ಮನದಲ್ಲೇ ವಂದಿಸಿ ಬಸ್ ಇಳಿದೆವು. ಹಾಸನ ಬಸ್ ನಿಲ್ದಾಣದ ಹತ್ತಿರದಲ್ಲೇ ಗೆಳೆಯ ಸುಬ್ಬು ನಮ್ಮ ಆಗಮನಕ್ಕೆ ತನ್ನ ಜೀಪಿನಲ್ಲಿ ಕಾಯುತ್ತ ಇದ್ದ. ಜೀಪ್ ಹತ್ತಿದ ಮೇಲೆ ನನಗೆ ನಿದ್ದೆ ಹತ್ತಿತು.

ಮುಂದುವರೆಯುವುದು...

Wednesday, December 22, 2010

ಕನಸು ಕಂಗಳ ಹುಡುಗಿಕಣ್ಣು ತೆರೆದರೂ.. ಕಣ್ಣು ಮುಚ್ಚಿದರೂ..
ಬೆಳಗುತ್ತವೆ ಇವಳ ಕಣ್ಣುಗಳಲಿ
ಬೆನ್ನಿಗೆ ಬೆಳಕ ಕಟ್ಟಿಕೊಂಡು
ಹಾರುವ ಮಿಂಚುಹುಳುಗಳ ಹಾಗೆ
ನನ್ನ ಕಣ್ಣಿಗೂ ಬಾರದ...
ನಿಮ್ಮ ಕಣ್ಣಿಗೂ ನಿಲುಕದ...
ಕನಸುಗಳು

Friday, November 26, 2010

ಸಣ್ಣದೊಂದು ಸಂತಸ... ನಿಮ್ಮೆಲ್ಲರಿಂದಾಗಿ

ದಿನಾಂಕ ೨೪ ನವೆಂಬರ್, ೨೦೧೦ ರ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆಯ ವೆಬ್ಬಾಗಿಲು ಅಂಕಣದಲ್ಲಿ ಭಾವಯಾನದ ಬಗ್ಗೆ ಬಂದಿತ್ತು. ನನಗೆ ಇದೊಂದು ಸಂತಸದ ವಿಷಯ. ಇದೆ ಮೊದಲ ಬಾರಿಗೆ ಪತ್ರಿಕೆಯೊಂದರಲ್ಲಿ ನನ್ನ ಹೆಸರು ಕಾಣಿಸಿಕೊಂಡಿದೆ. ಕೆಲವರಿಗೆ ಇದು ತೀರಾ ಸಿಲ್ಲಿ ವಿಷಯ ಅನ್ನಿಸಬಹುದು. ನನಗೂ ಕೆಲವು ಸಲ ಸಿಲ್ಲಿ ವಿಷಯವಾಗೆ ಕಾಣಿಸಿತ್ತು. ಆದರೂ ನನ್ನ ಚಿತ್ರಗಳು ಹಾಗು ನನ್ನ ಹೆಸರು ಒಂದು ಪತ್ರಿಕೆಯಲ್ಲಿ ಬಂದಿದೆ ಎಂದರೆ ಹೇಳಲಾಗದ ಅನುಭವ ಅಥವಾ ಪ್ರಥಮ ಬಾರಿ ಬಂದಿದ್ದರಿಂದ ಈ ಅನುಭವ. ಬಹುಮಾನ ಬಂದಾಗ ಪುಟ್ಟ ಹುಡುಗನೊಬ್ಬ ಬಹುಮಾನವಾಗಿ ಬಂದ ವಸ್ತುವನ್ನು ಅಕ್ಕಪಕ್ಕದವರಿಗೆಲ್ಲ ತೋರಿಸಿ ಸಂತೋಷ ಪಟ್ಟಂತೆ ಗೆಳೆಯ ಗೆಳತಿಯರಿಗೆಲ್ಲ ಸಂದೇಶ ಕಳಿಸಿ ಸಂಭ್ರಮಿಸಿದ್ದೇನೆ. ಇದು ಯಾವ ಸಾಧನೆಯೂ ಅಲ್ಲವೆಂದು ಗೊತ್ತು. ಆದರೆ ಇದು ಜೀವನದ ಒಂದು ಸಣ್ಣ ಸಂತಸದ ಕ್ಷಣ. ಈ ಸಂತಸಕ್ಕೆ ಕಾರಣರಾದ ಹಾಗು ನನಗೆ ಪ್ರೋತ್ಸಾಹಿಸುತ್ತಾ ತಮ್ಮ ಗೆಳೆತನದ ಒಡಲಲ್ಲಿ ತುಂಬಿಕೊಂಡ ನನ್ನೆಲ್ಲಾ ಸ್ನೇಹಿತ-ಸ್ನೇಹಿತೆಯರು, ಸಹ ಬ್ಲಾಗಿಗರು, ಹಾಗು ನನಗೆ ಒಳ್ಳೆಯದನ್ನು ಬಯಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಮುಂದೆಯೂ ಹೀಗೆ ಪ್ರೋತ್ಸಾಹಿಸುತ್ತ ನನ್ನ ತಪ್ಪುಗಳನ್ನು ತಿದ್ದುತ್ತಾ ನನ್ನ ನಗುವಿಗೆ ಕಾರಣರಾಗಿರುವಿರೆಂದು ಭಾವಿಸುತ್ತೇನೆ.

ಅಂದ ಹಾಗೆ ಈ ಹಿಂದಿನ ಪೋಸ್ಟ್, ಬ್ಲಾಗಿನಲ್ಲಿ ನನ್ನ ೫೦ ನೇ ಪೋಸ್ಟ್ ಆಗಿತ್ತು. ತಡವಾಗಿ ಗಮನಿಸಿದೆ. ಎರಡೂವರೆ ವರ್ಷಗಳಲ್ಲಿ ೫೦ ಪೋಸ್ಟ್. ರಾಹುಲ್ ದ್ರಾವಿಡ್ ಬ್ಯಾಟಿಂಗ್ ಥರ ಆಯಿತು. ಹಲವಾರು ಬಾರಿ ಇಷ್ಟು ದೂರ ಸಾಗುವ ಎಣಿಕೆಯೂ ಇರಲಿಲ್ಲ. ಭಾವಯಾನವನ್ನು ಎಲ್ಲಿಯೂ ನಿಲ್ಲಲು ಕೊಡದೆ ನಿರಂತರವಾಗಿರಲು ಸ್ಫೂರ್ತಿ ಹಾಗು ಪ್ರೋತ್ಸಾಹ ನೀಡಿದ್ದೂ ನೀವೇ. ಹಾಗಾಗಿ ಇನ್ನೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳು.
Sunday, November 14, 2010

ವರ್ಣ ಚಿತ್ರ - ಒಂದು ಪ್ರಯತ್ನ

ನಾನು ಚಿಕ್ಕವನಿರುವಾಗ ವರ್ಣ ಚಿತ್ರಗಳನ್ನು ಬಿಡಿಸುತ್ತಿದ್ದೆ. ಸ್ಕೆಚ್ ಪೆನ್ನು, ಪೇಷ್ಟೇಲ್ ಗಳು, ಜಲ ವರ್ಣಗಳು, ಬಣ್ಣದ ಪೆನ್ಸಿಲ್ಗಳು ಎಲ್ಲವನ್ನು ಉಪಯೋಗಿಸುತ್ತಿದ್ದೆ. ಹೈ ಸ್ಕೂಲ್ ಮುಗಿಸಿ ಕಾಲೇಜಿನ ಮೆಟ್ಟಿಲು ಹತ್ತಿದ ಮೇಲೆ ಅದೇಕೋ ಬಣ್ಣಗಳ ಸಹವಾಸವೇ ದೂರವಾಗಿ ಹೋಯಿತು. ಕೇವಲ ಕಪ್ಪು-ಬಿಳಿಗಳ ಮಧ್ಯೆ ಮನಸ್ಸು ಉಳಿದು ಹೋಯಿತು. ಪೆನ್ಸಿಲ್ ಸ್ಕೆಚಿಂಗ್ ಹಾಗು ಶೇಡಿಂಗ್ ಒಂದು ರೀತಿಯಲ್ಲಿ ಸುಲಭವೂ ಹೌದು ಒಂದು ರೀತಿಯಲ್ಲಿ ಕಷ್ಟವೂ ಹೌದು. ವ್ಯಕ್ತಪಡಿಸಬೇಕಾದ ಚಿತ್ರವನ್ನು ಕೇವಲ ಕಪ್ಪು ಬಿಳುಪಿನಲ್ಲೇ ಹೇಳುವುದರಿಂದ ಬಣ್ಣಗಳ ಆಯ್ಕೆ ಹಾಗು ವಿನ್ಯಾಸಗಳ ತಲೆ ನೋವು ಇರುವುದಿಲ್ಲ ಸ್ಕೆಚಿಂಗ್ನಲ್ಲಿ. ಆದರೆ ಕೇವಲ ಎರಡೇ ಬಣ್ಣಗಳಲ್ಲಿ ಚಿತ್ರದ ಆಳ, ಸೂಕ್ಷ್ಮತೆ, ಹಾಗು ಭಾವನೆಗಳನ್ನು ತೋರಿಸುವುದೂ ತ್ರಾಸದಾಯಕವೇ. ಆದ್ದರಿಂದ ಯಾರಾದರೂ ಕೇಳಿದರೆ ಸ್ಕೆಚಿಂಗ್ ಕಷ್ಟವೋ ಸುಲಭವೋ ಎಂದು ಈಗಲೂ ಹೇಳಲಾರೆ.

ಕೆಲವು ತಿಂಗಳುಗಳ ಮಧ್ಯೆ ಹಲವಾರು ಗೆಳೆಯರು ನೀನು ಪೇಂಟಿಂಗ್ ಏಕೆ ಮಾಡುವುದಿಲ್ಲ ಎಂದು ಕೇಳಿದ್ದರು. ಅವರೆಲ್ಲರಿಗೂ ಒಂದು ಸಮಜಾಯಿಷಿಯ ಉತ್ತರ ಕೊಟ್ಟೆನಾದರೂ, ನನ್ನನ್ನೇ ನಾನು ಕೇಳಿಕೊಂಡಾಗ ಉತ್ತರ ನನ್ನಲ್ಲೂ ಇರಲಿಲ್ಲ. ಅದರ ಬಗ್ಗೆ ಜಾಸ್ತಿ ಯೋಚಿಸಲೂ ಇಲ್ಲ ಎನ್ನಿ. ನಿನ್ನೆ ಸುಮ್ಮನೆ ಕುಳಿತಿದ್ದಾಗ ಒಂದು ಯೋಚನೆ ಬಂದಿತು, ಯಾಕೆ ಒಂದು ವರ್ಣಚಿತ್ರ ರಚಿಸಬಾರದು ಎಂದು. ಆಗ ಮೂಡಿದ್ದೇ ಈ ಕೆಳಗಿನ ಚಿತ್ರ. ಇದನ್ನು ಒಂದು ರಫ್ ವರ್ಕ್ ಎನ್ನಬಹುದು. ಸುಮ್ಮನೆ ಒಂದು ಪ್ರಯತ್ನ ಮಾಡಿದ್ದೇನೆ. ಈ ಚಿತ್ರ ರಚನೆಗೆ ಸ್ಕೆಚ್ ಪೆನ್, ಕ್ರೆಯಾನ್ಸ್, ಕಲ್ಲಿದ್ದಲು, ಹಾಗು ಪೆನ್ಸಿಲ್ ಬಳಸಿದ್ದೇನೆ. ವರ್ಣ ಚಿತ್ರ ಬಿಡಿಸಿದೆನೆಂದು ಮುಂದೆ ನನ್ನಿಂದ ವರ್ಣಚಿತ್ರಗಳನ್ನೇ ನಿರೀಕ್ಷಿಸಬೇಡಿ... ನನಗೆ ಈಗಲೂ ಕಪ್ಪು-ಬಿಳುಪಿನ ನಡುವಿನ ಆಟವೇ ಪ್ರಿಯವೆನಿಸುತ್ತಿದೆ. ವರ್ಣ ಚಿತ್ರಗಳನ್ನು ಬಿಡಿಸಿದರೂ ನಿಮ್ಮ ಮುಂದೆ ಇರಿಸುವೆ.

Monday, November 1, 2010

ಬಾಡಿ ಲಾಂಗ್ವೇಜ್

ಬಹಳ ಹಿಂದೆ ಬಿಡಿಸಿದ ಚಿತ್ರವಿದು. ಇದನ್ನು ಪೆನ್ಸಿಲ್ ಬದಲಾಗಿ ಚಾರ್ಕೋಲ್ ಉಪಯೋಗಿಸಿ ಬಿಡಿಸಿದ್ದು. ಹೇಗಿದೆ ಹೇಳಿ :) ಚಿತ್ರವನ್ನು ದೊಡ್ಡದಾಗಿ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ...
Friday, October 22, 2010

ಮುಪ್ಪುಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಾ ಕೂತಿದ್ದಾಗ ಈ ಕೆಳಗಿನ ಚಿತ್ರ ಕಂಡಿತ್ತು. ಸ್ಕೆಚಿಂಗ್ ಮಾಡಲು ಹೇಳಿ ಮಾಡಿಸಿದಂತ ಈ ಚಿತ್ರವನ್ನು ಬಿಡಿಸಬೇಕೆಂದು ಬಹಳಾ ದಿನಗಳಿಂದ ಕಾಯುತ್ತಿದ್ದೆ. ಆದರೆ ಮಹೂರ್ತ ಕೂಡಿಬಂದದ್ದು ಎರಡು ದಿನಗಳ ಹಿಂದೆ. ಮುಪ್ಪಿನ ಅಷ್ಟೂ ನೋವು ಹಾಗು ನಿಗೂಢಗಳನ್ನು ತನ್ನ ಕಣ್ಣಲ್ಲೇ ಹಿಡಿದು ಇಟ್ಟಿರುವಂತಿರುವ ಈ ಅಜ್ಜನ ಕಂಗಳು ಇನ್ನೂ ಕಾಡುತ್ತಿವೆ. ಆದರೆ ಈ ಚಿತ್ರಕ್ಕೆ ನ್ಯಾಯ ಒದಗಿಸಲು ನನ್ನಿಂದ ಸಾಧ್ಯವಾಗಿಲ್ಲ. ಎಲ್ಲ ಮುಗಿದು ಎದ್ದಾಗಲೂ ಇನ್ನೂ ಚನ್ನಾಗಿ ರಚಿಸಬಹುದಿತ್ತೇನೋ ಅನ್ನಿಸಿತ್ತು. ಮುಂದೆ ಎಂದಾದರೂ ಇನ್ನೊಮ್ಮೆ ಪ್ರಯತ್ನಿಸುವೆ..


( ಚಿತ್ರವನ್ನು ದೊಡ್ಡದಾಗಿ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ )

Thursday, October 14, 2010

ಗೋಕರ್ಣದಲ್ಲೊಂದು ಬೆಳಗು...

ಒಂಟಿ ದೋಣಿಯೊಂದು ತೇಲುತಿಹುದು
ಒತ್ತಿ ಬರುವ ತೆರೆಗಳ ಜೊತೆ ಹೋರಾಡುತ್ತಾ
ಕಪ್ಪೆ ಚಿಪ್ಪುಗಳ ಹೆಕ್ಕಿ ತನ್ನ ಲಂಗದ ಜೇಬೊಳಗೆ ಸೇರಿಸುತಿಹಳು
ಬಂಗಾರ ಬಣ್ಣದ ಕೂದಲ ಪುಟ್ಟ ಹುಡುಗಿಯೊಬ್ಬಳು

ಮಣಿ ಸರಗಳೆಲ್ಲಾ ಸಿದ್ಧವಾಗುತಿವೆ ಧೂಳನ್ನು ಕೊಡವಿಕೊಂಡು
ತಮ್ಮನ್ನು ಕೊಳ್ಳಲು ಬರುವ ಗಿರಾಕಿಗಳ ನಿರೀಕ್ಷೆಯಲಿ
ಜೊತೆಯಲಿ ಪಂಡಿತರ ಮನೆ ಬೇಲಿಯ ದಾಸವಾಳಗಳು
ಕಾಯುತಿವೆ ದೇವರ ಸನ್ನಿಧಿಯಲ್ಲಿ ತಮ್ಮನ್ನು ತಾವು ಕಂಡುಕೊಳ್ಳಲು

ಕಡಲನ್ನು ಮೊದಲ ಬಾರಿ ಕಾಣುತಿಹ ಬಯಲುಸೀಮೆಯ ಹುಡುಗರು
ಹೊರಟಿಹರು ಎದುರಿಸಲು ಭೋರ್ಗರೆವ ಅಗಾಧ ಸಾಗರವನ್ನು
ಕಡಲ ತಟದ ಗೂಡಂಗಡಿಯಲಿ ಹಬೆಯಾಡುತಿಹುದು ಕಾಫಿಯು
ಏಳಲೊಲ್ಲದು ಮುದುಡಿ ಮರಳ ಮೇಲೆ ಮಲಗಿಹ ಬೆಕ್ಕೊಂದು

ಬೀದಿ ದನವೊಂದು ನಿರುಪಾಯವಾಗಿ ನಿಂತಿಹುದು
ಕಾಮತರ ಹೋಟೆಲಿನಿಂದ ಏಳುತ್ತಿರುವ ದೋಸೆಯ ಘಮಕ್ಕೆ ಸೋತು
ಊರಿನ ಸಂದುಗೊಂದುಗಳೆಲ್ಲ ಬಂಗಾರದ ಬಣ್ಣ ಪಡೆಯುತಿರಲು
ಉದಯಿಸುತಿಹನು ಗೋಕರ್ಣದಲಿ ಆದಿತ್ಯನು....

(ಈ ವರ್ಷದ ಆದಿಯಲ್ಲಿ ಪ್ರವಾಸಕ್ಕೆ ಹೋದಾಗ ಗೋಕರ್ಣದಲ್ಲಿ ಉಳಿಯುವ ಅವಕಾಶ ಒದಗಿತ್ತು. ಒಂದು ಊರಾಗಿ ಗೋಕರ್ಣದಷ್ಟು ಬೇರಾವ ಊರು ನನ್ನ ಸೆಳೆದಿರಲಿಲ್ಲ. ಸುಮ್ಮನೆ ಅಲೆಮಾರಿಯಂತೆ ತಿರುಗಿದ ಕಡಲ ತೀರಗಳು, ರಾತ್ರಿಯಲ್ಲಿ ಜಗಮಗಿಸಿದ ಅಂಗಡಿಗಳು, ಕಡಲನ್ನೇ ಜಯಿಸಲು ಹೊರಟ ನಮ್ಮನ್ನು ತುಂಟ ಮಕ್ಕಳನ್ನು ಓಡಿಸಲು ಬಂದಂತೆ ಬಂದ ಕಡಲ ತೆರೆಗಳು, ಥಟ್ಟನೆ ನನ್ನ ಊರನ್ನು ನೆನಪಿಸಿಬಿಟ್ಟ ಬೀದಿಗಳು, ಬಿಳಿಯರು ಹಾಗು ಅವರ ವೇಷ ಭೂಷಣಗಳು, ಕಟ್ಟಿದ ಉಸುಕಿನ ಕೋಟೆಗಳು, ಕಪ್ಪೆಚಿಪ್ಪುಗಳು... ಹೀಗೆ ಇನ್ನು ಹಲವಾರು ಮಧುರ ನೆನಪುಗಳು ಸೇರಿ ನನ್ನನ್ನು ಈಗಲೂ ಗೋಕರ್ಣದ ಆಕರ್ಷಣೆಗೆ ತಳ್ಳುತ್ತವೆ. ಹೆಸರು ಕೇಳಿದೊಡನೆ ರೋಮಾಂಚನಗೊಳಿಸುವ ಗೋಕರ್ಣ ಹಾಗು ಈ ನೆನಪುಗಳನ್ನು ಸುಂದರಗೊಳಿಸಿದ ನನ್ನೆಲ್ಲ ಗೆಳೆಯ-ಗೆಳತಿಯರಿಗೆ ಈ ಕವನವನ್ನು ಅರ್ಪಿಸುತ್ತೇನೆ).

Thursday, September 30, 2010

ನಿರಾಕಾರ ಕನಸುಗಳ ಒಂದು ದಿನ...ಬೇಲಿಯಂಚಿನ ಕಳ್ಳಿ ಗಿಡವೊಂದರ
ಎಲೆಯ ಮುರಿದು
ಒಸರುತ್ತಿರುವ ಬಿಳಿಯ ಹಾಲು
ಎಳೆದಂತೆ ಲೋಳೆಯ ಪದರ
ಗಾಳಿಗೂ ನೋಯದಂತೆ ಊದುವನು
ಗುಳ್ಳೆಗಳ ಜನನ ಪ್ರಕ್ರಿಯೆಯಲ್ಲಿ ನಿಮಿಗ್ನನಾಗಿ
ಪುಟ್ಟನ ಆಸೆಗಳ ಅರಿತಂತೆ
ಮುರಿದ ದಂಟಿನಿಂದ ಗುಳ್ಳೆಯೊಂದು ಮೂಡುವುದು
ಸಮಯದೊಂದಿಗೆ ಆಕಾರವನೂ ಪಡೆಯುತ
ಹೊಂಬಿಸಿಲಿನಲಿ ಹೊಳೆಯುತ
ಜಗವನೆ ತನ್ನೊಡಲಿನಲಿ ಹಿಡಿದಿಡುತಾ
ಗುಟ್ಟನೊಂದು ಒಡೆವೆನೆಂದು ಕೈ ಹಿಡಿದು
ಹೊತ್ತೊಯ್ಯುತಿಹುದು ಪುಟ್ಟನ ಕಿರುಕಂಗಳಿಗೆ
ಬಣ್ಣವ ಬಳಿದು
ದಿಗಂತದೆಡೆಗೆ... ಅನಂತದೆಡೆಗೆ...


Sunday, August 15, 2010

ದೆಹಲಿ ಹುಡುಗಿ


ದೆಹಲಿಯಲ್ಲಿ ಮೂಡಿದ ಮೊದಲ ಚಿತ್ರ... ಇದು ಸ್ಕೆಚಿಂಗ್ ಹಾಳೆಯ ಮೇಲೆ ಬಿಡಿಸಿದ ಚಿತ್ರವಲ್ಲ... ಕ್ರೇಪ್ ಹಾಳೆಯಾದ್ದರಿಂದ ಚಿತ್ರದ ಮದ್ಯದಲ್ಲಿ ಗೆರೆಗಳು ಕಾಣುತ್ತವೆ... ಇದೊಂದು ಪ್ರಯತ್ನವಷ್ಟೇ.

Saturday, July 3, 2010

ಹಾಗೆ ಸುಮ್ಮನೆ....

ಚಿತ್ರವನ್ನು ದೊಡ್ಡದಾಗಿ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ

Thursday, June 10, 2010

ಹೆಸರಿಡದ ಚಿತ್ರಬಹಳ ದಿನಗಳಾಗಿತ್ತು ಚಿತ್ರ ಬಿಡಿಸದೆ... ನಿನ್ನೆ ಸಂಜೆ ಬೇಸರವೆನಿಸಿ ಏನೂ ಕೆಲಸವಿಲ್ಲದೇ ಕುಳಿತಾಗ ಚಿತ್ರ ಬಿಡಿಸುವ ಹುಮ್ಮಸ್ಸು ಬಂದಿದ್ದಾರ ಪರಿಣಾಮ ಈ ಕೆಳಗಿನ ಚಿತ್ರThursday, May 20, 2010

ಕನಸೊಂದು ತಾಕಿತು ನನ್ನೆದೆಯ


ಇಂದು ಮುಂಜಾನೆ, ಇನ್ನೂ ಬೆಳಕು ಹರಿಯುವ ಮುನ್ನ, ಕನಸೊಂದು ಬಿದ್ದಿತ್ತು.. ವಿಚಿತ್ರ ಕನಸು.. ಈ ಕನಸುಗಳೇ ವಿಚಿತ್ರ ಬಿಡಿ... weird dream ಅನ್ನಬಹುದು.

ಯಾವುದೋ ಅಪರಚಿತ ಸ್ಥಳ. ಹಿಂದೆಂದೂ ನೋಡಿದ ನೆನಪಿಲ್ಲ. ಹಾಗೆ ಸುತ್ತಮುತ್ತಲೂ ಇರುವವರೂ ಕೂಡ, ಯಾರೂ ಪರಿಚಿತರಲ್ಲ. ಸಂಜೆ ಏಳರ ಸಮಯವಿರಬಹುದು. ಯಾವುದೋ ವಸ್ತುಗಳನ್ನು ಗಾಡಿಗೆ ಏರಿಸುತ್ತಿದ್ದಂತೆ ನೆನಪು. ಸ್ವಚ್ಚವಾದ ಕಪ್ಪು ಆಕಾಶದಲ್ಲಿ ನಕ್ಷತ್ರಗಳು. ನಿಮಿತ್ತವಿಲ್ಲದೆ ಆಗಸದೆಡೆಗೆ ನನ್ನ ಕಣ್ಣುಗಳು ಹೊರಳುತ್ತವೆ. ನೋಡುತ್ತಿದ್ದ ಹಾಗೆ ನಕ್ಷತ್ರವೊಂದು ಉದುರುತ್ತದೆ, ಅದರ ಹಿಂದೇ ಇನ್ನೊಂದು. ಅಲ್ಲೇ ಇದ್ದ ಪುಟ್ಟ ಹುಡುಗಿಗೂ ಹೇಳುತ್ತಿದ್ದೇನೆ "look at the falling stars in the sky". ಅವಳು ತನ್ನ ಬೆರಗುಗಣ್ಣಿನಿಂದ ಬೀಳುತ್ತಿರುವ ನಕ್ಷತ್ರವನ್ನು ನೋಡುತ್ತಾಳೆ. ನಕ್ಷತ್ರ ಬೀಳುವ ಸಮಯದಲ್ಲಿ ಮನದ ಬಯಕೆಯನ್ನು ಹೇಳಿಕೊಂಡರೆ ಅದು ನಿಜವಾಗುತ್ತದೆ ಎಂದು ನೆನಪಾಗುತ್ತದೆ. ಮೂರನೇ ನಕ್ಷತ್ರ ಬಿದ್ದರೂ ನನಗೆ ಏನನ್ನೂ ಕೇಳಿಕೊಳ್ಳಲು ಆಗಲಿಲ್ಲ. ನನಗೆ ಬೇಕಾದದ್ದು ಎಲ್ಲದೂ ನನ್ನ ಬಳಿಯೇ ಇರುವಾಗ ಏನನ್ನು ಕೇಳಿಕೊಳ್ಳಲಿ ನಾನು ?

ಮರುಕ್ಷಣದಲ್ಲೇ ಇನ್ನೊಂದು ದೃಶ್ಯದಲ್ಲಿ ಇದ್ದೇನೆ ನಾನು. ಕನಸುಗಳ ಮಜವೇ ಅದು. ಎಲ್ಲಿಂದ ಎಲ್ಲಿಗೆ ಬೇಕಾದರೂ ಕ್ಷಣದಲ್ಲೇ ಹಾರಿಬಿಡಬಹುದು. ಇರಲಿ ಕೇಳಿ ಮುಂದೆ....

ಈ ದೃಶ್ಯದಲ್ಲಿ ನಾನು ಸಾಯುತ್ತಿದೇನೆ. ದೊಡ್ಡ ಬಯಲು. ಬಯಲ ತುಂಬೆಲ್ಲ ನನ್ನ ಮೆಚ್ಚಿನ ಕಾರ್ಟೂನ್ ಕ್ಯಾರೆಕ್ಟೆರ್ ಗಳ ಬಲೂನುಗಳು. ಒಂದಷ್ಟು ಬಲೂನುಗಳನ್ನು ಎದೆಗೆ ಅವಚಿಕೊಂಡಿದ್ದೇನೆ. ಸ್ಲೋ ಮೋಶನ್ ಅಲ್ಲಿ ನಾನು ಬೀಳುತ್ತೇನೆ ನೆಲಕ್ಕೆ. ಪುಟ್ಟ ಹುಡುಗನೊಬ್ಬ ಬಂದು "ಕಾಕಾ ಕಾಕಾ" ಎಂದು ತಲೆ ಸವರಿ ನನ್ನನ್ನೇ ನೋಡುತ್ತಾನೆ, ನನ್ನ ಬಿಟ್ಟ ಕಣ್ಣುಗಳು ಚಲಿಸದೆ ಇದ್ದದ್ದನ್ನು ನೋಡಿ ಬೆದರಿ ಓಡಿ ಹೋಗುತ್ತಾನೆ. ಅಮ್ಮ ದೂರದಿನ ಕೂಗುತ್ತಾಳೆ "ಯಾಕೋ ಇನ್ನೂ ಮಲಗಿದ್ದೀಯ, ಎದ್ದೇಳು" ಎಂದು. ಇನ್ನೂ ಕುಡಿ ಪ್ರಾಣ ಉಳಿದಿದೆ. ಇನ್ನೇನು ಸಾವು ನನ್ನನ್ನು ಆವರಿಸಿಕೊಳ್ಳಲಿದೆ. ಯಾಕೆ ಸಾಯುತ್ತಿದ್ದೇನೆ ಎಂಬುದೂ ಗೊತ್ತಿಲ್ಲ, ಮುಂದಿನ ವಾರ ಪರೀಕ್ಷೆಗಳಿವೆ ಎಂಬ ನೆನಪೂ ಇಲ್ಲ, ಇನ್ನು ಕೆಲವೇ ದಿನಗಳಲ್ಲಿ ಇಂಜಿನಿಯರ್ ಆಗುತ್ತೇನೆ ಎಂಬ ಸಂತಸವೂ ಇಲ್ಲ, ಕೆಲಸ ಹುಡುಕಿಕೊಳ್ಳಬೇಕೆಂಬ ಆತಂಕವಿಲ್ಲ. ಮನೆ-ಕುಟುಂಬ-ಸ್ನೇಹಿತರು ಎಲ್ಲರನ್ನು ಬಿಟ್ಟು ಹೋಗುತ್ತಿದ್ದೇನೆ ಎಂಬ ನೋವೂ ಇಲ್ಲ. ಎಲ್ಲವನ್ನು ಬಿಟ್ಟು ನಿರಾಳವಾಗಿದ್ದೇನೆ. ಯಾವುದೇ ಬಂಧದಲ್ಲೂ ಇಲ್ಲ ನಾನು. ಸಾವೂ ಸಂತಸ ತರುತ್ತಿದೆ. ಇಲ್ಲಿಗೆ ಕನಸು ಮುಕ್ತಾಯಗೊಳ್ಳುತ್ತದೆ.

ಸಾವೂ ಇಷ್ಟು ಸಲೀಸಾಗಿ, ಆರಾಮಾಗಿ ಇರಬಹುದಾ ಎಂದು ಎಚ್ಚೆತ್ತ ಮೇಲೆ ಅನ್ನಿಸಿತು. ಎಲ್ಲಾ ಭಾವ ಬಂಧಗಳನ್ನು ಕಳೆದುಕೊಂಡಾಗ ಇರಬಹುದಾದ ಆನಂದವನ್ನು ಕೆಲಕ್ಷಣಗಳ ಮಟ್ಟಿಗಾದರೂ ಕನಸು ನೀಡಿತ್ತು. ಸಾವೂ ಅಪ್ಯಾಯಮಾನವಾಗುವಂತೆ ತೋರಿತ್ತು. ಆ ನಿರಾಳತೆಯನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ...
( ಮೇಲೆ ಬರೆದದ್ದು ಯಾವುದೂ ಕಾಲ್ಪನಿಕವಲ್ಲ)

Saturday, May 8, 2010

ನಿನಗೊಂದು ನಿಜ ಹೇಳ್ತೀನಿ....

ಅವಳು ನನಗೆ ಹತ್ತಿರದ ಗೆಳತಿ, ಅವಳ ವೈಯುಕ್ತಿಕ ವಿಷಯಗಳನ್ನು ಹೇಳಿಕೊಳ್ಳುವಷ್ಟು ಹತ್ತಿರ. ಅವಳು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಯಾವುದೋ ಕಾರಣಕ್ಕಾಗಿ ಆ ಪ್ರೀತಿ ಮುರಿದು ಬಿತ್ತು. ಅವಳು ಗಟ್ಟಿ ಹೃದಯದವಳು. ಆ ನೋವನ್ನು ದಾಟಿ ನಡೆಯುತ್ತಾಳೆ ಎಂದುಕೊಂಡಿದ್ದೆ. ಆದರೆ ವಿಪರೀತ ಹಚ್ಚಿಕೊಂಡಿದ್ದಳು ಎಂದೆನಿಸುತ್ತದೆ. ಸೋಲತೊಡಗಿದಳು. ಲವಲವಿಕೆಯಿಂದ ಇದ್ದವಳು ಮೌನಿಯಾಗಿಹೋದಳು. ಇದರ ಪರಿಣಾಮ ಅವಳ ಆರೋಗ್ಯದ ಮೇಲೂ ಆಯಿತು, ಚಂದವಾಗಿದ್ದ ಮೊಗ ಬಾಡತೊಡಗಿತು. ಜನರನ್ನು avoid ಮಾಡತೊಡಗಿದಳು. ತಾನು-ಮನೆ-ಕೆಲಸ ಇಷ್ಟೇ ಅವಳ ದಿನಚರಿಯಾಗಿ ಹೋಯಿತು. ಕರೆ ಮಾಡಿದರೂ ರಿಸೀವ್ ಮಾಡುತ್ತಿರಲಿಲ್ಲ. ನಾನು ಭಯ ಪಟ್ಟು ಅವಳನ್ನು ಭೇಟಿ ಮಾಡಿ ಸ್ವಲ್ಪ ಬುದ್ದಿಮಾತು ಹೇಳಲು ಹೋದೆ. ಅವಳಿಗೆ ಕಿರಿ ಕಿರಿ ಆಯಿತೇನೋ, ಸ್ವಲ್ಪ ಖಾರವಾಗಿ ಮಾತನಾಡಿದಳು. ನಾನೂ ಸುಮ್ಮನಾದೆ, ಕೆಲಸ-ಓದುಗಳ ಮಧ್ಯೆ ಬ್ಯುಸಿಯಾಗಿಬಿಟ್ಟೆ.

ಸುಮಾರು ಒಂದು ತಿಂಗಳ ನಂತರ ಆಕೆಯೇ ಕರೆ ಮಾಡಿದ್ದಳು. ನಿನ್ನ ಜೊತೆ ಮಾತಾಡಬೇಕು ಸಿಗು ಎಂದಳು. ನನಗೆ ಅಷ್ಟೊಂದು ಇಷ್ಟವಿಲ್ಲದಿದ್ದರೂ ಭೇಟಿ ಮಾಡಲು ಹೋದೆ. ಅವಳನ್ನು ನೋಡಿ ಆಶ್ಚರ್ಯವಾಯಿತು. ಮೊದಲಿನ ಗೆಳತಿಯಾಗಿದ್ದಳು. ಅದೇ ನಗು, ಅದೇ ಕೀಟಲೆಗಳು. ನನಗೆ ಅವಳನ್ನು ನೋಡಿ ಸಂತೋಷವಾಯಿತು. ಏನು ಇಷ್ಟು ಬದಲಾವಣೆಗಳು ಎಂದು ಕೇಳಿದೆ. ಅವಳ ಮಾತುಗಳ ಸಂಕ್ಷೀಪ್ತ ರೂಪವನ್ನು ಅವಳದೇ ಮಾತುಗಳಲ್ಲಿ ಹೇಳುತ್ತೇನೆ.

" ಬದುಕಬೇಕು ಕಣೋ, ಜೀವನವನ್ನು ಜೀವಿಸಬೇಕು, ಏನು ಬಂದರೂ ಎದುರಿಸಬೇಕು. ಅಂದು ನೀನು ನನ್ನ ಭೇಟಿಯಾಗಲು ಬಂದ ದಿನ ನನ್ನನ್ನೇ ಕೊಂದುಕೊಳ್ಳುವ ಆಲೋಚನೆ ಮಾಡಿದ್ದೆ. ಈಗ ಅದರ ಬಗ್ಗೆ ಯೋಚಿಸಿದರೆ ನನಗೆ ನಾಚಿಕೆಯಾಗುತ್ತದೆ. ಜೀವನವನ್ನು ಪ್ರೀತಿಸಲು ಪ್ರಾರಂಭಿಸಿದ್ದಿನೋ. ಮೊದಲು ಪ್ರೀತಿಸುತ್ತಿರಲಿಲ್ಲವಾ ಎಂದು ಕೇಳಬೇಡ... ಬಹುಷಃ ಜೀವನಪ್ರೀತಿ ಎಂದರೇನು ಎಂದು ಗೊತ್ತಿರಲಿಲ್ಲ. ಯಾರಿಂದಲೂ ಏನನ್ನೋ ನಿರೀಕ್ಷಿಸುತ್ತಿಲ್ಲ. ಅದೇ ನನ್ನ ಸಂತಸಕ್ಕೆ ಕಾರಣ ಇದ್ದರೂ ಇರಬಹುದು. ನಿನಗೊಂದು ನಿಜ ಹೇಳ್ತೀನಿ, ನಾನು ಅವನನ್ನು ದ್ವೇಷಿಸುತ್ತಿಲ್ಲ, ಅವನ ಮೇಲೆ ಸಿಟ್ಟೂ ಇಲ್ಲ. ಅವನು ಅವನಿಗೆ ಸರಿ ಅನ್ನಿಸಿದ್ದನ್ನು ಮಾಡಿದ. ಅತಿಯಾಗಿ ಹಚ್ಚಿಕೊಂಡಿದ್ದು ನನ್ನದೇ ತಪ್ಪು. ತುಂಬಾ ನೋವಾಗಿತ್ತು. ಅಂದು ನಿದ್ರೆ ಮಾತ್ರೆಗಳನ್ನು ಕೈಯ್ಯಲ್ಲಿ ಹಿಡಿದುಕೊಂಡಾಗ ನನ್ನನ್ನೇ ನಾನು ಪ್ರಶ್ನಿಸಿಕೊಂಡೆ. ನಾನು ನನ್ನನ್ನೇ ಕೊಂದುಕೊಂದರೆ ಯಾರಿಗೆ ಉಪಯೋಗ? ಮನೆಯವರು ನೊಂದುಕೊಳ್ಳುತ್ತಾರೆ, ಅವನೂ ಬೇಸರಗೊಂಡಾನು. ಅವರೆಲ್ಲರ ಬೇಸರ ಒಂದು ವಾರ ಅಥವಾ ಒಂದು ತಿಂಗಳ ಮಟ್ಟಿಗೆ. ಕೊನೆಗೆ ಒಂದು ದಿನ ಎಲ್ಲರೂ ನನ್ನ ಮರೆತು ತಮ್ಮ ಕಾರ್ಯಗಳಲ್ಲಿ ಮಗ್ನರಾದಾರು. ಇಷ್ಟು ಸುಂದರ ಜಗತ್ತನ್ನು ಬಿಟ್ಟು ಹೋದರೆ ನಷ್ಟ ನನಗಲ್ಲದೆ ಇನ್ಯಾರಿಗೆ? ಕಷ್ಟಪಟ್ಟು ಇಷ್ಟೆತ್ತರಕ್ಕೆ ನನ್ನನ್ನು ಬೆಳೆಸಿ ನಿಲ್ಲಿಸಿದ, ತಮ್ಮೆಲ್ಲ ಒಳ್ಳೆ ಗುಣಗಳನ್ನೂ ಸಂಸ್ಕಾರಗಳನ್ನೂ ಧಾರೆ ಎರೆದ ಮನೆಯವರಿಗೆ ನಾನು ಏನು ಕೊಟ್ಟಂತೆ ಆಯಿತು? ನಿನಗೆ ನಾನು ಸ್ವಾರ್ಥಿ ಎನ್ನಿಸಬಹುದು. ನೀನು ಹಾಗೆ ತಿಳಿದುಕೊಂಡರೂ ನನಗೆ ಬೇಸರವಿಲ್ಲ. ಒಟ್ಟಿನಲ್ಲಿ ಬದುಕಬೇಕಿದೆ; ನನ್ನ ಕನಸಿನಂತೆ. ಓದಿ ಮುಗಿಸುವ ಪುಸ್ತಕಗಳಿವೆ, ನೋಡುವ ಜಾಗಗಳು ಎಷ್ಟು ಉಳಿದಿವೆ, ಎಷ್ಟು ಜನರನ್ನು ಭೇಟಿಯಾಗುವುದು ಹಾಗೆ ಉಳಿದಿದೆ, ಎಷ್ಟೊಂದು ವಿಷಯಗಳನ್ನು ಇನ್ನೂ ಕಲಿಯುವುದಿದೆ, ಅದೆಷ್ಟು ಕನಸುಗಳು ನನ್ನ ಕಣ್ಣಿಗೆ ಬರಲು ಸಾಲು ಹಿಡಿದು ಕಾಯುತ್ತಿವೆಯೋ..... ಬದುಕಬೇಕು ಕಣೋ... ಬದುಕುತ್ತೀನಿ. ಅವನಿಗೆ ಬದುಕಿ ತೋರಿಸಬೇಕೆಂಬ ಜಿದ್ದಿಗಲ್ಲ, ನನ್ನ ಜೀವನ ಪ್ರೀತಿಗೋಸ್ಕರ ಎಂದಳು. ಅವಳ ಮಾತಿನ ಹಿಂದಿನ ನೋವಿನ ಎಳೆಯನ್ನು ಗ್ರಹಿಸದೆ ಇರಲಾಗಲಿಲ್ಲ. ನನಗೆ ಅಂತಾ ಒಂದು ಹುಡುಗನನ್ನು ದೇವರು ಬರೆದಿಟ್ಟಿದ್ದಾನೆ ಬಿಡು. ಅಲ್ಲಿಯವರೆಗೆ ನನ್ನನ್ನು ನಕ್ಕು ನಲಿಸಲು, ನೋವನ್ನು ಹೇಳಿಕೊಳ್ಳಲು, ಜಗಳ ಆಡಲು ನಿನ್ನಂತ ಗೆಳೆಯ ಇದ್ದೀಯಲ್ಲ, ಸಾಕು ನನಗೆ ಎಂದು ಹೇಳಿ ಕಿರುನಗೆಯೊಂದನ್ನು ಬೀರಿದಳು. ಅವಳ ಸಂತಸದಲ್ಲಿ ನಾನೂ ಪಾಲುದಾರನಾದೆ.

ಕಥೆಯೊಂದನ್ನು ಓದುತ್ತಿದ್ದೆ. ಅದರಲ್ಲಿನ ಒಂದು ಪಾತ್ರ ಪ್ರೀತಿಗೋಸ್ಕರ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತದೆ. ಜೀವನದಲ್ಲಿ ಆಶಾಭಾವ ಬೆಳೆಸಿಕೊಳ್ಳಬೇಕು, ಜೀವನವನ್ನು ಪ್ರೀತಿಸಬೇಕು, ಅನುಭವಿಸಬೇಕು ಎಂದು ನನ್ನ ಗೆಳತಿ ಹೇಳುತ್ತಿದ್ದ ಮಾತುಗಳು ನೆನಪಾದವು. ಮೊಬೈಲ್ ಇಂದ " i am proud of you" ಎಂದು ಒಂದು ಮೆಸೇಜನ್ನು ತೇಲಿಬಿಟ್ಟೆ. ಆ ಕಡೆಯಿಂದ ಒಂದು ಸ್ಮೈಲಿಯಷ್ಟೇ ಬಂದಿತು. ಆ ಸ್ಮೈಲಿಯ ಅರ್ಥ ಅವಳಿಗೆ ಹಾಗು ನನಗೆ ಮಾತ್ರ ಗೊತ್ತು...

Thursday, April 15, 2010

ಸಂಜೆ ಮಳೆ


ಮಳೆ ಹನಿಗಳ ಸ್ಪರ್ಶಕ್ಕೆ
ಮಣ್ಣಿನ ಪರಿಮಳ ಮೂಗನ್ನು ಉದ್ದೀಪಿಸಿ
ನೆನಪುಗಳ ಸರಪಟಾಕಿಗೆ ಕಿಚ್ಚಿಟ್ಟು
ಒಂದೊಂದೇ ನೆನಪುಗಳು ಸಿಡಿಯುತ್ತಾ,
ಕೆಲವು ನೋವಿನ ಬಣ್ಣ, ಕೆಲವು ನಲಿವಿನ ಬಣ್ಣ ಪಡೆಯುತ್ತಾ,
ಮನದ ಆಕಾಶದಲ್ಲೆಲ್ಲ ರಂಗುರಂಗಿನ
ಚಿತ್ತಾರ ಮೂಡುತಿದೆ ಅದೋ ನೋಡು...

Wednesday, April 14, 2010

ಆಶಯ

ಮನೆಯಲ್ಲಿ ಬೆಳಕಿಲ್ಲ,
ಹೊರಗೆ ಜಡಿಮಳೆಯ ನರ್ತನ
ಈ ದೊಡ್ಡ ಕಿಟಕಿಯ ಗಾಜಲ್ಲೆಲ್ಲಾ
ಮಣಿಗಳಾಗಿ ಹನಿಗಳು
ಅದರಾಚೆಗೆ ಕತ್ತಲೆಯಲಿ ಮುಳುಗೆಳುತಿಹ ಜಗ

ಆಗಾಗ ಮಿಂಚಿ ಮಾಯವಾಗುತಿಹುದು ಬೆಳಕು
ಮಿಂಚಿನ ಹೆಗಲೇರಿ ಬರುತಿಹುದು ಗುಡುಗೂ
ಇವೆರಡ ರಾಗ-ತಾಳಕ್ಕೆ ಕುಣಿಯುತಿಹನು ವರುಣನು
ತಂಗಾಳಿಯೂ ಜೋತೆಯಾಗಿಹುದು ಈ ಮೂವರೊಂದಿಗೆ

ಮಳೆಹನಿಗಳ ಸ್ಪರ್ಶದಿಂದ ನಸುನಗುವುದು ಜಗವು
ರವಿಯ ಬೆಳಗಿನಲ್ಲಿ ನಲಿನಲಿಯುವುದು
ಮತ್ತೊಂದು ಸುಂದರ ಬೆಳಗನ್ನು ನಿರೀಕ್ಷಿಸುತ್ತ
ನಿದ್ದೆಗೆ ಜಾರಿಕೊಳ್ಳುವೆನು ಹನಿಮಳೆಯ ಕನಸಿನಲ್ಲಿ

Tuesday, April 13, 2010

ಹುಟ್ಟುಹಬ್ಬಕ್ಕೊಂದು ಉಡುಗೊರೆಗೆಳತಿ ಪ್ರಿಯಾಳಿಗೆ ಮೈಕಲ್ ಜಾಕ್ಸನ್ ಅಂದರೆ ವಿಪರೀತ ಇಷ್ಟ. ಅವಳ ಹುಟ್ಟುಹಬ್ಬಕ್ಕೆ ನಾವೆಲ್ಲಾ ಗೆಳೆಯರು ಸೇರಿ ಕೊಟ್ಟ ಉಡುಗೊರೆ ಇದು.... ಬಹಳ ದಿನದ ನಂತರ ಸ್ಕೆಚಿಂಗ್ ಮಾಡಲು ನನಗೊಂದು ನೆವ ಸಿಕ್ಕಿದ್ದಕ್ಕೆ ನಾನೂ ಫುಲ್ ಖುಷ್ :)

Saturday, March 27, 2010

ಹಳೆಯ ಹವ್ಯಾಸ... ಎರಡು ಚಿತ್ರಗಳು

ನಾನು ಇತ್ತೀಚಿಗೆ ನನ್ನ ಟೀ-ಶರ್ಟ್ ಮೇಲೆ ಬಿಡಿಸಿದ ಚಿತ್ರಗಳಿವು. ಟೀ-ಶರ್ಟ್ ಮೇಲೆ ಚಿತ್ರಿಸುವುದು ನನ್ನ ಹಳೆಯ ಹವ್ಯಾಸಗಳಲ್ಲಿ ಒಂದು. ಕಳೆದ ನಾಲ್ಕಾರು ವರ್ಷಗಳಲ್ಲಿ ಈ ಹವ್ಯಾಸವನ್ನು ಮರೆತೇ ಬಿಟ್ಟಿದ್ದೆ. ಆರು ತಿಂಗಳ ಕೆಳಗೆ ನನ್ನ ಮೆಚ್ಚಿನ ವ್ಯಕ್ತಿ ಅರ್ನೆಷ್ಟೋ 'ಚೇ' ಗವಾರ ನ ಚಿತ್ರದ ಟೀ-ಶರ್ಟ್ ಅನ್ನು ಹುಡುಕುತ್ತ ಊರೆಲ್ಲ ಅಲೆದಿದ್ದೆ.. ಹಲವು ಕಡೆ 'ಚೇ' ನ ಚಿತ್ರದ ಟೀ-ಶರ್ಟ್ ಸಿಕ್ಕರೂ, ನನಗೆ ಬೇಕಾದ ವಿನ್ಯಾಸದ್ದು ಸಿಕ್ಕಿರಲಿಲ್ಲ. ಕೊನೆಗೆ ಒಂದು ದಿನ ಏನೋ ಹುಡುಕುತ್ತ ಇದ್ದಾಗ ನಾನು ಬಟ್ಟೆಯ ಮೇಲೆ ರಚಿಸಿದ್ದ ಚಿತ್ರವೊಂದು ಸಿಕ್ಕಿತು, ಅದನ್ನು ನೋಡಿದಾಗ ನನ್ನ ಈ ಹವ್ಯಾಸ ನೆನಪಿಗೆ ಬಂದು, ಒಂದು ಬಿಳಿ ಟೀ-ಶರ್ಟ್ ಖರೀದಿಸಿ, ನನಗೆ ಬೇಕಾದ ರೀತಿಯಲ್ಲಿ 'ಚೇ' ನ ಪೇಂಟಿಂಗ್ ಮಾಡಿದೆ. ಇನ್ನೊಂದು ಪೇಂಟಿಂಗ್ ಕಳೆದ ವಾರ ಮಾಡಿದ್ದು, ಸುಮ್ಮನೆ ಯಾವುದೇ ಕಾರಣವಿಲ್ಲದೆ ಕಾಲ ಕಳೆಯಲು ಬಿಡಿಸಿದ್ದು :) ನೋಡಿ ಹೇಗಿದೆಯೆಂದು ತಿಳಿಸಿ...


Sunday, March 14, 2010

ಕಾಡು ಹೂವುಗಳು - ೨
ನಿಮಗೋಸ್ಕರ ಇನ್ನೊಂದಿಷ್ಟು ಹೂವುಗಳು... ಇವೆಲ್ಲ ಈ ಬಾರಿ ಕಾಲೇಜಿನಿಂದ ಟ್ರಿಪ್ ಹೋದಾಗ ತೆಗದದ್ದು... ಬಹಳಷ್ಟು ಜನರಿಗೆ ಅವರ ಫೋಟೋ ತೆಗೆಯದೆ ಹೂಗಳ ಫೋಟೋ ತೆಗೆದದ್ದು ಬೇಸರ ತಂದಿತ್ತು :)Wednesday, March 3, 2010

ಕಾಡು ಹೂವುಗಳು - ೧


ನನಗೆ ಕಾಡು ಹೂವುಗಳೆಂದರೆ ಇಷ್ಟ... ಅವುಗಳ ಆಕಾರ, ಬಣ್ಣ, ವಿವಿಧತೆ ನನ್ನಲ್ಲಿ ಯಾವಾಗಲೂ ಅಚ್ಚರಿ ಹುಟ್ಟಿಸುತ್ತವೆ. ನಾನು ಚಾರಣಕ್ಕೆ ಹೋದಾಗಲೆಲ್ಲ ನನ್ನ ಕಣ್ಣುಗಳು ಹೊಸ ಬಗೆಯ ಕಾಡು ಹೂಗಳನ್ನು ಹುಡುಕುತ್ತಿರುತ್ತವೆ. ಹಲವಾರು ಬಾರಿ ಕಾಡು ಹೂಗಳು ತುಂಬಾ ಚಿಕ್ಕದಾಗಿದ್ದು ನನ್ನ ಕ್ಯಾಮೆರಾದ ವಿಸ್ತರಣ ಸಾಮರ್ಥ್ಯಕ್ಕೂ ಸಿಗದೇ ನಿರಾಸೆಗೊಂಡಿದ್ದೇನೆ. ಕೆಲವು ಬಾರಿ ತೆಗೆಯಬೇಕಾದ ಹೂವು ಸರಿಯಾದ ಕೋನದಲ್ಲಿ ಇರದೇ, ಸರಿಯಾದ ಬೆಳಕಿಗಾಗಿ, ಕೋನಗಳಿಗಾಗಿ ಒದ್ದಾಡುತ್ತಾ ನನ್ನ ಸಹ ಚಾರಣಿಗರ ತಾಳ್ಮೆಯನ್ನು ಪರೀಕ್ಷಿಸಿದ್ದೇನೆ. ಆದರೆ ಈಗಲೂ ಬೇಸರವಾದಗೆಲ್ಲ ಈ ಹೂವುಗಳ ನೋಡುತ್ತಾ ಇವುಗಳ ಬಣ್ಣಗಳಿಗೆ ಮಾರು ಹೋಗುತ್ತೇನೆ. "ಕಾಡು ಹೂವುಗಳು" ಸರಣಿಯಲ್ಲಿ ನನಗೆ ಸಿಕ್ಕ ಕಾಡು ಹೂವುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಎರಡು ವರ್ಷಗಳ ಹಿಂದೆ ಕುಮಾರಪರ್ವತ ಚಾರಣಕ್ಕೆ ಹೋದಾಗ ಸಿಕ್ಕ ಕೆಲ ಕಾಡು ಹೂಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದೇನೆ... ನೋಡಿ ಬಣ್ಣಗಳನ್ನು ಕಣ್ಣಲ್ಲಿ ತುಂಬಿಸಿಕೊಳ್ಳಿ :)Monday, February 15, 2010

ಸಾಲುಗಳು... ಸುಮ್ಮನೆ...

ಬಸ್ ನಿಲ್ದಾಣದ ಕೆಂಪು ಧೂಳನ್ನು ಮೆತ್ತಿಕೊಂಡ ಲಂಟಾನ ಪೊದೆಗಳಂತೆ ಮೌನ ಹಾಗು ತಾಳ್ಮೆಯ ಪ್ರತೀಕಗಳಾಗಿ ಕಾಯುತಿಹರು ತಮ್ಮ ತಮ್ಮ ನಿಶ್ಚಿತವಲ್ಲದ ಬಸ್ಸುಗಳಿಗೆ ಪ್ರಯಾಣಿಕರಿಲ್ಲಿ...

ಶನಿವಾರದ ಮಾರ್ನಿಂಗ್ ಕ್ಲಾಸಿಗೆ ಲಘುಬಗೆಯಲ್ಲಿ ಹೆಜ್ಜೆ ಹಾಕುತಿರುವ ಎರಡು ಜಡೆಯ ಪುಟ್ಟ ಹುಡುಗಿಯರ ಮೇಲೆ ಕೊಂಚ ಕೊಂಚವಾಗಿ ಉದಯಿಸುತಿಹನು ರವಿಯು...

ಬೆಳಗಿನ ಜಾವದವರೆಗೂ ಓದಿದ ಪಾಠಗಳೆಲ್ಲ ಪರೀಕ್ಷೆಯ ಸಮಯದಲ್ಲಿ ನಿದ್ದೆಗೆಟ್ಟ ಕಂಗಳ ಮಂಪರಿನಲ್ಲಿ ಕಳೆದು ಹೋಗುತ್ತಿರಲು...

ಒಂದು ಸಾಮಾನ್ಯ ಮಳೆಗಾಲದ ದಿನದಂದು ಪುಟ್ಟನೋಬ್ಬನ ಕೈ ಇಂದ ಜಾರಿದ ಕಾಗದದ ದೋಣಿಯೊಂದು ಚರಂಡಿಯ ನೀರಿನ ವೇಗದೊಂದಿಗೆ ಹೋರಾಡುತ್ತಾ ತನ್ನ ತೀರವನ್ನು ಸೇರುವ ತವಕದಲ್ಲಿ....

ಅತ್ತ ಗಣಹೋಮ ಭರ್ಜರಿಯಾಗಿ ಸಾಗುತ್ತಿದೆ, ಇತ್ತ ಹಸಿದ ಹೊಟ್ಟೆಯ ಮಕ್ಕಳ ಕಣ್ಣುಗಳಲ್ಲಿ ಅಗ್ನಿಯ ಮಡಿಲು ಸೇರುತ್ತಿರುವ ಮೋದಕಗಳ ಲೆಕ್ಕ ಏರುತ್ತಿದೆ.

ಮನೆಯೊಂದು ಸಂತಸದಲಿ ಮುಳುಗಿರಲು, ಮನೆಯ ಮಗಳು ಇನ್ನು ಮೂರು ದಿನಗಳಲ್ಲಿ ತಾನು ಓಡಿಹೋಗುವ ಹುಡುಗನ ಕುರಿತು ಯೋಚಿಸುತಿಹಳು. ವಿಷಯವನ್ನು ಬಲ್ಲ ಅವಳ ಪುಟ್ಟ ತಮ್ಮ ಕುಟುಂಬದ ಈ ನಗುವಿನಲ್ಲಿ ಸಿಗದ ಯಾವ ಸುಖವನ್ನು ಅಕ್ಕ ಅರಸುತಿರಬಹುದು ಎಂದು ನಿಟ್ಟುಸಿರ ಬಿಟ್ಟಿಹನು...

ಯಾವುದೋ ದೂರು ಹೇಳುವ ಸಲುವಾಗಿ ಕಾಲ್ ಸೆಂಟರ್ಗೆ ಫೋನಾಯಿಸಿದಾಗ, ಆ ಕಡೆಯಿಂದ ಬಂದ ಧ್ವನಿಯ ಇಂಪಿಗೆ ಸೋತು ಹೇಳಬೇಕಿದ್ದ ದೂರನ್ನೇ ಮರೆತ ಆ ಕ್ಷಣ...

ಕಣ್ಣಂಚಿನ ಆ ಕಪ್ಪು ಕಾಡಿಗೆ ನಿನ್ನ ಕಣ್ಣಿಗಷ್ಟೇ ಅಂದವೇ ? ಗೊತ್ತಿಲ್ಲ ನನಗೆ, ಬೇರೆ ಕಣ್ಣುಗಳನ್ನು ನೋಡುವ ಪ್ರಯತ್ನವನ್ನು ಇನ್ನೂ ಮಾಡಿಲ್ಲ. .

Friday, January 29, 2010

ಬರೆಯಬೇಕಿದೆ... ಇಂದಾದರೂ

ಕುಳಿತುಕೊಳ್ಳುವೆ ಏನಾದರೂ ಬರೆಯಲೇಬೇಕೆಂದು
ಪದಗಳು ಅಡಗಿ ಕುಳಿತಿವೆ ಬೆಚ್ಚಗೆ ಪೆನ್ನಿನ ಶಾಯಿಯಲ್ಲಿ
ನನ್ನ ಕವನದಲ್ಲಿನ ದಾರುಣ ಸಾವು ಅವುಗಳಿಗೆ ಬೇಕಿಲ್ಲ
ಒರಗಿದ ಬೆನ್ನಿನ ಭಾರ ತಾಳಲಾರದೆ ಕಿರಗುಟ್ಟುತ್ತಿದೆ ಗೋಡೆಯೂ...

ನಿರ್ವಿಕಾರವಾಗಿ ತನ್ನ ತೆಕ್ಕೆಯಲ್ಲಿ ಭುವಿಯನ್ನು ಸೆಳೆದುಕೊಂಡ ಕತ್ತಲು
ಚಂದಿರನೂ ಕಿಟಕಿಯ ದಾಟಿ ಒಳ ಬರಲು ಹೆದರಿಹನು,
ತಾನೆಲ್ಲಿ ಕವನಕ್ಕೆ ಸ್ಪೂರ್ಥಿಯಾಗುವೆನೋ ಎಂದು ಅವನಿಗೆ
ಬಾಗಿಲ ಸಂದಿಯ ನೆರಳುಗಳು ನನ್ನ ನೋಡಿ ಗಹಗಹಿಸಿವೆ

ಕುಡಿದ ಕಾಫಿಯೂ ಕಂಡಿದೆ ಹೊಟ್ಟೆಯ ತಳವ
ಗಡಿಯಾರದ ಮುಳ್ಳುಗಳು ಮೆಲ್ಲನೆ ನುಣಿಚಿಕೊಳ್ಳುತ್ತಿವೆ
ತಲೆಕೊಡವಿ ಏಳುವೇನು, ಕಚ್ಚುವೆನು ಪೆನ್ನಿನ ತುದಿಯ
ಬೆಳಗೂ ಮೈಮುರಿದು ಆಕಳಿಸತೊಡಗಿದೆ

ನಾನು ಬರೆಯಲಿಲ್ಲ..... ಇಂದೂ
ಗಾಳಿಗೆ ಪಟಪಟಗುಟ್ಟುತ್ತಿರುವ ಹಾಳೆಗಳು ಖಾಲಿ ಖಾಲಿ...

Monday, January 25, 2010

ವರ್ಷದ ಮೊದಲ ಚಿತ್ರ


ಇದು ಈ ವರ್ಷ ಬಿಡಿಸಿದ ಮೊದಲ ಚಿತ್ರ... ಇತ್ತೀಚಿಗೆ ಚಿತ್ರ ಬಿಡಿಸುವ ಆ ಹಲವು ಘಂಟೆಗಳ ಸಮಯವನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ.. ಚಿತ್ರ ಕೊನೆಯಲ್ಲಿ ಚಂದವಾಗಿ ಬರುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಆತಂಕವಿಲ್ಲ. ಬರೋಬ್ಬರಿ ಮೂರು ದಿನ ಕುಳಿತುಕೊಂಡು ಬಿಡಿಸಿದ ಚಿತ್ರವಿದು (೩ ಘಂಟೆ x ೩ ದಿನ). ಇಷ್ಟೊಂದು ತಾಳ್ಮೆಯಿಂದ ಚಿತ್ರ ಬಿದಿಸುತ್ತಿರುವುದು ಇದೆ ಮೊದಲು. ನೀವು ಚಿತ್ರವನ್ನು ನೋಡಿ ಹೇಳಿ ಹೇಗಿದೆಯೆಂದು. ಚಿತ್ರವನ್ನು ದೊಡ್ಡದಾಗಿ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

Tuesday, January 19, 2010

ಕತ್ತಲು - ನನಗೆ

ನಿಂತಿದ್ದೇನೆ ಗುಮ್ಮನ ಹಾಗೆ ಆವರಿಸಿಕೊಂಡ ಕತ್ತಲ ಮುಂದೆ
ಕತ್ತಲು, ಮಾತಿಲ್ಲದೆ ಮುಗಿದ ಪ್ರೀತಿಯ ನೆನಪಿನ ಹಾಗೆ
ಕಪ್ಪು ಕೋಣೆಯೊಂದರ ಬೀಗ ಕಳೆದುಕೊಂಡ ಬಾಗಿಲ ಹಾಗೆ

ಕತ್ತಲು ಆವರಿಸುತ್ತದೆ ಬೆಳಕಿನ ಮರಣದ ಮರುಘಳಿಗೆಯೇ
ಕತ್ತಲು, ಬಚ್ಚಿಟ್ಟ ನೋವಿಗೆ ಕಣ್ಣೀರು ಒತ್ತರಿಸಿ ಬರುವ ಹಾಗೆ
ಸಂಜೆ ಸೂರ್ಯನನ್ನೇ ನುಂಗುವ ಉನ್ಮತ್ತ ಕಡಲ ಹಾಗೆ

ಬೆಳಕಿನಷ್ಟೇ ಮುಖ್ಯವೆನಿಸುತ್ತದೆ ಈ ಕರಿಕತ್ತಲು
ಸೋತಿಹೆನು ಇಂದು ಈ ಭಯದ ಬಣ್ಣಕ್ಕೆ
ಬೆಳಕು ಬೇಕಿಲ್ಲ ಎನಗೆ
ಕತ್ತಲೇ ತೋರುತಿರುವಾಗ ಹಾದಿಯನು ನನ್ನ ಅಂತರಂಗದೆಡೆಗೆ

Sunday, January 10, 2010

ಒಂದು ಹಿಡಿ ವಿರಹ....

ನನ್ನ ಕಂಗಳ ಕೊಳದಿ ಬಂಧಿ ನೀನು
ಹೊರಹೋಗ ಬಯಸಿದರೆ ಚುಚ್ಚಿಬಿಡು ಈ ಕಂಗಳ
ಕಣ್ಣೀರಿನೊಂದಿಗೆ ದಯಪಾಲಿಸುವೆ ಮುಕ್ತಿಯನು....


ಈ ಕನಸಿನ ಗೋಪುರ ಒಂದುದಿನ ಬೀಳುವುದು
ಎಂದು ಗೊತ್ತಿದ್ದೂ ಕಟ್ಟಿದ್ದು ನನ್ನದೇ ತಪ್ಪು
ನಿನ್ನ ಕನಸಿನ ಚಿತ್ತಾರದ ಬಣ್ಣಗಳಲ್ಲೇ ಲೀನವಾಗಿದ್ದೆ
ಹೃದಯವೇ ಆಳುತ್ತಿತ್ತು; ಬುದ್ದಿಗೆ ಒಂದಿನಿತೂ ಅವಕಾಶವೀಯದೆ


ನಿನ್ನ ನೆನಪಲ್ಲಿ ಬಂದ
ನನ್ನ ನಿಟ್ಟುಸಿರ ತೇವಕ್ಕೆ
ಕಿಟಕಿಯ ಗಾಜೆಲ್ಲ ಮಂಜಾಗಿ...
ಹೊರಗಿನ ವಿಶ್ವವೇ ಅಗೋಚರವಾಗಿ...


ಮೋಡಗಳ ಮಧ್ಯದಿಂದ ತೂರಿಬರುವ
ಸಂಜೆಗೆಂಪಿನ ಸೂರ್ಯನ ಕಿರಣಗಳು ನೀನು....
ಆ ಕಿರಣಗಳ ಪ್ರಖರತೆಗೆ ಕರಗುವ
ಮಂಜಿನ ಬಿಂದುವಾಗಿ ನಾನು...ನಿನ್ನೆಗಳ ಬಗ್ಗೆ ಏಕೆ ಬೇಸರ
ನಾಳೆಗಳ ಬಗ್ಗೆ ಏಕೆ ಕಾತರ
ಇಂದು ಎಂಬ ಇಂದನ್ನು ಬಾಳು ಹರುಷದಿಂದ
ನಡಿ ಮುಂದಕೆ ಎಂದೂ ಬತ್ತದ ಹುರುಪಿನಿಂದ.


ನಿನ್ನೆ ನೀನು ಕಿವಿಯಲ್ಲಿ ಹೇಳಿದ ಗುಟ್ಟು ...
ನಿನ್ನ ಬಿಸಿಯುಸಿರ ಬೆಚ್ಚನೆಯ ಭಾವ...
ನನ್ನ ಅಂಗಿಗಂಟಿದ ನಿನ್ನ ಕೂದಲಿನ ಕಂಪು..
ನನ್ನ ಎದೆಯಲ್ಲೇ ಉಳಿದ ಒಂದು ಹಿಡಿ ನೆನಪು...
ನಾನು, ನಕ್ಷತ್ರ, ಹಾಗು ಅಗಾಧ ಆಗಸಗಳಷ್ಟೇ ಇಂದು...