Thursday, November 27, 2008

ಅನಾವಶ್ಯಕ

ಕಳೆದ ಭಾನುವಾರ ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮಳೆ ಬರಲಿ ಎಂದು ಜಪಿಸುತ್ತ ಕುಳಿತಿದ್ದೆ. ಮಳೆಯೇನೋ ಬಂತು ಆದರೆ ಪಂದ್ಯ ನಿಲ್ಲುವಷ್ಟು ಬರ್ಲಿಲ್ಲ. ನಿಮಗೆ ಆಶ್ಚರ್ಯ ಆಗಬಹುದು ಎಲ್ಲರು ಪಂದ್ಯ ನಡೆಯಲಿ ಎಂದು ಕಾಯುತ್ತಿದ್ದಾರೆ ಇವನು ಮಳೆ ಬರಲಿ ಎಂದು ಕಾಯುತ್ತಿದ್ದಾನೆ ಎಂದು. ಅದಕ್ಕೆ ಒಂದು ಕಾರಣವಿದೆ. ನಾನು ಕ್ರಿಕೆಟ್ ಪ್ರೇಮಿಯೇ, ಆದರೆ ಇಡಿ ರಾಜ್ಯ ವಿದ್ಯುತ್ ಕೊರತೆ ಎದುರಿಸಿತ್ತಿರುವಾಗ ಇಲ್ಲಿ ಕೇವಲ ಮನೋರಂಜನೆಗೊಸ್ಕರ ಒಂದು ಕ್ರಿಕೆಟ್ ಪಂದ್ಯವನ್ನು ರಾತ್ರಿ ಇಡಿ ವಿದ್ಯುತ್ ಉರಿಸಿ ಆಡಿಸುವ ಅಗತ್ಯತೆ ಬಗ್ಗೆ ನನಗೆ ಬೇಸರವಿದೆ. ಬಿ.ಸಿ.ಸಿ.ಐ ವರು ವಿದ್ಯುತ್ ನ ಹಣವನ್ನು ಪಾವತಿಸಬಹುದು. ಆದರೆ ವಿದ್ಯುತ್ ಒಂದು ನವೀಕರಿಸಲಾಗದ ಶಕ್ತಿಯ ಮೂಲ ಎನ್ನುವ ವಿಷಯವನ್ನು ನಾವು ಮರೆಯಬಾರದು. ಎಷ್ಟು ಹಣ ಕೊಟ್ಟರೂ ಬಳಸಿದ ವಿದ್ಯುತ್ ಮತ್ತೆ ದೊರಕುವುದಿಲ್ಲ ಎಂಬುದು ಸತ್ಯ. ರಾಜ್ಯಕ್ಕೆ ೧೭೦೦ ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದೆ, ೪೦೦ ಕೋಟಿ ವೆಚ್ಚದಲ್ಲಿ ವಿದ್ಯುತ್ತನ್ನು ಹೊರ ರಾಜ್ಯಗಳಿಂದ ಖರೀದಿ ಮಾಡುತ್ತಿರುವುದಾಗಿ ಮಾನ್ಯ ಸಚಿವರು ಅದೇ ದಿನದಂದು ಘೋಷಿಸಿದ್ದರು. ವಿದ್ಯಾರ್ಥಿಗಳು, ಜನಸಾಮಾನ್ಯರು ವಿದ್ಯುತ್ ಇಲ್ಲ ಎಂದು ತಲೆ ಕೆಡಿಸಿಕೊಂಡರೆ ಇವರಿಗೆ ಪಂದ್ಯ ನಡೆಸುವ ಬಗ್ಗೆ ಯೋಚನೆ. ಮನೋರಂಜನೆ ಬೇಕು ಆದರೆ ಅದಕ್ಕಾಗಿ ಅನಾವಶ್ಯಕವಾಗಿ ಖರ್ಚು ಮಾಡುವುದು ಸರಿಯಲ್ಲ ಎಂದು ನನ್ನ ಭಾವನೆ.
ಇದೆ ರೀತಿಯ ಇನ್ನೊಂದು ದುಂದು ವೆಚ್ಚದ ಆಟ ಫಾರ್ಮುಲ ಒನ್ ರೇಸಿಂಗ್. ಸುಮಾರು ೨೦ ಕಾರುಗಳು ೩೦೦ ಕಿಲೋ ಮೀಟರ್ ಗೂ ಜಾಸ್ತಿ ದೂರವನ್ನು ಅರ್ಥವಿಲ್ಲದೆ ಸುತ್ತುತ್ತವೆ. ಅಷ್ಟು ಸುತ್ತುವಷ್ಟರಲ್ಲಿ ಎಷ್ಟು ಪೆಟ್ರೋಲ್ ಖರ್ಚಗಿರುತ್ತೋ ದೇವರೇ ಬಲ್ಲ. ಸಧ್ಯಕ್ಕೆ ಈ ಆಟ ಇನ್ನು ಭಾರತಕ್ಕೆ ಕಾಲಿಟ್ಟಿಲ್ಲ, ೨೦೧೧ ಅಷ್ಟರಲ್ಲಿ ಇಲ್ಲೂ ಅದು ಪ್ರಾರಂಭವಾಗುತ್ತದೆ. ಹುಡುಕಿದರೆ ಇಂತ ಅನಾವಶ್ಯಕ ಮನೋರಂಜನೆಗಳು ಬಹಳಷ್ಟು ಸಿಗುತ್ತವೆ, ಯೋಚಿಸಿ ಈ ವಿಷಯಗಳ ಬಗ್ಗೆ.

Wednesday, November 12, 2008

ಮುಖಗಳು


ಕಾಡಿಸಿ ಕಾಡಿಸಿ ಕೊನೆಗೂ ನೆನಪಾಗದ ಅವಳ ಮುದ್ದು ಮೊಗ, ಸಂತೆಯಲ್ಲಿ ಬಿಕರಿಯಾಗದೆ ಉಳಿದ ತರಕಾರಿ ಮೂಟೆಗಳು ಮತ್ತು ಅವುಗಳೊಂದಿಗೆ ಚಿಂತೆಯ ಗೆರೆಗಳನ್ನು ಮುಖದ ಮೇಲೆ ಮೂಡಿಸಿಕೊಂಡಿರುವ ಅವುಗಳ ಯಜಮಾನ, ಪ್ರಪಂಚವನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಾ ತಾಯಿಯ ಸೊಂಟಕ್ಕೆ ಅಂಟಿಕೊಂಡಿರುವ ಭಿಕ್ಷುಕಿಯ ಮಗು, ಮನೆಯಲ್ಲಿ ಜಗಳ ಮಾಡಿಕೊಂಡು ಮಹಾನಗರಿಗೆ ಬಂದಿಳಿದ ಯುವಕನ ಆತಂಕದ ಕಣ್ಣುಗಳು, ಮಾಡದ ತಪ್ಪಿಗೆ ವಿಷ ತಿಂದು ಸತ್ತ ಆನೆಗಳ ಮಡಿಲಲ್ಲಿದ್ದ ಆ ಮರಿಯಾನೆಯ ಮುಗ್ಧ ನಯನಗಳು. ಇವೆಲ್ಲವೂ ಇತ್ತೀಚಿಗೆ ನನ್ನನ್ನು ಕಾಡುತ್ತಿರುವ ಮುಖಗಳು.

Wednesday, November 5, 2008

ಹುಣ್ಣಿಮೆ ರಾತ್ರಿ

ಕಣ್ಣು ಚಾಚಿದಷ್ಟಕ್ಕೂ ದೂರ ಕಾಣುವ ಕತ್ತಲು, ಕತ್ತಲ ಬೆನ್ನು ಹತ್ತಿರುವ ಮೌನ, ಚಂದಿರನ ಬೆಳಕಲ್ಲಿ ಅಸ್ಪಷ್ಟವಾಗಿ ಕಾಣುವ ಬೆಟ್ಟದ ಸಾಲುಗಳು. ತಲೆಯೆತ್ತಿ ಆಗಸದೆಡೆಗೆ ನೋಡಿದೆನು, ನನ್ನ ದುರಾದೃಷ್ಟವೋ ಏನೋ ಇಂದು ಅಷ್ಟೊಂದು ನಕ್ಷತ್ರಗಳಿಲ್ಲ. ಆದರೂ ವೇಗವಾಗಿ ಸಾಗುತ್ತಿದ್ದ ಮೋಡಗಳು, ಮೋಡ ತಿಳಿಯಾದಾಗ ಕಾಣುವ ಪ್ರಕಾಶಮಾನ ಶಶಿಯನ್ನು ಇನ್ನು ನಾಲ್ಕಾರು ದಿನ ಮರೆಯಲಾರೆ. ಗಡಗುಟ್ಟಿಸುವ ಚಳಿ, ಕೆಲವೊಮ್ಮೆ ಹಿತವೆನಿಸುವ ತಂಗಾಳಿ, ಬೊಗಸೆಯಲ್ಲಿ ತುಂಬಿಕೊಳ್ಳುವಷ್ಟು ಮೌನ, ಕೊನೆಯಿಲ್ಲದ ಬೆಟ್ಟದ ಸಾಲುಗಳು, ಗವ್ವೆನ್ನುವ ಕಾಡು ಇದೆಲ್ಲ ಅನುಭವಿಸಿ ಎಷ್ಟು ದಿನಗಳಾಯಿತು ? ಬೆಂಗಳೂರಲ್ಲಿ ಇದೆ ಸಮಯದಲ್ಲಿ ದೇಹಕ್ಕೇ ಕಿಚ್ಚು ಹಚ್ಚಿಸಿಕೊಂಡು ಕೆಲಸದಲ್ಲಿ ಮುಳುಗಿರುತ್ತಿದ್ದೆ. ನಾಲ್ಕು ದಿನಗಳಲ್ಲಿ ಈ ಊರನ್ನು ಬಿಟ್ಟು ಮತ್ತೆ ಅದೇ ಇಷ್ಟವಿಲ್ಲದ ಜಾಗಕ್ಕೆ ಹೋಗಬೇಕಾದ ಅನಿವಾರ್ಯತೆಯ ನೆನಪಾಗಿ ಬೇಸರಗೊಂದೆ. ಮೋಡಗಳ ಮಧ್ಯದಿಂದ ಇಣುಕುತ್ತಿದ್ದ ಚಂದ್ರನ ಕಂಡು ಕುವೆಂಪು ಅವರ ಕವಿತೆಯೊಂದು ನೆನಪಾಯಿತು. ಕವಿತೆಯ ಹೆಸರು "ಹುಣ್ಣಿಮೆಯ ರಾತ್ರಿ" ಎಂದು. ಹೈಸ್ಕೂಲ್ ನಲ್ಲಿ ಇದ್ದಾಗ ಕನ್ನಡ ಪಠ್ಯ ಪುಸ್ತಕದಲ್ಲಿ ಇದ್ದ ನೆನಪು.

ಓ ನೋಡದೋ ರಂಜಿಸುತಿದೆ
ರಜನಿಯ ಕೈದೀಪ
ನೀಲದಿಯಲಿ ತೆಲುತ್ತಿಹ
ಜ್ಯೋತಿಯ ಸ್ವರ್ದೀಪ

ತೆಳ್ಳು ತೆಳ್ಳನೆ ಬೆಳ್ಳು ಬೆಳ್ಳನೆ
ಮುಗಿಲುಣ್ಣೆಯ ರಾಶಿ
ಹೊಂಜೋನ್ನದಿ ಮಿಂದಂತಿದೆ
ಜೆನ್ಮಳೆಯನೆ ಸೂಸಿ!

ಸಹ್ಯಾದ್ರಿಯ ಗಿರಿಪಂಕ್ತಿಯ
ಕೊನೆಗಾಣದ ಲೀಲೆ ;
ಬಹುಯೋಜನ ವಿಸ್ತೀರ್ಣದ
ವನರಾಜಿಯ ಮಾಲೆ

ಬಾಂದಳದಿಂದ ಇಳಿಯುತ್ತಿದೆ
ಬೆಳದಿಂಗಳ ಗಂಗೆ
ಹೊಳೆಯುತ್ತಿದೆ ಬರೆದಂದದಿ
ದೂರದಿ ನದಿ ತುಂಗೆ

ಅ: ಆಲಿಸು ! ಆಕಾಶದಿ
ತೇನೆಯ ಸುರವಾಣಿ;
ಜುಮ್ಮೆಂದಿದೆ ಅದನಾಲಿಸಿ
ಸಹ್ಯಾದ್ರಿ ಶ್ರೇಣಿ !

ಸೌಂದರ್ಯದ ಮಧುಪಾನದಿ
ವಿಶ್ವವೇ ಉನ್ಮತ್ತ !
ಧ್ಯಾನದ ರಸದಾನಂದದಿ
ಸೃಷ್ಟಿ ಸಮಾದಿಸ್ಥ !

ಏ ನೀರವಮೇಂ ನಿಶ್ಚಲ
ಮೀ ಹುಣ್ಣಿಮೆ ಇರುಳು
ತಿಂಗಳ ಬೆಳಕಿನ ಕಡಲಲಿ
ತೇಲಿದೆ ತಿರೆಯರಳು !

ಸುಧೆ ತುಂಬಿದ ವಿಧುಬಿಂಬದ
ಮಧು ಚಂದ್ರಿಕೆ ಮಾಯೆ
ನೆಲ ಬಾನ್ಗಳ ಒಲಿದೊಪ್ಪಿರೆ
ದ್ವೈತವು ಬರಿ ಛಾಯೆ

ಚೈತನ್ಯಕೆ ಜಡವೆಂಬುದು
ಕವಿಭಾವಕೆ ಭಾಷೆ
ಈ ಭುವನದ ಭವ್ಯಾಕೃತಿ
ಆತ್ಮನ ಒಂದಾಶೆ !

ಓ ರಾತ್ರಿಯೇ ಸಹ್ಯಾದ್ರಿಯೇ
ಹುಣ್ಣಿಮೆ ಶಶಿಕಾಂತಿ
ನಿಮ್ಮೆಲ್ಲರೆ ಸಾನಿಧ್ಯವೇ
ಪರಮಾತ್ಮನ ಶಾಂತಿ

- ಕುವೆಂಪು