Wednesday, December 28, 2011

ಮೈಹರ್ ಮೇಲ್ - ೨

ಇಂದು ನಿಮಗೆ ಮೈಹರ್ ನ ಬಸ್ ನಿಲ್ದಾಣದ ಕಥೆ ಹೇಳುತ್ತೇನೆ. ನಮ್ಮ ರೂಮಿನಿಂದ ಸ್ವಲ್ಪ ದೂರದಲ್ಲಿಯೆ ಮೈಹರ್ ಬಸ್ ನಿಲ್ದಾಣವಿದೆ. ಮೈಹರ್ ನ ಬಸ್ ನಿಲ್ದಾಣವೆಂಬುದು ಬಸ್ ನಿಲ್ದಾಣವೂ ಹೌದು ಹಾಗು ಸಾರ್ವಜನಿಕ ಬಾರ್ ಕೂಡ ಹೌದು. ಈ ಊರು ಶಾರದಾದೇವಿ ಮಂದಿರದಿಂದ ಪ್ರಸಿದ್ಧವಾಗಿರುವ ಕಾರಣ ಇಲ್ಲಿ ಬಾರುಗಳು ಹಾಗು ಮಾಂಸಹಾರಿ ಹೋಟೆಲುಗಳು ಬೆರಳೆಣಿಕೆಯಷ್ಟಿವೆ. ಈ ಕಾರಣದಿಂದ ಮದಿರಾಪ್ರಿಯರು ಎಣ್ಣೆ, ಗ್ಲಾಸು, ಮತ್ತು ಕುರುಕಲು ತಿಂಡಿಗಳ ಜೊತೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಾರೆ. ರಾತ್ರಿಯಾಗುತ್ತಿದ್ದಂತೆ ಇಲ್ಲಿ ಜನರು ಗುಂಪು ಸೇರುತ್ತಾರೆ. ಊರಿನಿಂದ ಸ್ವಲ್ಪ ಹೊರಗೆ ಇರುವುದರಿಂದಲೋ ಏನೋ, ಇಲ್ಲಿ ಯಾರೂ ಹೇಳುವವರು-ಕೇಳುವವರು ಇಲ್ಲ. ಈಗ ೧೫ ದಿನಗಳಿಂದ ವಿಪರೀತ ಚಳಿ ಇರುವುದರಿಂದ ಬಸ್ ನಿಲ್ದಾಣ ಕೇವಲ ಬಸ್ ನಿಲ್ದಾಣವಾಗಿಯೇ ಇದೆ. ಮದ್ಯಪ್ರಿಯರೆಲ್ಲ ಮನೆಯಲ್ಲೇ ಉಳಿದು ಮದ್ಯ ಸವಿಯುವ ಅಥವಾ ತಾತ್ಕಾಲಿಕವಾಗಿ ಮದ್ಯಸೇವನೆ ತ್ಯಜಿಸುವ ನಿರ್ಧಾರ ಮಾಡಿದಂತಿದೆ.

ಇಲ್ಲಿ ಬಸ್ಸುಗಳ ಸಂಖ್ಯೆ ಕಡಿಮೆ. ಎಲ್ಲರೂ ಪ್ರಯಾಣಕ್ಕೆ ರೈಲನ್ನೇ ಅವಲಂಬಿಸಿದ್ದಾರೆ. ವಿಶೇಷವೆಂದರೆ, ಇದುವರೆಗೂ ನಾನು ಮಧ್ಯಪ್ರದೇಶ ಸಾರಿಗೆಯ ಒಂದು ಬಸ್ಸನ್ನೂ ನೋಡಿಲ್ಲ. ಎಲ್ಲ ಪ್ರೈವೇಟ್ ಬಸ್ಸುಗಳದೆ ದರ್ಬಾರು. ತಾಲೂಕು ಕೇಂದ್ರವಾಗಿ ಇಲ್ಲಿಗೆ ಒಂದೂ ರಾಜ್ಯ ಸಾರಿಗೆಯ ಬಸ್ಸು ಇರದೆ ಇರುವುದು ಆಶ್ಚರ್ಯವೇ ಸರಿ.

ಇನ್ನು ಮುಂಜಾನೆಯ ಸಮಯದಲ್ಲಿ ಬಸ್ ನಿಲ್ದಾಣ "ಸಾರ್ವಜನಿಕ ಬಿಸಿಲು ಕಾಯಿಸುವ ಜಾಗ" ಆಗಿ ಮಾರ್ಪಾಡುಗೊಳ್ಳುತ್ತದೆ. ತಮಾಷೆಯೆಂದರೆ ಅಕ್ಕ-ಪಕ್ಕದಲ್ಲಿರುವ ಮನೆಯ ಹೆಂಗಸು-ಮಕ್ಕಳಾದಿಯಾಗಿ ಎಲ್ಲರೂ ಬೆಳ್ಳಂಬೆಳಗ್ಗೆ ಕುರ್ಚಿಗಳನ್ನು ಹಾಕಿಕೊಂಡು ಬಿಸಿಲು ಕಾಯಿಸುತ್ತಾ-ಪಟ್ಟಾಂಗ ಹೊಡೆಯುತ್ತಾ ಕುಳಿತಿರುತ್ತಾರೆ. ಇವರೇನು ತಿಂಡಿ ತಿನ್ನುವುದಿಲ್ಲವೇ? ತಿನ್ನುವುದಾದರೆ ಯಾವಾಗ ತಯಾರು ಮಾಡುತ್ತಾರೆ? ಮಕ್ಕಳೆಲ್ಲ ಎಷ್ಟು ಹೊತ್ತಿಗೆ ಸ್ಕೂಲಿಗೆ ಹೋಗುತ್ತಾರೆ, ಗಂಡಸರು ತಮ್ಮ ಕೆಲಸಕ್ಕೆ ಎಷ್ಟೊತ್ತಿಗೆ ತೆರಳುತ್ತಾರೆ? ಇಂತ ಪ್ರಶ್ನೆಗಳೆಲ್ಲ ನನ್ನ ಮನದಲ್ಲಿ ಮೂಡಿ ತಲೆ ಕೆರೆದುಕೊಂಡಿದ್ದೇನೆ.

ಮೈಹರ್ ನಲ್ಲಿ ಈಗ ವಿಪರೀತ ಚಳಿ. ಬೆಳಿಗ್ಗೆಯಿಂದ ಸಂಜೆವರೆಗೆ ಉಷ್ಣಾಂಶ ೧೫ ಡಿಗ್ರೀ ಸೆಲ್ಷಿಯಸ್ ಇಂದ ೨೨ ಡಿಗ್ರಿಯವರೆಗೆ ಇರುತ್ತದೆ. ಸಂಜೆಯಾಯಿತೆಂದರೆ ಕೊರೆಯುವ ಚಳಿ ಶುರು. ರಾತ್ರಿಯ ಉಷ್ಣಾಂಶ ೬ಕ್ಕೆ ಇಳಿದಿದ್ದೂ ಇದೆ. ರಾತ್ರಿಯಲ್ಲಿ ತಣ್ಣೀರಿಗೆ ಕೈಹಾಕುವ ಹಾಗಿಲ್ಲ. ಅಪ್ಪಿತಪ್ಪಿ ತಣ್ಣೀರು ಮುಟ್ಟಿದರೆ ಕರೆಂಟ್ ಶಾಕ್ ಹೊಡೆದ ಅನುಭವವಾಗುತ್ತದೆ.

ನಾವು ಉಳಿದುಕೊಂಡಿರುವ ಲಾಡ್ಜಿನಲ್ಲಿ ಸ್ನಾನಕ್ಕೆ ಬೆಳಿಗ್ಗೆ ಬಿಸಿನೀರು ಬರುತ್ತದೆ. ಬರುತ್ತದೆ ಎಂದರೆ ನಲ್ಲಿಯಲ್ಲಿ ಬರುವುದಿಲ್ಲ, ರೂಂ ಬಾಯ್ ಬಕೆಟ್ನಲ್ಲಿ ತಂದುಕೊಡುತ್ತಾನೆ. ಈ ರೂಂ ಬಾಯ್ ಬೆಳಿಗ್ಗೆ ೫ ಗಂಟೆಗೆ ಬಿಸಿ ನೀರು ತಂದು ನಮಗೆಲ್ಲ ತೊಂದರೆ ಕೊಡಲು ಶುರು ಮಾಡಿದ್ದ. ಇವನು ಯಾವ ಪರಿಯಲ್ಲಿ ಬಾಗಿಲು ಬಡಿಯುತ್ತಾನೆಂದರೆ ನೀವು ಎಂತದೆ ನಿದ್ರೆಯಲ್ಲಿದ್ದರೂ ಹಾರಿ ಏಳಬೇಕು. ಜೊತೆಗೆ "ಭೈಯ್ಯಾ ಗರಂ ಪಾನಿ" ಎಂಬ ಅರ್ತನಾದದಂತಹ ಕೂಗು. ಇಂತ ಚಳಿಯಲ್ಲಿ ಬೆಚ್ಚಗೆ ಬೆಚ್ಚನೆಯ ಕನಸುಗಳನ್ನೂ ಕಾಣುತ್ತಾ ಮಲಗಿರುವ ಬ್ಯಾಚಲರ್ ಇಂಜನಿಯರ್ ಗಳಾದ ನಮಗೆ ಇದು ಬರಸಿಡಿಲಿನಂತೆ ಭಾಸವಾಗುತ್ತದೆ.

ಒಂದು ಬೆಳಿಗ್ಗೆ ಹೀಗೆ ಧಡ ಧಡ ಎಂದು ಬಾಗಿಲು ಬಡಿತದ ಶಬ್ದದಿಂದ ಎದ್ದ ನನ್ನ ಸಹೋದ್ಯೋಗಿ ಇದಕ್ಕೊಂದು ಪೂರ್ಣವಿರಾಮ ಹಾಕಲೆಬೇಕೆಂದು, ಬೆಳ್ಳಂಬೆಳಗ್ಗೆ ಕೋಪಗೊಳ್ಳುವುದು ಸರಿಯಲ್ಲವೆಂದು, ಬಂದ ಸಿಟ್ಟನ್ನು ಹತ್ತಿಕ್ಕುತ್ತಾ ಸಮಾಧಾನವಾಗಿ ಅವನಿಗೆ ಇಷ್ಟು ಬೇಗ ನೀರು ತರಬೇಡ ಎಂದೂ, ನಮಗೆ ೭ ಗಂಟೆಗೆ ನೀರು ಕೊಡಬೇಕೆಂದೂ ತನ್ನ ಹರುಕು-ಮುರುಕು ಹಿಂದಿಯಲ್ಲಿ ಸುಮಾರು ೫ ನಿಮಿಷಗಳ ತಿಳುವಳಿಕೆ ನೀಡಿದ. ೫ ನಿಮಿಷಗಳೂ ಹೇಳಿದ್ದನ್ನು ತನ್ಮಯನಾಗಿ ಕೇಳಿದ ರೂಂ ಬಾಯ್ ಕೊನೆಯಲ್ಲಿ ತನಗೇನು ಕೇಳಿಸಿಲ್ಲವೆಂದು ಸಂಜ್ಞೆಯ ಮೂಲಕ ಹೇಳಲು ನನ್ನ ಸಹೋದ್ಯೋಗಿ ಏನೂ ಮಾಡಲು ತಿಳಿಯದೆ "ಅಡಾ ಪಾವಿ, ಪೋಡ" (ಅಯ್ಯೋ ಪಾಪಿ, ಹೋಗೋ) ಎಂದು ತಮಿಳಿನಲ್ಲಿ ಕೂಗಿದ. ಇದನ್ನು ನೋಡುತ್ತಿದ್ದ ನನಗೆ ತಡೆಯಲಾರದಷ್ಟು ನಗು ಬಂದು ನಗತೊಡಗಿದೆ. ರೂಂ ಬಾಯ್ ಗೆ ನಾನೇಕೆ ನಗುತ್ತಿದ್ದೇನೆ ಎಂಬುದೇ ಯಕ್ಷ ಪ್ರಶ್ನೆಯಾಗಿ ನನ್ನನ್ನೇ ವಿಸ್ಮಯದಿಂದ ನೋಡತೊಡಗಿದ. ನಾನು ಸಾವರಿಸಿಕೊಂಡು ಅವನಿಗೆ ಮತ್ತೊಮ್ಮೆ ತಿಳಿಹೇಳಿದೆ. ನನ್ನ ಮಾತನ್ನು ಕೇಳಿದ ಬಳಿಕವೂ ಅವನು ನೀರಿನ ಬಕೇಟನ್ನು ಬಾತ್ ರೂಂ ಅಲ್ಲಿ ಇಡಲು ಒಳಗೆ ನುಗ್ಗಿದ. ಈಗ ನಗುವ ಸರದಿ ನನ್ನ ಸಹೋದ್ಯೋಗಿಯದಾಗಿತ್ತು. ಬೆಳಿಗ್ಗೆ ೫ ಗಂಟೆಗೆ ಇಂಥಹ ತಮಾಷೆಗಳನ್ನು ಅರಗಿಸಿಕೊಳ್ಳುವುದನ್ನು ನಾವು ಬೇರೆ ದಾರಿಯಿಲ್ಲದೆ ಕಲಿಯಲೇಬೇಕಾಯಿತು.

Friday, December 23, 2011

ಮೈಹರ್ ಮೇಲ್ - ೧

ಮೈಹರ್ ಮಧ್ಯ ಪ್ರದೇಶ ರಾಜ್ಯದ ಸತ್ನಾ (ಸತ್ನಾ ಬಿಟ್ನಾ ಯಾವನಿಗ್ ಗೊತ್ತು) ಜಿಲ್ಲೆಯಲ್ಲಿರುವ ಒಂದು ತಾಲೂಕು. ಹತ್ತಿರದಲ್ಲಿರುವ ಎರಡು ಸಿಮೆಂಟ್ ಪ್ಲಾಂಟ್ಗಳು ಹಾಗು ಇಲ್ಲಿಂದ ೨ ಕಿಲೋಮೀಟರ್ ದೂರದಲ್ಲಿರುವ ಶಾರದಾ ದೇವಿ ಮಂದಿರವನ್ನು ಬಿಟ್ಟರೆ ಇಲ್ಲಿ ಬೇರೇನೂ ವಿಶೇಷ ಇಲ್ಲ. ಊರು ಯಾವುದೇ ತಾಲೂಕು ಕೇಂದ್ರದಂತೆ ಚಿಕ್ಕದಾಗಿ ಇದೆ. ಎರಡು-ಮೂರು ರಸ್ತೆಗಳೇ ಈ ಊರಿನ ಜೀವಾಳ ಹಾಗು ಕೇಂದ್ರಬಿಂದು. ಎರಡು ಸಿಮೆಂಟ್ ತಯಾರಿಕ ಪ್ಲಾಂಟ್ ಗಳು ಇರದೇ ಹೋಗಿದ್ದಾರೆ ಈ ಊರನ್ನೂ ಕೇಳುವವರೇ ಇರುತ್ತಿರಲಿಲ್ಲವೇನೋ ? ಈ ಊರಿನಲ್ಲಿ ಒಂದು ಒಳ್ಳೆಯ ಹೋಟೆಲ್ ಇಲ್ಲ, ಥಿಯೇಟರ್ ಇಲ್ಲ (ಥಿಯೇಟರ್ಗಳು ಇವೆ, ಆದರೆ ಅಲ್ಲಿ ಕೇವಲ "ಎ" ಚಿತ್ರಗಳೇ ಓಡುವುದರಿಂದ ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ). ಇಂತಿಪ್ಪ ಊರಿನಲ್ಲಿ ನಾನು ಎರಡು ತಿಂಗಳುಗಳನ್ನು ಕಳೆದಿದ್ದೇನೆ, ಬದುಕುತ್ತಿದ್ದೇನೆ. ಇಂಥ ಊರಿನಲ್ಲಿನ ನಮ್ಮ ಬದುಕನ್ನು ಮೈಹರ್ ಮೇಲ್ ಮೂಲಕ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ.

ಮೈಹರ್ ಗೆ ಬಂದ ಹೊಸತರಲ್ಲಿ ನಾನು ಕಂಡುಕೊಂಡ ವಿಷಯವೆಂದರೆ ಇಲ್ಲಿನ ಮಹಾಜನತೆ ಬೆಳಗಿನ ತಿಂಡಿಗೆ ಸಮೋಸ ಹಾಗು ಜಿಲೇಬಿಯನ್ನು ತಿನ್ನುತ್ತಾರೆಂಬುದು. ಇದನ್ನು ಓದಿ ನೀವೆಷ್ಟು ಹೌಹಾರುತ್ತೀರೋ ಅಷ್ಟೇ ನಾನೂ ಹೌಹಾರಿದ್ದೆ. ಇಲ್ಲಿನ ನಾಗರೀಕರ ಗುಡಾಣ ಹೊಟ್ಟೆ ಸಮೋಸ "ಮೋಸ" ಮಾಡಿದ್ದನ್ನು ಧೃಡಪಡಿಸುತ್ತವೆ. ಇಲ್ಲಿನ ೯೦ ಪ್ರತಿಶತ ಜನರ ಹೊಟ್ಟೆ "ಸಮೋಸ-ಎಫೆಕ್ಟ್" ಗೆ ಒಳಗಾಗಿವೆ. ಪುಣ್ಯಕ್ಕೆ ನಮ್ಮ ಅಡಿಗೆಯವ ಇಂತಹ ಪ್ರಮಾದಕ್ಕೆ ಕೈಹಾಕದೆ ನಮಗೆ ನಿತ್ಯವೂ ಪರಾಥ (ನಮ್ಮಲ್ಲಿನ ಚಪಾತಿ) ತಿನ್ನಿಸಿ ಬದುಕಿಸುತ್ತಿದ್ದಾನೆ. ನೀವು ಬೆಳಿಗ್ಗೆ ೮ ಗಂಟೆ ಹೊತ್ತಿನಲ್ಲಿ ಪೇಟೆಯಲ್ಲಿ ಒಂದು ರೌಂಡ್ ಹಾಕಿ ಬಂದರೆ ನಿಮ್ಮ ಕಣ್ಣಿಗೆ ರಸ್ತೆಯಲ್ಲಿ ಸಮೋಸ ಮೆಲ್ಲುತ್ತಾ ನಿಂತಿರುವ ಮಹನೀಯರು ಕಾಣಸಿಗುತ್ತಾರೆ.

ಇಲ್ಲಿಗೆ ಬಂದ ಎರಡನೇ ದಿನದಲ್ಲೇ ನನ್ನನ್ನು ದಿಗಿಲುಗೊಳಿಸಿದ ಇನ್ನೊಂದು ವಿಷಯವೆಂದರೆ ಇಲ್ಲಿನ ಧೂಳು. ಇಡೀ ಊರಿಗೆ ಊರೇ ಧೂಳಿನಲ್ಲಿ ಮುಳುಗಿ ಹೋಗಿದೆ. ಒಂದು ಬಸ್ಸೋ ಲಾರಿಯೋ ಬರ್ರನೆ ನಿಮ್ಮನ್ನು ದಾಟಿ ಹೋಯಿತೆಂದರೆ, ಅಲ್ಲೊಂದು ಧೂಳಿನ ಲೋಕ ಸೃಷ್ಟಿಯಾಯಿತೆಂದೇ ಗ್ಯಾರಂಟೀ. ಒಂದೊಮ್ಮೆ ನೀವು ಮೂಗನ್ನು ಮುಚ್ಚಿಕೊಳ್ಳದೆ ಹೊದಿರೆಂದುಕೊಳ್ಳಿ, ಕ್ಷಣ ಮಾತ್ರದಲ್ಲಿ ನೀವು "ಭವಿಷ್ಯದ ಅಸ್ಥಮಾ ರೋಗಿ" ಪಟ್ಟಿಗೆ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಇಲ್ಲಿನ ಧೂಳನ್ನು ನೋಡಿ ಹೆದರಿ, ನನ್ನ ಯಾವುದೇ ಬಿಳಿಯ ವಸ್ತ್ರಗಳನ್ನು ಹೊರಗೆ ತೆಗೆಯಲೇ ಇಲ್ಲ.

ಇಂದಿಗೆ ಇಷ್ಟು ಸಾಕು, ನೀವು ಸುಧಾರಿಸಿಕೊಳ್ಳಿ. ಮುಂಬರುವ ದಿನಗಳಲ್ಲಿ ಇಲ್ಲಿನ ಇನ್ನಷ್ಟು ತಮಾಷೆಗಳನ್ನು ನಿಮಗೆ ತಿಳಿಸುತ್ತೇನೆ...

Monday, December 12, 2011

ಮಾತಿಲ್ಲದ ಮೌನ ನಿವೇದನೆ

ಬೆಳಿಗ್ಗೆ ಹಠಮಾಡಿ ಅಮ್ಮನ ಕೈಯಿಂದ ಪೆಟ್ಟು ತಿಂದು, ದಿನವಿಡೀ ರಂಪ ಮಾಡಿ, ಅಜ್ಜಿಯ ಕೈತುತ್ತು ತಿಂದು ಕಥೆ ಕೇಳಿ ಮಲಗಿದ ಮಗು ಈಗ ಕನಸಿನ ಲೋಕದತ್ತ ಕಳ್ಳ ಹೆಜ್ಜೆ ಇಡುತ್ತಿದೆ. ಆಫೀಸಿನಿಂದ ತಡವಾಗಿ ಮನೆಗೆ ಬಂದ ತಾಯಿಯು ಮುದುಡಿ ಕೈಗಳೆರಡನ್ನೂ ತೊಡೆಯ ಸಂಧಿಯಲ್ಲಿ ಅಡಗಿಸಿ ಮಲಗಿದ ಮುದ್ದು ಕಂದನ ಎದುರು ನಿಂತಿದ್ದಾಳೆ. ಬೆಳಿಗ್ಗೆ ತಾನು ಕೊಟ್ಟ ಪೆಟ್ಟು ಮಗುವಿನ ಮೈಯ್ಯಿಂದ ಮಾಯವಾಗಿದ್ದರೂ ತನ್ನ ಕೈಯ್ಯಲ್ಲಿ ಮಾಯದ ಕಲೆಯಾಗಿ ನಿಂತಿದ್ದನ್ನು ನಿಸ್ಸಹಾಯಕತೆಯಿಂದ ನೋಡಿಕೊಳ್ಳುತ್ತಿದ್ದಾಳೆ. ಬೆಳಿಗ್ಗೆ ಅಸಾಧ್ಯ ಪುಂಡನಂತೆ ಗೋಚರಿಸಿದ ಮಗು ಈಗ ಕಿನ್ನರ ಲೋಕದ ಮಾಯಾವಿಯಂತೆ ಕಾಣುತ್ತಿದೆ. ಪಶ್ಚಾತ್ತಾಪದ ಕಡಲಲ್ಲಿ ಮುಳುಗಿ ಏಳುತ್ತಿರುವ ಹೃದಯವನು ಸಾವರಿಸಿಕೊಳ್ಳಲು ಹೆಣಗುತಿಹಳು ತಾಯಿ. ಅಂದಿನ ಅಧ್ಯಾಯಕ್ಕೆ ತೆರೆ ಎಳೆದಂತೆ, ಆಟವನ್ನು ಮುಗಿಸಿದಂತೆ ಕಂದನು ನಿದ್ದೆಗಣ್ಣಲ್ಲೇ ನಸುನಗುತ್ತಿದೆ. ನಮ್ಮ ಅರಿವಿನ ವಲಯಕ್ಕೆ ನಿಲುಕದ ಶಬ್ದ ರೂಪಗಳನ್ನೂ ದಾಟಿದ ಆಚೆಯ ತೀರದಲ್ಲಿ ಕಂದನೀಗ ವಿಹರಿಸುತ್ತಿರಬಹುದೇ? ತನಗಿಷ್ಟವಾದ ಸಿಹಿ ತಿಂಡಿಗಳನ್ನು ಮೆಲ್ಲುತ್ತಾ, ತನ್ನ ಮುದ್ದಿನ ನಾಯಿ ಮರಿಯ ಮೇಲೆ ಉರುಳುತ್ತಾ, ಅಜ್ಜಿ ಹೇಳಿದ ಕಥೆಯಲ್ಲಿ ಬರುವ ಪಾತ್ರಗಳೊಂದಿಗೆ ಜಿಗಿಯುತ್ತಾ, ಚಿಟ್ಟೆಗಳ ಹಿಂದೆ ಓಡುತ್ತಾ, ತನ್ನ ಮುದ್ದಾದ ಭಾಷೆಯಲಿ ಅಸಂಖ್ಯ ಪ್ರಶ್ನೆಗಳನ್ನು ಕೇಳುತ್ತಿರಬಹುದೇ ತನ್ನ ಪುಟ್ಟ ಕಂದ ? ದುಃಖ್ಖದ ಶ್ರುತಿ ಹಿಡಿದ ತಾಯಿ ಮಗುವಿನ ಪಾದದ ಬಳಿ ಕ್ಷಮೆಯಾಚಿಸುವಂತೆ ಮಂಡಿಯೂರಿ ಕುಳಿತಿದ್ದಾಳೆ.

ಇದಾವುದನ್ನೂ ಅರಿಯದ ಕಂದನ ಮೊಗದಲ್ಲಿ ಇನ್ನೂ ನಸುನಗೆಯೊಂದು ಮಿನುಗುತ್ತಿದೆ. ತನ್ನ ನಿಲುಕಿಗೆ ಸಿಗದ ಕಂದನ ಆ ಲೋಕದಲಿ ತನಗೆ ಸ್ಥಾನವಿದೆಯೆ ಎಂದು ತಾಯಿ ಕಳವಳಗೊಳ್ಳುತ್ತಾಳೆ. ಕಂದನ ಮೇಲೆ ಕೈ ಮಾಡಿದ್ದಕ್ಕಾಗಿ ತನ್ನನ್ನೇ ತಾನು ಶಪಿಸಿಕೊಳ್ಳುತ್ತಾಳೆ. ಎಷ್ಟು ನಿಯಂತ್ರಿಸಿಕೊಂಡರೂ ಸಾಧ್ಯವಾಗದೆ ಕಣ್ಣು ತೇವಗೊಳ್ಳುತ್ತದೆ. ತನ್ನನ್ನು ಮನ್ನಿಸು ಎಂದು ಕಂದನಿಗೆ ಕ್ಷಮಾಪಣೆ ಕೇಳಿದಂತೆ ಮಗುವಿನ ಕೆನ್ನೆಗೊಂದು ಮುತ್ತು ನೀಡಿ ಪ್ರಾಯಶ್ಚಿತಕ್ಕೊಳಗಾಗುತ್ತಾಳೆ ತಾಯಿ...ಮಾತಿಲ್ಲದ ಮೌನ ನಿವೇದನೆಯೊಂದು ಕೊನೆಗೊಳ್ಳುತ್ತದೆ ತನ್ನಷ್ಟಕ್ಕೆ....


(ಮಗುವನ್ನು ಹೆತ್ತು ಬೆಳೆಸಿದ ಪ್ರತಿಯೊಂದು ತಂದೆ-ತಾಯಿಯರು ಅನುಭವಿಸುವ ನೋವು ಇದು. ತಮ್ಮ ಸಾಂಸಾರಿಕ ತಾಪತ್ರಯಗಳ ಮಧ್ಯದಲ್ಲಿ ಮಕ್ಕಳ ಮೇಲೆ ಗದರಿ, ಬಡಿದು, ದಿನದ ಕೊನೆಯ ಮೌನದಲಿ ಪಶ್ಚಾತ್ತಾಪದ ಉರಿಯಲ್ಲಿ ಬೆಂದು ಏಳುತ್ತಾರೆ ತಂದೆ-ತಾಯಿಯರು. ಕೆಲಸ-ಕಾರ್ಯಗಳ ಒತ್ತಡದಲ್ಲಿ ತಮ್ಮ ಮಕ್ಕಳ ಮುದ್ದು ಮಂಗಾಟಗಳನ್ನು ನೋಡಿ ಮನಸ್ಸು ಹಗುರ ಮಾಡಿಕೊಳ್ಳಲೂ ಸಮಯವಿಲ್ಲದಂತಾಗಿದ್ದಾರೆ ಇಂದಿನ ಪಾಲಕರು. ವ್ಯಾಲಿಡಿಟಿ ಮುಗಿದಂತೆ ಮತ್ತೆ ಜರುಗುವ ತಾಳ್ಮೆ ಕಳೆದುಕೊಳ್ಳುವಂತ ಪ್ರಸಂಗಗಳು, ಮತ್ತೆ ಅದನ್ನು ಹಿಂಬಾಲಿಸುವ ಪಶ್ಚಾತ್ತಾಪ, ಈ ಎರಡರಿಂದಲೂ ಮುಕ್ತಿಗೊಳ್ಳಲಿ ತಂದೆ-ತಾಯಿಯರು. ಮಗುವಿನ ತುಂಟಾಟಗಳನ್ನು ನೋಡಿ ಸಂತಸ ಪಡುವಷ್ಟು ಸಮಯ ಅವರಿಗೆ ದಕ್ಕಲಿ)

ಬರವಣಿಗೆಯ ಮೋಹಕ್ಕೆ ಮತ್ತೆ ಸಿಲುಕುವ ಮುನ್ನ...

ಯಾವುದೇ ಅವಸರವಿಲ್ಲದ ಒಂದು ಮಧ್ಯಾಹ್ನದಲಿ ಕಿಟಕಿಯ ಬಳಿ ಕುಳಿತು ಯೋಚಿಸುತ್ತಾ ಪೆನ್ನಿನ ತುದಿಯನ್ನು ಕಚ್ಚಿ ನೆನಪಿಗೆ ಬಂದ ಕವಿತೆಯೊಂದರ ಸಾಲನ್ನು ಬಿಳಿ ಹಾಳೆಯ ಮೇಲೆ ಮೆಚ್ಚಿನ ಪೆನ್ನಿನ ಶಾಯಿಯಲ್ಲಿ ಮೂಡಿಸಿ, ತನ್ನ ಭಾವಗಳು ಅಕ್ಷರಗಳಲ್ಲಿ ಆರುತ್ತಿರುವುದನ್ನು ಅಚ್ಚರಿಯಿಂದ ಗಮನಿಸುತ್ತಾ, ತನ್ನ ಮುಗ್ಧ ಮನಸ್ಸಿಗೆ ತಾನೇ ಸೋತು, ಪದಗಳು ಮನಸಿಗೆ ಬಾರದೆ ಸತಾಯಿಸಿರಲು ಆಕಳಿಸಿ ಎದುರಿನ ಮೇಜಿನ ಮೇಲೆಯೇ ಮಲಗಿ, ರವಿ ದಿನವನ್ನು ಬಿಟ್ಟು ಕೊಡುವ ಹೊತ್ತಿನಲ್ಲಿ ಎಚ್ಚರಗೊಂಡು ಮಲಗುವ ಮೊದಲು ತಾನೇ ಬರೆದಿಟ್ಟ ಸಾಲುಗಳನ್ನು ನೋಡಿ ನಗುವ ನಾನು... ಈ ಅಚ್ಚರಿಯ ಪ್ರಕ್ರಿಯೆಯ ಭಾಗವಾಗದೇ ಅದೆಷ್ಟು ತಿಂಗಳುಗಳು ಕಳೆದವು... ಆರ್ದ್ರಗೊಳ್ಳದೆ ಯುಗಗಳನ್ನು ಕಳೆದ ಮನಸ್ಸಿನಂತೆ...

(ಸರಿ ಸುಮಾರು ಹನ್ನೊಂದು ತಿಂಗಳುಗಳು ಆಯಿತು ನಾನು ಬರೆಯುವುದನ್ನು ನಿಲ್ಲಿಸಿ. ಕಾಲೇಜ್ ಜೀವನದಿಂದ ಪ್ರೊಫೆಶನಲ್ ಜೀವನಕ್ಕೆ ಬಿದ್ದೊಡನೆಯೇ ಗೊತ್ತಾಗಿದ್ದು ನಮ್ಮ ಹವ್ಯಾಸಗಳನ್ನು ಸಂಭಾಳಿಸಿಕೊಂಡು ಹೋಗುವ ಕಷ್ಟ. ಕಳೆದ ಒಂದು ವರ್ಷ ನನ್ನನ್ನೂ ನಾನು ಮರೆತು ಕೆಲಸ ಮಾಡಿದ್ದೆ. ಸ್ನೇಹಿತರು ಅಥವಾ ಕುಟುಂಬಕ್ಕೆ ಹೋಗಲಿ, ನನಗೇ ನಾನು ಸಮಯವನ್ನು ಇಟ್ಟುಕೊಳ್ಳಲು ಆಗಲಿಲ್ಲ. ಹೊಸ ಕೆಲಸ ಹಿಡಿದ ಮೇಲೆ ಸ್ವಲ್ಪ ಸಮಯ ಸಿಕ್ಕುತ್ತಿದೆ ಜೊತೆಗೆ ನನ್ನ ಹವ್ಯಾಸಗಳ ಕಡೆ ಗಮನ ಹರಿಸುವಂತಾಗಿದೆ. ಕಳೆದ ಒಂದು ವರ್ಷದಲ್ಲಿ ಬ್ಲಾಗ್ ಲೋಕದಲ್ಲಿ ಏನೇನು ಆಗಿದೆ ಎಂದೂ ನನಗೆ ಗೊತ್ತಿಲ್ಲ. ಮತ್ತೆ ಬರೆಯುವ ಹುಮ್ಮಸ್ಸು ಮೂಡಿದೆ. ಬಿಟ್ಟು ಹೋದ ಊರಿಗೆ ಮತ್ತೆ ಹಿಂತಿರುಗಿದಂತೆ ಅನ್ನಿಸುತ್ತಿದೆ..)