Friday, October 22, 2010

ಮುಪ್ಪುಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಾ ಕೂತಿದ್ದಾಗ ಈ ಕೆಳಗಿನ ಚಿತ್ರ ಕಂಡಿತ್ತು. ಸ್ಕೆಚಿಂಗ್ ಮಾಡಲು ಹೇಳಿ ಮಾಡಿಸಿದಂತ ಈ ಚಿತ್ರವನ್ನು ಬಿಡಿಸಬೇಕೆಂದು ಬಹಳಾ ದಿನಗಳಿಂದ ಕಾಯುತ್ತಿದ್ದೆ. ಆದರೆ ಮಹೂರ್ತ ಕೂಡಿಬಂದದ್ದು ಎರಡು ದಿನಗಳ ಹಿಂದೆ. ಮುಪ್ಪಿನ ಅಷ್ಟೂ ನೋವು ಹಾಗು ನಿಗೂಢಗಳನ್ನು ತನ್ನ ಕಣ್ಣಲ್ಲೇ ಹಿಡಿದು ಇಟ್ಟಿರುವಂತಿರುವ ಈ ಅಜ್ಜನ ಕಂಗಳು ಇನ್ನೂ ಕಾಡುತ್ತಿವೆ. ಆದರೆ ಈ ಚಿತ್ರಕ್ಕೆ ನ್ಯಾಯ ಒದಗಿಸಲು ನನ್ನಿಂದ ಸಾಧ್ಯವಾಗಿಲ್ಲ. ಎಲ್ಲ ಮುಗಿದು ಎದ್ದಾಗಲೂ ಇನ್ನೂ ಚನ್ನಾಗಿ ರಚಿಸಬಹುದಿತ್ತೇನೋ ಅನ್ನಿಸಿತ್ತು. ಮುಂದೆ ಎಂದಾದರೂ ಇನ್ನೊಮ್ಮೆ ಪ್ರಯತ್ನಿಸುವೆ..


( ಚಿತ್ರವನ್ನು ದೊಡ್ಡದಾಗಿ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ )

Thursday, October 14, 2010

ಗೋಕರ್ಣದಲ್ಲೊಂದು ಬೆಳಗು...

ಒಂಟಿ ದೋಣಿಯೊಂದು ತೇಲುತಿಹುದು
ಒತ್ತಿ ಬರುವ ತೆರೆಗಳ ಜೊತೆ ಹೋರಾಡುತ್ತಾ
ಕಪ್ಪೆ ಚಿಪ್ಪುಗಳ ಹೆಕ್ಕಿ ತನ್ನ ಲಂಗದ ಜೇಬೊಳಗೆ ಸೇರಿಸುತಿಹಳು
ಬಂಗಾರ ಬಣ್ಣದ ಕೂದಲ ಪುಟ್ಟ ಹುಡುಗಿಯೊಬ್ಬಳು

ಮಣಿ ಸರಗಳೆಲ್ಲಾ ಸಿದ್ಧವಾಗುತಿವೆ ಧೂಳನ್ನು ಕೊಡವಿಕೊಂಡು
ತಮ್ಮನ್ನು ಕೊಳ್ಳಲು ಬರುವ ಗಿರಾಕಿಗಳ ನಿರೀಕ್ಷೆಯಲಿ
ಜೊತೆಯಲಿ ಪಂಡಿತರ ಮನೆ ಬೇಲಿಯ ದಾಸವಾಳಗಳು
ಕಾಯುತಿವೆ ದೇವರ ಸನ್ನಿಧಿಯಲ್ಲಿ ತಮ್ಮನ್ನು ತಾವು ಕಂಡುಕೊಳ್ಳಲು

ಕಡಲನ್ನು ಮೊದಲ ಬಾರಿ ಕಾಣುತಿಹ ಬಯಲುಸೀಮೆಯ ಹುಡುಗರು
ಹೊರಟಿಹರು ಎದುರಿಸಲು ಭೋರ್ಗರೆವ ಅಗಾಧ ಸಾಗರವನ್ನು
ಕಡಲ ತಟದ ಗೂಡಂಗಡಿಯಲಿ ಹಬೆಯಾಡುತಿಹುದು ಕಾಫಿಯು
ಏಳಲೊಲ್ಲದು ಮುದುಡಿ ಮರಳ ಮೇಲೆ ಮಲಗಿಹ ಬೆಕ್ಕೊಂದು

ಬೀದಿ ದನವೊಂದು ನಿರುಪಾಯವಾಗಿ ನಿಂತಿಹುದು
ಕಾಮತರ ಹೋಟೆಲಿನಿಂದ ಏಳುತ್ತಿರುವ ದೋಸೆಯ ಘಮಕ್ಕೆ ಸೋತು
ಊರಿನ ಸಂದುಗೊಂದುಗಳೆಲ್ಲ ಬಂಗಾರದ ಬಣ್ಣ ಪಡೆಯುತಿರಲು
ಉದಯಿಸುತಿಹನು ಗೋಕರ್ಣದಲಿ ಆದಿತ್ಯನು....

(ಈ ವರ್ಷದ ಆದಿಯಲ್ಲಿ ಪ್ರವಾಸಕ್ಕೆ ಹೋದಾಗ ಗೋಕರ್ಣದಲ್ಲಿ ಉಳಿಯುವ ಅವಕಾಶ ಒದಗಿತ್ತು. ಒಂದು ಊರಾಗಿ ಗೋಕರ್ಣದಷ್ಟು ಬೇರಾವ ಊರು ನನ್ನ ಸೆಳೆದಿರಲಿಲ್ಲ. ಸುಮ್ಮನೆ ಅಲೆಮಾರಿಯಂತೆ ತಿರುಗಿದ ಕಡಲ ತೀರಗಳು, ರಾತ್ರಿಯಲ್ಲಿ ಜಗಮಗಿಸಿದ ಅಂಗಡಿಗಳು, ಕಡಲನ್ನೇ ಜಯಿಸಲು ಹೊರಟ ನಮ್ಮನ್ನು ತುಂಟ ಮಕ್ಕಳನ್ನು ಓಡಿಸಲು ಬಂದಂತೆ ಬಂದ ಕಡಲ ತೆರೆಗಳು, ಥಟ್ಟನೆ ನನ್ನ ಊರನ್ನು ನೆನಪಿಸಿಬಿಟ್ಟ ಬೀದಿಗಳು, ಬಿಳಿಯರು ಹಾಗು ಅವರ ವೇಷ ಭೂಷಣಗಳು, ಕಟ್ಟಿದ ಉಸುಕಿನ ಕೋಟೆಗಳು, ಕಪ್ಪೆಚಿಪ್ಪುಗಳು... ಹೀಗೆ ಇನ್ನು ಹಲವಾರು ಮಧುರ ನೆನಪುಗಳು ಸೇರಿ ನನ್ನನ್ನು ಈಗಲೂ ಗೋಕರ್ಣದ ಆಕರ್ಷಣೆಗೆ ತಳ್ಳುತ್ತವೆ. ಹೆಸರು ಕೇಳಿದೊಡನೆ ರೋಮಾಂಚನಗೊಳಿಸುವ ಗೋಕರ್ಣ ಹಾಗು ಈ ನೆನಪುಗಳನ್ನು ಸುಂದರಗೊಳಿಸಿದ ನನ್ನೆಲ್ಲ ಗೆಳೆಯ-ಗೆಳತಿಯರಿಗೆ ಈ ಕವನವನ್ನು ಅರ್ಪಿಸುತ್ತೇನೆ).