Monday, September 7, 2009

ವಿದಾಯ... ಹಾಗೆ ಸಣ್ಣದೊಂದು ನೋವು

"ಶರಶ್ಚಂದ್ರ ಕಲ್ಮನೆ ಬ್ಲಾಗ್ ಬರೆಯುವುದನ್ನು ನಿಲ್ಲಿಸಿದ್ದಾನೆ" ಈ ವಿಷಯ ತಿಳಿದರೆ ಏನನ್ನಿಸುತ್ತದೆ ನಿಮಗೆ ? ತೀರ ಹತ್ತಿರದ ಗೆಳೆಯರು ಕರೆ ಮಾಡುತ್ತಾರೆ .. "ಯಾಕ್ರೀ ಶರತ್ ಏನಾಯ್ತು, ಯಾಕೆ ಬರೆಯೋದು ನಿಲ್ಲಿಸಿದ್ದು " ಎಂದು. ಆಗಾಗ ಸಮಯ ಸಿಕ್ಕಾಗ ಬ್ಲಾಗ್ ಓದುವವರು "ಏನೋ ಸಮಸ್ಯೆ ಇರಬೇಕು, ಚಿತ್ರ ಚನ್ನಾಗಿ ಬಿಡಿಸುತ್ತಿದ್ದ, ಬರಹ ಪರವಾಗಿರಲಿಲ್ಲ" ಎಂದುಕೊಂಡಾರು. ಇನ್ನು ಕೆಲವರು "ಗೊತ್ತಿತ್ತು ಇವನ ಹಣೆ ಬರಹ ಇಷ್ಟೇ ಎಂದು.. ಇವನ ಬ್ಲಾಗ್ ಕಡೆ ಕಣ್ಣು ಹಾಯಿಸುವ ಕಷ್ಟ ತಪ್ಪಿತು" ಎಂದರೂ ಎನ್ನಬಹುದು..

ಹೌದು, ಇವೆಲ್ಲದಕ್ಕೂ ಸಿದ್ದನಾಗಿದ್ದೇನೆ... ನನ್ನ ಬ್ಲಾಗ್ ಅನಿರ್ದಿಷ್ಟ ಕಾಲದವರೆಗೆ ನಿರ್ಜೀವಗೊಳ್ಳಲಿದೆ. ಕಾರಣ ಹೇಳಿಕೊಳ್ಳುವಂತದ್ದು ಏನಿಲ್ಲ. ನನ್ನ ಬರವಣಿಗೆಗಳು ನನಗೇ ಸಂತೋಷ ನೀಡುತ್ತಿಲ್ಲ. ಇದು ಪ್ರಥಮ ಕಾರಣ. ಎರಡನೆಯ ಕಾರಣವೆಂದರೆ ನನಗೆ ಈಗೀಗ ಬರೆಯುವುದಕ್ಕಿಂತ ಓದುವುದೇ ಜಾಸ್ತಿ ಸಂತಸ ನೀಡುತ್ತಿದೆ. ಮನೆಯಲ್ಲಿ ಪುಸ್ತಕಗಳ ಹೊರೆಯೇ ಬಿದ್ದಿದೆ. ಓದಬೇಕು ಎಂಬ ಹಂಬಲ ಹಠಕ್ಕೆ ಬಿದ್ದಿದೆ. ಬ್ಲಾಗ್ ಬರೆಯುವುದನ್ನು ಬಿಟ್ಟೆನೆಂದರೆ ಓದುವುದನ್ನು ಬಿಡುವೆನೆಂದಲ್ಲ..... ನಿಮ್ಮೆಲ್ಲರ ಬರಹಗಳನ್ನು ಓದಿ ಆನಂದಿಸುವೆ.

ಒಂದು ವರ್ಷದಲ್ಲಿ ಬರೆದದ್ದು ಕೇವಲ ೨೮ ಬರಹಗಳು, ಅವುಗಳಲ್ಲಿ ಹಲವು ಚಿತ್ರಗಳು. ನಾನು ಎಣಿಸಿದ್ದಕ್ಕಿಂತ ಜಾಸ್ತಿಯೇ. ಬರೆಯಲೇ ಬೇಕೆಂಬ ಒತ್ತಡದಿಂದ ಎಂದೂ ಬರೆಯಲಿಲ್ಲ. ಬರೆದದ್ದನ್ನು ಎಲ್ಲರೂ ಓದಿ ಕಾಮೆಂಟ್ ಬರೆಯಬೇಕೆಂದು ನಿರೀಕ್ಷಿಸಿಯೂ ಇರಲಿಲ್ಲ. ನನ್ನ ಖುಷಿಗೆ ಬರೆದೆ.. ನೀವೆಲ್ಲ ಓದಿದಿರಿ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದಿರಿ. ನನ್ನ ಖುಷಿಯ ಭಾಗವಾದಿರಿ. ಅಷ್ಟು ಸಂತಸ ಸಾಕೆನಗೆ.

ಇಷ್ಟ ಪಟ್ಟು ಬರೆಯಲು ಪ್ರಾರಂಭಿಸಿದ ಎರಡು ಬರಹಗಳು ಕೊನೆಗಾನದೆ ಹಾಗೆ ನಿಂತಿವೆ. ತಾಳ್ಮೆಯನ್ನು ಮೈ ಮೇಲೆ ಎಳೆದುಕೊಂಡು ರಚಿಸಲು ಕುಳಿತ ಚಿತ್ರವೊಂದು ಕಪ್ಪು ಗೆರೆಗಳ ಮಧ್ಯೆ ಹಾಗೆ ಧ್ಯಾನಸ್ಥವಾಗಿದೆ. ಎಂದಾದರೂ ಇವೆಲ್ಲ ತಮ್ಮ ಕೊನೆಯ ತೀರವನ್ನು ಸೇರಿದರೆ, ನನಗೆ ಸಂತೃಪ್ತಿ ಕೊಟ್ಟರೆ ಮತ್ತೆ ಬ್ಲಾಗಿಗೆ ಜೀವ ಬಂದರೂ ಬರಬಹುದು. ಬ್ಲಾಗನ್ನು ಡಿಲೀಟ್ ಮಾಡುವುದಿಲ್ಲ. ಬರಹವನ್ನು ನಿಲ್ಲಿಸುವುದು ನನ್ನ ಉದ್ದೇಶವೂ ಅಲ್ಲ, ಅದು ನನ್ನಿಂದ ಸಾಧ್ಯವೂ ಇಲ್ಲ. ಈ ಯೋಜನೆ ನೆನ್ನೆ ಮೊನ್ನೆಯದಲ್ಲ. ಹಲವು ತಿಂಗಳುಗಳ ಮೊದಲೇ ಮೊಳಕೆಯೊಡೆದು ಮರವಾಗಿ ಬೆಳದದ್ದು.

ನಾನು ಬರೆಯಲು ಪ್ರಾರಂಭಿಸಿದಾಗಿನಿಂದ ನನ್ನನ್ನು ತಿದ್ದಿ-ತೀಡಿ, ನನ್ನ ಬರಹವನ್ನು ಓದಿ ಸಂತೋಷಪಟ್ಟು, ಚಿತ್ರಗಳಿಗೆ ಹೃದಯದಲ್ಲಿ ಜಾಗ ಒದಗಿಸಿ, ಕೇವಲ ಸಹಬ್ಲಾಗಿಗರಾಗಿ ಉಳಿಯದೆ ನನ್ನನ್ನು ಸ್ನೇಹದ ತೆಕ್ಕೆಯ ಒಳಗೆಳೆದುಕೊಂಡ ಸ್ನೇಹಿತರಿಗೆ ಹಾಗು ಬ್ಲಾಗ್ ಕಡೆ ಕಣ್ಣು ಹಾಯಿಸಿದ ಎಲ್ಲರಿಗೂ ಅನಂತಾನಂತ ವಂದನೆಗಳು. ನಿಮ್ಮ ಪ್ರೀತಿಗೆ ನಾನು ಚಿರ ಋಣಿ. ಮತ್ತೆ ಸಿಗುವೆ...


ಶರಶ್ಚಂದ್ರ ಕಲ್ಮನೆ

Wednesday, August 5, 2009

ಕಥೆ ಹೇಳುತ್ತಿವೆ ಸಾಲುಗಳು...

ಅಪ್ಪನೊಂದಿಗೆ ಬೈಕಿನಲ್ಲಿ ಕುಳಿತಿದ್ದ ಪುಟ್ಟನೊಬ್ಬ ಕೈಯಿಂದ ಜಾರಿ ಬೀದಿಪಾಲಾದ "ಸೂಪರ್ ಮ್ಯಾನ್" ನ ಸ್ಟಿಕ್ಕರ್ ರಸ್ತೆಯಲ್ಲಿ ಅನಾಥವಾಗುತ್ತಿರುವುದನ್ನು ಕಂಬನಿಗಣ್ಣಲ್ಲಿ ನಿರುಪಾಯನಾಗಿ ನೋಡತೊಡಗಿದ.


ಸಂಜೆ ಮಗಳ ಚೀಲ ತೆಗೆದ ತಾಯಿ, ಊಟದ ಡಬ್ಬಿಯಲ್ಲಿನ ಊಟ ಹಾಗೆ ಇದ್ದುದನ್ನು ಕಂಡು ನಖಶಿಖಾಂತ ಕೋಪಗೊಂಡಳು. ಹಸಿವಾದರೂ ಅನೇಕ ಕೆಲಸಗಳ ಮಧ್ಯೆ ಊಟ ಮಾಡಲಾಗದೆ ಮನೆಗೆ ಬಂದು ಮಲಗಿದ್ದ ಮಗಳ ಹೊಟ್ಟೆಯಲ್ಲಿ ಹಸಿವು ಅಣಕವಾಡುತ್ತಿತ್ತು.


ಹೊರಗೆ ಹುಚ್ಚು ಮಳೆ, ಉಂಡು ಬೆಚ್ಚಗೆ ಹಾಸಿಗೆಯಲಿ ಮಲಗಿಹೆನು. ಜಗತ್ತಿನಲಿ ಹಲವಾರು ಜನಕ್ಕೆ ಈ ಭಾಗ್ಯವಿಲ್ಲ. ಕೆಲವರಿಗೆ ಊಟವೆಂದರೆ ಗೊತ್ತಿಲ್ಲ. ಕೆಲವರು ಹಾಸಿಗೆಯನ್ನು ಕಂಡಿಲ್ಲ. ಕೆಲವರು ಬದುಕನ್ನು ಬದುಕಲೇ ಇಲ್ಲ.


ಬೈಕಿನಲ್ಲಿ ಶರವೇಗದಲ್ಲಿ ಸಾಗುತ್ತಿದ್ದ ಯುವಕನ ಕಂಗಳು ರಸ್ತೆ ಬದಿಯಲ್ಲಾದ ಅಪಘಾತದ ಕಡೆ ತಿರುಗಿತು. ನುಜ್ಜುಗುಜ್ಜಾದ ಬೈಕನ್ನು ನೋಡಿ ಬೆಚ್ಚಿಬಿದ್ದ ಅವನ ಕೈಗಳು ಅದುರತೊಡಗಿದವು. ಆವರಿಸುತ್ತಿದ್ದ ಭಯ ಅವನ ಬೈಕಿನ ವೇಗವನ್ನು ತಗ್ಗಿಸತೊಡಗಿತು...


ಹಳ್ಳಿಯ ಮನೆ ಬಿಟ್ಟು ಓಡಿಬಂದು ಹತ್ತಿದ ಬಸ್ಸು, ಬಣ್ಣ ಕಳೆದುಕೊಂಡ ಗಡಿಬಿಡಿಯ ಗೂಡಾದ ಸಿಟಿಗೆ ತಂದು ಎಸೆದಿದೆ. ಕೇವಲ ಒಂದು ರಾತ್ರಿ ಕಳೆಯುವುದರಲ್ಲಿ ಬದಲಾದ ಈ ಪರಿಸರವನ್ನು ನೋಡುತ್ತಿದ್ದ ಹುಡುಗನ ಕಣ್ಣಲ್ಲಿ ಆತಂಕ ಎಂಬ ಪದ ಅರ್ಥ ಪಡೆದುಕೊಳ್ಳುತ್ತಿದೆ.


ನೋಡು, ನೀನು ನನ್ನನ್ನು ಬಿಟ್ಟು ಹೋಗದೆ ಇದ್ದಿದ್ದರೆ ಈಗ ನಾನು ಕಂಬನಿ ಮಿಡಿಯುವ ಪ್ರಸಂಗವೇ ಇರುತ್ತಿರಲಿಲ್ಲ. ಗೆಳೆಯ-ಗೆಳತಿಯರು ಅವರ ಹುಡುಗಿಯ ಬಗ್ಗೆಯೋ, ಅವರ ಹುಡುಗನ ಬಗ್ಗೆಯೋ ಹೇಳಿಕೊಳ್ಳುವಾಗ ನನ್ನಲ್ಲಿ ಅನಾಥಭಾವ. ನೀನು ನನಗೆಂದು ಬಿಟ್ಟು ಹೋದದ್ದು ಒಂದು ಹಿಡಿ ನೆನಪುಗಳು... ಒಂದಿಷ್ಟು ಕಂಬನಿಗಳು... ಇಷ್ಟೇ...

Tuesday, July 21, 2009

ಸುರಿಯುವ ಮಳೆಯಲ್ಲಿ ಕನಸಿನ ಗೂಡು ಕಟ್ಟಿ ಕೊಟ್ಟವಳಿಗೆ ಒಂದು ಪತ್ರ



ನಾನು ನನ್ನನ್ನೇ ಯಾವಗಲೂ ಕೇಳಿಕೊಳ್ಳುತ್ತಿರುತ್ತೇನೆ, ಯಾಕೆ ಈ ಮಳೆಗಾಲ ಹೀಗೆ ಎಂದು. ಪ್ರೀತಿ ಗಿಡದ ಮೊಳಕೆ ಒಡೆಯೋದೂ, ಪ್ರೀತಿಯ ಹೆಮ್ಮರ ಕಾರಣವಿಲ್ಲದೆ ಉರುಳಿ ಬೀಳೋದು ಈ ಮಳೆಗಾಲದಲ್ಲೇ ತಾನೇ ? ನಿನ್ನನ್ನು ಅಂದು ಬಸ್ಸಿನಲ್ಲಿ ನೋಡಿದಾಗ ವಿಶೇಷವಾದದ್ದೇನು ಅನ್ನಿಸಲಿಲ್ಲ. ಚಂದವಾಗೆ ಕಂಡೆ ನೀನು, ಸುಳ್ಳಿಲ್ಲ. ಒಂದು ನಗೆ, ನನ್ನ ಮಂದಹಾಸ ಅಷ್ಟೇ. ನಂತರ ನಾನೂ ಮರೆತೆ, ನೀನು ಮರಿತಿದ್ದೆ ಎಂದೆನಿಸುತ್ತದೆ. ಕಾಕತಾಳೀಯವೋ ಏನೋ, ಮತ್ತೆ ಮರುದಿನ ಪೇಟೆಯಲ್ಲಿ ನಿನ್ನ ದರ್ಶನ, ಮತ್ತೆ ನೆನಪಾಯಿತು ನಿನ್ನೆಯ ಭೇಟಿ. ಮತ್ತೊಮ್ಮೆ ನಗುಗಳ ವಿನಿಮಯ. ನೀನು "ಹಾಯ್" ಎಂದೆ. ನಾನು ಮೌನಿ, ಸುಮ್ಮನೆ ನಕ್ಕೆ. ನಿನ್ನ ದಾರಿ ನೀ ಹಿಡಿದೆ, ನನ್ನ ಹಾದಿ ನಾನು. ಆದರೆ ಅಂದಿನ ರಾತ್ರೆ ನಿದ್ದೆ ಬರುವುದು ಸ್ವಲ್ಪ ತಡವಾಯಿತು ಎಂದು ನನ್ನ ನೆನಪು. ಆದರೂ ಕಾಕತಾಳೀಯವೇ ಇರಬಹುದು ಎಂದು ಸುಮ್ಮನಾದೆ.


ನಮ್ಮ ಭೇಟಿ ಅದಕ್ಕಿಂತ ಹೆಚ್ಚಿನದು ಎಂದು ಧೃಡಪಟ್ಟಿದ್ದು ಮೊನ್ನೆಯ ಆ ಸಂಗೀತ ಕಾರ್ಯಕ್ರಮದಲ್ಲೇ. ಮತ್ತೆ ನನ್ನ ಮುಂದಿನ ಕುರ್ಚಿಯಲ್ಲಿ ನೀನು. ನಿನ್ನ ನಗು. ನಿನ್ನ ಗುರುತಿಸಿಯೂ, ಮಾತನಾಡಿಸುವ ಅಭಿಲಾಷೆ ಇದ್ದರೂ, ಏನೆಂದು ಕರೆಯಲಿ ನಿನ್ನ, ಹೇಗೆ ಕರೆಯಲಿ ಎಂದು ಗೊತ್ತಾಗದೇ ಪೆಚ್ಚಾಗಿ ಕುಳಿತಿದ್ದೆ. ಒಳಗೆ ಹಿಂದೂಸ್ತಾನಿ, ಹೊರಗೆ 'ಧೋ' ಎಂದು ಸಾಥ್ ಕೊಡುತ್ತಿದ್ದ ಬಿರುಮಳೆ. ಕಾರ್ಯಕ್ರಮ ಮುಗಿಯಲು ಬರುತ್ತಿರಲು, ನನ್ನಲ್ಲಿ ಗೊಂದಲ ಹೆಚ್ಚುತ್ತಿರಲೂ ನೀನೊಮ್ಮೆ ತಿರುಗಿದೆ (ದೈವಲೀಲೆಯೇ ಖರೆ). ಎಷ್ಟೋ ವರ್ಷದ ಪರಿಚಯದ ಹಾಗೆ ನಾನು "ಅರರೆ ! ನೀವಿಲ್ಲಿ?" ಎಂದು ಬಡಬಡಿಸಿದೆ. ನೀನೂ ಅಷ್ಟೇ ಸಲೀಸಾಗಿ "ಓಹೋ ನೀವ್ಯಾವಾಗ ಬಂದಿದ್ದು, ಗೊತ್ತೇ ಆಗಲಿಲ್ಲ, ಬನ್ನಿ ಇಲ್ಲೇ ಮುಂದಕ್ಕೆ" ಎಂದು ಕುರ್ಚಿ ತೋರಿದೆ. ನಸುನಗುವಿನೊಂದಿಗೆ ನಿನ್ನ ಪಕ್ಕದಲ್ಲಿ ಕುಳಿತ ನನ್ನ ಮೈಯ್ಯಲ್ಲೆಲ್ಲ ಮಿಂಚಿನ ಸಂಚಾರ. ಅವ್ಯಕ್ತ ಭಯ. ಇದೆ ಮೊದಲ ಬಾರಿಗೆ ಹುಡುಗಿಯ ಪಕ್ಕ ಕುಳಿತಿದ್ದೇನೆ ಎಂಬ ಅನುಭವ. ಪರಿಚಯ ಚಿಕ್ಕದಾದರೂ ಸಲುಗೆ ಇತ್ತು. ನಿನ್ನ ನಗುವಿನಲ್ಲಿ ನೂರು ಅರ್ಥಗಳನ್ನು ಕಂಡೆ ಅಂದು.


ಸರಿಯಾಗಿ ನಿದ್ದೆ ಇಲ್ಲದೆ ಒಂದು ವಾರವಾಯಿತು ನೋಡು. ಈಗೀಗ ಕಣ್ಣು ಮುಚ್ಚಿದರೆ ಕನಸುಗಳದೇ ದರ್ಬಾರು. ದೀಪಾವಳಿಯ ಬೆಳಗಿನಂತೆ, ಕಪ್ಪನೆಯ ಆಗಸದಲ್ಲಿ ಸಿಡಿಯುವ ಸಿಡಿಮದ್ದಿನಂತೆ. ಎಲ್ಲೆಲ್ಲೂ ನಿನ್ನದೇ ಚಿತ್ತಾರ. ಹೃದಯದಲ್ಲಿ ಮಾರ್ಧನಿಸುವ ನಿನ್ನ ನಗು. ಮತ್ತೆಂದು ನಮ್ಮ ಭೇಟಿ? ಹೊರಗಂತೂ ಮಳೆಯದೇ ಆಟ. ಯಾವುದಾದರೂ ಬೆಚ್ಚನೆಯ ಜಾಗದಲ್ಲಿ ಕುಳಿತು ಇನ್ನಷ್ಟು ಮಾತುಕತೆಗಳಾದರೆ ಎಷ್ಟು ಚಂದ ? ನಮ್ಮ ಭೇಟಿಗಾಗೆ ಪೈ ಪರಿವಾರ್, ಸುಖ ಸಾಗರದ ಕುರ್ಚಿಗಳು ಖಾಲಿಯಾಗಿವೆ (ನನಗೆ ಸಾಗರದಲ್ಲಿ ಗೊತ್ತಿರೊದು ಇವೆರಡೆ ಹೊಟೆಲ್ಗಳು) ಅಥವಾ ನೀನು ಬೆಂಗಳೂರಿಗೆ ಬಂದ ಮೇಲೆ ಕಾಫಿ ಡೇ ಆದರೂ ಆಯಿತು. ಮೊಬೈಲ್ನಲ್ಲಿ ಮೆಸೆಜ್ ಒಂದು ಬಂದಾಗ, ಅದು ನಿನ್ನದೇ ಇರಬಹುದು ಎಂಬ ಆಸೆ. ಹಾಗೆ ಆ ಆಸೆಗಳು ನಿರಾಸೆಯಾಗಿದ್ದೂ ಬಹಳ ಕಡಿಮೆ. "ನೀನೆಂದರೆ ನನ್ನೊಳಗೆ ಏನೊ ಒಂದು ಸಂಚಲನ.... ನಾ ಬರೆಯದ ಕವಿತೆಗಳ..." ಈ ಹಾಡೇ ಬೇಡವೆಂದರೂ ನಾಲಿಗೆಯ ಮೇಲೆ ಆಡುತ್ತಿರುತ್ತದೆ. ಈ ಮಳೆಗಾಲ, ಅದರಲ್ಲಿ ನೆನೆದು ತೊಪ್ಪೆಯಾದ ನಾನು, ನಮ್ಮ ಭೇಟಿ, ಇವೆಲ್ಲದಕ್ಕೂ ಒಂದು ಸಾರ್ಥಕತೆ ದೊರೆಯಲಿ. ಸುರಿಯುವ ಮಳೆಯಲ್ಲಿ ಕನಸಿನ ಗೂಡನ್ನು ಕಟ್ಟಿಕೊಟ್ಟವಳೆ ನಿನ್ನ ಒಡನಾಟಕ್ಕೆ ಕುಳಿತು ಕಾಯುತ್ತಿರುವೆನು. ದಿನಾಂಕ ಹಾಗು ಸ್ಥಳವನ್ನು ನಿಗದಿ ಮಾಡುವ ಜವಾಬ್ದಾರಿಯನ್ನು ನಿನಗೆ ಬಿಟ್ಟಿದ್ದೇನೆ.



ಇತಿ, ನಿನ್ನವ


.......................

Friday, April 17, 2009

ಓಡಿ ಹೋದವನ ಒಂದು ಪತ್ರ.....



ನೀವು ಈ ಪತ್ರ ಓದುತ್ತಿರುವ ಹೊತ್ತಿಗೆ ನಾನು ಎಲ್ಲಿ ಇರುತ್ತೇನೋ ನನಗೆ ಗೊತ್ತಿಲ್ಲ. ಈ ಪತ್ರ ಬರೆಯುವ ಅಗತ್ಯತೆ ಇರಲಿಲ್ಲ. ನನ್ನ ಮನದಲ್ಲಿ ಇದ್ದುದನ್ನು ಬಾಯಿಮಾತಲ್ಲಿ ಹೇಳಲಾಗದೆ ಅಕ್ಷರಗಳ ಸಹಾಯ ಪಡೆಯುತ್ತಿದ್ದೇನೆ. ನಾನು ಹೀಗೆ ಓಡಿಹೊಗುತ್ತಿರಲು ಈಗ ಜಿನುಗುತ್ತಿರುವ ಮಳೆಯೂ ಕಾರಣವಾಗಿರಬಹುದು. ಈ ಮಳೆಯೇ ಹೀಗೆ, ಎಲೆಯ ಮೇಲಿನ ಧೂಳನ್ನೆಲ್ಲ ತೊಳೆದಂತೆ ನೆನಪಿನ ಗಂಟನ್ನು ಸಡಲಿಸುತ್ತದೆ... ಇದೊಂದು ನೆಪವಷ್ಟೇ.





ಓಡಿ ಹೋಗುತ್ತಿರಲು ಕಾರಣ ಒಂದು ಬೇಕಲ್ಲವೇ... ಹೆದರಬೇಡಿ, ವೈರಾಗ್ಯ ಅಂತೂ ಬಂದಿಲ್ಲ. ಹ್ಞಾ! ತಾತ್ಕಾಲಿಕ ವೈರಾಗ್ಯ ಇದ್ದರೂ ಇರಬಹುದು. ಬೇಸತ್ತಿದ್ದೇನೆ ಈ ಜೀವನದಿಂದ. ಅದೇ ಅರ್ಥೈಸಿಕೊಳ್ಳಲು ಆಗದ ಜನರು, ಒಗ್ಗದ ಅವರ ತೋರಿಕೆಯ ಮಾತುಗಳು. ಇಲ್ಲಿ ನಂಬಿಕೆ, ಪ್ರೀತಿ, ಗೆಳೆತನ, ಆತ್ಮೀಯತೆ ಎಲ್ಲ ತೋರಿಕೆಗೆ ಮಾತ್ರ. ಬಹುಶ ಒತ್ತಡ ಹಾಗು ಪರಿಸ್ಥಿತಿಗಳು ಜನರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರಬಹುದು. ಹಾಗೆ ಆಗಿದ್ದೇ ಆದರೆ ನಾವು ಮಾನವರು ಎಂದು ಹೇಳಿಕೊಳ್ಳುವುದರಲ್ಲಿ ಯಾವ ಅರ್ಥವಿದೆ ?? ನನಗೇ ಯೋಗ್ಯತೆ ಇಲ್ಲದೆ ಇರಬಹುದು ಈ ಸಮಾಜದಲ್ಲಿ ಜೀವಿಸಲು.. ನಾನು ಕಲ್ಪಿಸಿಕೊಂಡಿರುವ ಜೀವನದ ಅರ್ಥವೇ ತಪ್ಪಿದ್ದರೂ ಇರಬಹುದು. ನನಗೇ ಏಕಾಂತದ ಅಗತ್ಯವಿದೆ ಎನ್ನಿಸತೊಡಗಿದೆ. ಇದು ಇಡಿ ಜೀವನಕ್ಕೂ ಅನ್ವಯಿಸುವುದಿಲ್ಲ, ಕೇವಲ ದಿನಗಳ ಮಟ್ಟಿಗೆ. ನನ್ನನ್ನು ನಾನು ಅರಿಯಲು ಅಥವಾ ಈ ಜಗತ್ತಿಗೆ ತಕ್ಕಂತೆ ಬದಲಿಸಿಕೊಳ್ಳುವವರೆಗೆ ನಾನು ಒಂಟಿಯಾಗಿರಬೇಕಿದೆ.





ಕಣ್ಣು ಮುಚ್ಚಿಕೊಂಡು ಕರ್ಣಾಟಕದ ಭೂಪಟದ ಮೇಲೆ ಬೆರಳು ಆಡಿಸುತ್ತಿರುವೆ, ಯಾವ ಜಾಗದಲ್ಲಿ ಬೆರಳು ನಿಲ್ಲುತ್ತದೆಯೋ ಅಲ್ಲಿಗೆ ನನ್ನ ಪಯಣ. ನನಗೇ ಆ ಊರು ಸುಂದರವಾಗಿರಬೇಕೆಂದು ಏನು ಇಲ್ಲ, ಇಲ್ಲಿಂದ ಮುಕ್ತಿ ಬೇಕಾಗಿದೆ ಅಷ್ಟೇ. ಭಯ ಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಹಿಂತಿರುಗುವೆ. ನನ್ನದೇ ಆದ ಮನಸ್ಸೊಂದಿದೆ, ಅದಕ್ಕೆ ಆದ ಅಗತ್ಯತೆಗಳಿವೆ. ನಿಮ್ಮೆಲ್ಲರ ಮಾತನ್ನೂ ಕೇಳಿದಂತೆ ನನ್ನ ಮನಸ್ಸಿನ ಮಾತನ್ನೂ ಕೇಳಬೇಕಿದೆ. ಬಿಟ್ಟು ಹೋದ ನಿರೀಕ್ಷೆಗಳಿಗೆ ನಾನೇ ಜವಾಬ್ದಾರ ಎಂಬ ಅರಿವು ನನಗಿದೆ.





ನಡೆದ ದಾರಿಯ ಮೇಲೆ ಹೋದ ಹೆಜ್ಜೆಯ ಸಾಲು
ದೂರ ಬೆಟ್ಟದ ಮೇಲೆ ಬೆಳಕುಗಳ ಬೀಡು
ತುಂಬು ಹೊಳೆಯಂತೆ ಗಂಭೀರವಾಗಿ ಹರಿಯುತ್ತಲೇ ಇದೆ
ಒಳಗೆ ಎಂದೂ ಮುಗಿಯದ ಹಾಡು
ಜಿ.ಎಸ್. ಶಿವರುದ್ರಪ್ಪ

ಇತಿ,
ನಿಮ್ಮ ಪ್ರೀತಿಯ.....

Tuesday, March 31, 2009

ಕತೆ ಎನ್ನಿಸಿಕೊಳ್ಳಲು ಅಯೋಗ್ಯವಾದ ಕತೆಗಳು......

ಹುಬ್ಬಳ್ಳಿ ಇನ್ನೇನು ಬಂದೆ ಬಿಟ್ಟಿತು... ರೈಲು ಇಳಿಯುವ ತಯಾರಿಯಲ್ಲಿದ್ದ ಅವನನ್ನು ಅವಳು ಕೇಳಿದಳು "ನಿಮ್ಮ ಕಾಂಟಾಕ್ಟ್ ನಂಬರ್ ಕೊಡುವಿರಾ?" ಧ್ವನಿಯಲ್ಲಿ ಸ್ವಲ್ಪ ಭಯ ಸ್ವಲ್ಪ ಕಾತರತೆ ಇತ್ತು. ಇವಳನ್ನು ನೋಡಿ ನಸುನಗೆಯೊಂದನ್ನು ನಕ್ಕ ಅವನು. "ಈಗಲೇ ನಾಲ್ಕು ಗಂಟೆಗಳ ನೆನಪುಗಳ ಋಣವನ್ನು ಹೊತ್ತಿದ್ದೇನೆ ನಾನು, ಮತ್ತೂ ಋಣವನ್ನು ಹೊರಿಸಬೇಡಿ ನನ್ನ ಮೇಲೆ. ಈ ಬಂಧಕ್ಕೆ ಹೆಸರಿನ ಹಂಗು ಬೇಡ. ಹಣೆಯಲ್ಲಿ ಬರೆದಿದ್ದರೆ ಇನ್ನೊಮ್ಮೆ ಭೇಟಿಯಾಗುವ" ಎಂದು ಕಣ್ಣು ಮಿಟುಕಿಸಿ ರೈಲನ್ನು ಇಳಿದೆ ಬಿಟ್ಟ. ತಾನು ಸೋತೆನೋ ಗೆದ್ದೇನೋ ಎಂದು ತಿಳಿಯದೆ ನಿಟ್ಟುಸಿರು ಬಿಟ್ಟು ಇವಳೂ ಬ್ಯಾಗ್ ಇಳಿಸತೊಡಗಿದಳು. ಹೀಗೆ ಶುರುವಾಗುವ ಮೊದಲೇ ಪ್ರೇಮ ಕತೆಯೊಂದು ಕೊನೆಗೊಂಡಿತು....


ಪ್ರತೀ ಬಾರಿಯೂ ಊರಿಗೆ ಹೋಗುವಾಗ ಹಾದಿ ಬದಿಯಲ್ಲಿದ್ದ ಆ ಮನೆಯ ಕಟ್ಟೆಯ ಮೇಲೆ ಇರುತ್ತಿದ್ದ ಅವಳು ಕುತೂಹಲ ಹುಟ್ಟಿಸುತ್ತಿದ್ದಳು. ಅವಳ ಹಾವ ಭಾವಗಳು ಆಶ್ಚರ್ಯ ತರುತ್ತಿದ್ದವು.. ಬಹುಶ ನನಗೆ ಆರೆಂಟು ವರ್ಷ ಆದಗಲಿಂದ ನೋಡುತ್ತಿದ್ದೆ ಅವಳನ್ನು. ಅವಳು ಬುದ್ದಿಮಾಂದ್ಯ ಎಂದು ತಿಳಿದದ್ದು ನಾನು ಹೈಸ್ಕೂಲ್ ಮೆಟ್ಟಿಲು ಹತ್ತಿದ ಮೇಲೆಯೇ.. ಮೊನ್ನೆ ಊರಿಗೆ ಹೋಗುವಾಗ ಎಂದಿನಂತೆ ಆ ಮನೆಯತ್ತ ಕಣ್ಣು ಹರಿಯಿತು.. ಆದರೆ ಅವಳು ಅಲ್ಲಿ ಇರಲಿಲ್ಲ.. ಅಲ್ಲಿಗೆ ನನ್ನ ಕುತೂಹಲಕ್ಕೂ ತೆರೆ ಬಿದ್ದಿತ್ತು.



"ಅಪ್ಪನನ್ನು ಕಳೆದುಕೊಂಡು ಒಂದು ತಿಂಗಳೂ ಆಗಲಿಲ್ಲ ನೋಡಿ ಹೇಗೆ ಬಾಯ್ತುಂಬ ನಗುತ್ತಿದ್ದಾನೆ" ಎಂದ ಜನಕ್ಕೆ, ಪ್ರತೀ ರಾತ್ರಿ ಅವನ ತಲೆದಿಂಬು ಕಣ್ಣೀರಿನಿಂದ ಒದ್ದೆ ಆಗುತ್ತಿದ್ದದ್ದು ತಿಳಿಯಲೇ ಇಲ್ಲ.


"ಸಾಫ್ಟ್ ವೇರ್ ಬಿದ್ದೋಯ್ತು ಬಿಡ್ರಿ, ಇಂಜಿನಿಯರಿಂಗ್ ಮಾಡೋದೇ ವೇಸ್ಟ್" ಎಂದು ಬಾಯಿ ತುಂಬಾ ಎಲೆ ಅಡಿಕೆ ಹಾಕಿಕೊಂಡು ಹೇಳಿದವರಿಗೆಲ್ಲ, ಅವರ ಮಗನೋ ಮಗಳೋ ಇಂಜಿನಿಯರಿಂಗ್ ಮುಗಿಸುವ ವೇಳೆಗೆ ರಿಸೆಶನ್ ಆದಾಗಲೇ ಗೊತ್ತಾಗಿದ್ದು "ಆತಂಕ" ಎಂದರೇನು ಎಂದು.

Sunday, March 15, 2009

ಕೃಷ್ಣ




ಕೃಷ್ಣನ ಚಿತ್ರವನ್ನು ಪೂರ್ಣಗೊಳಿಸಿ ಮತ್ತೆ ಅಪ್ ಲೋಡ್ ಮಾಡು ಅಂದ ಎಲ್ಲ ಬ್ಲಾಗ್ ಮಿತ್ರರಿಗೊಸ್ಕರ :)

Sunday, March 8, 2009

ಸ್ತ್ರೀ ಅಂದರೆ ಅಷ್ಟೇ ಸಾಕೆ?

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಆಕೆಯ ಕೈಯ್ಯಷ್ಟು ಮೃದುವಾದ ಕೈ ಮತ್ತೊಂದಿಲ್ಲ. ಅವಳು ಪ್ರೀತಿಯಿಂದ ತಲೆಯ ಮೇಲೆ ಕೈ ಸವರುತ್ತಾಳೆ. ಜ್ವರ ಬಂದಾಗ ಅವಳ ಕೈ ಹಣೆ ಮುಟ್ಟಿದರೆ ಆ ಸ್ಪರ್ಶದಿಂದಲೇ ಅರ್ಧ ಜ್ವರ ಮಾಯವಾಗುತ್ತದೆ. ಆ ಮೃದು ಕೈಯ್ಯ ಹಿಂದೆ ಕಷ್ಟಗಳ ದೊಡ್ಡ ಕಥೆಯೇ ಇದೆ. ಕೆಲಸ ಮಾಡಿ ಮಾಡಿಯೇ ಕೈ ಸವೆದು ಇಷ್ಟು ಮ್ರುದುವಾಗಿದೆಯೇ ಎಂದು ಕೆಲವೊಮ್ಮೆ ನನಗೆ ಅನ್ನಿಸಿದ್ದೂ ಇದೆ. ಈ ವಯಸ್ಸಿನಲ್ಲೂ ತನ್ನ ಶಕ್ತಿ ಮೀರಿ ಕೆಲಸ ಮಾಡುತ್ತಾಳೆ. ಹಾಗೆ ಪ್ರೀತಿಯೂ ಕೂಡ, ಸಾಗರದಷ್ಟು ಆಳ, ವಿಶಾಲ. ಮೊಮ್ಮಗ ಫೋನ್ ಮಾಡಿದಾಗ ಮಾತನಾಡಿಸಿದರೆ ಅದನ್ನೇ ನಾಲ್ಕಾರು ದಿನ ನಾಲ್ಕಾರು ಜನಕ್ಕೆ ಹೇಳಿಕೊಂಡು ಸಂಭ್ರಮಿಸುವಷ್ಟು ಮುಗ್ಧೆ ಈಕೆ. ಆಕೆಗೆ ಆಕೆಯ ಕುಟುಂಬವೇ ಸರ್ವಸ್ವ, ಆಕೆಯ ಊರೇ ಪ್ರಪಂಚ. ಇಷ್ಟೊಂದು ಪ್ರೀತಿಯನ್ನು ಯಾವುದೇ ಅಪೇಕ್ಷೆ ಇಲ್ಲದೆ ನನಗೆ ನೀಡಿದ ಈಕೆ ನನ್ನ ಅಜ್ಜಿ.


ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಈಕೆಯ ಬಗ್ಗೆ ಏನು ಹೇಳಿದರೂ ಕಡಿಮೆಯೇ. ಈಕೆ ನನ್ನ ಸರ್ವಸ್ವ. ಈಕೆಯನ್ನು ಬಿಟ್ಟು ನಾನಿಲ್ಲ. ನನ್ನ ಜೀವನದಲ್ಲಿ ನಡೆದ ಎಲ್ಲ ಘಟನೆಗಳನ್ನೂ ಬಲ್ಲವಳು ಇವಳು. ನನ್ನ ಹೃದಯದ ತಳಮಳಗಳನ್ನು ಕಣ್ಣಲ್ಲಿ ಕಣ್ಣಿಟ್ಟು ತಿಳಿದುಕೊಳ್ಳಬಲ್ಲವಳು. ನನ್ನ ಕಣ್ಣು ತುಂಬಿದರೆ ಈಕೆ ಅಳುವಳು. ನನ್ನ ಮುಖದ ಮಂದಹಾಸ ಈಕೆಯ ಬಾಯ್ತುಂಬ ನಗೆಗೆ ಕಾರಣವಾಗುತ್ತದೆ. ನನ್ನ ಮನಸ್ಸನ್ನು ಸಂಪೂರ್ಣವಾಗಿ ಅರಿತವಳು. ನನ್ನಲ್ಲಿ ಏನೇನು ಒಳ್ಳೆಯ ಗುಣಗಳು ಇವೆಯೋ ಅದಕ್ಕೆಲ್ಲ ಕಾರಣ ಇವಳೇ. ಈಕೆಯ ಋಣವನ್ನು ನಾನೆಂದೂ ತೀರಿಸಲು ಆಗದು. ಈಕೆ ನನ್ನನ್ನು ಹೊತ್ತು, ಹೆತ್ತು, ಎತ್ತಾಡಿಸಿ, ಮುದ್ದಾಡಿಸಿ, ಇಷ್ಟೆತ್ತರಕ್ಕೆ ಬೆಳೆಸಿ ನಿಲ್ಲಿಸಿದ ನನ್ನ ಅಮ್ಮ.


ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಈಕೆ ನನ್ನೊಂದಿಗೆ ಭಯಂಕರ ಜಗಳ ಮಾಡುತ್ತಾಳೆ. ಜಗಳ ಮುಗಿದು ಮುನಿಸಿಕೊಂಡಾಗ ಕೈ ಹಿಡಿದು ಕೇಳುತ್ತಾಳೆ "ಹೇ ಸಾರಿ ಕಣೋ, ಇನ್ನೊದು ಸಲ ಜಗಳ ಮಾಡಲ್ಲ." ಮನೆಗೆ ಹೋದರೆ ನನಗೋಸ್ಕರ ಸಿಹಿ ಮಾಡುತ್ತಾಳೆ. ರಾತ್ರಿ ಒಂದರ ವರೆಗೆ ಹರಟುವಷ್ಟು ವಿಷಯಗಳಿರುತ್ತವೆ ಇವಳಿಗೆ. "ಏ ಆ ಹುಡುಗಿಗೆ ಲೈನ್ ಹೊಡೆಯೋ, ಚನ್ನಾಗಿದ್ದಾಳೆ" "ಇವಳು ಬೇಡ, ನಿಂಗೆ ಸರಿಯಾದ ಜೋಡಿ ಅಲ್ಲ ಬಿಡು" ಎಂದೆಲ್ಲ ತಮಾಷೆ ಮಾಡುತ್ತಾಳೆ. ಏನೂ ಕೆಲಸವಿಲ್ಲದಿದ್ದರೆ ಬಂದು ಮೈಗೆ ಒರಗುತ್ತಾಳೆ, ತೊಡೆಯ ಮೇಲೆ ತಲೆಯಿಟ್ಟು ನಿದ್ದೆ ಹೋಗುತ್ತಾಳೆ..... ನನ್ನ ತಂಗಿ ಈಕೆ.


ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಈಕೆಯ ಹೃದಯ ಆಗಷ್ಟೆ ಹುಟ್ಟಿದ ಮಗುವಿನಷ್ಟು ಪರಿಶುದ್ದ. ಕಪಟವನ್ನು ಅರಿಯದವಳೀಕೆ. ಮನಸ್ಸಿಗೆ ಬಂದಿದ್ದನ್ನು ನೇರವಾಗಿ ಹಾಗೆ ಹೇಳುವಳು. ನಾನು ಬೇಸರಗೊಂಡಅಗಲೆಲ್ಲ ಹುರಿದುಂಬಿಸುವಳು. ಪ್ರತಿಯೊಂದು ಮಾತನ್ನೂ ನಗು ತುಂಬಿಕೊಂಡು ಆಡುವಳು. ಇವಳು ಉತ್ಸಾಹದ ಚಿಲುಮೆ. ಹೊಂದಿಕೊಂಡು ಹೋಗುವ ಸರಳತೆಯಿದೆ ಇವಳಿಗೆ. ಸ್ವಚ್ಛ ಮನಸ್ಸಿಂದ ಪ್ರೀತಿಯನ್ನು ಹಂಚಿಕೊಳ್ಳುತ್ತಾಳೆ ಈಕೆ. ಯಾರಾದರು ನೋಯಿಸಿದರೆ ನನ್ನಲ್ಲಿ ಬಂದು ಕಣ್ಣೀರು ಹರಿಸಿ ನೋವನ್ನು ಕಳೆದುಕೊಳ್ಳುವವಳು. ಇವಳು ನನ್ನ ಗೆಳತಿ.



(ಕವಿ ಜಿ.ಎಸ್. ಶಿವರುದ್ರಪ್ಪ ಅವರ ಈ ಕವಿತೆಯನ್ನು ಸಿ. ಅಶ್ವಥ್ ಅವರ ಕಂಠದಲ್ಲಿ ಕೇಳುತ್ತಿದ್ದಾಗ ನನ್ನಲ್ಲಿ ಮೂಡಿದ ಭಾವನೆಗಳ ಅಕ್ಷರ ರೂಪ ಈ ಬರಹ. ಸುಮಾರು ಎರಡು ವರ್ಷಗಳ ಹಿಂದೆ ಬರೆದಿದ್ದು. ಇದು ನಾನು ಬರೆದ ಮೊದಲ ಬರಹವೂ ಹೌದು. ಸಂಭಂದಗಳಿಗೆ ಹೆಸರು ಇರಲೇ ಬೇಕೆಂದೇನಿಲ್ಲ. ಎಷ್ಟೋ ಸಂಭಂದವಿಲ್ಲದ ಮಹಿಳೆಯರ ಎಷ್ಟೋ ಸಹಾಯಗಳನ್ನು, ಅವರ ಪ್ರಭಾವಗಳನ್ನು ಮರೆಯಲು ಸಾಧ್ಯವಿಲ್ಲ. ಈ ಮೇಲೆ ಬಂದ ವ್ಯಕ್ತಿಗಳು ಕೇವಲ ವ್ಯಕ್ತಿಗಳಾಗಿರದೆ ನನ್ನ ಜೀವನ, ವ್ಯಕ್ತಿತ್ವ, ನಡೆ, ನುಡಿ ರೂಪಿಸಿದ ಶಕ್ತಿಗಳಾಗಿದ್ದಾರೆ. ನನ್ನ ಜೀವನದ ಎಲ್ಲ ಸಂತೋಷಕ್ಕೆ ಕಾರಣರಾದ, ಹೃದಯ ತುಂಬಿ ಪ್ರೀತಿ ನೀಡಿದ, ಸೋತು ಕುಳಿತಾಗ ಉತ್ಸಾಹ ತುಂಬಿದ, ಮಮತೆಯ ಮಳೆಗೈದ, ನಾನು ಮಾಡಿದ ತಪ್ಪುಗಳನ್ನೆಲ್ಲ ಕ್ಷಮಿಸಿದ ನನ್ನ ಅಮ್ಮ, ಅಜ್ಜಿ, ಅತ್ತೆಯಂದಿರು, ಅತ್ತಿಗೆಯಂದಿರು, ಅಕ್ಕಂದಿರು, ತಂಗಿಯಂದಿರು, ಸ್ನೇಹಿತೆಯರು, ಹಾಗು ಹೆಸರೇ ಗೊತ್ತಿಲ್ಲದ ಅನೇಕ ಅಜ್ಞಾತ ಮಹಿಳೆಯರೆಲ್ಲರಿಗೂ ನನ್ನ ಹೃತ್ಪೂರ್ವಕ ನಮಸ್ಕಾರಗಳು. ನಿಮ್ಮ ಋಣವನ್ನು ಎಂದು ತೀರಿಸಲಾರೆನು).

Saturday, January 3, 2009

ಒಂದಿಷ್ಟು ಚಿತ್ರಗಳು










ನಾನು ಇತ್ತೇಚೆಗೆ ಬಿಡಿಸಿದ ಚಿತ್ರಗಳು ಇವು. ಕೃಷ್ಣನ ಚಿತ್ರ ಅಪೂರ್ಣವಾಗಿದೆ. ಪರೀಕ್ಷೆಯ ಸಮಯದಲ್ಲಿ ಹಠಾತ್ತನೆ ಚಿತ್ರಕಲೆ, ಸಾಹಿತ್ಯದ ಬಗ್ಗೆ ನನಗೆ ಆಸಕ್ತಿ ಮೂಡುತ್ತದೆ, ಹತ್ತಿಕ್ಕಲು ಪ್ರಯತ್ನ ಪಟ್ಟು ಸೋಲುತ್ತೇನೆ. ಆದ್ದರಿಂದ ಸಣ್ಣ ಸಣ್ಣ ಚಿತ್ರಗಳನ್ನು ಬಿಡಿಸಿ ಓದಿಗೂ ಆಸಕ್ತಿಗೂ ಸಮಾನ ನ್ಯಾಯ ದೊರಕಿಸಿ ಕೊಡುವ ಪ್ರಯತ್ನ ಇವು.

Friday, January 2, 2009

ಹನಿಗಳು

ಪರೀಕ್ಷೆಯ ಸಮಯದಲ್ಲಿ ಬರೆದ ಕೆಲವು ಹನಿಗಳು ಇವು.

ಪ್ರೀತಿಯೆಂಬ ದೀಪವು
ಬಾಳಿಗೆ ಬೆಳಕನ್ನು ತೋರದೆ
ಬಾಳನ್ನು ಸುಡುತಲಿರೆ
ಪ್ರೀತಿ ಎಂಬ ಪದಕ್ಕೆ ಅರ್ಥ ಉಳಿಯಿತೇ?


ಹೃದಯದ ಅಂಗಳದಲಿ
ಬೇಸರದ ಮಳೆ ಜಡಿಯುತಿರಲು
ಜೊತೆಗೆ ಏಕಾಂತದ ಗೆಳೆತನವಿರಲು
ಆಗಸ ತಿಳಿನೀಲಿಯಾಗುವುದೆಂದು ?


ನನ್ನೆದೆಯೊಳಗೊಂದು ನೋವಿನ ಕೊಳ
ಎಂದು ಅರಿಯುವೆ ಈ ನೋವ ನೀನು
ಹೇಳದೆ ಉಳಿದ ಮಾತುಗಳು ಬಹಳ
ಎಂದು ಆಲಿಸುವೆ ಈ ಮಾತುಗಳ ನೀನು


ಹೀಗೆ ಏಕಾಂತದ ಸಂಜೆಯಲ್ಲಿ
ನೆನಪೊಂದು ಮೂಡಿರಲು ಮನದ ಪರದೆಯಲಿ
ಮೊಗದಲಿ ಇಣುಕಿರಲು ಕಿರುನಗೆಯೊಂದು
ನೆಪವಾಯಿತೀಗ ಇರಲು ಸಂತಸದಲಿ


ಕಣ್ಣ ಹನಿಗಳೇ ಬದುಕಾಗಿದೆ
ವಿರಹವೆಂಬ ನೋವು ಶುರುವಾದಮೇಲೆ
ನೆನಪುಗಳೇ ಉಸಿರಾಗಿದೆ
ನಿನ್ನ ಸವಿ ಮಾತುಗಳು ಅಳಿದ ಮೇಲೆ