ದಿನಾಂಕ ೨೪ ನವೆಂಬರ್, ೨೦೧೦ ರ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆಯ ವೆಬ್ಬಾಗಿಲು ಅಂಕಣದಲ್ಲಿ ಭಾವಯಾನದ ಬಗ್ಗೆ ಬಂದಿತ್ತು. ನನಗೆ ಇದೊಂದು ಸಂತಸದ ವಿಷಯ. ಇದೆ ಮೊದಲ ಬಾರಿಗೆ ಪತ್ರಿಕೆಯೊಂದರಲ್ಲಿ ನನ್ನ ಹೆಸರು ಕಾಣಿಸಿಕೊಂಡಿದೆ. ಕೆಲವರಿಗೆ ಇದು ತೀರಾ ಸಿಲ್ಲಿ ವಿಷಯ ಅನ್ನಿಸಬಹುದು. ನನಗೂ ಕೆಲವು ಸಲ ಸಿಲ್ಲಿ ವಿಷಯವಾಗೆ ಕಾಣಿಸಿತ್ತು. ಆದರೂ ನನ್ನ ಚಿತ್ರಗಳು ಹಾಗು ನನ್ನ ಹೆಸರು ಒಂದು ಪತ್ರಿಕೆಯಲ್ಲಿ ಬಂದಿದೆ ಎಂದರೆ ಹೇಳಲಾಗದ ಅನುಭವ ಅಥವಾ ಪ್ರಥಮ ಬಾರಿ ಬಂದಿದ್ದರಿಂದ ಈ ಅನುಭವ. ಬಹುಮಾನ ಬಂದಾಗ ಪುಟ್ಟ ಹುಡುಗನೊಬ್ಬ ಬಹುಮಾನವಾಗಿ ಬಂದ ವಸ್ತುವನ್ನು ಅಕ್ಕಪಕ್ಕದವರಿಗೆಲ್ಲ ತೋರಿಸಿ ಸಂತೋಷ ಪಟ್ಟಂತೆ ಗೆಳೆಯ ಗೆಳತಿಯರಿಗೆಲ್ಲ ಸಂದೇಶ ಕಳಿಸಿ ಸಂಭ್ರಮಿಸಿದ್ದೇನೆ. ಇದು ಯಾವ ಸಾಧನೆಯೂ ಅಲ್ಲವೆಂದು ಗೊತ್ತು. ಆದರೆ ಇದು ಜೀವನದ ಒಂದು ಸಣ್ಣ ಸಂತಸದ ಕ್ಷಣ. ಈ ಸಂತಸಕ್ಕೆ ಕಾರಣರಾದ ಹಾಗು ನನಗೆ ಪ್ರೋತ್ಸಾಹಿಸುತ್ತಾ ತಮ್ಮ ಗೆಳೆತನದ ಒಡಲಲ್ಲಿ ತುಂಬಿಕೊಂಡ ನನ್ನೆಲ್ಲಾ ಸ್ನೇಹಿತ-ಸ್ನೇಹಿತೆಯರು, ಸಹ ಬ್ಲಾಗಿಗರು, ಹಾಗು ನನಗೆ ಒಳ್ಳೆಯದನ್ನು ಬಯಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಮುಂದೆಯೂ ಹೀಗೆ ಪ್ರೋತ್ಸಾಹಿಸುತ್ತ ನನ್ನ ತಪ್ಪುಗಳನ್ನು ತಿದ್ದುತ್ತಾ ನನ್ನ ನಗುವಿಗೆ ಕಾರಣರಾಗಿರುವಿರೆಂದು ಭಾವಿಸುತ್ತೇನೆ.
ಅಂದ ಹಾಗೆ ಈ ಹಿಂದಿನ ಪೋಸ್ಟ್, ಬ್ಲಾಗಿನಲ್ಲಿ ನನ್ನ ೫೦ ನೇ ಪೋಸ್ಟ್ ಆಗಿತ್ತು. ತಡವಾಗಿ ಗಮನಿಸಿದೆ. ಎರಡೂವರೆ ವರ್ಷಗಳಲ್ಲಿ ೫೦ ಪೋಸ್ಟ್. ರಾಹುಲ್ ದ್ರಾವಿಡ್ ಬ್ಯಾಟಿಂಗ್ ಥರ ಆಯಿತು. ಹಲವಾರು ಬಾರಿ ಇಷ್ಟು ದೂರ ಸಾಗುವ ಎಣಿಕೆಯೂ ಇರಲಿಲ್ಲ. ಭಾವಯಾನವನ್ನು ಎಲ್ಲಿಯೂ ನಿಲ್ಲಲು ಕೊಡದೆ ನಿರಂತರವಾಗಿರಲು ಸ್ಫೂರ್ತಿ ಹಾಗು ಪ್ರೋತ್ಸಾಹ ನೀಡಿದ್ದೂ ನೀವೇ. ಹಾಗಾಗಿ ಇನ್ನೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳು.