ಕಣ್ಣು ಚಾಚಿದಷ್ಟಕ್ಕೂ ದೂರ ಕಾಣುವ ಕತ್ತಲು, ಕತ್ತಲ ಬೆನ್ನು ಹತ್ತಿರುವ ಮೌನ, ಚಂದಿರನ ಬೆಳಕಲ್ಲಿ ಅಸ್ಪಷ್ಟವಾಗಿ ಕಾಣುವ ಬೆಟ್ಟದ ಸಾಲುಗಳು. ತಲೆಯೆತ್ತಿ ಆಗಸದೆಡೆಗೆ ನೋಡಿದೆನು, ನನ್ನ ದುರಾದೃಷ್ಟವೋ ಏನೋ ಇಂದು ಅಷ್ಟೊಂದು ನಕ್ಷತ್ರಗಳಿಲ್ಲ. ಆದರೂ ವೇಗವಾಗಿ ಸಾಗುತ್ತಿದ್ದ ಮೋಡಗಳು, ಮೋಡ ತಿಳಿಯಾದಾಗ ಕಾಣುವ ಪ್ರಕಾಶಮಾನ ಶಶಿಯನ್ನು ಇನ್ನು ನಾಲ್ಕಾರು ದಿನ ಮರೆಯಲಾರೆ. ಗಡಗುಟ್ಟಿಸುವ ಚಳಿ, ಕೆಲವೊಮ್ಮೆ ಹಿತವೆನಿಸುವ ತಂಗಾಳಿ, ಬೊಗಸೆಯಲ್ಲಿ ತುಂಬಿಕೊಳ್ಳುವಷ್ಟು ಮೌನ, ಕೊನೆಯಿಲ್ಲದ ಬೆಟ್ಟದ ಸಾಲುಗಳು, ಗವ್ವೆನ್ನುವ ಕಾಡು ಇದೆಲ್ಲ ಅನುಭವಿಸಿ ಎಷ್ಟು ದಿನಗಳಾಯಿತು ? ಬೆಂಗಳೂರಲ್ಲಿ ಇದೆ ಸಮಯದಲ್ಲಿ ದೇಹಕ್ಕೇ ಕಿಚ್ಚು ಹಚ್ಚಿಸಿಕೊಂಡು ಕೆಲಸದಲ್ಲಿ ಮುಳುಗಿರುತ್ತಿದ್ದೆ. ನಾಲ್ಕು ದಿನಗಳಲ್ಲಿ ಈ ಊರನ್ನು ಬಿಟ್ಟು ಮತ್ತೆ ಅದೇ ಇಷ್ಟವಿಲ್ಲದ ಜಾಗಕ್ಕೆ ಹೋಗಬೇಕಾದ ಅನಿವಾರ್ಯತೆಯ ನೆನಪಾಗಿ ಬೇಸರಗೊಂದೆ. ಮೋಡಗಳ ಮಧ್ಯದಿಂದ ಇಣುಕುತ್ತಿದ್ದ ಚಂದ್ರನ ಕಂಡು ಕುವೆಂಪು ಅವರ ಕವಿತೆಯೊಂದು ನೆನಪಾಯಿತು. ಕವಿತೆಯ ಹೆಸರು "ಹುಣ್ಣಿಮೆಯ ರಾತ್ರಿ" ಎಂದು. ಹೈಸ್ಕೂಲ್ ನಲ್ಲಿ ಇದ್ದಾಗ ಕನ್ನಡ ಪಠ್ಯ ಪುಸ್ತಕದಲ್ಲಿ ಇದ್ದ ನೆನಪು.
ಓ ನೋಡದೋ ರಂಜಿಸುತಿದೆ
ರಜನಿಯ ಕೈದೀಪ
ನೀಲದಿಯಲಿ ತೆಲುತ್ತಿಹ
ಜ್ಯೋತಿಯ ಸ್ವರ್ದೀಪ
ತೆಳ್ಳು ತೆಳ್ಳನೆ ಬೆಳ್ಳು ಬೆಳ್ಳನೆ
ಮುಗಿಲುಣ್ಣೆಯ ರಾಶಿ
ಹೊಂಜೋನ್ನದಿ ಮಿಂದಂತಿದೆ
ಜೆನ್ಮಳೆಯನೆ ಸೂಸಿ!
ಸಹ್ಯಾದ್ರಿಯ ಗಿರಿಪಂಕ್ತಿಯ
ಕೊನೆಗಾಣದ ಲೀಲೆ ;
ಬಹುಯೋಜನ ವಿಸ್ತೀರ್ಣದ
ವನರಾಜಿಯ ಮಾಲೆ
ಬಾಂದಳದಿಂದ ಇಳಿಯುತ್ತಿದೆ
ಬೆಳದಿಂಗಳ ಗಂಗೆ
ಹೊಳೆಯುತ್ತಿದೆ ಬರೆದಂದದಿ
ದೂರದಿ ನದಿ ತುಂಗೆ
ಅ: ಆಲಿಸು ! ಆಕಾಶದಿ
ತೇನೆಯ ಸುರವಾಣಿ;
ಜುಮ್ಮೆಂದಿದೆ ಅದನಾಲಿಸಿ
ಸಹ್ಯಾದ್ರಿ ಶ್ರೇಣಿ !
ಸೌಂದರ್ಯದ ಮಧುಪಾನದಿ
ವಿಶ್ವವೇ ಉನ್ಮತ್ತ !
ಧ್ಯಾನದ ರಸದಾನಂದದಿ
ಸೃಷ್ಟಿ ಸಮಾದಿಸ್ಥ !
ಏ ನೀರವಮೇಂ ನಿಶ್ಚಲ
ಮೀ ಹುಣ್ಣಿಮೆ ಇರುಳು
ತಿಂಗಳ ಬೆಳಕಿನ ಕಡಲಲಿ
ತೇಲಿದೆ ತಿರೆಯರಳು !
ಸುಧೆ ತುಂಬಿದ ವಿಧುಬಿಂಬದ
ಮಧು ಚಂದ್ರಿಕೆ ಮಾಯೆ
ನೆಲ ಬಾನ್ಗಳ ಒಲಿದೊಪ್ಪಿರೆ
ದ್ವೈತವು ಬರಿ ಛಾಯೆ
ಚೈತನ್ಯಕೆ ಜಡವೆಂಬುದು
ಕವಿಭಾವಕೆ ಭಾಷೆ
ಈ ಭುವನದ ಭವ್ಯಾಕೃತಿ
ಆತ್ಮನ ಒಂದಾಶೆ !
ಓ ರಾತ್ರಿಯೇ ಸಹ್ಯಾದ್ರಿಯೇ
ಹುಣ್ಣಿಮೆ ಶಶಿಕಾಂತಿ
ನಿಮ್ಮೆಲ್ಲರೆ ಸಾನಿಧ್ಯವೇ
ಪರಮಾತ್ಮನ ಶಾಂತಿ
- ಕುವೆಂಪು