Tuesday, July 21, 2009

ಸುರಿಯುವ ಮಳೆಯಲ್ಲಿ ಕನಸಿನ ಗೂಡು ಕಟ್ಟಿ ಕೊಟ್ಟವಳಿಗೆ ಒಂದು ಪತ್ರ



ನಾನು ನನ್ನನ್ನೇ ಯಾವಗಲೂ ಕೇಳಿಕೊಳ್ಳುತ್ತಿರುತ್ತೇನೆ, ಯಾಕೆ ಈ ಮಳೆಗಾಲ ಹೀಗೆ ಎಂದು. ಪ್ರೀತಿ ಗಿಡದ ಮೊಳಕೆ ಒಡೆಯೋದೂ, ಪ್ರೀತಿಯ ಹೆಮ್ಮರ ಕಾರಣವಿಲ್ಲದೆ ಉರುಳಿ ಬೀಳೋದು ಈ ಮಳೆಗಾಲದಲ್ಲೇ ತಾನೇ ? ನಿನ್ನನ್ನು ಅಂದು ಬಸ್ಸಿನಲ್ಲಿ ನೋಡಿದಾಗ ವಿಶೇಷವಾದದ್ದೇನು ಅನ್ನಿಸಲಿಲ್ಲ. ಚಂದವಾಗೆ ಕಂಡೆ ನೀನು, ಸುಳ್ಳಿಲ್ಲ. ಒಂದು ನಗೆ, ನನ್ನ ಮಂದಹಾಸ ಅಷ್ಟೇ. ನಂತರ ನಾನೂ ಮರೆತೆ, ನೀನು ಮರಿತಿದ್ದೆ ಎಂದೆನಿಸುತ್ತದೆ. ಕಾಕತಾಳೀಯವೋ ಏನೋ, ಮತ್ತೆ ಮರುದಿನ ಪೇಟೆಯಲ್ಲಿ ನಿನ್ನ ದರ್ಶನ, ಮತ್ತೆ ನೆನಪಾಯಿತು ನಿನ್ನೆಯ ಭೇಟಿ. ಮತ್ತೊಮ್ಮೆ ನಗುಗಳ ವಿನಿಮಯ. ನೀನು "ಹಾಯ್" ಎಂದೆ. ನಾನು ಮೌನಿ, ಸುಮ್ಮನೆ ನಕ್ಕೆ. ನಿನ್ನ ದಾರಿ ನೀ ಹಿಡಿದೆ, ನನ್ನ ಹಾದಿ ನಾನು. ಆದರೆ ಅಂದಿನ ರಾತ್ರೆ ನಿದ್ದೆ ಬರುವುದು ಸ್ವಲ್ಪ ತಡವಾಯಿತು ಎಂದು ನನ್ನ ನೆನಪು. ಆದರೂ ಕಾಕತಾಳೀಯವೇ ಇರಬಹುದು ಎಂದು ಸುಮ್ಮನಾದೆ.


ನಮ್ಮ ಭೇಟಿ ಅದಕ್ಕಿಂತ ಹೆಚ್ಚಿನದು ಎಂದು ಧೃಡಪಟ್ಟಿದ್ದು ಮೊನ್ನೆಯ ಆ ಸಂಗೀತ ಕಾರ್ಯಕ್ರಮದಲ್ಲೇ. ಮತ್ತೆ ನನ್ನ ಮುಂದಿನ ಕುರ್ಚಿಯಲ್ಲಿ ನೀನು. ನಿನ್ನ ನಗು. ನಿನ್ನ ಗುರುತಿಸಿಯೂ, ಮಾತನಾಡಿಸುವ ಅಭಿಲಾಷೆ ಇದ್ದರೂ, ಏನೆಂದು ಕರೆಯಲಿ ನಿನ್ನ, ಹೇಗೆ ಕರೆಯಲಿ ಎಂದು ಗೊತ್ತಾಗದೇ ಪೆಚ್ಚಾಗಿ ಕುಳಿತಿದ್ದೆ. ಒಳಗೆ ಹಿಂದೂಸ್ತಾನಿ, ಹೊರಗೆ 'ಧೋ' ಎಂದು ಸಾಥ್ ಕೊಡುತ್ತಿದ್ದ ಬಿರುಮಳೆ. ಕಾರ್ಯಕ್ರಮ ಮುಗಿಯಲು ಬರುತ್ತಿರಲು, ನನ್ನಲ್ಲಿ ಗೊಂದಲ ಹೆಚ್ಚುತ್ತಿರಲೂ ನೀನೊಮ್ಮೆ ತಿರುಗಿದೆ (ದೈವಲೀಲೆಯೇ ಖರೆ). ಎಷ್ಟೋ ವರ್ಷದ ಪರಿಚಯದ ಹಾಗೆ ನಾನು "ಅರರೆ ! ನೀವಿಲ್ಲಿ?" ಎಂದು ಬಡಬಡಿಸಿದೆ. ನೀನೂ ಅಷ್ಟೇ ಸಲೀಸಾಗಿ "ಓಹೋ ನೀವ್ಯಾವಾಗ ಬಂದಿದ್ದು, ಗೊತ್ತೇ ಆಗಲಿಲ್ಲ, ಬನ್ನಿ ಇಲ್ಲೇ ಮುಂದಕ್ಕೆ" ಎಂದು ಕುರ್ಚಿ ತೋರಿದೆ. ನಸುನಗುವಿನೊಂದಿಗೆ ನಿನ್ನ ಪಕ್ಕದಲ್ಲಿ ಕುಳಿತ ನನ್ನ ಮೈಯ್ಯಲ್ಲೆಲ್ಲ ಮಿಂಚಿನ ಸಂಚಾರ. ಅವ್ಯಕ್ತ ಭಯ. ಇದೆ ಮೊದಲ ಬಾರಿಗೆ ಹುಡುಗಿಯ ಪಕ್ಕ ಕುಳಿತಿದ್ದೇನೆ ಎಂಬ ಅನುಭವ. ಪರಿಚಯ ಚಿಕ್ಕದಾದರೂ ಸಲುಗೆ ಇತ್ತು. ನಿನ್ನ ನಗುವಿನಲ್ಲಿ ನೂರು ಅರ್ಥಗಳನ್ನು ಕಂಡೆ ಅಂದು.


ಸರಿಯಾಗಿ ನಿದ್ದೆ ಇಲ್ಲದೆ ಒಂದು ವಾರವಾಯಿತು ನೋಡು. ಈಗೀಗ ಕಣ್ಣು ಮುಚ್ಚಿದರೆ ಕನಸುಗಳದೇ ದರ್ಬಾರು. ದೀಪಾವಳಿಯ ಬೆಳಗಿನಂತೆ, ಕಪ್ಪನೆಯ ಆಗಸದಲ್ಲಿ ಸಿಡಿಯುವ ಸಿಡಿಮದ್ದಿನಂತೆ. ಎಲ್ಲೆಲ್ಲೂ ನಿನ್ನದೇ ಚಿತ್ತಾರ. ಹೃದಯದಲ್ಲಿ ಮಾರ್ಧನಿಸುವ ನಿನ್ನ ನಗು. ಮತ್ತೆಂದು ನಮ್ಮ ಭೇಟಿ? ಹೊರಗಂತೂ ಮಳೆಯದೇ ಆಟ. ಯಾವುದಾದರೂ ಬೆಚ್ಚನೆಯ ಜಾಗದಲ್ಲಿ ಕುಳಿತು ಇನ್ನಷ್ಟು ಮಾತುಕತೆಗಳಾದರೆ ಎಷ್ಟು ಚಂದ ? ನಮ್ಮ ಭೇಟಿಗಾಗೆ ಪೈ ಪರಿವಾರ್, ಸುಖ ಸಾಗರದ ಕುರ್ಚಿಗಳು ಖಾಲಿಯಾಗಿವೆ (ನನಗೆ ಸಾಗರದಲ್ಲಿ ಗೊತ್ತಿರೊದು ಇವೆರಡೆ ಹೊಟೆಲ್ಗಳು) ಅಥವಾ ನೀನು ಬೆಂಗಳೂರಿಗೆ ಬಂದ ಮೇಲೆ ಕಾಫಿ ಡೇ ಆದರೂ ಆಯಿತು. ಮೊಬೈಲ್ನಲ್ಲಿ ಮೆಸೆಜ್ ಒಂದು ಬಂದಾಗ, ಅದು ನಿನ್ನದೇ ಇರಬಹುದು ಎಂಬ ಆಸೆ. ಹಾಗೆ ಆ ಆಸೆಗಳು ನಿರಾಸೆಯಾಗಿದ್ದೂ ಬಹಳ ಕಡಿಮೆ. "ನೀನೆಂದರೆ ನನ್ನೊಳಗೆ ಏನೊ ಒಂದು ಸಂಚಲನ.... ನಾ ಬರೆಯದ ಕವಿತೆಗಳ..." ಈ ಹಾಡೇ ಬೇಡವೆಂದರೂ ನಾಲಿಗೆಯ ಮೇಲೆ ಆಡುತ್ತಿರುತ್ತದೆ. ಈ ಮಳೆಗಾಲ, ಅದರಲ್ಲಿ ನೆನೆದು ತೊಪ್ಪೆಯಾದ ನಾನು, ನಮ್ಮ ಭೇಟಿ, ಇವೆಲ್ಲದಕ್ಕೂ ಒಂದು ಸಾರ್ಥಕತೆ ದೊರೆಯಲಿ. ಸುರಿಯುವ ಮಳೆಯಲ್ಲಿ ಕನಸಿನ ಗೂಡನ್ನು ಕಟ್ಟಿಕೊಟ್ಟವಳೆ ನಿನ್ನ ಒಡನಾಟಕ್ಕೆ ಕುಳಿತು ಕಾಯುತ್ತಿರುವೆನು. ದಿನಾಂಕ ಹಾಗು ಸ್ಥಳವನ್ನು ನಿಗದಿ ಮಾಡುವ ಜವಾಬ್ದಾರಿಯನ್ನು ನಿನಗೆ ಬಿಟ್ಟಿದ್ದೇನೆ.



ಇತಿ, ನಿನ್ನವ


.......................

8 comments:

Ittigecement said...

ಶರತ್...

ಭಾವಗಳನ್ನು ತುಂಬ ಚಂದವಾಗಿ ಬಿಡಿಸಿಟ್ಟಿದ್ದೀರಿ...
ಓದುತ್ತ ಹೋದಂತೆ ಪ್ರೇಮಲೋಕದಲ್ಲಿ ತೇಲಿದಂತಾಯಿತು.....

ಬಹಳ ಸುಂದರ ಬರಹ....

ಅಭಿನಂದನೆಗಳು....

Hema Powar said...

ಏನ್ರಿ ಇಷ್ಟು ದಿನ ರಜ ಹಾಕಿ ಊರಿಗೋಡಿದ್ದು ಇದಕ್ಕೆನಾ? :) ಇರಲಿ. ಪ್ರೇಮ ಪತ್ರ, ಮೊದಲ ಪ್ರಯತ್ನವೆಂದುಕೊಳ್ಳುತ್ತೇನೆ. ನಿಮ್ಮ ಭಾವವನ್ನು ಇನ್ನೊಂದು ಚೂರು ಮಾಗಲು ಬಿಡಬೇಕಿತ್ತು, ಮೂರನೇ ಬೇಟಿಗೆ ಬರೆಯಲು ಕೂತು ಬಿಟ್ಟಿದ್ದೀರಿ, ಸ್ವಲ್ಪ ಆತುರಪಟ್ಟಿರಿ ಅನ್ನಿಸುತ್ತದೆ. ಬರಹದಲ್ಲೂ ಹಾಗೇ ಅನಿಸಿತು, ಕಾಡುವಿಕೆ ವಿರಹ ಪೂರ್ತಿ ಬಿಂಬಿತವಾಗಿಲ್ಲ, ಪ್ರಯತ್ನ ಮುಂದುವರೆಯಲಿ...

ಮಲ್ಲಿಕಾರ್ಜುನ.ಡಿ.ಜಿ. said...

ನಿಮ್ಮ ಭಾವ ಬರಹ ಇಷ್ಟವಾಯಿತು. ನಿಮ್ಮ ಇಷ್ಟದ ಹುಡುಗಿ ಹೆಚ್ಚು ಕಷ್ಟಪಡದೇ ಸಿಗಲೆಂದು ನನ್ನ ಹಾರೈಕೆ.

Anonymous said...

Ohohohooo.... hingevisya!! ;-)

Guruprasad said...

ತುಂಬ ಚೆನ್ನಾಗಿ ಬರಹದ ಮೂಲಕ ಭಾವಗಳನ್ನು ವ್ಯಕ್ತ ಪಡಿಸಿದ್ದಿರ... ಮನಸಿನ ಹಾವ ಭಾವಗಳು, ಚೆನ್ನಾಗಿ ಮೂಡಿಬಂದಿದೆ....ಓದುತ್ತ ತುಂಬ ಸಿಂಪಲ್ ಆಗಿ ಇಷ್ಟ ಆಯಿತು.....
ಗುರು

ಶರಶ್ಚಂದ್ರ ಕಲ್ಮನೆ said...

ಪ್ರಕಾಶಣ್ಣ,
ಧನ್ಯವಾದಗಳು ಮೂರು ತಿಂಗಳ ನಂತರ ಬರೆದರೂ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ..

ಹೇಮಾ,
ನೀವು ಹೀಗೆ ಹೇಳ್ತಿರಲ್ರಿ... ಇದೊಂದು ಕಾಲ್ಪನಿಕ ಬರಹ ಅಷ್ಟೇ.. :) ನೀವು ಹೇಳಿದ್ದು ಕೆಲವು ಕಡೆ ಸರಿ ಎನ್ನಿಸುತ್ತಿದೆ.. ಕೊಂಚ ಅರ್ಜೆಂಟ್ ಮಾಡಿದೆ ಅನ್ನಿಸುತ್ತಿದೆ :) ಏನೇ ಆಗ್ಲಿ ಪತ್ರವನ್ನು ತೇಲಿ ಬಿಟ್ಟಾಗಿದೆ...

ಮಲ್ಲಿ ಅಣ್ಣ,
ಇದೊಂದು ಕಾಲ್ಪನಿಕ ಪತ್ರ ಅಷ್ಟೇ... ನನ್ನ ಹುಡುಗಿ ಎಲ್ಲಿದ್ದಾಳೋ ಆ ದೇವರೇ ಬಲ್ಲ :)


ವೈಶಾಲಿ ಅಕ್ಕ,
ಹಂಗೇ ವಿಸ್ಯ.... :ಪ


ಗುರು,
ಭಾವಯಾನಕ್ಕೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು... ಬಂದು ಹೋಗುತ್ತಿರಿ ಹೀಗೆ.. :)

AMRUTHA KIRANA said...

ತುಂಬಾ ಸಹಜ ಬರವಣಿಗೆ. ಭಾವಗಳ ಬುಗ್ಗೆ

SRK said...

TUMBAA CHANNAAGIGE NIMMA BHAVANEYA LOKADALLI HAARADUVA AA CHALUVE AADASTU BEGA NIMAGE SIGALI. MUNDHE NIMMA KALPANEYA BHAVAVANNU HODUVA NIREEKSHEYALLI

SRK
9035436411