ಅವಳು ನನಗೆ ಹತ್ತಿರದ ಗೆಳತಿ, ಅವಳ ವೈಯುಕ್ತಿಕ ವಿಷಯಗಳನ್ನು ಹೇಳಿಕೊಳ್ಳುವಷ್ಟು ಹತ್ತಿರ. ಅವಳು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಯಾವುದೋ ಕಾರಣಕ್ಕಾಗಿ ಆ ಪ್ರೀತಿ ಮುರಿದು ಬಿತ್ತು. ಅವಳು ಗಟ್ಟಿ ಹೃದಯದವಳು. ಆ ನೋವನ್ನು ದಾಟಿ ನಡೆಯುತ್ತಾಳೆ ಎಂದುಕೊಂಡಿದ್ದೆ. ಆದರೆ ವಿಪರೀತ ಹಚ್ಚಿಕೊಂಡಿದ್ದಳು ಎಂದೆನಿಸುತ್ತದೆ. ಸೋಲತೊಡಗಿದಳು. ಲವಲವಿಕೆಯಿಂದ ಇದ್ದವಳು ಮೌನಿಯಾಗಿಹೋದಳು. ಇದರ ಪರಿಣಾಮ ಅವಳ ಆರೋಗ್ಯದ ಮೇಲೂ ಆಯಿತು, ಚಂದವಾಗಿದ್ದ ಮೊಗ ಬಾಡತೊಡಗಿತು. ಜನರನ್ನು avoid ಮಾಡತೊಡಗಿದಳು. ತಾನು-ಮನೆ-ಕೆಲಸ ಇಷ್ಟೇ ಅವಳ ದಿನಚರಿಯಾಗಿ ಹೋಯಿತು. ಕರೆ ಮಾಡಿದರೂ ರಿಸೀವ್ ಮಾಡುತ್ತಿರಲಿಲ್ಲ. ನಾನು ಭಯ ಪಟ್ಟು ಅವಳನ್ನು ಭೇಟಿ ಮಾಡಿ ಸ್ವಲ್ಪ ಬುದ್ದಿಮಾತು ಹೇಳಲು ಹೋದೆ. ಅವಳಿಗೆ ಕಿರಿ ಕಿರಿ ಆಯಿತೇನೋ, ಸ್ವಲ್ಪ ಖಾರವಾಗಿ ಮಾತನಾಡಿದಳು. ನಾನೂ ಸುಮ್ಮನಾದೆ, ಕೆಲಸ-ಓದುಗಳ ಮಧ್ಯೆ ಬ್ಯುಸಿಯಾಗಿಬಿಟ್ಟೆ.
ಸುಮಾರು ಒಂದು ತಿಂಗಳ ನಂತರ ಆಕೆಯೇ ಕರೆ ಮಾಡಿದ್ದಳು. ನಿನ್ನ ಜೊತೆ ಮಾತಾಡಬೇಕು ಸಿಗು ಎಂದಳು. ನನಗೆ ಅಷ್ಟೊಂದು ಇಷ್ಟವಿಲ್ಲದಿದ್ದರೂ ಭೇಟಿ ಮಾಡಲು ಹೋದೆ. ಅವಳನ್ನು ನೋಡಿ ಆಶ್ಚರ್ಯವಾಯಿತು. ಮೊದಲಿನ ಗೆಳತಿಯಾಗಿದ್ದಳು. ಅದೇ ನಗು, ಅದೇ ಕೀಟಲೆಗಳು. ನನಗೆ ಅವಳನ್ನು ನೋಡಿ ಸಂತೋಷವಾಯಿತು. ಏನು ಇಷ್ಟು ಬದಲಾವಣೆಗಳು ಎಂದು ಕೇಳಿದೆ. ಅವಳ ಮಾತುಗಳ ಸಂಕ್ಷೀಪ್ತ ರೂಪವನ್ನು ಅವಳದೇ ಮಾತುಗಳಲ್ಲಿ ಹೇಳುತ್ತೇನೆ.
" ಬದುಕಬೇಕು ಕಣೋ, ಜೀವನವನ್ನು ಜೀವಿಸಬೇಕು, ಏನು ಬಂದರೂ ಎದುರಿಸಬೇಕು. ಅಂದು ನೀನು ನನ್ನ ಭೇಟಿಯಾಗಲು ಬಂದ ದಿನ ನನ್ನನ್ನೇ ಕೊಂದುಕೊಳ್ಳುವ ಆಲೋಚನೆ ಮಾಡಿದ್ದೆ. ಈಗ ಅದರ ಬಗ್ಗೆ ಯೋಚಿಸಿದರೆ ನನಗೆ ನಾಚಿಕೆಯಾಗುತ್ತದೆ. ಜೀವನವನ್ನು ಪ್ರೀತಿಸಲು ಪ್ರಾರಂಭಿಸಿದ್ದಿನೋ. ಮೊದಲು ಪ್ರೀತಿಸುತ್ತಿರಲಿಲ್ಲವಾ ಎಂದು ಕೇಳಬೇಡ... ಬಹುಷಃ ಜೀವನಪ್ರೀತಿ ಎಂದರೇನು ಎಂದು ಗೊತ್ತಿರಲಿಲ್ಲ. ಯಾರಿಂದಲೂ ಏನನ್ನೋ ನಿರೀಕ್ಷಿಸುತ್ತಿಲ್ಲ. ಅದೇ ನನ್ನ ಸಂತಸಕ್ಕೆ ಕಾರಣ ಇದ್ದರೂ ಇರಬಹುದು. ನಿನಗೊಂದು ನಿಜ ಹೇಳ್ತೀನಿ, ನಾನು ಅವನನ್ನು ದ್ವೇಷಿಸುತ್ತಿಲ್ಲ, ಅವನ ಮೇಲೆ ಸಿಟ್ಟೂ ಇಲ್ಲ. ಅವನು ಅವನಿಗೆ ಸರಿ ಅನ್ನಿಸಿದ್ದನ್ನು ಮಾಡಿದ. ಅತಿಯಾಗಿ ಹಚ್ಚಿಕೊಂಡಿದ್ದು ನನ್ನದೇ ತಪ್ಪು. ತುಂಬಾ ನೋವಾಗಿತ್ತು. ಅಂದು ನಿದ್ರೆ ಮಾತ್ರೆಗಳನ್ನು ಕೈಯ್ಯಲ್ಲಿ ಹಿಡಿದುಕೊಂಡಾಗ ನನ್ನನ್ನೇ ನಾನು ಪ್ರಶ್ನಿಸಿಕೊಂಡೆ. ನಾನು ನನ್ನನ್ನೇ ಕೊಂದುಕೊಂದರೆ ಯಾರಿಗೆ ಉಪಯೋಗ? ಮನೆಯವರು ನೊಂದುಕೊಳ್ಳುತ್ತಾರೆ, ಅವನೂ ಬೇಸರಗೊಂಡಾನು. ಅವರೆಲ್ಲರ ಬೇಸರ ಒಂದು ವಾರ ಅಥವಾ ಒಂದು ತಿಂಗಳ ಮಟ್ಟಿಗೆ. ಕೊನೆಗೆ ಒಂದು ದಿನ ಎಲ್ಲರೂ ನನ್ನ ಮರೆತು ತಮ್ಮ ಕಾರ್ಯಗಳಲ್ಲಿ ಮಗ್ನರಾದಾರು. ಇಷ್ಟು ಸುಂದರ ಜಗತ್ತನ್ನು ಬಿಟ್ಟು ಹೋದರೆ ನಷ್ಟ ನನಗಲ್ಲದೆ ಇನ್ಯಾರಿಗೆ? ಕಷ್ಟಪಟ್ಟು ಇಷ್ಟೆತ್ತರಕ್ಕೆ ನನ್ನನ್ನು ಬೆಳೆಸಿ ನಿಲ್ಲಿಸಿದ, ತಮ್ಮೆಲ್ಲ ಒಳ್ಳೆ ಗುಣಗಳನ್ನೂ ಸಂಸ್ಕಾರಗಳನ್ನೂ ಧಾರೆ ಎರೆದ ಮನೆಯವರಿಗೆ ನಾನು ಏನು ಕೊಟ್ಟಂತೆ ಆಯಿತು? ನಿನಗೆ ನಾನು ಸ್ವಾರ್ಥಿ ಎನ್ನಿಸಬಹುದು. ನೀನು ಹಾಗೆ ತಿಳಿದುಕೊಂಡರೂ ನನಗೆ ಬೇಸರವಿಲ್ಲ. ಒಟ್ಟಿನಲ್ಲಿ ಬದುಕಬೇಕಿದೆ; ನನ್ನ ಕನಸಿನಂತೆ. ಓದಿ ಮುಗಿಸುವ ಪುಸ್ತಕಗಳಿವೆ, ನೋಡುವ ಜಾಗಗಳು ಎಷ್ಟು ಉಳಿದಿವೆ, ಎಷ್ಟು ಜನರನ್ನು ಭೇಟಿಯಾಗುವುದು ಹಾಗೆ ಉಳಿದಿದೆ, ಎಷ್ಟೊಂದು ವಿಷಯಗಳನ್ನು ಇನ್ನೂ ಕಲಿಯುವುದಿದೆ, ಅದೆಷ್ಟು ಕನಸುಗಳು ನನ್ನ ಕಣ್ಣಿಗೆ ಬರಲು ಸಾಲು ಹಿಡಿದು ಕಾಯುತ್ತಿವೆಯೋ..... ಬದುಕಬೇಕು ಕಣೋ... ಬದುಕುತ್ತೀನಿ. ಅವನಿಗೆ ಬದುಕಿ ತೋರಿಸಬೇಕೆಂಬ ಜಿದ್ದಿಗಲ್ಲ, ನನ್ನ ಜೀವನ ಪ್ರೀತಿಗೋಸ್ಕರ ಎಂದಳು. ಅವಳ ಮಾತಿನ ಹಿಂದಿನ ನೋವಿನ ಎಳೆಯನ್ನು ಗ್ರಹಿಸದೆ ಇರಲಾಗಲಿಲ್ಲ. ನನಗೆ ಅಂತಾ ಒಂದು ಹುಡುಗನನ್ನು ದೇವರು ಬರೆದಿಟ್ಟಿದ್ದಾನೆ ಬಿಡು. ಅಲ್ಲಿಯವರೆಗೆ ನನ್ನನ್ನು ನಕ್ಕು ನಲಿಸಲು, ನೋವನ್ನು ಹೇಳಿಕೊಳ್ಳಲು, ಜಗಳ ಆಡಲು ನಿನ್ನಂತ ಗೆಳೆಯ ಇದ್ದೀಯಲ್ಲ, ಸಾಕು ನನಗೆ ಎಂದು ಹೇಳಿ ಕಿರುನಗೆಯೊಂದನ್ನು ಬೀರಿದಳು. ಅವಳ ಸಂತಸದಲ್ಲಿ ನಾನೂ ಪಾಲುದಾರನಾದೆ.
ಕಥೆಯೊಂದನ್ನು ಓದುತ್ತಿದ್ದೆ. ಅದರಲ್ಲಿನ ಒಂದು ಪಾತ್ರ ಪ್ರೀತಿಗೋಸ್ಕರ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತದೆ. ಜೀವನದಲ್ಲಿ ಆಶಾಭಾವ ಬೆಳೆಸಿಕೊಳ್ಳಬೇಕು, ಜೀವನವನ್ನು ಪ್ರೀತಿಸಬೇಕು, ಅನುಭವಿಸಬೇಕು ಎಂದು ನನ್ನ ಗೆಳತಿ ಹೇಳುತ್ತಿದ್ದ ಮಾತುಗಳು ನೆನಪಾದವು. ಮೊಬೈಲ್ ಇಂದ " i am proud of you" ಎಂದು ಒಂದು ಮೆಸೇಜನ್ನು ತೇಲಿಬಿಟ್ಟೆ. ಆ ಕಡೆಯಿಂದ ಒಂದು ಸ್ಮೈಲಿಯಷ್ಟೇ ಬಂದಿತು. ಆ ಸ್ಮೈಲಿಯ ಅರ್ಥ ಅವಳಿಗೆ ಹಾಗು ನನಗೆ ಮಾತ್ರ ಗೊತ್ತು...
12 comments:
ಇಷ್ಟ ಆಯ್ತು ನಿನ್ನ ಲೇಖನ...
ಅವಳ ಮಾತುಗಳು ಅಷ್ಟೇ ಇಷ್ಟವಾದವು... ಆದರೆ ಏನೇ ಹೇಳಿದರೂ ಅದು ಅಷ್ಟು ಸುಲಭವಲ್ಲ...:-(
anyways ನಿನ್ friendge all the best from my side .. :)
Yes ..inspiring.
ಜೀವನ ಎಂದರೆ ಯಾವಾಗಲೂ ಸ್ಮೈಲಿಯಂತೆ ಇರಬೇಕು, ಅಲ್ವಾ? ತುಂಬ ಉತ್ತಮ ಕತೆ.
Nice...:)
ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ.
ಜೀವನದ ಮೌಲ್ಯಗಳನ್ನು ಅರಿತುಕೊಂಡಾಗ ಮಾತ್ರ ಅದು "ಜೀವನ" ಅನ್ನಿಸಿಕೊಳ್ಳುವುದು.
ಒಳ್ಳೆಯ ಲೇಖನ, ಇದು ನಿಜವಾದ ಘಟನೆಯಾಗಿದ್ದಲ್ಲಿ, ನಾನು ಆ ಹುಡುಗಿಯನ್ನು ಮನಪೂರ್ತಿ ಅಭಿನಂದಿಸುತ್ತೇನೆ.
ಪುರುಸೊತ್ತು ಮಾಡಿಕೊಂಡು ನಮ್ಮ ಕಡೆ ಒಮ್ಮೆ ಬನ್ನಿ!
ಶರತ್..
ಬಹಳ ಸೊಗಸಾದ ಲೇಖನ..
ನಮ್ಮ ಬದುಕನ್ನು ಪ್ರೀತಿಸ ಬೇಕು..
ಆಗ ಎಲ್ಲವೂ ಸುಂದರ..
ಅಂದ..
ಚಂದದ ಬಣ್ಣಗಳು ಕಾಣುತ್ತವೆ..
ಬದುಕು ಧನಾತ್ಮಕವಾಗಿ ಕಾಣುತ್ತದೆ..
ಅಭಿನಂದನೆಗಳು...
"ಯಾರಿಂದಲೂ ಏನನ್ನೋ ನಿರೀಕ್ಷಿಸುತ್ತಿಲ್ಲ. ಅದೇ ನನ್ನ ಸಂತಸಕ್ಕೆ ಕಾರಣ ಇದ್ದರೂ ಇರಬಹುದು." Expectation hurts.
ನಿಮ್ಮ ಗೆಳತಿಯ ಮಾತುಗಳನ್ನು ಮನಸಿಗೆ ನಾಟುವಂತೆ ಬರ್ದಿದಿರಾ. ಧನ್ಯವಾದಗಳು.
ಇಲ್ಲೇ ಪಕ್ಕದ NetStreet ನ Blog ಒಣಿಯಲ್ಲೇ ನಮ್ಮ "ಪ್ರೀತಿ ಸಂತೆ " ನಡಿತಾ ಇದೆ. ಒಮ್ಮೆ ವಿಸಿಟ್ ಕೊಡಿ.
ಅವಳ ಶಕ್ತಿಯುತ ಮನಸ್ಥಿತಿ ಇನ್ನೆಂದೂ ಅವಳನ್ನು ಅಧಃಪತನಕ್ಕೆ ಎಳೆಸದು. ಇನ್ನು ಏನೇ ಕಷ್ಟ ಬಂದರೂ ಆಕೆ ಅದನ್ನು ಸರಾಗವಾಗಿ ನಿಭಾಯಿಸುವಳು ಎಂದೆನಿಸಿತು ಅವಳ ಮಾತುಗಳನ್ನು ಕೇಳಿದಾಗ.... ಹಾಗೇ ಇರಲಿ ಅವಳ ಮನದ ನಗು.
ಶರತ್ ,
ಪ್ರೀತಿ , ಬದುಕು , ಸಾವು , ನೋವು .. uff uff ಅರ್ಥ ಆಗ್ಲಿಲ್ಲ ಬಟ್ ಲೇಖನ ಸಕ್ಕತ್ತಾಗಿದ್ದು :)
ಪ್ರೀತಿಸೋರು ಎಲ್ಲರು ಬದುಕು ಅಂದ್ರೇನು ಅಂತ ತಿಳ್ಕೋ೦ಡಿದ್ರೆ ತುಂಬಾ ಒಳ್ಳೇದು ನಿಮ್ಮ ಫ್ರೆಂಡ್ ತರಹ ಅಲ್ವಾ :)
very very nice article..I liked it.
Raaghu
tumba chennaagide.. very inspiring for everyone who fails in their life in one or other aspect
innashtu bareyiri.. dhanyavaadagalu
ಇದೇ ಬದುಕುವ ರೀತಿ! Pl. remove the word verification option in your blog.
Post a Comment