Showing posts with label ಕವನ. Show all posts
Showing posts with label ಕವನ. Show all posts

Monday, January 23, 2012

ಒಂಟಿ ನಕ್ಷತ್ರ...





ಇಂದೇಕೋ ಈ ಸಂಜೆ ಎಲ್ಲಾ ಸಂಜೆಗಳಂತೆನಿಸದೆ
ಕೊನೆಯ ಕಿರಣದವರೆಗೂ ನಾನು ಕಾದಂತೆ
ನಿನ್ನ ನೆನಪು ಒತ್ತರಿಸಿ ಬರುತಿರುವುದೇಕೆ?
ಪ್ರಾಣ ತೆಗೆಯುವ ನೋವಿನಂತೆ ನರನಾಡಿಗಳನ್ನೆಲ್ಲಾ ಆವರಿಸುತ್ತಾ...

ಸೂತ್ರ ಹರಿದ ಗಾಳಿಪಟದಂತೆನಿಸುತಿದೆ
ನನ್ನ ಮನಸು ನನ್ನ ಅಣತಿಗೂ ಕಾಯದೆ
ಕೈತಪ್ಪಿ ಓಡಿದ ಮೀನಿನಂತೆ
ನಿನ್ನನ್ನು ಹುಡುಕುತ್ತಾ ನಿನ್ನ ನಗುವಿನ ಲಯವನ್ನು ಅರಸುತ್ತಾ...

ನೀನು ಆಚೆ ತೀರದ ಅರಳುತಿರುವ ಹೂವು
ನಾನು ಬೇಸರದ ಬಾನಿನಲ್ಲಿ ಮಿನುಗುತಿರುವ ಒಂಟಿ ನಕ್ಷತ್ರ...

Wednesday, December 22, 2010

ಕನಸು ಕಂಗಳ ಹುಡುಗಿ



ಕಣ್ಣು ತೆರೆದರೂ.. ಕಣ್ಣು ಮುಚ್ಚಿದರೂ..
ಬೆಳಗುತ್ತವೆ ಇವಳ ಕಣ್ಣುಗಳಲಿ
ಬೆನ್ನಿಗೆ ಬೆಳಕ ಕಟ್ಟಿಕೊಂಡು
ಹಾರುವ ಮಿಂಚುಹುಳುಗಳ ಹಾಗೆ
ನನ್ನ ಕಣ್ಣಿಗೂ ಬಾರದ...
ನಿಮ್ಮ ಕಣ್ಣಿಗೂ ನಿಲುಕದ...
ಕನಸುಗಳು

Thursday, October 14, 2010

ಗೋಕರ್ಣದಲ್ಲೊಂದು ಬೆಳಗು...

ಒಂಟಿ ದೋಣಿಯೊಂದು ತೇಲುತಿಹುದು
ಒತ್ತಿ ಬರುವ ತೆರೆಗಳ ಜೊತೆ ಹೋರಾಡುತ್ತಾ
ಕಪ್ಪೆ ಚಿಪ್ಪುಗಳ ಹೆಕ್ಕಿ ತನ್ನ ಲಂಗದ ಜೇಬೊಳಗೆ ಸೇರಿಸುತಿಹಳು
ಬಂಗಾರ ಬಣ್ಣದ ಕೂದಲ ಪುಟ್ಟ ಹುಡುಗಿಯೊಬ್ಬಳು

ಮಣಿ ಸರಗಳೆಲ್ಲಾ ಸಿದ್ಧವಾಗುತಿವೆ ಧೂಳನ್ನು ಕೊಡವಿಕೊಂಡು
ತಮ್ಮನ್ನು ಕೊಳ್ಳಲು ಬರುವ ಗಿರಾಕಿಗಳ ನಿರೀಕ್ಷೆಯಲಿ
ಜೊತೆಯಲಿ ಪಂಡಿತರ ಮನೆ ಬೇಲಿಯ ದಾಸವಾಳಗಳು
ಕಾಯುತಿವೆ ದೇವರ ಸನ್ನಿಧಿಯಲ್ಲಿ ತಮ್ಮನ್ನು ತಾವು ಕಂಡುಕೊಳ್ಳಲು

ಕಡಲನ್ನು ಮೊದಲ ಬಾರಿ ಕಾಣುತಿಹ ಬಯಲುಸೀಮೆಯ ಹುಡುಗರು
ಹೊರಟಿಹರು ಎದುರಿಸಲು ಭೋರ್ಗರೆವ ಅಗಾಧ ಸಾಗರವನ್ನು
ಕಡಲ ತಟದ ಗೂಡಂಗಡಿಯಲಿ ಹಬೆಯಾಡುತಿಹುದು ಕಾಫಿಯು
ಏಳಲೊಲ್ಲದು ಮುದುಡಿ ಮರಳ ಮೇಲೆ ಮಲಗಿಹ ಬೆಕ್ಕೊಂದು

ಬೀದಿ ದನವೊಂದು ನಿರುಪಾಯವಾಗಿ ನಿಂತಿಹುದು
ಕಾಮತರ ಹೋಟೆಲಿನಿಂದ ಏಳುತ್ತಿರುವ ದೋಸೆಯ ಘಮಕ್ಕೆ ಸೋತು
ಊರಿನ ಸಂದುಗೊಂದುಗಳೆಲ್ಲ ಬಂಗಾರದ ಬಣ್ಣ ಪಡೆಯುತಿರಲು
ಉದಯಿಸುತಿಹನು ಗೋಕರ್ಣದಲಿ ಆದಿತ್ಯನು....

(ಈ ವರ್ಷದ ಆದಿಯಲ್ಲಿ ಪ್ರವಾಸಕ್ಕೆ ಹೋದಾಗ ಗೋಕರ್ಣದಲ್ಲಿ ಉಳಿಯುವ ಅವಕಾಶ ಒದಗಿತ್ತು. ಒಂದು ಊರಾಗಿ ಗೋಕರ್ಣದಷ್ಟು ಬೇರಾವ ಊರು ನನ್ನ ಸೆಳೆದಿರಲಿಲ್ಲ. ಸುಮ್ಮನೆ ಅಲೆಮಾರಿಯಂತೆ ತಿರುಗಿದ ಕಡಲ ತೀರಗಳು, ರಾತ್ರಿಯಲ್ಲಿ ಜಗಮಗಿಸಿದ ಅಂಗಡಿಗಳು, ಕಡಲನ್ನೇ ಜಯಿಸಲು ಹೊರಟ ನಮ್ಮನ್ನು ತುಂಟ ಮಕ್ಕಳನ್ನು ಓಡಿಸಲು ಬಂದಂತೆ ಬಂದ ಕಡಲ ತೆರೆಗಳು, ಥಟ್ಟನೆ ನನ್ನ ಊರನ್ನು ನೆನಪಿಸಿಬಿಟ್ಟ ಬೀದಿಗಳು, ಬಿಳಿಯರು ಹಾಗು ಅವರ ವೇಷ ಭೂಷಣಗಳು, ಕಟ್ಟಿದ ಉಸುಕಿನ ಕೋಟೆಗಳು, ಕಪ್ಪೆಚಿಪ್ಪುಗಳು... ಹೀಗೆ ಇನ್ನು ಹಲವಾರು ಮಧುರ ನೆನಪುಗಳು ಸೇರಿ ನನ್ನನ್ನು ಈಗಲೂ ಗೋಕರ್ಣದ ಆಕರ್ಷಣೆಗೆ ತಳ್ಳುತ್ತವೆ. ಹೆಸರು ಕೇಳಿದೊಡನೆ ರೋಮಾಂಚನಗೊಳಿಸುವ ಗೋಕರ್ಣ ಹಾಗು ಈ ನೆನಪುಗಳನ್ನು ಸುಂದರಗೊಳಿಸಿದ ನನ್ನೆಲ್ಲ ಗೆಳೆಯ-ಗೆಳತಿಯರಿಗೆ ಈ ಕವನವನ್ನು ಅರ್ಪಿಸುತ್ತೇನೆ).

Thursday, September 30, 2010

ನಿರಾಕಾರ ಕನಸುಗಳ ಒಂದು ದಿನ...



ಬೇಲಿಯಂಚಿನ ಕಳ್ಳಿ ಗಿಡವೊಂದರ
ಎಲೆಯ ಮುರಿದು
ಒಸರುತ್ತಿರುವ ಬಿಳಿಯ ಹಾಲು
ಎಳೆದಂತೆ ಲೋಳೆಯ ಪದರ
ಗಾಳಿಗೂ ನೋಯದಂತೆ ಊದುವನು
ಗುಳ್ಳೆಗಳ ಜನನ ಪ್ರಕ್ರಿಯೆಯಲ್ಲಿ ನಿಮಿಗ್ನನಾಗಿ
ಪುಟ್ಟನ ಆಸೆಗಳ ಅರಿತಂತೆ
ಮುರಿದ ದಂಟಿನಿಂದ ಗುಳ್ಳೆಯೊಂದು ಮೂಡುವುದು
ಸಮಯದೊಂದಿಗೆ ಆಕಾರವನೂ ಪಡೆಯುತ
ಹೊಂಬಿಸಿಲಿನಲಿ ಹೊಳೆಯುತ
ಜಗವನೆ ತನ್ನೊಡಲಿನಲಿ ಹಿಡಿದಿಡುತಾ
ಗುಟ್ಟನೊಂದು ಒಡೆವೆನೆಂದು ಕೈ ಹಿಡಿದು
ಹೊತ್ತೊಯ್ಯುತಿಹುದು ಪುಟ್ಟನ ಕಿರುಕಂಗಳಿಗೆ
ಬಣ್ಣವ ಬಳಿದು
ದಿಗಂತದೆಡೆಗೆ... ಅನಂತದೆಡೆಗೆ...


Thursday, April 15, 2010

ಸಂಜೆ ಮಳೆ


ಮಳೆ ಹನಿಗಳ ಸ್ಪರ್ಶಕ್ಕೆ
ಮಣ್ಣಿನ ಪರಿಮಳ ಮೂಗನ್ನು ಉದ್ದೀಪಿಸಿ
ನೆನಪುಗಳ ಸರಪಟಾಕಿಗೆ ಕಿಚ್ಚಿಟ್ಟು
ಒಂದೊಂದೇ ನೆನಪುಗಳು ಸಿಡಿಯುತ್ತಾ,
ಕೆಲವು ನೋವಿನ ಬಣ್ಣ, ಕೆಲವು ನಲಿವಿನ ಬಣ್ಣ ಪಡೆಯುತ್ತಾ,
ಮನದ ಆಕಾಶದಲ್ಲೆಲ್ಲ ರಂಗುರಂಗಿನ
ಚಿತ್ತಾರ ಮೂಡುತಿದೆ ಅದೋ ನೋಡು...

Wednesday, April 14, 2010

ಆಶಯ

ಮನೆಯಲ್ಲಿ ಬೆಳಕಿಲ್ಲ,
ಹೊರಗೆ ಜಡಿಮಳೆಯ ನರ್ತನ
ಈ ದೊಡ್ಡ ಕಿಟಕಿಯ ಗಾಜಲ್ಲೆಲ್ಲಾ
ಮಣಿಗಳಾಗಿ ಹನಿಗಳು
ಅದರಾಚೆಗೆ ಕತ್ತಲೆಯಲಿ ಮುಳುಗೆಳುತಿಹ ಜಗ

ಆಗಾಗ ಮಿಂಚಿ ಮಾಯವಾಗುತಿಹುದು ಬೆಳಕು
ಮಿಂಚಿನ ಹೆಗಲೇರಿ ಬರುತಿಹುದು ಗುಡುಗೂ
ಇವೆರಡ ರಾಗ-ತಾಳಕ್ಕೆ ಕುಣಿಯುತಿಹನು ವರುಣನು
ತಂಗಾಳಿಯೂ ಜೋತೆಯಾಗಿಹುದು ಈ ಮೂವರೊಂದಿಗೆ

ಮಳೆಹನಿಗಳ ಸ್ಪರ್ಶದಿಂದ ನಸುನಗುವುದು ಜಗವು
ರವಿಯ ಬೆಳಗಿನಲ್ಲಿ ನಲಿನಲಿಯುವುದು
ಮತ್ತೊಂದು ಸುಂದರ ಬೆಳಗನ್ನು ನಿರೀಕ್ಷಿಸುತ್ತ
ನಿದ್ದೆಗೆ ಜಾರಿಕೊಳ್ಳುವೆನು ಹನಿಮಳೆಯ ಕನಸಿನಲ್ಲಿ

Friday, January 29, 2010

ಬರೆಯಬೇಕಿದೆ... ಇಂದಾದರೂ

ಕುಳಿತುಕೊಳ್ಳುವೆ ಏನಾದರೂ ಬರೆಯಲೇಬೇಕೆಂದು
ಪದಗಳು ಅಡಗಿ ಕುಳಿತಿವೆ ಬೆಚ್ಚಗೆ ಪೆನ್ನಿನ ಶಾಯಿಯಲ್ಲಿ
ನನ್ನ ಕವನದಲ್ಲಿನ ದಾರುಣ ಸಾವು ಅವುಗಳಿಗೆ ಬೇಕಿಲ್ಲ
ಒರಗಿದ ಬೆನ್ನಿನ ಭಾರ ತಾಳಲಾರದೆ ಕಿರಗುಟ್ಟುತ್ತಿದೆ ಗೋಡೆಯೂ...

ನಿರ್ವಿಕಾರವಾಗಿ ತನ್ನ ತೆಕ್ಕೆಯಲ್ಲಿ ಭುವಿಯನ್ನು ಸೆಳೆದುಕೊಂಡ ಕತ್ತಲು
ಚಂದಿರನೂ ಕಿಟಕಿಯ ದಾಟಿ ಒಳ ಬರಲು ಹೆದರಿಹನು,
ತಾನೆಲ್ಲಿ ಕವನಕ್ಕೆ ಸ್ಪೂರ್ಥಿಯಾಗುವೆನೋ ಎಂದು ಅವನಿಗೆ
ಬಾಗಿಲ ಸಂದಿಯ ನೆರಳುಗಳು ನನ್ನ ನೋಡಿ ಗಹಗಹಿಸಿವೆ

ಕುಡಿದ ಕಾಫಿಯೂ ಕಂಡಿದೆ ಹೊಟ್ಟೆಯ ತಳವ
ಗಡಿಯಾರದ ಮುಳ್ಳುಗಳು ಮೆಲ್ಲನೆ ನುಣಿಚಿಕೊಳ್ಳುತ್ತಿವೆ
ತಲೆಕೊಡವಿ ಏಳುವೇನು, ಕಚ್ಚುವೆನು ಪೆನ್ನಿನ ತುದಿಯ
ಬೆಳಗೂ ಮೈಮುರಿದು ಆಕಳಿಸತೊಡಗಿದೆ

ನಾನು ಬರೆಯಲಿಲ್ಲ..... ಇಂದೂ
ಗಾಳಿಗೆ ಪಟಪಟಗುಟ್ಟುತ್ತಿರುವ ಹಾಳೆಗಳು ಖಾಲಿ ಖಾಲಿ...

Tuesday, January 19, 2010

ಕತ್ತಲು - ನನಗೆ

ನಿಂತಿದ್ದೇನೆ ಗುಮ್ಮನ ಹಾಗೆ ಆವರಿಸಿಕೊಂಡ ಕತ್ತಲ ಮುಂದೆ
ಕತ್ತಲು, ಮಾತಿಲ್ಲದೆ ಮುಗಿದ ಪ್ರೀತಿಯ ನೆನಪಿನ ಹಾಗೆ
ಕಪ್ಪು ಕೋಣೆಯೊಂದರ ಬೀಗ ಕಳೆದುಕೊಂಡ ಬಾಗಿಲ ಹಾಗೆ

ಕತ್ತಲು ಆವರಿಸುತ್ತದೆ ಬೆಳಕಿನ ಮರಣದ ಮರುಘಳಿಗೆಯೇ
ಕತ್ತಲು, ಬಚ್ಚಿಟ್ಟ ನೋವಿಗೆ ಕಣ್ಣೀರು ಒತ್ತರಿಸಿ ಬರುವ ಹಾಗೆ
ಸಂಜೆ ಸೂರ್ಯನನ್ನೇ ನುಂಗುವ ಉನ್ಮತ್ತ ಕಡಲ ಹಾಗೆ

ಬೆಳಕಿನಷ್ಟೇ ಮುಖ್ಯವೆನಿಸುತ್ತದೆ ಈ ಕರಿಕತ್ತಲು
ಸೋತಿಹೆನು ಇಂದು ಈ ಭಯದ ಬಣ್ಣಕ್ಕೆ
ಬೆಳಕು ಬೇಕಿಲ್ಲ ಎನಗೆ
ಕತ್ತಲೇ ತೋರುತಿರುವಾಗ ಹಾದಿಯನು ನನ್ನ ಅಂತರಂಗದೆಡೆಗೆ

Sunday, January 10, 2010

ಒಂದು ಹಿಡಿ ವಿರಹ....

ನನ್ನ ಕಂಗಳ ಕೊಳದಿ ಬಂಧಿ ನೀನು
ಹೊರಹೋಗ ಬಯಸಿದರೆ ಚುಚ್ಚಿಬಿಡು ಈ ಕಂಗಳ
ಕಣ್ಣೀರಿನೊಂದಿಗೆ ದಯಪಾಲಿಸುವೆ ಮುಕ್ತಿಯನು....


ಈ ಕನಸಿನ ಗೋಪುರ ಒಂದುದಿನ ಬೀಳುವುದು
ಎಂದು ಗೊತ್ತಿದ್ದೂ ಕಟ್ಟಿದ್ದು ನನ್ನದೇ ತಪ್ಪು
ನಿನ್ನ ಕನಸಿನ ಚಿತ್ತಾರದ ಬಣ್ಣಗಳಲ್ಲೇ ಲೀನವಾಗಿದ್ದೆ
ಹೃದಯವೇ ಆಳುತ್ತಿತ್ತು; ಬುದ್ದಿಗೆ ಒಂದಿನಿತೂ ಅವಕಾಶವೀಯದೆ


ನಿನ್ನ ನೆನಪಲ್ಲಿ ಬಂದ
ನನ್ನ ನಿಟ್ಟುಸಿರ ತೇವಕ್ಕೆ
ಕಿಟಕಿಯ ಗಾಜೆಲ್ಲ ಮಂಜಾಗಿ...
ಹೊರಗಿನ ವಿಶ್ವವೇ ಅಗೋಚರವಾಗಿ...


ಮೋಡಗಳ ಮಧ್ಯದಿಂದ ತೂರಿಬರುವ
ಸಂಜೆಗೆಂಪಿನ ಸೂರ್ಯನ ಕಿರಣಗಳು ನೀನು....
ಆ ಕಿರಣಗಳ ಪ್ರಖರತೆಗೆ ಕರಗುವ
ಮಂಜಿನ ಬಿಂದುವಾಗಿ ನಾನು...



ನಿನ್ನೆಗಳ ಬಗ್ಗೆ ಏಕೆ ಬೇಸರ
ನಾಳೆಗಳ ಬಗ್ಗೆ ಏಕೆ ಕಾತರ
ಇಂದು ಎಂಬ ಇಂದನ್ನು ಬಾಳು ಹರುಷದಿಂದ
ನಡಿ ಮುಂದಕೆ ಎಂದೂ ಬತ್ತದ ಹುರುಪಿನಿಂದ.


ನಿನ್ನೆ ನೀನು ಕಿವಿಯಲ್ಲಿ ಹೇಳಿದ ಗುಟ್ಟು ...
ನಿನ್ನ ಬಿಸಿಯುಸಿರ ಬೆಚ್ಚನೆಯ ಭಾವ...
ನನ್ನ ಅಂಗಿಗಂಟಿದ ನಿನ್ನ ಕೂದಲಿನ ಕಂಪು..
ನನ್ನ ಎದೆಯಲ್ಲೇ ಉಳಿದ ಒಂದು ಹಿಡಿ ನೆನಪು...
ನಾನು, ನಕ್ಷತ್ರ, ಹಾಗು ಅಗಾಧ ಆಗಸಗಳಷ್ಟೇ ಇಂದು...