Wednesday, August 15, 2012

ನಾನು ಮತ್ತು ಚಿತ್ರಕಲೆ - ೧


ನಾನು ಚಿತ್ರ ಬಿಡಿಸಲು ಶುರು ಮಾಡಿದ್ದು ಬಹಳ ಚಿಕ್ಕವನಿದ್ದಾಗ.  ಮೂರನೇ ತರಗತಿಯಲ್ಲಿದ್ದಾಗ ಭೀಮನು ಧುರ್ಯೋದನನ ಹೆಡೆಮುರಿ ಕಟ್ಟಿದ್ದ ಚಿತ್ರವನ್ನು ಬಿಡಿಸಿದ್ದೆ.  ನನಗಿನ್ನೂ ನೆನಪಿರುವ ನಾನು ಬಿಡಿಸಿದ ಮೊದಲ ಚಿತ್ರ ಅದು.  ಅಮರ ಚಿತ್ರಕಥೆಯ ಒಂದು ಪುಸ್ತಕ ನೋಡಿ ಆ ಚಿತ್ರವನ್ನು ಬಿಡಿಸಿದ್ದೆ.  ಹೀಗೆ ಆಗೀಗ ಚಿತ್ರವನ್ನು ಬಿಡಿಸುತ್ತಾ ಇರುತ್ತಿದ್ದೆ.  ನನ್ನ ನೆನಪಿನ ಪ್ರಕಾರ ನಾನು ಕಾಲ್ಪನಿಕ ಚಿತ್ರಗಳನ್ನು ಬಿಡಿಸಿದ್ದು ಕಡಿಮೆ.  ಯಾವುದಾದರೊಂದು ರೆಫೆರೆನ್ಸ್ ಚಿತ್ರ ಇಟ್ಟುಕೊಂಡು ಬಿಡಿಸಿದ್ದೆ ಜಾಸ್ತಿ.  ಹಾಗೆಂದು ನನ್ನ ಕಲ್ಪನೆಯ ಚಿತ್ರಗಳನ್ನು ಬಿಡಿಸಿದ್ದೆ ಇಲ್ಲ ಎಂದಲ್ಲ.  ನನ್ನ ಕಾಲ್ಪನಿಕ ಚಿತ್ರಗಳು ಕೇವಲ ನನ್ನ ಸ್ಕೂಲಿನ ನೋಟ್ ಬುಕ್ ಗಳ ಹಿಂದಿನ ಹಾಳೆಗಳಿಗಷ್ಟೇ ಮೀಸಲಾಗಿರುತ್ತಿದ್ದವು.  ಡ್ರಾಯಿಂಗ್ ಶೀಟ್ಗಳ ಮೇಲೆ ನನ್ನ ಕಾಲ್ಪನಿಕ ಚಿತ್ರಗಳು ಸ್ಥಾನ ಪಡೆಯಲು ವಿಫಲವಾದವು.  ಬಹುಶ ಡ್ರಾಯಿಂಗ್ ಶೀಟ್ ಮೇಲೆ ಬಿಡಿಸುವ ಚಿತ್ರ ಚೆನ್ನಾಗಿ ಬರಲೇ ಬೇಕು ಎಂಬ ಒತ್ತಡವನ್ನು ನನಗೆ ನಾನೇ ಹಾಕಿಕೊಂಡಿದ್ದೆ.  ಈಗಿನ ಹಾಗೆ ಅರ್ಧಂಬರ್ದ ಚಿತ್ರ ಬಿಡಿಸಿ ನಾಲ್ಕಾರು ಹಾಳೆಗಳನ್ನು ದಂಡ ಮಾಡುವಷ್ಟು ಆರ್ಥಿಕ ಪರಿಸ್ಥಿತಿಯೂ ಮನೆಯಲ್ಲಿ ಇರಲಿಲ್ಲ (ಹಾಗೆಂದು ಮನೆಯಲ್ಲಿ ನನ್ನ ಚಿತ್ರಕಲೆಗೆ ಎಂದೂ ಕಡಿಮೆ ಮಾಡಿದವರಲ್ಲ).  ಕೆಲವೊಮ್ಮೆ ವಯಸ್ಸಿಗೆ ಮೀರಿ ಮೆಚ್ಯೂರಿಟಿ ಇರಬಾರದು ಎಂದು ಅನ್ನಿಸುತ್ತದೆ.

ಶಾಲೆಯಲ್ಲೂ ನಾನು ಚಿತ್ರ ಬಿಡಿಸುತ್ತಿದ್ದದ್ದು ಹೆಚ್ಚಿನ ಸಹಪಾಠಿಗಳಿಗೆ ಗೊತ್ತಿರಲಿಲ್ಲ.  ನಾನಾಗೆ ಯಾರಿಗೂ ತೋರಿಸಿದ್ದೂ ಇಲ್ಲ.  ನಾನು ಐದನೇ ತರಗತಿಯಲ್ಲಿ ಇರುವಾಗ ಒಬ್ಬ ಹೊಸ ಗೆಳತಿ ಸಿಕ್ಕಳು.  ನನ್ನ ಪಕ್ಕದಲ್ಲಿ ಕೂರುತ್ತಿದ್ದ ಅವಳು ನನ್ನ ಚಿತ್ರಗಳನ್ನು ನೋಡಿ ಖುಷಿ ಪಡುತ್ತಿದ್ದಳು.  ನನ್ನ ಚಿತ್ರಗಳು ಇನ್ನೊಬ್ಬರಲ್ಲಿ ಸಂತಸ ತರಬಲ್ಲದು ಎಂದು ಗೊತ್ತಾಗಿದ್ದೆ ಆಗ.  ಕೊನೆಗೆ ಅವಳ ಸಂತೋಷಕ್ಕಾಗೆ ಚಿತ್ರಗಳನ್ನು ಬಿಡಿಸತೊಡಗಿದೆ.

ನಾನು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ತುಂಬಾ ಕಡಿಮೆ.  ಆರನೇ ತರಗತಿಯಲ್ಲೋ, ಏಳನೇ ತರಗತಿಯಲ್ಲೋ ಇರುವಾಗ ಒಮ್ಮೆ ಸಾಗರದ ಗಾಂಧಿ ಮೈದಾನದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದರು.  ಅಮ್ಮನ ಒತ್ತಾಯಕ್ಕೆ ಅಲ್ಲಿ ಹೋಗಿ ಕಾಟಾಚಾರಕ್ಕೆ ಬೇಗ ಬೇಗ ಚಿತ್ರ ಬಿಡಿಸಿ ಉಳಿದೆಲ್ಲಾ ಮಕ್ಕಳು ಏನೇನು ಬಿಡಿಸುತ್ತಿದ್ದಾರೆ ಎಂದು ನೋಡುತ್ತಾ ಕಾಲ ಕಳೆದಿದ್ದೆ.  ಏಳನೇ ತರಗತಿಯಲ್ಲಿ ಆ ಗೆಳತಿಯೂ ಬೇರೆ ಊರಿಗೆ ವರ್ಗವಾಗಿ ಹೋದ ನಂತರ ನಾನು ಚಿತ್ರಕಲೆಯನ್ನು ಮರೆಯುತ್ತಾ ಬಂದೆ.

ಹೈಸ್ಕೂಲ್ ಮೆಟ್ಟಿಲು ಹತ್ತಿದ ಮೇಲಂತೂ ಚಿತ್ರಕಲೆ ಮರೆತೇ ಹೋಯಿತು ಎನ್ನಬಹುದು.  ಮಿತಿಮೀರಿದ ಕ್ರಿಕೆಟ್ ಹುಚ್ಚು ಬೇರೆಲ್ಲಾ ಬಣ್ಣಗಳನ್ನು ಮಸಿ ನುಂಗಿದ ಹಾಗೆ ನನ್ನ ಚಿತ್ರಕಲೆಯನ್ನು ನುಂಗಿ ನೀರು ಕುಡಿಯಿತು.  ಆದರೂ ನೋಟ್ ಪುಸ್ತಕಗಳ ಹಿಂದೆ ಚಿತ್ರ ಬಿಡಿಸುವ ಕಾರ್ಯ ನಿರ್ವಿಘ್ನವಾಗಿ ಸಾಗಿತ್ತು.  ಮೀಸೆ ಚಿಗುರುತ್ತಿದ್ದ ಕಾರಣಕ್ಕೋ, ಧ್ವನಿ ಒಡೆದ ಧೈರ್ಯಕ್ಕೋ ಚಿತ್ರಗಳಾಗಿ ನಮ್ಮೆಲ್ಲ ಮಾಸ್ತರರೂ, ಮೇಡಂಗಳೂ ನನ್ನ ಪುಸ್ತಕದ ಕೊನೆ ಪುಟಗಳನ್ನು ತುಂಬಿದರು.  ಆದರೆ ನನ್ನಿಂದ ಒಂದೂ ಮೇನ್ ಸ್ಟ್ರೀಮ್ ಚಿತ್ರ ಬರೆಯಲಾಗಲಿಲ್ಲ.

ನಾನು ಓದುತ್ತಿದ್ದ ಹಾಗು ತೆಗೆಯುತ್ತಿದ್ದ ಅಂಕಗಳ ಚಂದ ನೋಡಿ ಮನೆಯಲ್ಲಿ ಭಯಗೊಂಡು ನನ್ನನ್ನು ಕೊಡಗಿನಲ್ಲಿದ್ದ ನನ್ನ ಮಾವನ ಮನೆಗೆ ಕಳುಹಿಸಿದರು.  ಅಣ್ಣ ಹೈಸ್ಕೂಲ್ ಅಲ್ಲೇ ಓದಿ ಒಳ್ಳೆಯ ಹೆಸರುಗಳಿಸಿದ್ದ.  ಮಾವ ಸಂಗ್ರಹಿಸಿದ್ದ ಚಿತ್ರಕಲೆಯ ಪುಸ್ತಕಗಳನ್ನು ನೋಡಿ, ಹೊಸ ಗೆಳೆಯರಿನ್ನೂ ಪರಿಚಯವಾಗದೇ ಇದ್ದಿದರಿಂದಲೂ, ಹಾಗು ಮೂರು ನಾಲ್ಕು ತಿಂಗಳು ಬಿಟ್ಟೂ ಬಿಡದೆ ಹೊಯ್ಯುತ್ತಿದ್ದ ಮಳೆಯಿಂದ ಹೊರಗೆ ಕಾಲಿಡಲಾಗದೆ ಕೈಗಳು ಮತ್ತೆ ಪೆನ್ಸಿಲ್ಗಳನ್ನು ಹುಡುಕಿದವು.

(ಮುಂದುವರೆಯುವುದು...)

1 comment:

sunaath said...

ಚಿತ್ರಕಲೆಯಲ್ಲಿ ಗತಿ ಇರುವ ನಿಮಗೆ ಅಭಿನಂದನೆಗಳು. ಈ ಕಲೆಯಲ್ಲಿ ನಾನು negative ಸಾಧಕ!