Showing posts with label ಚಾರಣ. Show all posts
Showing posts with label ಚಾರಣ. Show all posts

Thursday, January 6, 2011

ನರಸಿಂಹ ಪರ್ವತ ಚಾರಣ - ಭಾಗ ೩

ನನ್ನ ಕಾಲಿಗೆ ಮುತ್ತಿದ್ದ ಉಂಬಳಗಳನ್ನೂ ನೋಡಿ, ಪರ್ವತ ಏರುವ ಹೊತ್ತಿಗೆ ಯಾರಾದರು ನನಗೆ ಒಂದು ಬಾಟಲಿ ರಕ್ತ ನೀಡುವ ವ್ಯವಸ್ಥೆ ಇದ್ದಿದ್ದರೆ ಚನ್ನಾಗಿರುತ್ತಿತ್ತು ಎನ್ನುವ ಭಯ ಕಾಡತೊಡಗಿತ್ತು. ಆಗಾಗ ಕೃಷ್ಣಪ್ಪನಲ್ಲಿ ಇನ್ನೂ ಎಷ್ಟು ದೂರದಲ್ಲಿ ಬಯಲು ಪ್ರದೇಶ ಸಿಗಬಹುದು ಎಂದು ಕೇಳುತ್ತಾ ನಮ್ಮ ರಕ್ತದಾನದ ಮೊತ್ತ ಎಷ್ಟಾಗಬಹುದು ಎಂದು ಪ್ರತಿಯೊಬ್ಬರೂ ಗುಣಾಕಾರ-ಭಾಗಾಕಾರದಲ್ಲಿ ತೊಡಗಿದರು.

ಇಲ್ಲಿಯವರೆಗೆ ನನ್ನ ಕಯ್ಯಿಂದಲೇ ನನ್ನ ವಸ್ತ್ರಾಪಹರಣ ಮಾಡಿಸಿದ್ದ ಉಂಬಳಗಳ ಬಗ್ಗೆ ವಿಪರೀತ ಸಿಟ್ಟು ಬಂದಿತ್ತು. ಕಾಡಿನ ಮಧ್ಯೆ ನಿಂತು ಉಂಬಳಗಳನ್ನು ಬಿಡಿಸಿಕೊಳ್ಳುವ ಯೋಚನೆ ಕೈ ಬಿಟ್ಟು ಎಷ್ಟಾದರೂ ಹತ್ತಲಿ, ಬಯಲು ಪ್ರದೇಶ ಬಂದ ಮೇಲೆ ಅವುಗಳನ್ನು ವಿಚಾರಿಸಿಕೊಂಡರೆ ಆಯಿತು ಎಂದು ನಾನು ತೀರ್ಮಾನಿಸಿದೆ. ಕಾಡು ಈಗ ಇನ್ನಷ್ಟು ದಟ್ಟವಾಗಿತ್ತು. ಅಲ್ಲೆಲ್ಲೂ ದಾರಿ ಎಂಬುದೇ ಇರಲಿಲ್ಲ. ಕೃಷ್ಣಪ್ಪನೂ ದಿಕ್ಕಿನ ಅಂದಾಜು ಮಾಡಿ ದಾರಿ ಮಾಡಿಕೊಳ್ಳುತ್ತಿದ್ದ ಎಂದು ನನ್ನ ಭಾವನೆ; ಅಷ್ಟೊಂದು ದಟ್ಟವಾಗಿತ್ತು ಕಾಡು. ಕೃಷ್ಣಪ್ಪನಿಲ್ಲದೆ ಆ ಕಾಡು ಹೊಕ್ಕರೆ ಬಹುಶ ಅಲ್ಲಿಂದ ಮರಳುವುದನ್ನಾಗಲೀ, ಹೊರಬರುವುದನ್ನಾಗಲೀ ಮರೆತು "ಪ್ಯಾಟೆ ಮಂದಿ ಕಾಡೀಗ್ ಬಂದು ಅಲ್ಲೇ ಕಳೆದು ಹೋದ್ರು" ಅನ್ನೋ ಕಾರ್ಯಕ್ರಮನ ನಾವೇ ಮಾಡಿ ನಾವೇ ನೋಡಿಕೊಳ್ಳುವ ಸಾಧ್ಯತೆಗಳು ಜಾಸ್ತಿ ಇದ್ದವು. ಇವೆಲ್ಲದುರ ಮಧ್ಯೆ ನಮ್ಮ ಜಿತೇಂದ್ರ ಕೃಷ್ಣಪ್ಪನಿಗಿಂತಾ ಮುಂದೆ ಹೋಗಿ, ಹಾದಿ ತಪ್ಪಿ, ನಾವು ಮತ್ತೆ ಮತ್ತೆ ಅವನನ್ನು ಕೂಗಿ ಕರೆದು, ಅವನು ಮತ್ತೆ ನಮ್ಮೊಂದಿಗೆ ಸೇರಿಕೊಳ್ಳುವುದು ನಡೆಯುತ್ತಿತ್ತು. "ಹುರಳಿ ಇಡ್ಲಿ" ಅವನ ದೇಹಕ್ಕೆ ಒಗ್ಗಿದೆ ಅಂತ ನಾವೆಲ್ಲಾ ಒಮ್ಮತಕ್ಕೆ ಬಂದೆವು.


ಈಗ ದಟ್ಟ ಕಾಡಿನ ಜೊತೆಗೆ ನಾವು ಗುಡ್ಡವನ್ನು ಏರುತ್ತಿದ್ದರಿಂದ ಚಾರಣ ಬಹು ಕಷ್ಟ ಎನ್ನಿಸತೊಡಗಿತ್ತು. ಬರ್ಕಣ ಜಲಪಾತದ ಹತ್ತಿರ ತುಂಬಿಕೊಂಡಿದ್ದ ನೀರೆಲ್ಲಾ ನಿಧಾನವಾಗಿ ಖಾಲಿಯಾಗುತ್ತಿದ್ದದ್ದು ನಮ್ಮ ಗಮನಕ್ಕೆ ಬಾರದೆ ಹೋಯಿತು. ಆಗುಂಬೆಯ ಕಾಡಿನ ಕಾಳಿಂಗ ಸರ್ಪದ ಬಗ್ಗೆ ನ್ಯಾಷನಲ್ ಜಿಯಾಗ್ರಫಿಕ್ ನಲ್ಲಿ ಬಂದಿದ್ದ ಕಾರ್ಯಕ್ರಮದ ಬಗ್ಗೆ ಹಠಾತ್ತಾಗಿ ನೆನಪಾಗಿ ಒಮ್ಮೆ ಕಾಲು ಬುಡದಲ್ಲೆಲ್ಲ ನೋಡಿಕೊಂಡೆ. ಸ್ವಲ್ಪ ದೂರದವರೆಗೂ ನಾವು ಅದರ ಬಗ್ಗೆಯೇ ಮಾತನಾಡುತ್ತ ನಡೆದೆವು. ಅಕ್ಕ ಪಕ್ಕದ ಬಳ್ಳಿಗಳೆಲ್ಲ ಕಾಳಿಂಗ ಸರ್ಪಗಳಾಗೆ ಕಾಣತೊಡಗಿದವು.

ಮುಂದಿನ ಕೆಲವು ನಿಮಿಷಗಳಲ್ಲಿ ಯಾರೂ ಮಾತನಾಡದೆ ಸುಮ್ಮನೆ ನಡೆದರು. ಮೌನ ಮುರಿಯಲು ಪ್ರವೀಣ್ "ಅಲ್ರೋ ಆ ಅಜ್ಜಿ, ಮನೆಯಲ್ಲಿ ತನ್ನ ಜೊತೆಗೆ ತನ್ನ ತಾಯಿಯೂ ಇರುತ್ತಾರೆ, ಆದರೆ ಲೆಕ್ಕಕ್ಕೆ ತಾನೊಬ್ಬಳೆ ಎಂದರಲ್ಲ ಅದು ಯಾವ ಲೆಕ್ಕ ಎಂದು ಗೊತ್ತಾಗಲಿಲ್ಲ" ಎಂದ. ತಮ್ಮದೇ ಯೋಚನೆಗಳಲ್ಲಿ ಮುಳುಗಿದ್ದ ನಾವೆಲ್ಲರೂ ಅವನ ತರ್ಕ ಕೇಳಿ ಗೊಳ್ಳನೆ ನಕ್ಕೆವು. ವಿನಯ್ ಹಾಗು ಸಂತೋಷ್ ಮೆಣಸಿನ ಚಟ್ನಿಯ ಅಥೆಂಟಿಸಿಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅಸಲಿಗೆ ಮೆಣಸಿನ ಚಟ್ನಿಗೆ ಮೆಣಸಿನಕಾಯಿ ಉಪಯೋಗಿಸಿಯೇ ಇರಲಿಲ್ಲ, ಮೆಣಸಿನ ಗಿಡದ ಎಲೆಗಳನ್ನೇ ರುಬ್ಬಿ ಚಟ್ನಿ ಮಾಡಲಾಗಿದೆ ಎನ್ನುವ ಸತ್ಯವನ್ನು ನಾವು ಮನಗಂಡೆವು. ಕಿಡಿ ತಾಕಿದ ಪಟಾಕಿ ಸರದಂತೆ ಎಲ್ಲರೂ ಮಾತನಾಡತೊಡಗಿದರು. ಹೀಗೆ ಎಷ್ಟು ದೂರ ನಡೆದೆವೋ ಏನೋ, ಕೊನೆಗೆ ೨.೧೫ ರ ಸುಮಾರಿಗೆ ಒಂದು ಹುಲ್ಲುಬಯಲ ಜಾಗ ತಲುಪಿದೆವು. ಇನ್ನು ಮುಂದೆ ಎಲ್ಲೂ ಕಾಡು ಸಿಗುವುದಿಲ್ಲ, ಬರಿ ಬೆಟ್ಟಗಳು ಎಂದು ಕೃಷ್ಣಪ್ಪನಿಂದ ಕನ್ಫರ್ಮ್ ಆದ ಮೇಲೆ ಕಾಲೇರಿ ಸುಖವಾಗಿ ರಕ್ತ ಹೀರುತ್ತಿದ್ದ ಉಂಬಳಗಳಿಗೆ ಮುಕ್ತಿ ಕಾಣಿಸೋಣ ಎಂದು ಕುಳಿತೆವು. ಬೆಳಗ್ಗಿನಿಂದ ಒಟ್ಟಿನಲ್ಲಿ ನನ್ನ ಕೌಂಟ್ ೧೬ಕ್ಕೆ ಏರಿತ್ತು.


ಕಾಲನ್ನು ಉಂಬಳ ಮುಕ್ತಗೊಳಿಸಿ ಸ್ವಲ್ಪ ವಿಶ್ರಮಿಸಿಕೊಂಡು ಹೊರೆಟಾಗಲೇ ನಮಗೆ ಅರಿವಾಗಿದ್ದು ನಮ್ಮಲ್ಲಿ ಅತ್ಯಲ್ಪ ನೀರು ಉಳಿದಿದೆಯೆಂದು. ಕೃಷ್ಣಪ್ಪನಲ್ಲಿ ಮುಂದೆ ಎಲ್ಲಿ ನೀರು ಸಿಗಬಹುದು ಎಂದು ಕೇಳಿದೆವು. ಇನ್ನು ಪರ್ವತದ ತುದಿಯಲ್ಲಿ ಅಲ್ಲದೆ ಬೇರೆಲ್ಲೂ ನೀರು ಸಿಗುವುದಿಲ್ಲ ಎಂದು ತಿಳಿದು ಎಲ್ಲರೂ ಬಿಳಿಚಿಕೊಳ್ಳತೊಡಗಿದರು. ಆಗಲೇ ನೆತ್ತಿ ಏರಿ ಕುಳಿತಿದ್ದ ಸೂರ್ಯ ನೀರಿಲ್ಲದ ನಮ್ಮನ್ನು ನೋಡಿ ಅಣಕಿಸಿದಂತೆ ಕಂಡಿತು.


ಕಾಡಿನಿಂದ ಹೊರಬಿದ್ದಿದ್ದ ನಮಗೆ ಇಲ್ಲಿನ ದೃಶ್ಯಗಳು ಚೇತೋಹಾರಿಯಾಗಿದ್ದವು. ಈಗ ಉಂಬಳಗಳ ಬಗ್ಗೆ ಭಯಪಡುವ ಅಗತ್ಯವೂ ಇರಲಿಲ್ಲ. ಮುಗಿಲನ್ನೆ ಬಗ್ಗಿಸುವ ತವಕದಲ್ಲಿದ್ದಂತೆ ಕಾಣುತ್ತಿದ್ದ ಎತ್ತರದ ಪರ್ವತ ಶ್ರೇಣಿಗಳು, ಕಂಡಷ್ಟು ದೂರಕ್ಕೂ ತುಂಬಿದ್ದ ಹಸಿರು, ನೀಲಾಗಸ, ತಣ್ಣನೆಯ ಗಾಳಿ ಎಲ್ಲವೂ ನಮ್ಮ ದಣಿವನ್ನು ಕ್ಷಣ ಮಾತ್ರದಲ್ಲಿ ಮರೆಯಾಗಿಸಿತ್ತು. ಇಷ್ಟು ಹೊತ್ತು ಸುಮ್ಮನಿದ್ದ ನಮ್ಮ ಕ್ಯಾಮೆರಾಗಳು ಕಾರ್ಯೋನ್ಮುಖವಾದವು.



ಹೀಗೆ ಮಾತಾಡುತ್ತ, ಫೋಟೋ ತೆಗೆಯುತ್ತಾ, ಒಂದೆರಡು ಗುಡ್ಡಗಳನ್ನು ಹಾಡು ಒಂದು ಎತ್ತರದ ಗುಡ್ಡದ ಬುಡಕ್ಕೆ ಬಂದೆವು. "ಈ ಗುಡ್ಡವನ್ನು ದಾಟಿದರೆ ಅದರ ಹಿಂದಿರುವುದೇ ನರಸಿಂಹ ಪರ್ವತ" ಎಂದು ಕೃಷ್ಣಪ್ಪ ಹೇಳಿದ. ನೀರಿಲ್ಲದೆ ನಾವೆಲ್ಲಾ ಬಸವಳಿದಿದ್ದೆವು. ಮತ್ತೊಮ್ಮೆ ಸ್ವಲ್ಪ ವಿಶ್ರಮಿಸಿಕೊಂಡು ಗುಡ್ಡವನ್ನು ಏರಲು ಶುರು ಮಾಡಿದೆವು. ಆದಷ್ಟು ಬೇಗ ತುದಿಯನ್ನು ತಲುಪುವ ಯೋಚನೆಯಲ್ಲಿದ್ದ ನನ್ನ ಎಣಿಕೆ ಸಂಪೂರ್ಣ ತಲೆಕೆಳಗಾಯಿತು. ಗುಡ್ಡದ ಇಳುಕಲು ಸುಮಾರು ೫೫ ರಿಂದ ೬೫ ಡಿಗ್ರಿ ಇತ್ತು. ಒಂದೊಂದು ಹೆಜ್ಜೆ ಇಡುವುದೂ ದುಸ್ತರವಾಗಿತ್ತು. ಬೆನ್ನಿಗೆ ಚೀಲದ ಭಾರ ಹಾಗು ೬೫ ಡಿಗ್ರಿಯಷ್ಟು ಇಳುಕಲಿದ್ದ ಗುಡ್ದದಿಂದಾಗಿ ಕಾಲುಗಳು ಥರಗುಟ್ಟಿದವು. ಕೇವಲ ಒಂದು ಸ್ಟ್ರೆಚ್ ಇದ್ದ ಗುಡ್ಡವನ್ನು ಏರಲು ನಾನು ಎರಡು ಬಾರಿ ಕೂತು ಸುಧಾರಿಸಿಕೊಳ್ಳಬೇಕಾಯಿತು. ಇದುವರೆಗೆ ಮಾಡಿದ ಪ್ರಯಾಣ ಒಂದು ಸವಾಲಾದರೆ, ಈ ಗುಡ್ಡವೇ ಇನ್ನೊಂದು ಸವಾಲು. ಉಸಿರು ಎಳೆದುಕೊಳ್ಳಲೂ ನಾವೆಲ್ಲಾ ಪರದಾಡಬೇಕಾಯಿತು. ಕೊನೆಗೂ ತುದಿ ತಲುಪಿ, ಒಂದು ಸಣ್ಣ ಕಾಡು ದಾಟಿ ನರಸಿಂಹ ಪರ್ವತದ ನೆತ್ತಿಯನ್ನು ತಲುಪಿಯೇ ಬಿಟ್ಟೆವು. ಸಮಯ ೪ ಗಂಟೆ ಆಗಿತ್ತು.



ಎಲ್ಲರೂ ನೀರು ಸಿಗುತ್ತದೆ ಎಂಬ ಖುಷಿಯಲ್ಲಿ ನೆತ್ತಿಗೆ ಓಡಿದರೆ ಅಲ್ಲಿದ್ದದ್ದು ಮಳೆಗಾಲದಲ್ಲಿ ನೀರು ನಿಂತ ಹೊಂಡವಾಗಿತ್ತು. ಆ ನೀರು ಯಾವುದೇ ರೀತಿಯಲ್ಲಿಯೂ ಕುಡಿಯಲು ಯೋಗ್ಯವಾಗಿರಲಿಲ್ಲ. ಕುಡಿಯಲು ಬಿಡಿ, ಮುಖ ತೊಳೆಯಲೂ ಅಯೋಗ್ಯವಾಗಿತ್ತು. ನಮ್ಮ ಆಸೆಯಲ್ಲ ಬತ್ತಿ ಹೋಯಿತು. ಸ್ವಲ್ಪ ಹೊತ್ತು ಎಲ್ಲರೂ ಸುಮ್ಮನೆ ಮಲಗಿದರು. ಬೇರೆ ಯಾರಾದರೂ ನೋಡಿದ್ದರೆ ಇದೊಂದು "ಸಾಮೂಹಿಕ ಶಾವಾಸನ" ಎಂದುಕೊಳ್ಳುತ್ತಿದರೋ ಏನೋ ಆ ರೀತಿಯಲ್ಲಿ ಎಲ್ಲರೂ ಬಿದ್ದುಕೊಂಡಿದ್ದೆವು. ಬೇರಾವುದೇ ದಾರಿ ಕಾಣದೆ ನಾವು ತಂದಿದ್ದ ರೊಟ್ಟಿ-ಚಪಾತಿ-ಚಟ್ನಿಗಳನ್ನು ತೆಗೆದೆವು. ವಿಪರೀತ ಹಸಿವಾದ್ದರಿಂದ ರೊಟ್ಟಿ-ಚಟ್ನಿ ಅಮೃತದಂತೆ ಅನ್ನಿಸಿತ್ತು. ಆವರಿಸಿಕೊಳ್ಳುತ್ತಿದ್ದ ಮೋಡ ತಂಪು ನೀಡಿತ್ತು.



ಊಟ ಮುಗಿಸಿ ಮತ್ತಷ್ಟು ಆರಾಮು ಮಾಡಿ ನಮ್ಮ ಅವರೋಹಣವನ್ನು ಪ್ರಾರಂಭಿಸಿದೆವು. ಈ ಹಾದಿ ನಾವು ಹತ್ತಿದ ದಾರಿಗೆ ತೀರಾ ವ್ಯತಿರಿಕ್ತವಾಗಿತ್ತು. ಇಲ್ಲಿ ಕಾಲು ಹಾದಿ ಇತ್ತು. ಉಂಬಳಗಳು ಇರಲಿಲ್ಲ. ಸುಲಭವಾಗಿ ಇಳಿಯಲು ಹೇಳಿ ಮಾಡಿಸಿದಂತಿತ್ತು. ಸುಮಾರು ೬ ಗಂಟೆಯ ಹೊತ್ತಿಗೆ ನಾವು ಕಿಗ್ಗಾ ಎಂಬ ಊರನ್ನು ತಲುಪಿದೆವು. ಅಲ್ಲಿ ನಮ್ಮನ್ನು ಹೊತ್ತೊಯ್ಯಲು ಸುಬ್ಬುವಿನ ಜೀಪು ತಯಾರಾಗಿತ್ತು.


ಕೊನೆಯಲ್ಲಿ : ದೊಡ್ಮನೆಯ ತಿಂಡಿ ಹಾಗು ಅಜ್ಜಿಯ ಘಟನೆಗಳನ್ನು ಸ್ವಲ್ಪ ಹಾಸ್ಯಮಯವಾಗಿ ಬರೆದಿದ್ದೇನೆ. ಜೋಕ್ಸ್ ಅಪಾರ್ಟ್, ಹೊಸ್ತಿಲು ದಾಟಲಾಗದ ಆ ವೃದ್ದೆ ತಿಂಡಿ ಮಾಡಿ ಹಾಕುವುದೂ ಕಷ್ಟದ ಕೆಲಸವೇ. ನಮ್ಮ ಗ್ರಹಚಾರಕ್ಕೋ ಏನೋ ಅಂದಿನ ತಿಂಡಿಗಳು ಚನ್ನಾಗಿರಲಿಲ್ಲ. ಹಾಗೆಂದು ಅಲ್ಲಿಯ ತಿಂಡಿ ಕೆಟ್ಟದಾಗೆ ಇರುತ್ತದೆ ಎಂದು ನಾನು ಹೇಳಲಾರೆ. ಮತ್ತೊಂದು ವಿಷಯವೆಂದರೆ, ನರಸಿಂಹ ಪರ್ವತದಂತಹ ಕಠಿಣ ಚಾರಣದ ಜಾಗಗಳಲ್ಲಿಯೂ ತಿಂದು ಬಿಟ್ಟ ಪೇಪರ್ ತಟ್ಟೆಗಳು, ಪ್ಲಾಸ್ಟಿಕ್ ಕವರ್ ಗಳು ಇದ್ದದ್ದು ನೋಡಿ ಬೇಸರವಾಯಿತು. ಅಷ್ಟೊಂದು ಸುಂದರ ಪರಿಸರದಲ್ಲಿ ಗಲೀಜು ಮಾಡಲು ಹೇಗಾದರೂ ಮನಸ್ಸು ಬರುತ್ತದೆ ಜನರಿಗೆ? ನೀವು ಎಂದಾದರೂ ಚಾರಣಕ್ಕೆ ಹೋಗುವುದಾದರೆ ನಮ್ಮ ತಂಡದಿಂದ ಒಂದು ಕೋರಿಕೆ. ದಯವಿಟ್ಟು ನೀವು ಉಪಯೋಗಿಸುವ ಪೇಪರ್ ತಟ್ಟೆಗಳು, ಪ್ಲಾಸ್ಟಿಕ್ ಕವರ್ ಗಳು, ಅಥವಾ ಏನೇ ತ್ಯಾಜ್ಯ ವಸ್ತುಗಳು ಉಳಿದರೂ ನಿಮ್ಮ ಚೀಲದಲ್ಲೇ ಹಾಕಿಕೊಂಡು ಬನ್ನಿ, ಎಲ್ಲಾದರೂ ಕಸದ ಬುಟ್ಟಿ ಕಂಡರೆ ಅದಕ್ಕೆ ಹಾಕಿ. ಪ್ರಜ್ನಾವಂತರಾಗಿ ನಮ್ಮಿಂದ ಪ್ರಕೃತಿಗೆ ಅಷ್ಟಾದರೂ ಮಾಡುವುದು ಕಷ್ಟವಲ್ಲ ಎಂದು ನಮ್ಮ ಅನಿಸಿಕೆ.

(ಮುಗಿಯಿತು)

Sunday, January 2, 2011

ನರಸಿಂಹ ಪರ್ವತ ಚಾರಣ - ಭಾಗ ೨

ಕಣ್ಣು ಬಿಟ್ಟಾಗ ಕಡುನೀಲಿ ಆಗಸ, ಗುಡ್ಡಗಳು, ತೋಟಗಳೂ ಅಸ್ಪಷ್ಟವಾಗಿ ಕಾಣುತ್ತಿದ್ದವು. ಸುಬ್ಬು ತದೇಕಚಿತ್ತದಿಂದ ಜೀಪನ್ನು ಓಡಿಸುತ್ತಿದ್ದ. ಉಳಿದವರೆಲ್ಲಾ ತೂಕಡಿಸುತ್ತಲೋ ಅಥವಾ ನಿದ್ದೆಯಲ್ಲೋ ಇದ್ದರು. ಆಗಾಗ ರಸ್ತೆಯ ಗುಂಡಿಗಳಲ್ಲಿ ಇಳಿದು ಮೇಲೆ ಹತ್ತುತ್ತಿದ್ದ ಚಕ್ರದ ಹೊಡೆತಕ್ಕೆ ಎಚ್ಚರಾಗಿ ಒಮ್ಮೆ ಆಕಡೆ ಈಕಡೆ ನೋಡಿ ಮತ್ತೆ ತಲೆಯನ್ನು ಸೀಟಿಗೆ ಒರಗಿಸುತ್ತಿದ್ದ ಪ್ರವೀಣ್ ಹಾಗು ಅರುಣ ತಮಾಷೆಯಾಗಿ ಕಾಣುತ್ತಿದರು. ಜೀಪಿನ ಹೆಡ್ ಲೈಟ್ ಬೆಳಕಿಗೆ ಭಯ ಪಟ್ಟು ಮರಗಳ ಹಿಂದೆ ಕತ್ತಲು ಅಡಗಿಕೊಳ್ಳುವಂತೆ ಅನ್ನಿಸುತ್ತಿತ್ತು. ಕ್ಷಣ ಕ್ಷಣಕ್ಕೂ ಬಾನು ಬೆಳಗುತ್ತಾ ಜಗವನ್ನೇ ಗೆಲ್ಲುವ ತವಕದಲ್ಲಿ ರವಿಯು ಮೂಡಣದಲ್ಲಿ ಮೈಮುರಿಯುತ್ತಿದ್ದ ದೃಶ್ಯ ಅವರ್ಣನೀಯವಾಗಿತ್ತು. ಇನ್ನೂ ನಿದ್ದೆಗಣ್ಣಲ್ಲೇ ಇದ್ದುದ್ದರಿಂದಲೋ ಏನೋ, ಈ ಎಲ್ಲ ಕ್ರಿಯೆಗಳು ಕಿನ್ನರಲೋಕದಲ್ಲಿದ್ದಂತೆ ಭಾವನೆ ಮೂಡಿಸಿದ್ದವು.

ಸುಮಾರು ೭ ಗಂಟೆಯ ಹೊತ್ತಿಗೆ ನಾವು ಉಳಿಯಬೇಕಿದ್ದ ಅರೆಹಳ್ಳಿಯ ವಸಂತ್ ಕುಮಾರ್ ಅವರ ಮನೆ ತಲುಪಿದೆವು. ಆಗಲೇ ತಡವಾದ್ದರಿಂದ ಎಲ್ಲರೂ ಬೇಗಬೇಗನೆ ಹಲ್ಲುಜ್ಜಿ, ಮುಖ ತೊಳೆದು, ಬಿಸಿ ಬಿಸಿ ಕಾಫಿ ಹೀರಿ ಆಗುಂಬೆಯ ಕಡೆಗೆ ಪಯಣ ಬೆಳೆಸಿದೆವು. ಆಗುಂಬೆಯ 'ದೊಡ್ಮನೆ'ಯಲ್ಲಿ ಉಪಾಹಾರ ಮಾಡುವುದು ಎಂದು ಮೊದಲೇ ನಿರ್ಧರಿಸಿದ್ದೆವು.

ದೊಡ್ಮನೆಯ ಕಟ್ಟೆಯ ಮೇಲೆ ವಿನಾಯಕ ಹಾಗು ಜಿತೇಂದ್ರ

ದೊಡ್ಮನೆಯ ಒಳ ಅಂಕಣ
ಈ 'ದೊಡ್ಮನೆ' ಆಗುಂಬೆಯಲ್ಲಿ ಬಹಳ ಫೇಮಸ್. ಈ ಮನೆಯನ್ನು ಶಂಕರ್ ನಾಗ್ ಅವರ 'ಮಾಲ್ಗುಡಿ ಡೇಸ್' ನಲ್ಲಿ ಬಳಸಿಕೊಳ್ಳಲಾಗಿದೆ. ದಪ್ಪ ದಪ್ಪ ಕಂಬಗಳಿರುವ ಆ ಮನೆ ಹೊರಗಿನಿಂದ ಆಕರ್ಷಕವೆನಿಸಿತು. ಒಳಗಿನಿಂದ ತಿಂಡಿಗೆ ಕರೆ ಬಂದಿತು. ನಾನು ಹಿಂದಿನ ರಾತ್ರಿ ಹೊರಡುವ ಭರದಲ್ಲಿ ಸರಿಯಾಗಿ ಊಟ ಮಾಡಿಲ್ಲವಾದ್ದರಿಂದ ಭರ್ಜರಿ ತಿಂಡಿಯ ಕನಸು ಕಾಣುತ್ತಾ ಒಳನಡೆದೆ. ಮನೆಯ ಒಳಾಂಗಣ ಹೊರಗಿನಷ್ಟು ಖಾಸ್ ಅನ್ನಿಸಲಿಲ್ಲ. ಒಂದು ಪುಟ್ಟ ಅಂಗಳವಿತ್ತು ಒಳಗೆ. ಹಳೆ ಮಲೆನಾಡಿನ ಮನೆಗಳನ್ನು ನೆನಪಿಸುವಂತಿತ್ತು. ಒಳಗೆ ಕಾಲಿಟ್ಟಾಗ ನಾಲ್ಕಾರು ಉತ್ತರ ಭಾರತೀಯರು ತಿಂಡಿ ಸವಿಯುತ್ತಿದ್ದರು. ದೊಡ್ಮನೆಯನ್ನು ನೀವು ಹೋಟೆಲ್ ಎಂದು ತಪ್ಪು ತಿಳಿಯಬಾರದು. ಇಲ್ಲಿ ತಿಂಡಿಗೆ ಹೋಗುವುದಾದರೆ ಮೊದಲೇ ಕರೆ ಮಾಡಿ ತಿಳಿಸಿಡಬೇಕು. ಈ ಮನೆಯ ಒಡತಿ, ಸುಮಾರು ೬೦ ವರ್ಷದ ವೃದ್ದೆ, ನಿಮಗೆ ತಿಂಡಿ ಮಾಡಿ ಇಟ್ಟಿರುತ್ತಾರೆ. ಈಗ ತಿಂಡಿಯ ವಿಷಯಕ್ಕೆ ಮರಳೋಣ. ನನಗೆ ಮೊದಲಿಗೆ ಅವರೆಲ್ಲ ಏನು ತಿಂಡಿ ತಿನ್ನುತ್ತಿದ್ದಾರೆ ಎಂದು ಗೊತ್ತಾಗಲಿಲ್ಲ. ಅಂದು ದೊಡ್ಮನೆಯ ಸ್ಪೆಷಲ್ ಹುರುಳಿ ಇಡ್ಲಿ, ಮೆಣಸಿನ ಚಟ್ನಿ, ಹಾಗು ಉಪ್ಪಿಟ್ಟಾಗಿತ್ತು. ಜೊತೆಗೆ ಕುಡಿಯಲು ಕಷಾಯ. ಬಂದ ಉತ್ತರ ಭಾರತೀಯರಿಗೆ ಅಜ್ಜಿ ಇಂಗ್ಲಿಶ್-ಹಿಂದಿ ಮಿಶ್ರಿತ ಭಾಷೆಯಲ್ಲಿ ಅಂದಿನ ತಿಂಡಿಗಳ ಬಗ್ಗೆ ವಿವರಿಸುತ್ತಿದ್ದದ್ದು ಹಾಸ್ಯಾಸ್ಪದವಾಗಿತ್ತು. ಕಷಾಯಕ್ಕೆ ಅವರು ಕೊಟ್ಟ ಹೆಸರು ' ಆಯುರ್ವೇದಿಕ್ ಮಾಲ್ಟ್ ' ಹುರುಳಿ ಇಡ್ಲಿಯನ್ನು ಕಷ್ಟಪಟ್ಟು ಹೊಟ್ಟೆಗೆ ತಳ್ಳಿದ ಮೇಲೆ, ಉಪ್ಪಿಟ್ಟಿನ ಮೇಲೆ ಗಮನ ಹರಿಸೋಣ ಎಂದು ಎರಡು ತುತ್ತು ಉಪ್ಪಿಟ್ಟು ತಿಂದ ಮೇಲೆಯೇ ಗೊತ್ತಾಗಿದ್ದು ಉಪ್ಪಿಟ್ಟಿಗೆಂದು ಹುರಿದ ರವೆಯನ್ನು ಅಗತ್ಯಕ್ಕಿಂತ ಜಾಸ್ತಿಯೇ ಹುರಿಯಲಾಗಿದೆ ಎಂದು. ಅಲ್ಲಿಗೆ ಬೆಳಗಿನ ತಿಂಡಿ ಮುಗಿಸುವುದೇ ನಮಗೆ ಚಾರಣಕ್ಕಿಂತ ದೊಡ್ಡ ಸವಾಲಾಯಿತು. ಇಷ್ಟರ ಮಧ್ಯೆ ಪ್ರವೀಣ್ ಸುಮ್ಮನಿರಲಾರದೆ "ಈ ಮನೆಯಲ್ಲಿ ನೀವೊಬ್ಬರೇ ಇರುವುದೇ ?" ಎಂದು ಸಂದರ್ಶನ ಮಾಡುವ ಶೈಲಿಯಲ್ಲಿ ಪ್ರಶ್ನೆಯೊಂದನ್ನು ಕೇಳಿಯೇಬಿಟ್ಟ. ಅದಕ್ಕವರು "ಇಲ್ಲ, ನಾನು ಹಾಗು ನನ್ನ ತಾಯಿ ಇರುವುದು. ಆದರೆ ಲೆಕ್ಕಕ್ಕೆ ನಾನೊಬ್ಬಳೆ" ಎಂದರು. ಕಷಾಯ ಕುಡಿದು ಎಲ್ಲರೂ ತಿಂಡಿ ಎಂಬ ತಿಂಡಿಯನ್ನು ಮುಗಿಸಿ ದೊಡ್ಮನೆಯಿಂದ ಹೊರಬಿದ್ದೆವು.

ಆಗುಂಬೆಯಿಂದ ಮಲ್ಲಂದೂರಿಗೆ ತಲುಪಿ ಅಲ್ಲೆಲ್ಲಾ ನಮ್ಮ ಗೈಡ್ ಕೃಷ್ಣಪ್ಪನನ್ನು ಹುಡುಕತೊಡಗಿದೆವು. ನಾಲ್ಕಾರು ಮನೆ ಕೇಳುವಷ್ಟರಲ್ಲಿ ಕೃಷ್ಣಪ್ಪನ ಮನೆ ಸಿಕ್ಕಿತು. ಕೃಷ್ಣಪ್ಪ ಆಗಲೇ ನೀರಿನೊಂದಿಗೆ ಹೊರಡಲು ಅಣಿಯಾಗಿದ್ದ. ನಮ್ಮಲ್ಲಿ ಹಲವರು ಉಂಬಳಗಳನ್ನೂ ಎದುರಿಸಲು ಬೂಟಿಗೆಲ್ಲ ಸುಣ್ಣ ಬಳಿದುಕೊಂಡು ತಯಾರಾಗಿ ಕೃಷ್ಣಪ್ಪನನ್ನು ಹಿಂಬಾಲಿಸಿದೆವು. ವಿಧ್ಯುಕ್ತವಾಗಿ ಚಾರಣ ಈಗ ಶುರು ಆಗಿತ್ತು ಎನ್ನಬಹುದು. ಬರ್ಕಣ ಜಲಪಾತವನ್ನು ನೋಡಿ ಅಲ್ಲಿಂದ ನರಸಿಂಹ ಪರ್ವತ ಹತ್ತುವುದು ನಮ್ಮ ಪ್ಲ್ಯಾನ್ ಆಗಿತ್ತು.

ದಟ್ಟ ಕಾಡೊಳಗೆ ನುಗ್ಗುತ್ತಿರುವ ನಮ್ಮ ತಂಡ ( ಫೋಟೋ ಕೃಪೆ : ಪ್ರವೀಣ್ ಕೆ.ಆರ್)

ಇನ್ನು ಮುಂದಿನದನ್ನು ಸಂಕ್ಷೀಪ್ತವಾಗಿ ಹೇಳಬೇಕೆಂದರೆ ಬರ್ಕಣ ಜಲಪಾತ ತಲುಪುವವರೆಗೂ ನಾವು ಮಾಡಿದ್ದು ಉಂಬಳಗಳನ್ನೂ ಬಿಡಿಸುತ್ತಾ, ರಕ್ತ ಒರೆಸಿಕೊಳ್ಳುತ್ತಾ, ತಮಾಷೆ ಮಾಡುತ್ತಾ ಸಾಗಿದ್ದು ಅಷ್ಟೇ. ಕಾಡು ಎಷ್ಟು ದಟ್ಟವಾಗಿತ್ತೆಂದರೆ ಹಲವು ಕಡೆ ಬೆಳಕು ನೆಲವನ್ನೂ ತಾಕುತ್ತಿರಲಿಲ್ಲ. ಲಂಟಾನ ಜಿಗ್ಗುಗಳಲ್ಲಿ ನುಗ್ಗುತ್ತಾ ಕೃಷ್ಣಪ್ಪನ ಹಿಂದೆ ಕೆಲವು ಕಡೆ ಓಡಿದಂತೆ ನಡೆಯುತ್ತಿದ್ದವು. ಉಂಬಳಗಳು ನಮಗೆ ಎಲ್ಲೂ ನಿಲ್ಲಲು ಆಸ್ಪದ ನೀಡಲಿಲ್ಲ. ಒಂದು ಬಿಡಿಸಲು ನಿಂತರೆ ಹತ್ತು ಉಂಬಳಗಳು ಕಾಲನ್ನು ಮುತ್ತುತ್ತಿದ್ದವು. ಸುಮಾರು ೧೧ ಗಂಟೆ ಅಷ್ಟೊತ್ತಿಗೆ ಬರ್ಕಣ ಜಲಪಾತವನ್ನು ತಲುಪಿದೆವು. ನಾವು ಜಲಪಾತದ ಮೇಲ್ಬಾಗಕ್ಕೆ ಬಂದಿದ್ದರಿಂದ ಮೇಲಿನಿಂದಲೇ ಜಲಪಾತ ಬೀಳುತ್ತಿರುವುದನ್ನು ನೋಡಿ ಸಂತೋಷಪಡಬೇಕಾಯಿತು. ಜಲಪಾತದ ಪೂರ್ಣ ನೋಟ ಸಿಗದಿದ್ದಕ್ಕಾಗಿ ಬೇಸರವಾಯಿತು. ವಿನಯ್ ಜಲಪಾತ ನೋಡುವ ಭರದಲ್ಲಿ ಮಲಗಿದ್ದ ಒಂದು ಹಾವನ್ನು ತುಳಿಯುವವನಿದ್ದ. ನಾವೆಲ್ಲಾ ಜಲಪಾತದ ಹತ್ತಿರದ ಬಂಡೆಗಳ ಮೇಲೆ ಕುಳಿತು ಉಂಬಳಗಳನ್ನು ಬಿಡಿಸುವ ಕಾರ್ಯದಲ್ಲಿ ತೊಡಗಿದೆವು. ಅಲ್ಲೇ ಸ್ವಲ್ಪ ವಿಶ್ರಮಿಸಿಕೊಂಡು ಹಸಿದ ಹೊಟ್ಟೆಗೆ ಒಂದೊಂದು ರೊಟ್ಟಿ ಎಸೆದು ಚಾರಣವನ್ನು ಮುಂದುವರೆಸುವ ಯೋಚನೆ ಮಾಡಿದೆವು.

ಇಂಡಿಯನ್ ಪಿಟ್ ವೈಪರ್ (ಫೋಟೋ ಕೃಪೆ : ಪ್ರವೀಣ್ ಕೆ.ಆರ್)

ಬರ್ಕಣ ಜಲಪಾತದ ಮೇಲಿನಿಂದ ನೋಟ (ಫೋಟೋ ಕೃಪೆ : ಪ್ರವೀಣ್ ಕೆ.ಆರ್)

ಮುಂದುವರೆಯುವುದು....

Thursday, December 30, 2010

ನರಸಿಂಹ ಪರ್ವತ ಚಾರಣ - ಭಾಗ ೧

ಚಾರಣ ನನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ನನಗನ್ನಿಸಿದ ಮಟ್ಟಿಗೆ ಪ್ರವಾಸ ಕಥನಗಳನ್ನು ಬರೆಯುವುದು ಸ್ವಲ್ಪ ಕಷ್ಟದ ಕೆಲಸ. ಅಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನು ಬರೆಯುತ್ತಾ ಹೋದರೆ, ಓದುವವರಿಗೆ ಬೇಸರ ಬರುತ್ತದೆ. ಘಟನೆಗಳನ್ನು ತಿಳಿಸದೇ ಬರೀ ಸ್ಥಳ ಮಹಾತ್ಮೆ ತಿಳಿಸುವುದು ಕೇವಲ ಮಾಹಿತಿಯಾಗಿ ಉಳಿದುಬಿಡುವ ಸಾಧ್ಯತೆಗಳೇ ಜಾಸ್ತಿ. ಮೊದಲ ಬಾರಿಗೆ ಚಾರಣದ ಅನುಭವಗಳನ್ನು ಹೇಳಲು ಪ್ರಯತ್ನಿಸುತ್ತಿದ್ದೇನೆ. ಓದಿ ಹೇಗಿದೆಯೆಂದು ಹೇಳಿ.

ನರಸಿಂಹ ಪರ್ವತ ಆಗುಂಬೆ ಹಾಗು ಶೃಂಗೇರಿಯ ಮಧ್ಯೆ ಹರಡಿಕೊಂಡಿರುವ ಪರ್ವತ ಶ್ರೇಣಿಗಳಲ್ಲಿ ಒಂದು. ನರಸಿಂಹ ಪರ್ವತ ಹತ್ತಬೇಕೆಂದು ಈಗೊಂದು ವರ್ಷದಿಂದ ಎಣಿಕೆ ಹಾಕುತ್ತ ಕುಳಿತಿದ್ದೆ. ಗೆಳೆಯ ಜಿತೇಂದ್ರ ಹಾಗು ಅರುಣ ಇಬ್ಬರೂ ಎಲ್ಲಾದರೂ ಟ್ರೆಕ್ಕಿಂಗ್ ಹೋಗೋಣ ಎಂದಾಗ ನರಸಿಂಹ ಪರ್ವತವನ್ನು ಸೂಚಿಸಿದೆ. ಎಂದಿನಂತೆ ನಾಲ್ಕಾರು ಬೇರೆ ಸ್ಥಳಗಳ ಪರಿಶೀಲನೆ ನಡೆದು, ಅದು ಬೇಡ-ಇಲ್ಲಿ ಮಳೆ- ಮತ್ತೊಂದು ನೋಡಿದ ಜಾಗ ಅಂತೆಲ್ಲ ಮಾತನಾಡುತ್ತಿರುವಾಗ ಮತ್ತೊಬ್ಬ ಗೆಳೆಯ ಪ್ರವೀಣ್ ಕರೆ ಮಾಡಿ ಅವರು ಹೋಗಬೇಕೆಂದಿದ್ದ ನರಸಿಂಹ ಪರ್ವತ ಚಾರಣಕ್ಕೆ ನಾಲ್ಕು ಜನ ಬರುತ್ತಿಲ್ಲವೆಂದೂ, ನೀವು ಜೋತೆಯಾಗುವಿರೋ ಎಂದು ಕೇಳಿದ. (ಇದೆ ಸಮಯದಲ್ಲಿ ಪ್ರವೀಣನೂ ಅವನ ಗೆಳೆಯರೊಂದಿಗೆ ನರಸಿಂಹ ಪರ್ವತ ಚಾರಣಕ್ಕೆ ಪ್ಲ್ಯಾನ್ ಮಾಡಿದ್ದ).
ಆಗ ಜಾಗದ ಆಯ್ಕೆ ಕಾರ್ಯಕ್ರಮವನ್ನು ಅಲ್ಲಿಗೆ ನಿಲ್ಲಿಸಿ ಪ್ರವೀಣನ ಜೊತೆಗೂಡಲು ತೀರ್ಮಾನ ಕೈಗೊಂಡೆವು. ಪ್ರವೀಣ್ ಆಗಲೇ ಉಳಿಯುವ ಹಾಗು ಆಹಾರದ ವ್ಯವಸ್ಥೆ ಮಾಡಿದ್ದರಿಂದ ನಮಗೆ ಸಿದ್ದತೆಯ ತಲೆಭಾರವೂ ಕಡಿಮೆಯಾಯಿತು.

ನಾವು ನಾಲ್ವರು ( ನಾನು, ಅರುಣ, ಜಿತೇಂದ್ರ, ಹಾಗು ವಿನಾಯಕ) ಪ್ರವೀಣ ಹಾಗು ಅವನ ಸ್ನೇಹಿತರಾದ ವಿನಯ್ ಹಾಗು ಸಂತೋಷ್ ಅವರನ್ನು ಮಜೆಸ್ಟಿಕ್ ನಲ್ಲಿ ಸೇರಿಕೊಂಡೆವು. ಪ್ರವೀಣನ ಇನ್ನೊಬ್ಬ ಗೆಳೆಯ ಸುಬ್ರಮಣ್ಯ ಹಾಸನದಲ್ಲಿ ಸೇರಿಕೊಳ್ಳುತ್ತಾನೆ ಎಂಬುದು ಮೊದಲೇ ನಿಗದಿಯಾಗಿತ್ತು.

ಇನ್ನೇನು ಹೊರಟೆಬಿಟ್ಟಿತು ಎಂದು ನಮ್ಮನ್ನು ಬಸ್ ಹತ್ತಿಸಿದ ಕಂಡಕ್ಟರ್ ಬಸ್ ಇಳಿದು ಹೋದವನು ಅದೃಶ್ಯನಾಗಿ ಹೋದ. ಮಜೆಸ್ಟಿಕ್ ಬಸ್ ಸ್ಟ್ಯಾಂಡ್ ಎಂಬ ಸಂತೆಯಲ್ಲಿ ಡ್ರೈವರ್ ಗಳ ಜಗಳ-ಬೈದಾಟ ನೋಡುತ್ತಾ ನಾವೂ ನಗುತ್ತಾ, ಹರಟುತ್ತಾ, ನಮ್ಮ ಬಸ್ ಡ್ರೈವರ್ ನನ್ನು ಕಿಚಾಯಿಸುತ್ತಾ ಸ್ವಲ್ಪ ಸಮಯ ಕಾಲ ಹರಣ ಮಾಡಿದೆವು. ಇಷ್ಟು ಹೊತ್ತಾದರೂ ಕಂಡಕ್ಟರ್ ಬರದೆ ಇದ್ದುದ್ದನ್ನು ನೋಡಿ ಬೇಸತ್ತು ಜಿತೇಂದ್ರ ಕಂಡಕ್ಟರ್ ನನ್ನು ಹುಡುಕಿ ತರುವೆನೆಂದು ಬಸ್ ಇಳಿದು ಹೋದ. ಅವನು ಹೋದ ಸ್ಟೈಲ್ ನೋಡಿ ಇವನೆಲ್ಲಿ ಕಂಡಕ್ಟರ್ ಗೆ ಥಳಿಸಿ ಎಳೆದುಕೊಂಡು ಬರುವನೋ ಎಂದು ಹೆದರಿದೆ. ಕೊನೆಗೂ ಕಂಡಕ್ಟರ್ ಬಂದು ಬಸ್ ಹೊರಡುವ ವೇಳೆಗೆ ಗಡಿಯಾರ ೧೦.೪೫ ತೋರಿಸುತ್ತಿತ್ತು. ೯ ಗಂಟೆಗೆ ಹೊರಡಬೇಕಾದ ನಾವು ಸರಿಯಾಗಿ ಒಂದೂ ಮುಕ್ಕಾಲು ಗಂಟೆ ತಡವಾಗಿ ಹೊರಟಿದ್ದೆವು.

ಹಾಗೂ ಹೀಗೂ ಬಸ್ ಹೊರಟ ನಂತರ ನಮ್ಮ ಹೊಸ ಗೆಳೆಯರ ಪರಿಚಯ, ಹರಟೆ, ಜೋಕುಗಳ ಮಧ್ಯೆ ಒಂದು ನಿದ್ದೆ ತೆಗೆಯುವ ಎಂದು ನಿದ್ದೆಗೆ ಜಾರುವಷ್ಟರಲ್ಲೇ ಬಸ್ಸನ್ನು ಬದಿಯಲ್ಲಿರುವ ಡಾಬದ ಕಡೆಗೆ ತಿರುಗಿಸಿದ ಡ್ರೈವರ್. ಸರಿ, ಒಂದು ಕಾಫಿನೋ, ಟೀನೋ ಹೊಟ್ಟೆಗೆ ಹಾಕಿ ಮಲಗಿದರಾಯಿತು ಎಂದು ನಾವೆಲ್ಲರೂ ಇಳಿದೆವು. ಬೆಳಗ್ಗಿನಿಂದ ಒಲೆಯಲ್ಲಿ ಕುದ್ದು ವಿಚಿತ್ರ ರುಚಿ ಪಡೆದಿದ್ದ ಟೀ ಕುಡಿದು ನಮ್ಮಲ್ಲಿ ನಾಲ್ವರು ಕೃತಾರ್ತರಾದೆವು, ಉಳಿದ ಮೂವರು ಏನೂ ಕುಡಿಯದೆ ಜಾಣರಾದರು.

ಬಸ್ ಹತ್ತಿ ಮಲಗಲು ಸಿದ್ಧತೆ ನಡೆಸುತ್ತಿರುವಾಗಲೇ ಕಂಡಕ್ಟರ್ ಬಂದು ಡ್ರೈವರ್ ನ ಕಿವಿಯಲ್ಲಿ ಏನೋ ಉಸುರಿ ಹೋದ. ಅದರ ಬೆನ್ನಲ್ಲೇ ಪ್ರಯಾಣಿಕರ ಸೀಟಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಬಂದು ಡ್ರೈವರ್ ಸೀಟನ್ನು ಆಕ್ರಮಿಸಿದ್ದೂ, ಡ್ರೈವರ್ ಹೋಗಿ ಕೊನೆಯ ಸೀಟಿನಲ್ಲಿ ಮಲಗಿದ್ದೂ ನೋಡಿ ನಾವೆಲ್ಲಾ ಹೌಹಾರಿದೆವು. ಕೊನೆಗೆ ಲೈಟ್ ಎಲ್ಲಾ ನಂದಿಸಿದ ಮೇಲೂ ಎಲ್ಲರೂ ಮಲಗಿದ ಹಾಗೆ ನಟಿಸಿದರೆ ಹೊರತು ಯಾರೂ ಮಲಗಲಿಲ್ಲ. ಆಗಾಗ ನಮ್ಮ ಬಸ್ ನ "ಹೊಸ" ಚಾಲಕ ಗೇರ್ ಬದಲಿಸಲು ಹೆಣಗಾಡುತ್ತಾ, ಕೆಲವೊಮ್ಮೆ ಶಕ್ತಿ ಸಾಲದೇ ಸ್ಟೇರಿಂಗ್ ಇಂದ ಕೈ ತೆಗೆದು ಎರಡೂ ಕೈ ಉಪಯೋಗಿಸಿ ಗೇರ್ ಬದಲಿಸುತ್ತಿದ್ದದ್ದು ನೋಡಿದ ಮೇಲೂ ಯಾರಿಗೂ ನಿದ್ದೆ ಹತ್ತದೆ ಇದ್ದದ್ದು ಆಶ್ಚರ್ಯವೇನೂ ಆಗಲಿಲ್ಲ. ನಾವೆಲ್ಲರೂ ಮಲಗಲು ಶತಪ್ರಯತ್ನ ಮಾಡುತ್ತಾ ತೂಕಡಿಸುತ್ತಾ ಇರುವಾಗಲೇ ಹಾಸನ ಬಂದಿತು. ಎಲ್ಲರೂ ಧರ್ಮಸ್ಥಳದ ಮಂಜುನಾಥನಿಗೆ ಮನದಲ್ಲೇ ವಂದಿಸಿ ಬಸ್ ಇಳಿದೆವು. ಹಾಸನ ಬಸ್ ನಿಲ್ದಾಣದ ಹತ್ತಿರದಲ್ಲೇ ಗೆಳೆಯ ಸುಬ್ಬು ನಮ್ಮ ಆಗಮನಕ್ಕೆ ತನ್ನ ಜೀಪಿನಲ್ಲಿ ಕಾಯುತ್ತ ಇದ್ದ. ಜೀಪ್ ಹತ್ತಿದ ಮೇಲೆ ನನಗೆ ನಿದ್ದೆ ಹತ್ತಿತು.

ಮುಂದುವರೆಯುವುದು...