Monday, February 15, 2010

ಸಾಲುಗಳು... ಸುಮ್ಮನೆ...

ಬಸ್ ನಿಲ್ದಾಣದ ಕೆಂಪು ಧೂಳನ್ನು ಮೆತ್ತಿಕೊಂಡ ಲಂಟಾನ ಪೊದೆಗಳಂತೆ ಮೌನ ಹಾಗು ತಾಳ್ಮೆಯ ಪ್ರತೀಕಗಳಾಗಿ ಕಾಯುತಿಹರು ತಮ್ಮ ತಮ್ಮ ನಿಶ್ಚಿತವಲ್ಲದ ಬಸ್ಸುಗಳಿಗೆ ಪ್ರಯಾಣಿಕರಿಲ್ಲಿ...

ಶನಿವಾರದ ಮಾರ್ನಿಂಗ್ ಕ್ಲಾಸಿಗೆ ಲಘುಬಗೆಯಲ್ಲಿ ಹೆಜ್ಜೆ ಹಾಕುತಿರುವ ಎರಡು ಜಡೆಯ ಪುಟ್ಟ ಹುಡುಗಿಯರ ಮೇಲೆ ಕೊಂಚ ಕೊಂಚವಾಗಿ ಉದಯಿಸುತಿಹನು ರವಿಯು...

ಬೆಳಗಿನ ಜಾವದವರೆಗೂ ಓದಿದ ಪಾಠಗಳೆಲ್ಲ ಪರೀಕ್ಷೆಯ ಸಮಯದಲ್ಲಿ ನಿದ್ದೆಗೆಟ್ಟ ಕಂಗಳ ಮಂಪರಿನಲ್ಲಿ ಕಳೆದು ಹೋಗುತ್ತಿರಲು...

ಒಂದು ಸಾಮಾನ್ಯ ಮಳೆಗಾಲದ ದಿನದಂದು ಪುಟ್ಟನೋಬ್ಬನ ಕೈ ಇಂದ ಜಾರಿದ ಕಾಗದದ ದೋಣಿಯೊಂದು ಚರಂಡಿಯ ನೀರಿನ ವೇಗದೊಂದಿಗೆ ಹೋರಾಡುತ್ತಾ ತನ್ನ ತೀರವನ್ನು ಸೇರುವ ತವಕದಲ್ಲಿ....

ಅತ್ತ ಗಣಹೋಮ ಭರ್ಜರಿಯಾಗಿ ಸಾಗುತ್ತಿದೆ, ಇತ್ತ ಹಸಿದ ಹೊಟ್ಟೆಯ ಮಕ್ಕಳ ಕಣ್ಣುಗಳಲ್ಲಿ ಅಗ್ನಿಯ ಮಡಿಲು ಸೇರುತ್ತಿರುವ ಮೋದಕಗಳ ಲೆಕ್ಕ ಏರುತ್ತಿದೆ.

ಮನೆಯೊಂದು ಸಂತಸದಲಿ ಮುಳುಗಿರಲು, ಮನೆಯ ಮಗಳು ಇನ್ನು ಮೂರು ದಿನಗಳಲ್ಲಿ ತಾನು ಓಡಿಹೋಗುವ ಹುಡುಗನ ಕುರಿತು ಯೋಚಿಸುತಿಹಳು. ವಿಷಯವನ್ನು ಬಲ್ಲ ಅವಳ ಪುಟ್ಟ ತಮ್ಮ ಕುಟುಂಬದ ಈ ನಗುವಿನಲ್ಲಿ ಸಿಗದ ಯಾವ ಸುಖವನ್ನು ಅಕ್ಕ ಅರಸುತಿರಬಹುದು ಎಂದು ನಿಟ್ಟುಸಿರ ಬಿಟ್ಟಿಹನು...

ಯಾವುದೋ ದೂರು ಹೇಳುವ ಸಲುವಾಗಿ ಕಾಲ್ ಸೆಂಟರ್ಗೆ ಫೋನಾಯಿಸಿದಾಗ, ಆ ಕಡೆಯಿಂದ ಬಂದ ಧ್ವನಿಯ ಇಂಪಿಗೆ ಸೋತು ಹೇಳಬೇಕಿದ್ದ ದೂರನ್ನೇ ಮರೆತ ಆ ಕ್ಷಣ...

ಕಣ್ಣಂಚಿನ ಆ ಕಪ್ಪು ಕಾಡಿಗೆ ನಿನ್ನ ಕಣ್ಣಿಗಷ್ಟೇ ಅಂದವೇ ? ಗೊತ್ತಿಲ್ಲ ನನಗೆ, ಬೇರೆ ಕಣ್ಣುಗಳನ್ನು ನೋಡುವ ಪ್ರಯತ್ನವನ್ನು ಇನ್ನೂ ಮಾಡಿಲ್ಲ. .

Friday, January 29, 2010

ಬರೆಯಬೇಕಿದೆ... ಇಂದಾದರೂ

ಕುಳಿತುಕೊಳ್ಳುವೆ ಏನಾದರೂ ಬರೆಯಲೇಬೇಕೆಂದು
ಪದಗಳು ಅಡಗಿ ಕುಳಿತಿವೆ ಬೆಚ್ಚಗೆ ಪೆನ್ನಿನ ಶಾಯಿಯಲ್ಲಿ
ನನ್ನ ಕವನದಲ್ಲಿನ ದಾರುಣ ಸಾವು ಅವುಗಳಿಗೆ ಬೇಕಿಲ್ಲ
ಒರಗಿದ ಬೆನ್ನಿನ ಭಾರ ತಾಳಲಾರದೆ ಕಿರಗುಟ್ಟುತ್ತಿದೆ ಗೋಡೆಯೂ...

ನಿರ್ವಿಕಾರವಾಗಿ ತನ್ನ ತೆಕ್ಕೆಯಲ್ಲಿ ಭುವಿಯನ್ನು ಸೆಳೆದುಕೊಂಡ ಕತ್ತಲು
ಚಂದಿರನೂ ಕಿಟಕಿಯ ದಾಟಿ ಒಳ ಬರಲು ಹೆದರಿಹನು,
ತಾನೆಲ್ಲಿ ಕವನಕ್ಕೆ ಸ್ಪೂರ್ಥಿಯಾಗುವೆನೋ ಎಂದು ಅವನಿಗೆ
ಬಾಗಿಲ ಸಂದಿಯ ನೆರಳುಗಳು ನನ್ನ ನೋಡಿ ಗಹಗಹಿಸಿವೆ

ಕುಡಿದ ಕಾಫಿಯೂ ಕಂಡಿದೆ ಹೊಟ್ಟೆಯ ತಳವ
ಗಡಿಯಾರದ ಮುಳ್ಳುಗಳು ಮೆಲ್ಲನೆ ನುಣಿಚಿಕೊಳ್ಳುತ್ತಿವೆ
ತಲೆಕೊಡವಿ ಏಳುವೇನು, ಕಚ್ಚುವೆನು ಪೆನ್ನಿನ ತುದಿಯ
ಬೆಳಗೂ ಮೈಮುರಿದು ಆಕಳಿಸತೊಡಗಿದೆ

ನಾನು ಬರೆಯಲಿಲ್ಲ..... ಇಂದೂ
ಗಾಳಿಗೆ ಪಟಪಟಗುಟ್ಟುತ್ತಿರುವ ಹಾಳೆಗಳು ಖಾಲಿ ಖಾಲಿ...

Monday, January 25, 2010

ವರ್ಷದ ಮೊದಲ ಚಿತ್ರ


ಇದು ಈ ವರ್ಷ ಬಿಡಿಸಿದ ಮೊದಲ ಚಿತ್ರ... ಇತ್ತೀಚಿಗೆ ಚಿತ್ರ ಬಿಡಿಸುವ ಆ ಹಲವು ಘಂಟೆಗಳ ಸಮಯವನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ.. ಚಿತ್ರ ಕೊನೆಯಲ್ಲಿ ಚಂದವಾಗಿ ಬರುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಆತಂಕವಿಲ್ಲ. ಬರೋಬ್ಬರಿ ಮೂರು ದಿನ ಕುಳಿತುಕೊಂಡು ಬಿಡಿಸಿದ ಚಿತ್ರವಿದು (೩ ಘಂಟೆ x ೩ ದಿನ). ಇಷ್ಟೊಂದು ತಾಳ್ಮೆಯಿಂದ ಚಿತ್ರ ಬಿದಿಸುತ್ತಿರುವುದು ಇದೆ ಮೊದಲು. ನೀವು ಚಿತ್ರವನ್ನು ನೋಡಿ ಹೇಳಿ ಹೇಗಿದೆಯೆಂದು. ಚಿತ್ರವನ್ನು ದೊಡ್ಡದಾಗಿ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

Tuesday, January 19, 2010

ಕತ್ತಲು - ನನಗೆ

ನಿಂತಿದ್ದೇನೆ ಗುಮ್ಮನ ಹಾಗೆ ಆವರಿಸಿಕೊಂಡ ಕತ್ತಲ ಮುಂದೆ
ಕತ್ತಲು, ಮಾತಿಲ್ಲದೆ ಮುಗಿದ ಪ್ರೀತಿಯ ನೆನಪಿನ ಹಾಗೆ
ಕಪ್ಪು ಕೋಣೆಯೊಂದರ ಬೀಗ ಕಳೆದುಕೊಂಡ ಬಾಗಿಲ ಹಾಗೆ

ಕತ್ತಲು ಆವರಿಸುತ್ತದೆ ಬೆಳಕಿನ ಮರಣದ ಮರುಘಳಿಗೆಯೇ
ಕತ್ತಲು, ಬಚ್ಚಿಟ್ಟ ನೋವಿಗೆ ಕಣ್ಣೀರು ಒತ್ತರಿಸಿ ಬರುವ ಹಾಗೆ
ಸಂಜೆ ಸೂರ್ಯನನ್ನೇ ನುಂಗುವ ಉನ್ಮತ್ತ ಕಡಲ ಹಾಗೆ

ಬೆಳಕಿನಷ್ಟೇ ಮುಖ್ಯವೆನಿಸುತ್ತದೆ ಈ ಕರಿಕತ್ತಲು
ಸೋತಿಹೆನು ಇಂದು ಈ ಭಯದ ಬಣ್ಣಕ್ಕೆ
ಬೆಳಕು ಬೇಕಿಲ್ಲ ಎನಗೆ
ಕತ್ತಲೇ ತೋರುತಿರುವಾಗ ಹಾದಿಯನು ನನ್ನ ಅಂತರಂಗದೆಡೆಗೆ

Sunday, January 10, 2010

ಒಂದು ಹಿಡಿ ವಿರಹ....

ನನ್ನ ಕಂಗಳ ಕೊಳದಿ ಬಂಧಿ ನೀನು
ಹೊರಹೋಗ ಬಯಸಿದರೆ ಚುಚ್ಚಿಬಿಡು ಈ ಕಂಗಳ
ಕಣ್ಣೀರಿನೊಂದಿಗೆ ದಯಪಾಲಿಸುವೆ ಮುಕ್ತಿಯನು....


ಈ ಕನಸಿನ ಗೋಪುರ ಒಂದುದಿನ ಬೀಳುವುದು
ಎಂದು ಗೊತ್ತಿದ್ದೂ ಕಟ್ಟಿದ್ದು ನನ್ನದೇ ತಪ್ಪು
ನಿನ್ನ ಕನಸಿನ ಚಿತ್ತಾರದ ಬಣ್ಣಗಳಲ್ಲೇ ಲೀನವಾಗಿದ್ದೆ
ಹೃದಯವೇ ಆಳುತ್ತಿತ್ತು; ಬುದ್ದಿಗೆ ಒಂದಿನಿತೂ ಅವಕಾಶವೀಯದೆ


ನಿನ್ನ ನೆನಪಲ್ಲಿ ಬಂದ
ನನ್ನ ನಿಟ್ಟುಸಿರ ತೇವಕ್ಕೆ
ಕಿಟಕಿಯ ಗಾಜೆಲ್ಲ ಮಂಜಾಗಿ...
ಹೊರಗಿನ ವಿಶ್ವವೇ ಅಗೋಚರವಾಗಿ...


ಮೋಡಗಳ ಮಧ್ಯದಿಂದ ತೂರಿಬರುವ
ಸಂಜೆಗೆಂಪಿನ ಸೂರ್ಯನ ಕಿರಣಗಳು ನೀನು....
ಆ ಕಿರಣಗಳ ಪ್ರಖರತೆಗೆ ಕರಗುವ
ಮಂಜಿನ ಬಿಂದುವಾಗಿ ನಾನು...



ನಿನ್ನೆಗಳ ಬಗ್ಗೆ ಏಕೆ ಬೇಸರ
ನಾಳೆಗಳ ಬಗ್ಗೆ ಏಕೆ ಕಾತರ
ಇಂದು ಎಂಬ ಇಂದನ್ನು ಬಾಳು ಹರುಷದಿಂದ
ನಡಿ ಮುಂದಕೆ ಎಂದೂ ಬತ್ತದ ಹುರುಪಿನಿಂದ.


ನಿನ್ನೆ ನೀನು ಕಿವಿಯಲ್ಲಿ ಹೇಳಿದ ಗುಟ್ಟು ...
ನಿನ್ನ ಬಿಸಿಯುಸಿರ ಬೆಚ್ಚನೆಯ ಭಾವ...
ನನ್ನ ಅಂಗಿಗಂಟಿದ ನಿನ್ನ ಕೂದಲಿನ ಕಂಪು..
ನನ್ನ ಎದೆಯಲ್ಲೇ ಉಳಿದ ಒಂದು ಹಿಡಿ ನೆನಪು...
ನಾನು, ನಕ್ಷತ್ರ, ಹಾಗು ಅಗಾಧ ಆಗಸಗಳಷ್ಟೇ ಇಂದು...