ನನಗೆ ಕಾಡು ಹೂವುಗಳೆಂದರೆ ಇಷ್ಟ... ಅವುಗಳ ಆಕಾರ, ಬಣ್ಣ, ವಿವಿಧತೆ ನನ್ನಲ್ಲಿ ಯಾವಾಗಲೂ ಅಚ್ಚರಿ ಹುಟ್ಟಿಸುತ್ತವೆ. ನಾನು ಚಾರಣಕ್ಕೆ ಹೋದಾಗಲೆಲ್ಲ ನನ್ನ ಕಣ್ಣುಗಳು ಹೊಸ ಬಗೆಯ ಕಾಡು ಹೂಗಳನ್ನು ಹುಡುಕುತ್ತಿರುತ್ತವೆ. ಹಲವಾರು ಬಾರಿ ಕಾಡು ಹೂಗಳು ತುಂಬಾ ಚಿಕ್ಕದಾಗಿದ್ದು ನನ್ನ ಕ್ಯಾಮೆರಾದ ವಿಸ್ತರಣ ಸಾಮರ್ಥ್ಯಕ್ಕೂ ಸಿಗದೇ ನಿರಾಸೆಗೊಂಡಿದ್ದೇನೆ. ಕೆಲವು ಬಾರಿ ತೆಗೆಯಬೇಕಾದ ಹೂವು ಸರಿಯಾದ ಕೋನದಲ್ಲಿ ಇರದೇ, ಸರಿಯಾದ ಬೆಳಕಿಗಾಗಿ, ಕೋನಗಳಿಗಾಗಿ ಒದ್ದಾಡುತ್ತಾ ನನ್ನ ಸಹ ಚಾರಣಿಗರ ತಾಳ್ಮೆಯನ್ನು ಪರೀಕ್ಷಿಸಿದ್ದೇನೆ. ಆದರೆ ಈಗಲೂ ಬೇಸರವಾದಗೆಲ್ಲ ಈ ಹೂವುಗಳ ನೋಡುತ್ತಾ ಇವುಗಳ ಬಣ್ಣಗಳಿಗೆ ಮಾರು ಹೋಗುತ್ತೇನೆ. "ಕಾಡು ಹೂವುಗಳು" ಸರಣಿಯಲ್ಲಿ ನನಗೆ ಸಿಕ್ಕ ಕಾಡು ಹೂವುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಎರಡು ವರ್ಷಗಳ ಹಿಂದೆ ಕುಮಾರಪರ್ವತ ಚಾರಣಕ್ಕೆ ಹೋದಾಗ ಸಿಕ್ಕ ಕೆಲ ಕಾಡು ಹೂಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದೇನೆ... ನೋಡಿ ಬಣ್ಣಗಳನ್ನು ಕಣ್ಣಲ್ಲಿ ತುಂಬಿಸಿಕೊಳ್ಳಿ :)
Wednesday, March 3, 2010
Monday, February 15, 2010
ಸಾಲುಗಳು... ಸುಮ್ಮನೆ...
ಬಸ್ ನಿಲ್ದಾಣದ ಕೆಂಪು ಧೂಳನ್ನು ಮೆತ್ತಿಕೊಂಡ ಲಂಟಾನ ಪೊದೆಗಳಂತೆ ಮೌನ ಹಾಗು ತಾಳ್ಮೆಯ ಪ್ರತೀಕಗಳಾಗಿ ಕಾಯುತಿಹರು ತಮ್ಮ ತಮ್ಮ ನಿಶ್ಚಿತವಲ್ಲದ ಬಸ್ಸುಗಳಿಗೆ ಪ್ರಯಾಣಿಕರಿಲ್ಲಿ...
ಕಣ್ಣಂಚಿನ ಆ ಕಪ್ಪು ಕಾಡಿಗೆ ನಿನ್ನ ಕಣ್ಣಿಗಷ್ಟೇ ಅಂದವೇ ? ಗೊತ್ತಿಲ್ಲ ನನಗೆ, ಬೇರೆ ಕಣ್ಣುಗಳನ್ನು ನೋಡುವ ಪ್ರಯತ್ನವನ್ನು ಇನ್ನೂ ಮಾಡಿಲ್ಲ. .
ಶನಿವಾರದ ಮಾರ್ನಿಂಗ್ ಕ್ಲಾಸಿಗೆ ಲಘುಬಗೆಯಲ್ಲಿ ಹೆಜ್ಜೆ ಹಾಕುತಿರುವ ಎರಡು ಜಡೆಯ ಪುಟ್ಟ ಹುಡುಗಿಯರ ಮೇಲೆ ಕೊಂಚ ಕೊಂಚವಾಗಿ ಉದಯಿಸುತಿಹನು ರವಿಯು...
ಬೆಳಗಿನ ಜಾವದವರೆಗೂ ಓದಿದ ಪಾಠಗಳೆಲ್ಲ ಪರೀಕ್ಷೆಯ ಸಮಯದಲ್ಲಿ ನಿದ್ದೆಗೆಟ್ಟ ಕಂಗಳ ಮಂಪರಿನಲ್ಲಿ ಕಳೆದು ಹೋಗುತ್ತಿರಲು...
ಒಂದು ಸಾಮಾನ್ಯ ಮಳೆಗಾಲದ ದಿನದಂದು ಪುಟ್ಟನೋಬ್ಬನ ಕೈ ಇಂದ ಜಾರಿದ ಕಾಗದದ ದೋಣಿಯೊಂದು ಚರಂಡಿಯ ನೀರಿನ ವೇಗದೊಂದಿಗೆ ಹೋರಾಡುತ್ತಾ ತನ್ನ ತೀರವನ್ನು ಸೇರುವ ತವಕದಲ್ಲಿ....
ಅತ್ತ ಗಣಹೋಮ ಭರ್ಜರಿಯಾಗಿ ಸಾಗುತ್ತಿದೆ, ಇತ್ತ ಹಸಿದ ಹೊಟ್ಟೆಯ ಮಕ್ಕಳ ಕಣ್ಣುಗಳಲ್ಲಿ ಅಗ್ನಿಯ ಮಡಿಲು ಸೇರುತ್ತಿರುವ ಮೋದಕಗಳ ಲೆಕ್ಕ ಏರುತ್ತಿದೆ.
ಮನೆಯೊಂದು ಸಂತಸದಲಿ ಮುಳುಗಿರಲು, ಮನೆಯ ಮಗಳು ಇನ್ನು ಮೂರು ದಿನಗಳಲ್ಲಿ ತಾನು ಓಡಿಹೋಗುವ ಹುಡುಗನ ಕುರಿತು ಯೋಚಿಸುತಿಹಳು. ವಿಷಯವನ್ನು ಬಲ್ಲ ಅವಳ ಪುಟ್ಟ ತಮ್ಮ ಕುಟುಂಬದ ಈ ನಗುವಿನಲ್ಲಿ ಸಿಗದ ಯಾವ ಸುಖವನ್ನು ಅಕ್ಕ ಅರಸುತಿರಬಹುದು ಎಂದು ನಿಟ್ಟುಸಿರ ಬಿಟ್ಟಿಹನು...
ಯಾವುದೋ ದೂರು ಹೇಳುವ ಸಲುವಾಗಿ ಕಾಲ್ ಸೆಂಟರ್ಗೆ ಫೋನಾಯಿಸಿದಾಗ, ಆ ಕಡೆಯಿಂದ ಬಂದ ಧ್ವನಿಯ ಇಂಪಿಗೆ ಸೋತು ಹೇಳಬೇಕಿದ್ದ ದೂರನ್ನೇ ಮರೆತ ಆ ಕ್ಷಣ...
Friday, January 29, 2010
ಬರೆಯಬೇಕಿದೆ... ಇಂದಾದರೂ
ಕುಳಿತುಕೊಳ್ಳುವೆ ಏನಾದರೂ ಬರೆಯಲೇಬೇಕೆಂದು
ಪದಗಳು ಅಡಗಿ ಕುಳಿತಿವೆ ಬೆಚ್ಚಗೆ ಪೆನ್ನಿನ ಶಾಯಿಯಲ್ಲಿ
ನನ್ನ ಕವನದಲ್ಲಿನ ದಾರುಣ ಸಾವು ಅವುಗಳಿಗೆ ಬೇಕಿಲ್ಲ
ಒರಗಿದ ಬೆನ್ನಿನ ಭಾರ ತಾಳಲಾರದೆ ಕಿರಗುಟ್ಟುತ್ತಿದೆ ಗೋಡೆಯೂ...
ನಿರ್ವಿಕಾರವಾಗಿ ತನ್ನ ತೆಕ್ಕೆಯಲ್ಲಿ ಭುವಿಯನ್ನು ಸೆಳೆದುಕೊಂಡ ಕತ್ತಲು
ಚಂದಿರನೂ ಕಿಟಕಿಯ ದಾಟಿ ಒಳ ಬರಲು ಹೆದರಿಹನು,
ತಾನೆಲ್ಲಿ ಕವನಕ್ಕೆ ಸ್ಪೂರ್ಥಿಯಾಗುವೆನೋ ಎಂದು ಅವನಿಗೆ
ಬಾಗಿಲ ಸಂದಿಯ ನೆರಳುಗಳು ನನ್ನ ನೋಡಿ ಗಹಗಹಿಸಿವೆ
ಕುಡಿದ ಕಾಫಿಯೂ ಕಂಡಿದೆ ಹೊಟ್ಟೆಯ ತಳವ
ಗಡಿಯಾರದ ಮುಳ್ಳುಗಳು ಮೆಲ್ಲನೆ ನುಣಿಚಿಕೊಳ್ಳುತ್ತಿವೆ
ತಲೆಕೊಡವಿ ಏಳುವೇನು, ಕಚ್ಚುವೆನು ಪೆನ್ನಿನ ತುದಿಯ
ಬೆಳಗೂ ಮೈಮುರಿದು ಆಕಳಿಸತೊಡಗಿದೆ
ನಾನು ಬರೆಯಲಿಲ್ಲ..... ಇಂದೂ
ಗಾಳಿಗೆ ಪಟಪಟಗುಟ್ಟುತ್ತಿರುವ ಹಾಳೆಗಳು ಖಾಲಿ ಖಾಲಿ...
Monday, January 25, 2010
ವರ್ಷದ ಮೊದಲ ಚಿತ್ರ

ಇದು ಈ ವರ್ಷ ಬಿಡಿಸಿದ ಮೊದಲ ಚಿತ್ರ... ಇತ್ತೀಚಿಗೆ ಚಿತ್ರ ಬಿಡಿಸುವ ಆ ಹಲವು ಘಂಟೆಗಳ ಸಮಯವನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ.. ಚಿತ್ರ ಕೊನೆಯಲ್ಲಿ ಚಂದವಾಗಿ ಬರುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಆತಂಕವಿಲ್ಲ. ಬರೋಬ್ಬರಿ ಮೂರು ದಿನ ಕುಳಿತುಕೊಂಡು ಬಿಡಿಸಿದ ಚಿತ್ರವಿದು (೩ ಘಂಟೆ x ೩ ದಿನ). ಇಷ್ಟೊಂದು ತಾಳ್ಮೆಯಿಂದ ಚಿತ್ರ ಬಿದಿಸುತ್ತಿರುವುದು ಇದೆ ಮೊದಲು. ನೀವು ಚಿತ್ರವನ್ನು ನೋಡಿ ಹೇಳಿ ಹೇಗಿದೆಯೆಂದು. ಚಿತ್ರವನ್ನು ದೊಡ್ಡದಾಗಿ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
Tuesday, January 19, 2010
ಕತ್ತಲು - ನನಗೆ
ನಿಂತಿದ್ದೇನೆ ಗುಮ್ಮನ ಹಾಗೆ ಆವರಿಸಿಕೊಂಡ ಕತ್ತಲ ಮುಂದೆ
ಕತ್ತಲು, ಮಾತಿಲ್ಲದೆ ಮುಗಿದ ಪ್ರೀತಿಯ ನೆನಪಿನ ಹಾಗೆ
ಕಪ್ಪು ಕೋಣೆಯೊಂದರ ಬೀಗ ಕಳೆದುಕೊಂಡ ಬಾಗಿಲ ಹಾಗೆ
ಕತ್ತಲು ಆವರಿಸುತ್ತದೆ ಬೆಳಕಿನ ಮರಣದ ಮರುಘಳಿಗೆಯೇ
ಕತ್ತಲು, ಬಚ್ಚಿಟ್ಟ ನೋವಿಗೆ ಕಣ್ಣೀರು ಒತ್ತರಿಸಿ ಬರುವ ಹಾಗೆ
ಸಂಜೆ ಸೂರ್ಯನನ್ನೇ ನುಂಗುವ ಉನ್ಮತ್ತ ಕಡಲ ಹಾಗೆ
ಬೆಳಕಿನಷ್ಟೇ ಮುಖ್ಯವೆನಿಸುತ್ತದೆ ಈ ಕರಿಕತ್ತಲು
ಸೋತಿಹೆನು ಇಂದು ಈ ಭಯದ ಬಣ್ಣಕ್ಕೆ
ಬೆಳಕು ಬೇಕಿಲ್ಲ ಎನಗೆ
ಕತ್ತಲೇ ತೋರುತಿರುವಾಗ ಹಾದಿಯನು ನನ್ನ ಅಂತರಂಗದೆಡೆಗೆ
Subscribe to:
Posts (Atom)












