Tuesday, July 22, 2008

ಅಪೂರ್ಣ ಚಿತ್ರ


ಪರೀಕ್ಷೆ ಸಮಯದಲ್ಲಿ ಬರವಣಿಗೆ ಹಾಗು ಚಿತ್ರಕಲೆ ಮೇಲೆ ಅತೀವ ಆಸಕ್ತಿ ಹುಟ್ಟಿ, ಪರೀಕ್ಷೆ ಇದೆ ಅನ್ನೊ ನೆಪ ಇಟ್ಟುಕೊಂಡು, ಪರೀಕ್ಷೆ ಮುಗಿದ ಮೇಲೆ ದಿನಕ್ಕೊಂದು ಲೇಖನ ಬರೆದರಾಯಿತು, ದಿನ ಒಂದೊಂದು ಚಿತ್ರ ಬಿಡಿಸಿದರಾಯಿತು ಅಂದುಕೊಂಡು ಆಸೆಯನ್ನು ಹತ್ತಿಕ್ಕಲೂ ಆಗದೆ, ಓದಲೂ ಆಗದೆ ಇರುವ ಒಂದು ವಿಚಿತ್ರ ಸ್ಥಿತಿಯಲ್ಲಿ ಪರೀಕ್ಷೆಯನ್ನು ಮುಗಿಸುತ್ತೇನೆ. ಪರೀಕ್ಷೆ ಮುಗಿದ ಮರುದಿನದಿಂದ ನನಗೂ ನನ್ನ ಬ್ಲಾಗ್ ಗೂ ಯಾವುದೇ ಸಂಭಂದ ಇಲ್ಲ ಎನ್ನುವ ಭಾವನೆ ಶುರು ಆಗುತ್ತೆ. ಬರೆಯೋಕೆ ವಿಷಯಗಳಿಲ್ಲ ಎಂದಲ್ಲ. ಈ ರೀತಿ ಯಾಕಾಗುತ್ತೊ ಗೊತ್ತಿಲ್ಲ. ಪ್ರತೀ ರಜೆಯೊ ಹೀಗೆ ಕಳೆದು ಹೋಗೊದನ್ನ ಮೊಕ ಪ್ರೇಕ್ಷಕನಾಗಿ ನೋಡೊ ಹಿಂಸೆ ಸಾಕಾಗಿ ಹೋಗಿದೆ. ಇದರಿಂದ ಹೊರ ಬರುವ ಸಲುವಾಗಿ ಈ ಚಿತ್ರವನ್ನು ಬಿಡಿಸಿದ್ದೇನೆ. ಇದೊಂದು ಅಪೂರ್ಣ ಚಿತ್ರ. ಮುಂದುವರೆಸುವ ಮನಸ್ಸಿಲ್ಲದೆ ಹೊಸ ಪ್ರಯೋಗವೆಂಬ ಹಣೆಪಟ್ಟಿ ಕಟ್ಟಿ ಪೋಸ್ಟ್ ಮಾಡುತ್ತ ಇದ್ದೇನೆ.

Saturday, July 12, 2008

ನನಗೂ ನಿನಗೂ ಕಣ್ಣಲ್ಲೇ ಪರಿಚಯ



ನನಗೆ ಇತ್ತೀಚೆಗೆ ತುಂಬಾ ಇಷ್ಟ ಆದ ಹಾಡು ಇದು, ಅರಮನೆ ಚಿತ್ರದ ಈ ಹಾಡನ್ನು ಜಯಂತ್ ಕಾಯ್ಕಿಣಿ ಅವರು ರಚಿಸಿದ್ದಾರೆ. ಕುನಾಲ್ ಗಾಂಜವಾಲರ ಧ್ವನಿಯಲ್ಲಿನ ಈ ಹಾಡಿಗೆ ಗುರುಕಿರಣ್ ಅವರು ಸಂಗೀತ ನೀಡಿದ್ದಾರೆ.


ನನಗೂ ನಿನಗೂ ಕಣ್ಣಲ್ಲೇ ಪರಿಚಯ

ಸನಿಹ ಸುಳಿವ ಮನದಾಸೆ ಅತಿಶಯ

ಏನೋ ಆಗಿದೆ ನನಗಂತೂ ಸಂಶಯ


ನಲುಮೆ ಸ್ನೇಹದ ನವಿರಾದ ಗ್ರಂಥವೆ

ಪುಟವಾ ತೆರೆಯುವಾ ಹಿತವಾದ ಗಂಧವೆ

ಮೊದಲಾ ನುಡಿಯಲೀ ನಾನೀಗ ತನ್ಮಯ

ಇನ್ನೂ ಕಥೆಯಲಿ ನೀನನ್ನಾ ಕರೆದೆಯಾ


ನನಗೂ ನಿನಗೂ ಕಣ್ಣಲ್ಲೇ ಪರಿಚಯ

ಸನಿಹ ಸುಳಿವ ಮನದಾಸೆ ಅತಿಶಯ

ಏನೋ ಆಗಿದೆ ನನಗಂತೂ ಸಂಶಯ


ಮೊದಲಾ ಸ್ಪರ್ಶಕೆ ಇನ್ನೆಲ್ಲಿ ಹೋಲಿಕೆ

ಮೃದುಲಾ ಭಾವದೀ ನನ್ನೊಂದು ಕೋರಿಕೆ

ಎಲ್ಲಾ ತಿಳಿದರೂ ಯಾಕಿನ್ನೂ ಅಭಿನಯ

ವಿರಹಾ ಬಂದಿದೆ ಒಲವಿನ್ನೂ ನಿಶ್ಚಯ


ನನಗೂ ನಿನಗೂ ಕಣ್ಣಲ್ಲೇ ಪರಿಚಯ

ಸನಿಹ ಸುಳಿವ ಮನದಾಸೆ ಅತಿಶಯ

ಏನೋ ಆಗಿದೆ ನನಗಂತೂ ಸಂಶಯ

Saturday, May 24, 2008

ರಶ್ಮಿ

ಸೋತಿಹೆನು ಕತ್ತಲಿನಾ ಪರೀಕ್ಷೆಯಲಿ
ನಯನಗಳು ನಿನ್ನದೇ ನಿರೀಕ್ಷೆಯಲಿ

ಸಾಕಾಗಿದೆ ಈ ಇರುಳು
ಕಹಿಯಾಗಿದೆ ಈ ನೋವು

ಕಾದಿಹವು ಅರಳಲು ಸುಮವನಗಳು
ಪರಿತಪಿಸುತಿವೆ ಸಹ್ಯಾದ್ರಿಯ ಗಿರಿಪಂಕ್ತಿಗಳು

ಇನ್ನಾದರೂ ಬರಬಾರದೇ
ಭುವಿಯನ್ನೂ, ನನ್ನ ಮನವನ್ನು ಬೆಳಗಬಾರದೇ?

Thursday, May 22, 2008

ಹುಚ್ಚನೊಬ್ಬನ ಅಸಂಭದ್ದ ಪ್ರಲಾಪ





ಇಡೀ ಕೇರಿಗೆ, ಊರಿಗೆ, ಬೀದಿ ನಾಯಿಗಳಿಗೆ ಆಗಲೆ ಅರ್ಧ ರಾತ್ರಿ ಮುಗಿದುಹೋಗಿದೆ. ನಿದ್ದೆಯು ನನ್ನಲ್ಲಿ ಸಮರ ಹೂಡಿದೆ. ಪೂರ್ಣಚಂದ್ರನು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಅರ್ಧ ಪಾಳಿಯನ್ನು ಮುಗಿಸಿದ್ದಾನೆ. ನನಗೆ ನಿದ್ದೆಯಿಲ್ಲ. ಹಾಗಂತ ಹೇಳಿಕೊಳ್ಳುವಂಥ ಯೋಚನೆಗಳೂ ಏನಿಲ್ಲ. ಹುಚ್ಚನಿಗೆಲ್ಲಿಯ ಯೋಚನೆ? ಖಾಲಿ ಹಾಳೆಯಂತಾಗಿದೆ ಮನಸ್ಸು. ನನಗೇ ಗೊತ್ತಿಲ್ಲದಂತೆ ಹೊಸ ಸ್ಥಿತಿಯೊಂದನ್ನು ತಲುಪಿದ್ದೇನೆ. ಕಷ್ಟಸಾಧ್ಯವಾಗಿ ದೊರಕುವಂತ ಈ ಸ್ಥಿತಿ ನನಗೆ ಬೇಡದೇ ದೊರೆತಿದೆ. ಬಯಸದೇ ಬಂದ ಭಾಗ್ಯ. ಭಾಗ್ಯವೋ ಏನು ಸುಡುಗಾಡೋ ಯಾರಿಗೆ ಗೊತ್ತು. ಒಟ್ಟಿನಲ್ಲಿ ಈ ಅಪರಾತ್ರಿ ಸಮಯದಲ್ಲಿ ಏನೋ ಒಂದು ಆಗಿದೆ ಎನ್ನಬಹುದಷ್ಟೆ.

ಹಾಸಿಗೆಯಿಂದ ಎದ್ದು ಕಿಟಕಿಯ ಬಳಿಸಾರಿದೆ. ಪೂರ್ಣಚಂದಿರನ ಹಾಲು ಬೆಳಕನ್ನು ತನ್ನ ಮೇಲೆ ಸುರಿದುಕೊಂಡಿದ್ದ ಕಾಡು ಕಂಡಿತು. ಮೌನವನ್ನು ಅಪ್ಪಿ ಹಿಡಿದಿತ್ತು ಕಾಡು. ನಿಗೂಢ ಎಂಬ ಪದವನ್ನು ಕೇಳಿದಾಗಲೆಲ್ಲ ನೆನಪಾಗುತ್ತಿತ್ತು ಈ ಕಾಡು. ಲಕ್ಷಾಂತರ ಕೀಟಗಳು ಈ ನಿಗೂಢ ಪ್ರಪಂಚದ ಪ್ರತಿನಿಧಿಗಳಂತೆ ಆಗೊಮ್ಮೆ ಈಗೊಮ್ಮೆ ಟರ ಟರ ಗುಟ್ಟಿ ಮೌನಕ್ಕೊಮ್ಮೆ ಎಚ್ಚರಿಕೆ ನೀಡುತ್ತಿದ್ದವು. ಕಿಟಕಿಯ ಸರಳನ್ನು ಹಿಡಿದು ನಿಗೂಢತೆಯನ್ನು ಅವಲೋಕಿಸುತ್ತಿದ್ದ ಹುಚ್ಚನಿಗೆ ಅರ್ಥಾತ್ ನನಗೆ ಬೇಸರ ಮೂಡತೊಡಗಿದೆ. ಆದರೇನು ಮಾಡುವುದು, ನಿದ್ದೆಗೆ ನನ್ನ ಮೇಲೆ ಬೇಸರ ಬಂದಿದೆ.

ಬಾಗಿಲು ತೆರೆದು ಅಟ್ಟವನ್ನೇರಿದೆ. ಸಾವಿರಾರು ಬೆಳ್ಳಿ ಚುಕ್ಕೆಗಳನ್ನು ತನ್ನೊಡಲಲ್ಲಿ ತುಂಬಿಕೊಂಡಿತ್ತು ಆಕಾಶ. ಅದೆಷ್ಟೋ ಹೊತ್ತು ಹಾಗೇ ಆಕಾಶವನ್ನು ನೋಡುತ್ತ ಕುಳಿತಿದ್ದೆ, ನಿಮಿತ್ತವಿಲ್ಲದೆ. ಎಂದಾದರೂ ಮಾಯಾನೌಕೆಯೊಂದು ಬಂದು ನನ್ನನ್ನು ಹೊತ್ತೊಯ್ಯಬಹುದೆಂಬ ನಿರೀಕ್ಷೆಯಲಿ. ನಿರೀಕ್ಷೆ ಸರಿಯಾದ ಪದವಲ್ಲ. "ಆಸೆ" ಎಂದು ಬದಲಾಯಿಸಿದರೆ ಸರಿಯಾದೀತು. ಮನೆ ಮುಂದಿನ ಕಲ್ಪವೃಕ್ಷವೊಂದು ಆಗಾಗ ಗರಿಗಳನ್ನು ಆಡಿಸುತ್ತಿದೆ. ತಾನಿನ್ನೂ ಸಜೀವವಾಗಿದ್ದೇನೆ ಎಂದು ತೋರಿಕೊಳ್ಳಲೋ ಏನೋ? ಅಥವಾ ಗಾಳಿಯು ತನ್ನ ಇರುವನ್ನು ವ್ಯಕ್ತಪಡಿಸುತ್ತಲೂ ಇರಬಹುದು. ಊಹೂಂ....... ಇನ್ನೂ ನಿದ್ದೆಯ ಸುಳಿವಿಲ್ಲ. ನಿಗೂಢದ ಆಚೆಗಿರುವ ಬೆಟ್ಟವನ್ನು ಆರೋಹಿಸುವ ಆಲೋಚನೆಯೊಂದು ಮನದಲ್ಲಿ ಮಿಂಚಿ ಮಾಯವಾಗುತ್ತದೆ. ಇಂಥ ಹುಚ್ಚು ಆಲೋಚನೆಗಳು ನನ್ನಲ್ಲಿ ಬರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹುಚ್ಚು ಆಲೋಚನೆಗಳು ಹುಚ್ಚರಿಗಲ್ಲದೆ ಬೇರೆ ಯಾರಿಗೆ ಬರಲು ಸಾಧ್ಯ ಅಲ್ಲವೇ? ಆಲೋಚನೆಯೊಂದು ಸುಳಿದಿದ್ದೇ ನಿಜವಾದ ಮೇಲೆ ಅದನ್ನು ಕಾರ್ಯಗತಗೊಳಿಸದೇ ಹೋದರೆ ಹುಚ್ಚುತನಕ್ಕೂ ಮರ್ಯಾದೆ ಇರುವುದಿಲ್ಲ.

ಮುಂದಿನ ಕೆಲವೇ ಕ್ಷಣಗಳಲ್ಲಿ ಕಾಡಿನ ಹಾದಿಯಲ್ಲಿ ನನ್ನ ಪಯಣ ಶುರುವಾಗುತ್ತದೆ. ದಾರಿತೋರಲು ಪೂರ್ಣಚಂದ್ರನಿದ್ದಾನೆ. ಅವನಿಲ್ಲದಿದ್ದರೂ ನಡೆದೀತು. ಚಿಕ್ಕಂದಿನಿಂದ ಅದೆಷ್ಟು ಬಾರಿ ಈ ಹಾದಿಯನ್ನು ಸವೆಸಿದ್ದೇನೋ? ಆದರೂ ಈ ಕಾಡು ನನಗೆ ನಿಗೂಢವೇ. ಎಲ್ಲಿಯೂ ಎಡವಲಿಲ್ಲ. ಗುಡ್ದದ ಬುಡ ಬಂದೇ ಬಂದಿತು. ಗುಡ್ಡದ ಹುಲ್ಲು ಹಾಸಿನ ಮೇಲೆ ಹೊರಳುವ ಮನಸಾಯಿತು. ಆಸೆ ಹೆಮ್ಮರವಾಗಿ ಇನ್ನು ಸಾಧ್ಯವೇ ಇಲ್ಲವೆಂದೆನಿಸಿ ಹೊರಳಿದೆ. ಇಲ್ಲಿ ಯಾರೂ ಇಲ್ಲ ನನ್ನನ್ನು ನೋಡಿ ನಗಲು. ಇದ್ದರೂ ನನ್ನ ಹುಚ್ಚಾಟದಲ್ಲಿ ಪಾಲ್ಗೊಳ್ಳುವ ಸಾಹಸ ಯಾರೂ ಮಾಡಲಾರರು. ಗುಡ್ಡದ ನೆತ್ತಿಯನ್ನು ನೋಡುವೆ, ಇನ್ನು ತುದಿಯನ್ನು ತಲುಪುವ ಕಾಯಕವೊಂದೆ ಬಾಕಿ ಉಳಿದಿರುವುದು. ಉತ್ಸಾಹಕ್ಕೇನು ಕೊರತೆಯಿಲ್ಲ. ನಿದ್ದೆಗೂ ನನಗೂ ವಿರಸ. ಸರಿ, ಯಾರ ಹಂಗೂ ಇಲ್ಲದ ಮೇಲೆ ತುದಿ ತಲುಪೇ ತೀರುವೆ. ಅಗೋ................ನೆತ್ತಿ ಬಂದೇ ಬಿಟ್ಟಿತು. ಎದುರುಸಿರೂ ಇಲ್ಲ. ಆಶ್ಚರ್ಯವಲ್ಲದೆ ಮತ್ತೇನು, ಇಷ್ಟೆತ್ತರದ ಗುಡ್ಡದ ತುದಿಯನ್ನು ಎದುರುಸಿರು ಇಲ್ಲದೆ ಹತ್ತುವುದು ತಮಾಷೆಯ ವಿಷಯವೇ? ಪ್ರಶಸ್ತಿಯನ್ನೇನು ಯಾರೂ ಪ್ರಕಟಿಸಿಲ್ಲ. ಗಾಳಿಯು ಬೀಸುತ್ತಲೇ ಇದೆ, ಗತ್ಯಂತರವಿಲ್ಲದೆ. ದೂರದಲ್ಲೊಂದು ಊರು, ತಾಳಗುಪ್ಪವೊ ಏನೊ ಅದರ ಹೆಸರು. ಬಿಡಿ ಯಾವ ಊರಾದರೇನಂತೆ. ಇನ್ಯಾವುದೋ ದೊಡ್ದ ಪಟ್ಟಣವನ್ನು ಬೆಳಗಲು ಇಲ್ಲೊಂದು ಗ್ರಿಡ್ ನಿರ್ಮಾಣವಾಗಿದೆ. ಆ ಗ್ರಿಡ್ ನ ಕೇಸರಿ ದೀಪಗಳು ಆ ಕಡೆಯ ಆಗಸವನ್ನು ಕೆಂಪಾಗಿಸಿವೆ. ಕಿನ್ನರ ಲೋಕವೊಂದರ ನಕಲಿನಂತೆ ಗೋಚರಿಸುತ್ತಿದೆ. ಹಾಗೆ ನೋಡುತ್ತ ಕೂರುತ್ತೇನೆ ಕಿನ್ನರ ಲೋಕದೆಡೆಗೆ ಬೆಳಗಿನ ನಿರೀಕ್ಷೆಯಲಿ. ಇನ್ನೂ ನಿದ್ದೆಯ ವಿಳಾಸವಿಲ್ಲ. ನೋಡುತ್ತ ಕುಳಿತಿರುತ್ತೇನೆ ಅನಂತಾಕಾಶವನ್ನು, ನಿದ್ದೆಯು ನನ್ನನ್ನು ಅಪ್ಪುವವರೆಗೂ. ಹೀಗೆ ಅವಸಾನಗೊಳ್ಳುತ್ತಿದೆ ಹುಚ್ಚನೊಬ್ಬನ ಪೌರ್ಣಿಮೆಯ ರಾತ್ರಿ.