ಹೌದು, ಅಂದೂ ಕೂಡ ಹೀಗೆ ಮಳೆ ಇತ್ತು. ಎಲ್ಲಾ ನೆನಪಿದೆ. ಅಂದೂ ಮೇ ತಿಂಗಳು. ಇದೇ ರೀತಿ ಸಂಜೆಗೆ ಮೊದಲೇ ಕತ್ತಲಾಗಿ, ಮೋಡಗಳು ಆಕಾಶವನ್ನೆಲ್ಲಾ ಆಚ್ಛಾದಿಸಿ ಮಳೆ ಯಾವಾಗಲಾದರೂ ಬರಬಹುದು ಎನ್ನುವ ಸಮಯದಲ್ಲೇ ಅವಳ ಕರೆ ಬಂದಿದ್ದು.
"ಕಾಲೇಜ್ ಬಳಿ ಇರೋ ಮೈದಾನಕ್ಕೆ ಬಾ. ಸ್ವಲ್ಪ ಮಾತಾಡೋದಿದೆ."
ನಾನು ಫೋನ್ ಹಿಡಿದುಕೊಂಡೇ ಕಿಟಕಿಯಿಂದ ಹೊರಗಿಣುಕಿ "ಮಳೆ ಬರೊ ಹಾಗಿದೆಯಲ್ಲೇ, ಸಂಜೆ ಸಿಕ್ಕಿದ್ರೆ ಆಗಲ್ವ" ಎಂದೆ.
"ಇಲ್ಲ, ಸ್ವಲ್ಪ ಅರ್ಜೇ೦ಟು, ಈಗಲೇ ಬಾ" ಎಂದಳು.
ಅವಳ ಮಾತುಗಳು ಎಂದಿನ ಹಾಗಿರಲಿಲ್ಲ. ಯಾವಾಗಲೂ ಮಾತಿನ ಕೊನೆಗೆ ಸೇರಿಸುತ್ತಿದ್ದ "ಕಣೊ" "ಬಾರೋ" "ಹೇಳೊ" ಗಳು ಇಂದು ಮಾಯವಾಗಿದ್ದನ್ನು ನಾನು ಗಮನಿಸದೆ ಇರಲಿಲ್ಲ. ಆದರೂ ಅವಳು ಕೆಲವೊಮ್ಮೆ ಚಿಕ್ಕ ವಿಷಯವನ್ನೂ ಗಂಭೀರವಾಗಿಸಿಕೊಂಡು ಹೀಗೆ ಮಾತಾಡುವುದು ಇದ್ದೇ ಇದೆ.
ನಾನು ಅಂಗಳಕ್ಕೆ ಹೋಗಿ ಇನ್ನೊಮ್ಮೆ ಆಗಸದತ್ತ ದೃಷ್ಟಿಸಿದೆ. ಇಂದು ಮತ್ತೆ ಮಳೆ ಬರುವುದು ಗ್ಯಾರೆಂಟಿ ಎಂದೆಣಿಸಿ ಉಲ್ಲಸಿತನಾದೆ. ಈಗ ಮೊರ್ನಾಲ್ಕು ದಿನಗಳಿಂದ ಸಂಜೆ ಮಳೆ ಬೀಳುತ್ತಿತ್ತು. ಅದೂ "ಹಳೆಮಳೆ" ಅಂದ್ರೆ ನನಗೆ ಇನ್ನೂ ಸಂತೋಷ. "ಭಾನುವಾರನೂ ಬಿಡೋದಿಲ್ಲ ಈ ಮಳೆ" ಅಂತ ಅಮ್ಮ ಬರಲಿರುವ ವರುಣನನ್ನು ಶಪಿಸಿದಳು. ಶಾರದಾಂಬ ದೇವಸ್ಥಾನದ ಭಜನೆ ಎಲ್ಲಿ ತಪ್ಪಿ ಹೋಗುವುದೋ ಎಂದು ಅಮ್ಮನಿಗೆ ಆತಂಕವಾಗಿತ್ತು. ಸರಸರನೆ ಪ್ಯಾಂಟ್ ಏರಿಸುತ್ತಿದ್ದ ನನ್ನನ್ನು ನೋಡಿದ ಅಮ್ಮ "ಈಗ ಎಲ್ಲಿಗೋ? ಆಕಾಶ ನೋಡು ಸಗಣಿ ಬಳಿದಂತೆ ಕಪ್ಪಾಗಿದೆ, ಮಳೆ ಬರುತ್ತೆ. ಎಲ್ಲಿಗೂ ಹೋಗಬೇಡ" ಅಂದರು. ಅಮ್ಮನಿಗೆ ಮಳೆಯ ಮೇಲಿನ ಹುಸಿ ಕೋಪ ಅವಳ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. "ಫ್ರೆಂಡ್ ಮನೆಗೆ, ಸ್ವಲ್ಪ ಹೊತ್ತಿನಲ್ಲೇ ಬಂದು ಬಿಡುತ್ತೇನೆ " ಎಂದು ಹೇಳಿ ಅಮ್ಮನ ಪ್ರತಿಕ್ರಿಯೆಗೂ ಕಾಯದೆ ಮನೆಯಿಂದ ಹೊರಬಿದ್ದೆ.
ಗಾಳಿ ಜೋರಾಗಿ ಬೀಸುತ್ತಲಿತ್ತು. ಗಾಳಿಯ ವೇಗಕ್ಕೆ ರಸ್ತೆಯ ಕಸ, ಧೂಳೆಲ್ಲ ಮಿಶ್ರಗೊಂಡು ಆಕಾಶದಲ್ಲಿ ಹಾರಾಡುತ್ತಿದ್ದವು. ಜನರೆಲ್ಲ ಮನೆ ಸೇರಿಕೊಳ್ಳುವ ತವಕದಲ್ಲಿದ್ದರು. "ಛೆ, ಇವತ್ತು ತಲೆ ಸ್ನಾನ ಮಾಡಿದ್ದೆ ದಂಡ" ಎಂದು ನನ್ನಷ್ಟಕ್ಕೆ ಅಂದುಕೊಂಡೆ. ಮಳೆ ಬರೋದ್ರೊಳಗೆ ಕಾಲೇಜ್ ತಲುಪಬೇಕೆಂದು ವೇಗವಾಗಿ ಹೆಜ್ಜೆ ಹಾಕತೊಡಗಿದೆ. ಹೆಚ್ಚೂ ಕಡಿಮೆ ಓಡಿದಂತೆ ನಡೆದು ಮೈದಾನಕ್ಕೆ ಹತ್ತಿರಗೊಂಡೆ. ಮೈದಾನದ ಇನ್ನೊಂದು ತುದಿಯಲ್ಲಿ ಭೂತಾಕಾರವಾಗಿ ಬೆಳೆದಿದ್ದ ಸಂಪಿಗೆ ಮರದ ಬುಡದಲ್ಲಿ ಅವಳು ನಿಂತಿದ್ದಳು. ಸಂಪಿಗೆ ಮರ ಗಾಳಿಗೆ ತೂರಾಡುತ್ತ ಇನ್ನಷ್ಟು ಭಯಾನಕವಾಗಿ ತೋರುತ್ತಿತ್ತು. ಇವಳಿಗೆ ಅರ್ಥನೇ ಆಗಲ್ಲ, ಗಾಳಿ ಈ ರೀತಿ ಬೀಸುತ್ತಿದೆ, ಮರದ ಕೆಳಗೆ ನಿಂತಿದ್ದಾಳೆ ಎಂದು ಗದರಿಸಲು ಸಜ್ಜಾಗುತ್ತಾ ಅವಳತ್ತ ಧಾವಿಸಿದೆ. "ಏನೇ ಇಷ್ಟೊತ್ತಲ್ಲಿ ಬರ ಹೇಳಿದೆ, ಅದೂ ಅರ್ಜೆ೦ಟ್ ಅಂಥ" ಎಂದಿನಂತೆ ಮಾತಾಡಿದೆ. ಉತ್ತರ ಬರಲಿಲ್ಲ. ಅವಳು ನೆಲವನ್ನೆ ದಿಟ್ಟಿಸುತ್ತಿದ್ದಳು. ಏನೋ ಹೇಳೊಕೆ ಹೊರಟವನು ಸಂಪಿಗೆ ಮರದ ಹೊಯ್ದಾಟದಿಂದ ಭಯಗೊಂಡು "ನಡಿ ಇಲ್ಲಿ ನಿಲ್ಲುವುದು ಬೇಡ, ಕಾಲೇಜ್ ಬಳಿ ಹೋಗೋಣ" ಎಂದೆ. ನಾವು ಮರೆಯಿಂದ ಹೊರ ಬಂದಿದ್ದೇ ತಡ, ನೆಲ್ಲಿಕಾಯಿ ಗಾತ್ರದ ಮಳೆ ಹನಿಗಳು ಒಂದೊಂದಾಗೆ ಭೂಮಿಯ ಕಡೆಗೆ ಶರವೇಗದಲ್ಲಿ ಬೀಳತೊಡಗಿದವು. "ಓಡು ಓಡು, ಈ ಮಳೆಗೆ ತಲೆ ಕೊಟ್ರೆ ತಲೇನೆ ತೂತಾಗೋ ಚಾನ್ಸ್ ಇದೆ" ಎನ್ನುತ್ತ ಕಾಲೇಜ್ ಕಡೆಗೆ ಓಡತೊಡಗಿದೆ. ಅವಳು ದುಪಟ್ಟ ತಲೆಗೇರಿಸಿಕೊಂಡು ನನ್ನನ್ನು ಹಿಂಬಾಲಿಸತೊಡಗಿದಳು. ಹಂಚಿನ ಮಾಡಿಯ ಮೇಲೆ ಬೀಳುತ್ತಿದ್ದ ಮಳೆ ಹನಿಗಳ ಶಬ್ದ ಕಲ್ಲುಗಳು ಬಿದ್ದಂತೆ ಭಾಸವಾಗುತ್ತಿತ್ತು.
"ಏನೊ ಹೇಳ್ಬೇಕು ಅಂದ್ಯಲ್ಲ, ಈಗ ಹೇಳು, ಏನಂಥ ಸೀರಿಯಸ್ ವಿಷಯ ?"
"........................................."
"ಏನು ಹೇಳ್ತಿಯೊ ಇಲ್ವೊ? "
"........................................ ಏನೂ ಇಲ್ಲ."
"ಅರೆ ಇದೊಳ್ಳೆ ಕಥೆ ಆಯ್ತಲ್ಲ. ಏನೂ ಇಲ್ದೆ ಮತ್ತೇಕೆ ಕರೆದೆ. ಅಕ್ಷಯ್ ಕುಮಾರ್-ರವೀನಾ ತರ ಮಳೇಲಿ ಡ್ಯೂಯೆಟ್ ಹಾಡ್ಬೇಕು ಅನ್ನಿಸ್ತೇನೆ?" ಅಣಕವಾಡಿದೆ.
ಮಳೆ ಜೋರಾಯಿತು. ಮೈದಾನದಲ್ಲೆಲ್ಲ ತಿಳಿ ಬಿಳಿಯ ಪರದೆಯನ್ನು ಬಿಟ್ಟಂತೆ ಕಂಡುಬಂತು. ನನ್ನ ಮೆಚ್ಚಿನ ಮಳೆಯನ್ನು ನೋಡುತ್ತ ಕ್ಷಣಾರ್ಧದಲ್ಲೆ ಜಗವನ್ನು ಮರೆತು ಮಳೆಯ ಪ್ರಲಾಪದಲ್ಲಿ ಲೀನಗೊಂಡೆ. ಮಳೆ ಒಂದೇ ಸಮನೆ ಹೆಚ್ಚಾಗತೊಡಗಿತು. ಗಾಳಿ ಮೊದಲಿನಷ್ಟು ಇರಲಿಲ್ಲ. ನೋಡನೋಡುತ್ತಿದ್ದಂತೆ ಚರಂಡಿಗಳೆಲ್ಲ ಕೆಂಪು ಮಿಶ್ರಿತ ನೀರಿನಿಂದ ತುಂಬಿ ಹೋದವು. ಮಳೆಯ ರೌದ್ರತೆಗೆ ನನ್ನನ್ನು ನಾನೆ ಕಳೆದುಕೊಂಡೆ. ಐದಾರು ನಿಮಿಷಗಳೆ ಕಳೆದಿರಬೇಕು.
"ಇಲ್ಲಿ ಕೇಳು...................................." ನಾನು ಮಳೆಯ ಮೋಡಿಯಿಂದ ಹೊರಬಂದೆ.
"ಕರೆದ್ಯಾ?........... ಏನೋ ಹೇಳ್ಬೇಕು ಅಂದೆ....." ಅವಳನ್ನು ನೆನಪಿಸಿದೆ.
"......................................." ಅವಳ ಮೌನ ಮತ್ತೆ ಮಳೆಯೆಡೆಗೆ ಗಮನ ಹರಿಸಲು ಅವಕಾಶ ಮಾಡಿಕೊಟ್ಟಿತು.
"ನನ್ನನ್ನು ಮರೆತುಬಿಡು......"
"ಏನು!!!!!.........." ಭ್ರಮಾಲೋಕದಿಂದ ಎಚ್ಚೆತ್ತವನಂತೆ ಪ್ರಶ್ನಿಸಿದೆ.
"ನನ್ನ ಬಳಿ ಸಮಯವಿಲ್ಲ. ಮನೇಲಿ ಸುಳ್ಳು ಹೇಳಿ ಬಂದಿದೀನಿ, ನನ್ನನ್ನು ಮರೆತುಬಿಡು. ನಮ್ಮ ಸಂಭಂದ ಇಲ್ಲಿಗೆ ನಿಲ್ಲಿಸೋಣ" ಅಳತೊಡಗಿದಳು.
"ಏನ್ ತಮಾಷೆ ಮಾಡ್ತೀಯಾ? " ಆತಂಕಗೊಂಡಿದ್ದೆ.
"..........................." ಮತ್ತೆ ಮೌನ. ಕಣ್ಣೀರು ಅವಳ ಕಪಾಲಗಳನ್ನು ತೋಯಿಸಿದ್ದವು.
"......... ಇನ್ನೆರಡು ದಿನಗಳಲ್ಲಿ ನನ್ನ ನಿಶ್ಚಿತಾರ್ಥ. ನನ್ನ ಮನೆಯವರನ್ನು ಎರುರಿಸಲು ನನ್ನಿಂದಾಗಲಿಲ್ಲ. ಕ್ಷಮಿಸಿಬಿಡು" ಬಿಕ್ಕತೊಡಗಿದಳು.
ನನಗೆ ಮಾತೇ ಹೊರಡಲಿಲ್ಲ. ತಲೆ ಸುತ್ತುವಂತೆನಿಸಿ ಗೋಡೆಯನ್ನು ಹಿಡಿದು ಕೂರಲೆತ್ನಿಸಿದೆ. ನನ್ನ ಪರಿಸ್ಥಿತಿಯನ್ನರಿತ ಅವಳು ಹತ್ತಿರ ಬಂದು ಕೈ ಹಿಡಿದುಕೊಂಡಳು.
"ಯಾಕೇ ಹೀಗ್ ಮಾಡ್ದೆ......" ತಡೆಯಲಾರದೆ ಕಣ್ಣೀರು ಜಿನುಗಿತು.
"ಕ್ಷಮಿಸಿಬಿಡೋ................." ಅಪರಾಧಿ ಮನೋಭಾವ ಅವಳಲ್ಲಿತ್ತು.
ನನ್ನ ಕಣ್ಣೀರು ಒರೆಸಿ, ತಾನೂ ಕಣ್ಣೀರು ಒರೆಸಿಕೊಂಡು "ನನಗಿಂತ ಒಳ್ಳೇ ಹುಡುಗಿ ಸಿಕ್ತಾಳೆ ಬಿಡು" ಎಂದು ಸಾಂತ್ವಾನಿಸಿದಳು.
ಸನಿಹ ಬಂದು ಹಣೆಯನ್ನೊಮ್ಮೆ ಚುಂಬಿಸಿ "ಈ ಪಾಪಿನ ಯಾವತ್ತೂ ನೆನಪಿಸಿಕೊಳ್ಳಬೇಡ" ಎಂದು ಹೇಳಿ ಛತ್ರಿ ಬಿಡಿಸಿ ಓಡತೊಡಗಿದಳು. ಮಳೆಗೆ ಇದಾವುದರ ಪರಿವೆಯೇ ಇರಲ್ಲಿಲ್ಲ. ಇಂತಹ ಎಷ್ಟು ಅಂತ್ಯಗಳನ್ನು ಕಂಡಿತ್ತೋ ಈ ಮಳೆ.
ಬಯಲು ದಾಟಿ ಮನೆ ಹಾದಿ ಹಿಡಿದಾಗ ಮಳೆ ತೃಪ್ತಿಗೊಂಡು ನಿಲ್ಲತೊಡಗಿತು. ಒಂದೂವರೆ ವರ್ಷದಿಂದ ಪ್ರೀತಿಯ ಮಳೆಗೈದು ಬೆಳೆಸಿದ್ದ ಸಂಭಂದವನ್ನು ಕೇವಲ ಹತ್ತು ಮಾತಾಡಿ, ನಿಮಿಷಗಳಲ್ಲೇ ಮರೆಯುವುದು, ಭಾವನೆಗಳನ್ನು ಬಟ್ಟೆ ಬದಲಿಸಿದಂತೆ ಬದಲಿಸುವುದು ಸಾಧ್ಯವೇ ಎನ್ನಿಸಿತು. ಕರ್ಚೀಫಿನಿಂದ ಹಿಡಿದು ಪೆನ್ನು, ಪುಸ್ತಕ, ತಿಂಡಿ, ಮನಸ್ಸು, ಭಾವನೆ, ಕನಸುಗಳವರೆಗೆ ಎಲ್ಲವನ್ನೂ ಹಂಚಿಕೊಂಡಿದ್ದ ನಾವು ಇನ್ನು ಮುಂದೆ ಯಾವುದೇ ಸಂಭಂದವಿಲ್ಲದೆ ಬಾಳುವುದನ್ನು ನನಗೆ ಚಿತ್ರಿಸಿಕೊಳ್ಳಲ್ಲೂ ಆಗಲಿಲ್ಲ. ಅವಳಲ್ಲಿ ಈ ಎಲ್ಲಾ ಪ್ರಶ್ನೆಗಳನ್ನೊ ಕೇಳಬೇಕೆಂದೆನಿಸಿ ಕರೆ ಮಾಡಿದೆ. ಆ ಕಡೆಯಿಂದ ಉತ್ತರ ಬರಲಿಲ್ಲ. ಅವಳೂ ಇಂಥದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಳೇನೊ. ಕೊನೆಗೆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ದಿನಕಳೆದ ಹಾಗೆ ಎಲ್ಲವೂ ಭೂತಕಾಲವನ್ನು ಹೊಕ್ಕವು. ಕೆಲವೊಮ್ಮೆ ಇಷ್ಟು ಸುಲುಭವಾಗಿ ಸೋತೆನಲ್ಲ ಎಂದೆನಿಸುತ್ತದೆ. ನಿಜವಾಗಲೂ ಯಾವುದು ಸೋಲು, ಯಾವುದು ಗೆಲುವು ಅನ್ನೊದೆ ಗೊತ್ತಾಗದ ಸ್ಥಿತಿ ತಲುಪಿದ್ದೇನೆ.
ಮಳೆ ನೋಡುತ್ತ ಕಿಟಕಿಯ ಮುಂದೆ ನಿಂತಿದ್ದ ನನಗೆ ಮಳೆ ನಿಂತಿದ್ದು ಅರಿವಿಗೇ ಬರಲಿಲ್ಲ. ಮಳೆ ನಿಂತಿದೆ. ಆದರೆ ನೆಲವೆಲ್ಲಾ ಕೆಸರಾಗಿದೆ. ನನ್ನ ಮನಸೂ ಕೂಡ. ಕೆಸರು ಒಣಗಿ ಗಟ್ಟಿಯಾಗಲು ಇನ್ನೂ ಎರಡು ದಿನಗಳಾದರೂ ಬೇಕು, ಅದೂ ಮತ್ತೊಮ್ಮೆ ಮಳೆ ಬಾರದಿದ್ದರೆ.