Friday, January 29, 2010

ಬರೆಯಬೇಕಿದೆ... ಇಂದಾದರೂ

ಕುಳಿತುಕೊಳ್ಳುವೆ ಏನಾದರೂ ಬರೆಯಲೇಬೇಕೆಂದು
ಪದಗಳು ಅಡಗಿ ಕುಳಿತಿವೆ ಬೆಚ್ಚಗೆ ಪೆನ್ನಿನ ಶಾಯಿಯಲ್ಲಿ
ನನ್ನ ಕವನದಲ್ಲಿನ ದಾರುಣ ಸಾವು ಅವುಗಳಿಗೆ ಬೇಕಿಲ್ಲ
ಒರಗಿದ ಬೆನ್ನಿನ ಭಾರ ತಾಳಲಾರದೆ ಕಿರಗುಟ್ಟುತ್ತಿದೆ ಗೋಡೆಯೂ...

ನಿರ್ವಿಕಾರವಾಗಿ ತನ್ನ ತೆಕ್ಕೆಯಲ್ಲಿ ಭುವಿಯನ್ನು ಸೆಳೆದುಕೊಂಡ ಕತ್ತಲು
ಚಂದಿರನೂ ಕಿಟಕಿಯ ದಾಟಿ ಒಳ ಬರಲು ಹೆದರಿಹನು,
ತಾನೆಲ್ಲಿ ಕವನಕ್ಕೆ ಸ್ಪೂರ್ಥಿಯಾಗುವೆನೋ ಎಂದು ಅವನಿಗೆ
ಬಾಗಿಲ ಸಂದಿಯ ನೆರಳುಗಳು ನನ್ನ ನೋಡಿ ಗಹಗಹಿಸಿವೆ

ಕುಡಿದ ಕಾಫಿಯೂ ಕಂಡಿದೆ ಹೊಟ್ಟೆಯ ತಳವ
ಗಡಿಯಾರದ ಮುಳ್ಳುಗಳು ಮೆಲ್ಲನೆ ನುಣಿಚಿಕೊಳ್ಳುತ್ತಿವೆ
ತಲೆಕೊಡವಿ ಏಳುವೇನು, ಕಚ್ಚುವೆನು ಪೆನ್ನಿನ ತುದಿಯ
ಬೆಳಗೂ ಮೈಮುರಿದು ಆಕಳಿಸತೊಡಗಿದೆ

ನಾನು ಬರೆಯಲಿಲ್ಲ..... ಇಂದೂ
ಗಾಳಿಗೆ ಪಟಪಟಗುಟ್ಟುತ್ತಿರುವ ಹಾಳೆಗಳು ಖಾಲಿ ಖಾಲಿ...

10 comments:

Uma Bhat said...

ಸೊಗಸಾಗಿದೆ ಕವಿತೆ.

Narayan Bhat said...

ಬರೆಯಬೇಕೆಂಬ ತುಡಿತವನ್ನ ವ್ಯಕ್ತಗೊಳಿಸುವದರಲ್ಲಿ ಕವನ ಸಾರ್ಥಕವಾಗಿದೆ - ಕವನ ಚೆನ್ನಾಗಿದೆ.

Rajesh Manjunath - ರಾಜೇಶ್ ಮಂಜುನಾಥ್ said...

ಶರತ್,
ಅಕ್ಷರಶಃ ಇಂತದೆ ಅವಸ್ಥೆ ನನ್ನದು, ಬರೆಯ ಬೇಕು ಅಂದ್ರು, ಬರೆಯಲು ವಿಷಯವಿದ್ದರು, ಭಾವನೆ ಅಕ್ಷರವಾಗಲು ಹಠ ಮಾಡುತ್ತಿವೆ. ಮನಸ್ಸು ಮಂಕಾದಂತಾಗಿದೆ. ನೀವಾದರೂ ಅಕ್ಷರವಾಗಿ....

ದಿವ್ಯಾ ಮಲ್ಯ ಕಾಮತ್ said...

ಆಹಾ! "ಬರೆಯಲಿಲ್ಲ.. ಬರೆಯಬೇಕು.." ಅನ್ನುತ್ತಾ ಬರೆದ ಕವನ ಸೂಪರ್!

Karthik Kamanna said...

ಕವಿ ಹೃದಯ ಏನು ಗೀಚಿದರೂ ಕವಿತೆಯಾಗುತ್ತೆ ಅನ್ನೋದಕ್ಕೆ ಒಳ್ಳೇ ಉದಾಹರಣೆ!

sunaath said...

ಗಾಳಿಯಲ್ಲಿ ಹಾರಿದ ಹಾಳೆಗಳೇ ಕವನದ ಗಾಳಿಪಟವಾಗಿವೆ.

ಶಿವಪ್ರಕಾಶ್ said...

khali khali endu heliye sundara kavite baredirallaaa :)

ಶರಶ್ಚಂದ್ರ ಕಲ್ಮನೆ said...

ಉಮಾ ಅವರೇ,
ಕವನವನ್ನು ಓದಿ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು

ನಾರಾಯಣ ಭಟ್ ಅವ್ರೆ,
ಕವನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನನಗೂ ಕವನ ಕವಿತೆಗಳಿಗೂ ಬಹಳ ದೂರ... ನನ್ನ ಕವನಗಳು ನನಗೇ ಬಾಲಿಶವೆನಿಸುತ್ತವೆ. ಇದೊಂದು ಪ್ರಯತ್ನವಷ್ಟೇ :) ಹೀಗೆ ಭೇಟಿ ನೀಡುತ್ತಿರಿ

ರಾಜೇಶ್,
ನಿಮ್ಮ ಬ್ಲಾಗ್ ಅಪ್ ಡೇಟ್ ಆಗೋದನ್ನೇ ಕಾಯುತ್ತ ಇದ್ದೀನಿ ನಾನು. ಬಹಳ ದಿನಗಳ ಬರಹಗಳು ಬಾಕಿ ಇವೆ... ಬೇಗ ಬರೆಯಿರಿ. ಮನದ ಗೊಂದಲಗಳನ್ನೆಲ್ಲಾ ಬದಿಗಿಟ್ಟು ಆರಾಮಾಗಿ ಬರೆಯಿರಿ :)

ದಿವ್ಯ,
ಧನ್ಯವಾದಗಳು. ಬರೆಯಲು ಆಗುತ್ತಿಲ್ಲವಲ್ಲ ಅನ್ನೋದನ್ನೇ ಯೋಚನೆ ಮಾಡುತ್ತಾ ಕುಳಿತಾಗ ಇದರ ಬಗ್ಗೆಯೇ ಬರೆದರೆ ಹೇಗೆಂದು ಬರೆದೆ...

ಕಾರ್ತಿಕ್ ಅವರೇ,
ಕವಿ ಹೃದಯವು ಇಲ್ಲ ಮಣ್ಣೂ ಅಲ್ಲ... ಸುಮ್ನೆ ಬರ್ದಿದ್ದು ಕಣ್ರೀ... ನನ್ನ ಬ್ಲಾಗಿನ ಕಡೆ ಕಣ್ಣು ಹಾಯಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. :)

ಸುನಾಥ್ ಸರ್,
ಇದೊಂದು ಪ್ರಯತ್ನವಷ್ಟೇ... :)

ಶಿವಪ್ರಕಾಶ್ ಸರ್,
ಸುಂದರ ಕವನ ಅಂತ ನೀವು ಹೇಳಿದ್ಮೇಲೆ ಗೊತಾಗಿದ್ದು :)

ಸಾಗರದಾಚೆಯ ಇಂಚರ said...

ಚೆನ್ನಾಗಿದೆ ಕವನ

ಏಕಾಂತ said...

ಹಾಯ್ ಶರತ್...
ಎಂದೂ ಬರೆಯದ ಕವಿತೆ ಎಂದರೆ ಇದೇ ಇರಬೇಕು. ಕೆಲವೊಮ್ಮೆ ನನಗೂ ಅನಿಸಿದ್ದುಂಟು ಅಪರೂಪಕ್ಕೆ ಬರೆದರೇನೇ ಅಪಾರ ಪ್ರೀತಿ ಹುಟ್ಟೋದು. ಮತ್ತೆ ಬರೆಯಿರಿ. ಪ್ರೊಫೈಲ್ ಚಿತ್ರ ಚೆನ್ನಾಗಿದೆ. ಸಿಗೋಣ.