ನರಸಿಂಹ ಪರ್ವತ ಆಗುಂಬೆ ಹಾಗು ಶೃಂಗೇರಿಯ ಮಧ್ಯೆ ಹರಡಿಕೊಂಡಿರುವ ಪರ್ವತ ಶ್ರೇಣಿಗಳಲ್ಲಿ ಒಂದು. ನರಸಿಂಹ ಪರ್ವತ ಹತ್ತಬೇಕೆಂದು ಈಗೊಂದು ವರ್ಷದಿಂದ ಎಣಿಕೆ ಹಾಕುತ್ತ ಕುಳಿತಿದ್ದೆ. ಗೆಳೆಯ ಜಿತೇಂದ್ರ ಹಾಗು ಅರುಣ ಇಬ್ಬರೂ ಎಲ್ಲಾದರೂ ಟ್ರೆಕ್ಕಿಂಗ್ ಹೋಗೋಣ ಎಂದಾಗ ನರಸಿಂಹ ಪರ್ವತವನ್ನು ಸೂಚಿಸಿದೆ. ಎಂದಿನಂತೆ ನಾಲ್ಕಾರು ಬೇರೆ ಸ್ಥಳಗಳ ಪರಿಶೀಲನೆ ನಡೆದು, ಅದು ಬೇಡ-ಇಲ್ಲಿ ಮಳೆ- ಮತ್ತೊಂದು ನೋಡಿದ ಜಾಗ ಅಂತೆಲ್ಲ ಮಾತನಾಡುತ್ತಿರುವಾಗ ಮತ್ತೊಬ್ಬ ಗೆಳೆಯ ಪ್ರವೀಣ್ ಕರೆ ಮಾಡಿ ಅವರು ಹೋಗಬೇಕೆಂದಿದ್ದ ನರಸಿಂಹ ಪರ್ವತ ಚಾರಣಕ್ಕೆ ನಾಲ್ಕು ಜನ ಬರುತ್ತಿಲ್ಲವೆಂದೂ, ನೀವು ಜೋತೆಯಾಗುವಿರೋ ಎಂದು ಕೇಳಿದ. (ಇದೆ ಸಮಯದಲ್ಲಿ ಪ್ರವೀಣನೂ ಅವನ ಗೆಳೆಯರೊಂದಿಗೆ ನರಸಿಂಹ ಪರ್ವತ ಚಾರಣಕ್ಕೆ ಪ್ಲ್ಯಾನ್ ಮಾಡಿದ್ದ).
ಆಗ ಜಾಗದ ಆಯ್ಕೆ ಕಾರ್ಯಕ್ರಮವನ್ನು ಅಲ್ಲಿಗೆ ನಿಲ್ಲಿಸಿ ಪ್ರವೀಣನ ಜೊತೆಗೂಡಲು ತೀರ್ಮಾನ ಕೈಗೊಂಡೆವು. ಪ್ರವೀಣ್ ಆಗಲೇ ಉಳಿಯುವ ಹಾಗು ಆಹಾರದ ವ್ಯವಸ್ಥೆ ಮಾಡಿದ್ದರಿಂದ ನಮಗೆ ಸಿದ್ದತೆಯ ತಲೆಭಾರವೂ ಕಡಿಮೆಯಾಯಿತು.
ನಾವು ನಾಲ್ವರು ( ನಾನು, ಅರುಣ, ಜಿತೇಂದ್ರ, ಹಾಗು ವಿನಾಯಕ) ಪ್ರವೀಣ ಹಾಗು ಅವನ ಸ್ನೇಹಿತರಾದ ವಿನಯ್ ಹಾಗು ಸಂತೋಷ್ ಅವರನ್ನು ಮಜೆಸ್ಟಿಕ್ ನಲ್ಲಿ ಸೇರಿಕೊಂಡೆವು. ಪ್ರವೀಣನ ಇನ್ನೊಬ್ಬ ಗೆಳೆಯ ಸುಬ್ರಮಣ್ಯ ಹಾಸನದಲ್ಲಿ ಸೇರಿಕೊಳ್ಳುತ್ತಾನೆ ಎಂಬುದು ಮೊದಲೇ ನಿಗದಿಯಾಗಿತ್ತು.
ಇನ್ನೇನು ಹೊರಟೆಬಿಟ್ಟಿತು ಎಂದು ನಮ್ಮನ್ನು ಬಸ್ ಹತ್ತಿಸಿದ ಕಂಡಕ್ಟರ್ ಬಸ್ ಇಳಿದು ಹೋದವನು ಅದೃಶ್ಯನಾಗಿ ಹೋದ. ಮಜೆಸ್ಟಿಕ್ ಬಸ್ ಸ್ಟ್ಯಾಂಡ್ ಎಂಬ ಸಂತೆಯಲ್ಲಿ ಡ್ರೈವರ್ ಗಳ ಜಗಳ-ಬೈದಾಟ ನೋಡುತ್ತಾ ನಾವೂ ನಗುತ್ತಾ, ಹರಟುತ್ತಾ, ನಮ್ಮ ಬಸ್ ಡ್ರೈವರ್ ನನ್ನು ಕಿಚಾಯಿಸುತ್ತಾ ಸ್ವಲ್ಪ ಸಮಯ ಕಾಲ ಹರಣ ಮಾಡಿದೆವು. ಇಷ್ಟು ಹೊತ್ತಾದರೂ ಕಂಡಕ್ಟರ್ ಬರದೆ ಇದ್ದುದ್ದನ್ನು ನೋಡಿ ಬೇಸತ್ತು ಜಿತೇಂದ್ರ ಕಂಡಕ್ಟರ್ ನನ್ನು ಹುಡುಕಿ ತರುವೆನೆಂದು ಬಸ್ ಇಳಿದು ಹೋದ. ಅವನು ಹೋದ ಸ್ಟೈಲ್ ನೋಡಿ ಇವನೆಲ್ಲಿ ಕಂಡಕ್ಟರ್ ಗೆ ಥಳಿಸಿ ಎಳೆದುಕೊಂಡು ಬರುವನೋ ಎಂದು ಹೆದರಿದೆ. ಕೊನೆಗೂ ಕಂಡಕ್ಟರ್ ಬಂದು ಬಸ್ ಹೊರಡುವ ವೇಳೆಗೆ ಗಡಿಯಾರ ೧೦.೪೫ ತೋರಿಸುತ್ತಿತ್ತು. ೯ ಗಂಟೆಗೆ ಹೊರಡಬೇಕಾದ ನಾವು ಸರಿಯಾಗಿ ಒಂದೂ ಮುಕ್ಕಾಲು ಗಂಟೆ ತಡವಾಗಿ ಹೊರಟಿದ್ದೆವು.
ಹಾಗೂ ಹೀಗೂ ಬಸ್ ಹೊರಟ ನಂತರ ನಮ್ಮ ಹೊಸ ಗೆಳೆಯರ ಪರಿಚಯ, ಹರಟೆ, ಜೋಕುಗಳ ಮಧ್ಯೆ ಒಂದು ನಿದ್ದೆ ತೆಗೆಯುವ ಎಂದು ನಿದ್ದೆಗೆ ಜಾರುವಷ್ಟರಲ್ಲೇ ಬಸ್ಸನ್ನು ಬದಿಯಲ್ಲಿರುವ ಡಾಬದ ಕಡೆಗೆ ತಿರುಗಿಸಿದ ಡ್ರೈವರ್. ಸರಿ, ಒಂದು ಕಾಫಿನೋ, ಟೀನೋ ಹೊಟ್ಟೆಗೆ ಹಾಕಿ ಮಲಗಿದರಾಯಿತು ಎಂದು ನಾವೆಲ್ಲರೂ ಇಳಿದೆವು. ಬೆಳಗ್ಗಿನಿಂದ ಒಲೆಯಲ್ಲಿ ಕುದ್ದು ವಿಚಿತ್ರ ರುಚಿ ಪಡೆದಿದ್ದ ಟೀ ಕುಡಿದು ನಮ್ಮಲ್ಲಿ ನಾಲ್ವರು ಕೃತಾರ್ತರಾದೆವು, ಉಳಿದ ಮೂವರು ಏನೂ ಕುಡಿಯದೆ ಜಾಣರಾದರು.
ಬಸ್ ಹತ್ತಿ ಮಲಗಲು ಸಿದ್ಧತೆ ನಡೆಸುತ್ತಿರುವಾಗಲೇ ಕಂಡಕ್ಟರ್ ಬಂದು ಡ್ರೈವರ್ ನ ಕಿವಿಯಲ್ಲಿ ಏನೋ ಉಸುರಿ ಹೋದ. ಅದರ ಬೆನ್ನಲ್ಲೇ ಪ್ರಯಾಣಿಕರ ಸೀಟಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಬಂದು ಡ್ರೈವರ್ ಸೀಟನ್ನು ಆಕ್ರಮಿಸಿದ್ದೂ, ಡ್ರೈವರ್ ಹೋಗಿ ಕೊನೆಯ ಸೀಟಿನಲ್ಲಿ ಮಲಗಿದ್ದೂ ನೋಡಿ ನಾವೆಲ್ಲಾ ಹೌಹಾರಿದೆವು. ಕೊನೆಗೆ ಲೈಟ್ ಎಲ್ಲಾ ನಂದಿಸಿದ ಮೇಲೂ ಎಲ್ಲರೂ ಮಲಗಿದ ಹಾಗೆ ನಟಿಸಿದರೆ ಹೊರತು ಯಾರೂ ಮಲಗಲಿಲ್ಲ. ಆಗಾಗ ನಮ್ಮ ಬಸ್ ನ "ಹೊಸ" ಚಾಲಕ ಗೇರ್ ಬದಲಿಸಲು ಹೆಣಗಾಡುತ್ತಾ, ಕೆಲವೊಮ್ಮೆ ಶಕ್ತಿ ಸಾಲದೇ ಸ್ಟೇರಿಂಗ್ ಇಂದ ಕೈ ತೆಗೆದು ಎರಡೂ ಕೈ ಉಪಯೋಗಿಸಿ ಗೇರ್ ಬದಲಿಸುತ್ತಿದ್ದದ್ದು ನೋಡಿದ ಮೇಲೂ ಯಾರಿಗೂ ನಿದ್ದೆ ಹತ್ತದೆ ಇದ್ದದ್ದು ಆಶ್ಚರ್ಯವೇನೂ ಆಗಲಿಲ್ಲ. ನಾವೆಲ್ಲರೂ ಮಲಗಲು ಶತಪ್ರಯತ್ನ ಮಾಡುತ್ತಾ ತೂಕಡಿಸುತ್ತಾ ಇರುವಾಗಲೇ ಹಾಸನ ಬಂದಿತು. ಎಲ್ಲರೂ ಧರ್ಮಸ್ಥಳದ ಮಂಜುನಾಥನಿಗೆ ಮನದಲ್ಲೇ ವಂದಿಸಿ ಬಸ್ ಇಳಿದೆವು. ಹಾಸನ ಬಸ್ ನಿಲ್ದಾಣದ ಹತ್ತಿರದಲ್ಲೇ ಗೆಳೆಯ ಸುಬ್ಬು ನಮ್ಮ ಆಗಮನಕ್ಕೆ ತನ್ನ ಜೀಪಿನಲ್ಲಿ ಕಾಯುತ್ತ ಇದ್ದ. ಜೀಪ್ ಹತ್ತಿದ ಮೇಲೆ ನನಗೆ ನಿದ್ದೆ ಹತ್ತಿತು.
ಮುಂದುವರೆಯುವುದು...
8 comments:
ಶರತ್,
ನರಸಿಂಹ ಪರ್ವತ ಚಾರಣದ ಮೊದಲು ಕಂತು ಓದಿಸಿಕೊಂಡು ಹೋಯ್ತು. ಮುಂದಿನ ಕಂತಿಗೆ ಕಾಯುತ್ತಾ..
ಟೀ ಕುಡಿದವರು ಏನಾದರು ಅಂತಾ ನೀವು ತಿಳಿಸಲಿಲ್ಲ :)
ಶರು, ಚೆನ್ನಾಗಿದೆ ನಿಮ್ಮ ಚಾರಣ ಕಥನದ ಆದಿಭಾಗ, ಮು೦ದುವರಿಸಿ, ಯಾವುದೇ ಉತ್ಪ್ರೇಕ್ಷೆಗಳಿಲ್ಲದೆ ಸಹಜ ಶೈಲಿಯಲ್ಲಿದೆ. ಮು೦ದಿನ ಭಾಗವನ್ನು ಓದಲು ಉತ್ಸುಕ ನಾಗಿದ್ದೇನೆ. ಹೊಸ ವರ್ಷದ ಶುಭಾಶಯ
ಶರತ್,
ಚಾರಣದ ಪ್ರಾರಂಭ ಸೊಗಸಾಗಿದೆ. ಪ್ರತಿಯೊಂದನ್ನೂ ವಿವರವಾಗಿ ಬರದ್ದೆ..:-)
ಮುಂದಿನ ಭಾಗ ಬೇಗನೆ ಬರಲಿ.
-ಪ್ರಶಾಂತ್
ಗೆಳೆಯರ ಗುಂಪು ಸೇರಿ ಚಾರಣ ಕೈಗೊಳ್ಳುವ ಖುಶಿಯೇ ಬೇರೆ ತರಹದ್ದು! ನರಸಿಂಹ ಪರ್ವತ ಚಾರಣಕ್ಕೆ ಉತ್ಸುಕನಾಗಿ ಎದುರು ನೋಡುತ್ತಿದ್ದೇನೆ.
ನನ್ನ ಇಷ್ಟದ ವಿಚಾರದ ಬಗ್ಗೆ ಬರೆದಿದ್ದೀರಿ , ಮೊದಲ ಕಂತು ಚೆನ್ನಾಗಿ ಮೂಡಿದೆ , ನನ್ನ ಕಾಡಿನ ಅನುಭವ ಸಂಚಿಕೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.ಹೊಸ ವರ್ಷದ ಶುಭಾಶಯಗಳು.
ಚಾರಣದ ಅನುಭವವೇ ಹಾಗೆ.. ಎತ್ತರದ ಪ್ರದೇಶದಲ್ಲಿನಿಂತು ಪ್ರಕೃತಿಯ ಸೌಂದರ್ಯ ಸವಿಯುವುದೇ ಒಂದು ಆನಂದ, ಚಾರಣದ ಮುಂದಿನ ಭಾಗ ಯಾವಾಗ ? ಕಾಯ್ತಾ ಇದ್ದಿ... ಅನುಭವಗಳ ಜೊತೆಗೆ ಒಂದಿಷ್ಟು ಒಳ್ಳೆಯ ಛಾಯಾಚಿತ್ರಗಳನ್ನು ಹಾಕು.. ಬೇಗ ಒಂದ್ವರ್ಷ ಆಗ್ಯೋತು ನಿನ್ನ ಮೊದಲನೆ ಭಾಗ ಬರೆದು :) ಬೇಗ ಬರಿಯೋ...
ಶರತ್,
ನಮ್ಮೂರಿಗೆ ಚಾರಣಕ್ಕೆ ಹೋಗಿ ಬಂದಿದ್ದೀರಾ,
ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೀರಾ. ಅನುಭವ ಚನ್ನಾಗಿತ್ತೆಂದೇ ಅಂದುಕೊಂಡಿದ್ದೇನೆ.
ಆದರೆ ಇದುವರೆಗೂ ಒಂದು ಸತ್ಯ ಅರ್ಥವಾಗದೇ ಮನದಲ್ಲೇ ಉಳಿದಿದೆ.
ಕಂಡಕ್ಟರ್ ಒಂದೂ ಮುಕ್ಕಾಲು ಘಂಟೆ ಕಾಣೆಯಾಗಿ ಹೋಗಿದ್ದೆಲ್ಲಿಗೆ?
ಹ್ಹ ಹ್ಹ ಹ್ಹಾ.........
ಶರತ್,
ಓದ್ತಾ ಇದ್ರೆ ಮತ್ತೊಮ್ಮೆ ನರಸಿಂಹ ಪರ್ವತಕ್ಕೆ ಹೊರಟ ಹಾಗೆ ಇದೆ...
Post a Comment