ನನ್ನ ಕಾಲಿಗೆ ಮುತ್ತಿದ್ದ ಉಂಬಳಗಳನ್ನೂ ನೋಡಿ, ಪರ್ವತ ಏರುವ ಹೊತ್ತಿಗೆ ಯಾರಾದರು ನನಗೆ ಒಂದು ಬಾಟಲಿ ರಕ್ತ ನೀಡುವ ವ್ಯವಸ್ಥೆ ಇದ್ದಿದ್ದರೆ ಚನ್ನಾಗಿರುತ್ತಿತ್ತು ಎನ್ನುವ ಭಯ ಕಾಡತೊಡಗಿತ್ತು. ಆಗಾಗ ಕೃಷ್ಣಪ್ಪನಲ್ಲಿ ಇನ್ನೂ ಎಷ್ಟು ದೂರದಲ್ಲಿ ಬಯಲು ಪ್ರದೇಶ ಸಿಗಬಹುದು ಎಂದು ಕೇಳುತ್ತಾ ನಮ್ಮ ರಕ್ತದಾನದ ಮೊತ್ತ ಎಷ್ಟಾಗಬಹುದು ಎಂದು ಪ್ರತಿಯೊಬ್ಬರೂ ಗುಣಾಕಾರ-ಭಾಗಾಕಾರದಲ್ಲಿ ತೊಡಗಿದರು.
ಈಗ ದಟ್ಟ ಕಾಡಿನ ಜೊತೆಗೆ ನಾವು ಗುಡ್ಡವನ್ನು ಏರುತ್ತಿದ್ದರಿಂದ ಚಾರಣ ಬಹು ಕಷ್ಟ ಎನ್ನಿಸತೊಡಗಿತ್ತು. ಬರ್ಕಣ ಜಲಪಾತದ ಹತ್ತಿರ ತುಂಬಿಕೊಂಡಿದ್ದ ನೀರೆಲ್ಲಾ ನಿಧಾನವಾಗಿ ಖಾಲಿಯಾಗುತ್ತಿದ್ದದ್ದು ನಮ್ಮ ಗಮನಕ್ಕೆ ಬಾರದೆ ಹೋಯಿತು. ಆಗುಂಬೆಯ ಕಾಡಿನ ಕಾಳಿಂಗ ಸರ್ಪದ ಬಗ್ಗೆ ನ್ಯಾಷನಲ್ ಜಿಯಾಗ್ರಫಿಕ್ ನಲ್ಲಿ ಬಂದಿದ್ದ ಕಾರ್ಯಕ್ರಮದ ಬಗ್ಗೆ ಹಠಾತ್ತಾಗಿ ನೆನಪಾಗಿ ಒಮ್ಮೆ ಕಾಲು ಬುಡದಲ್ಲೆಲ್ಲ ನೋಡಿಕೊಂಡೆ. ಸ್ವಲ್ಪ ದೂರದವರೆಗೂ ನಾವು ಅದರ ಬಗ್ಗೆಯೇ ಮಾತನಾಡುತ್ತ ನಡೆದೆವು. ಅಕ್ಕ ಪಕ್ಕದ ಬಳ್ಳಿಗಳೆಲ್ಲ ಕಾಳಿಂಗ ಸರ್ಪಗಳಾಗೆ ಕಾಣತೊಡಗಿದವು.
ಮುಂದಿನ ಕೆಲವು ನಿಮಿಷಗಳಲ್ಲಿ ಯಾರೂ ಮಾತನಾಡದೆ ಸುಮ್ಮನೆ ನಡೆದರು. ಮೌನ ಮುರಿಯಲು ಪ್ರವೀಣ್ "ಅಲ್ರೋ ಆ ಅಜ್ಜಿ, ಮನೆಯಲ್ಲಿ ತನ್ನ ಜೊತೆಗೆ ತನ್ನ ತಾಯಿಯೂ ಇರುತ್ತಾರೆ, ಆದರೆ ಲೆಕ್ಕಕ್ಕೆ ತಾನೊಬ್ಬಳೆ ಎಂದರಲ್ಲ ಅದು ಯಾವ ಲೆಕ್ಕ ಎಂದು ಗೊತ್ತಾಗಲಿಲ್ಲ" ಎಂದ. ತಮ್ಮದೇ ಯೋಚನೆಗಳಲ್ಲಿ ಮುಳುಗಿದ್ದ ನಾವೆಲ್ಲರೂ ಅವನ ತರ್ಕ ಕೇಳಿ ಗೊಳ್ಳನೆ ನಕ್ಕೆವು. ವಿನಯ್ ಹಾಗು ಸಂತೋಷ್ ಮೆಣಸಿನ ಚಟ್ನಿಯ ಅಥೆಂಟಿಸಿಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅಸಲಿಗೆ ಮೆಣಸಿನ ಚಟ್ನಿಗೆ ಮೆಣಸಿನಕಾಯಿ ಉಪಯೋಗಿಸಿಯೇ ಇರಲಿಲ್ಲ, ಮೆಣಸಿನ ಗಿಡದ ಎಲೆಗಳನ್ನೇ ರುಬ್ಬಿ ಚಟ್ನಿ ಮಾಡಲಾಗಿದೆ ಎನ್ನುವ ಸತ್ಯವನ್ನು ನಾವು ಮನಗಂಡೆವು. ಕಿಡಿ ತಾಕಿದ ಪಟಾಕಿ ಸರದಂತೆ ಎಲ್ಲರೂ ಮಾತನಾಡತೊಡಗಿದರು. ಹೀಗೆ ಎಷ್ಟು ದೂರ ನಡೆದೆವೋ ಏನೋ, ಕೊನೆಗೆ ೨.೧೫ ರ ಸುಮಾರಿಗೆ ಒಂದು ಹುಲ್ಲುಬಯಲ ಜಾಗ ತಲುಪಿದೆವು. ಇನ್ನು ಮುಂದೆ ಎಲ್ಲೂ ಕಾಡು ಸಿಗುವುದಿಲ್ಲ, ಬರಿ ಬೆಟ್ಟಗಳು ಎಂದು ಕೃಷ್ಣಪ್ಪನಿಂದ ಕನ್ಫರ್ಮ್ ಆದ ಮೇಲೆ ಕಾಲೇರಿ ಸುಖವಾಗಿ ರಕ್ತ ಹೀರುತ್ತಿದ್ದ ಉಂಬಳಗಳಿಗೆ ಮುಕ್ತಿ ಕಾಣಿಸೋಣ ಎಂದು ಕುಳಿತೆವು. ಬೆಳಗ್ಗಿನಿಂದ ಒಟ್ಟಿನಲ್ಲಿ ನನ್ನ ಕೌಂಟ್ ೧೬ಕ್ಕೆ ಏರಿತ್ತು.
ಕಾಲನ್ನು ಉಂಬಳ ಮುಕ್ತಗೊಳಿಸಿ ಸ್ವಲ್ಪ ವಿಶ್ರಮಿಸಿಕೊಂಡು ಹೊರೆಟಾಗಲೇ ನಮಗೆ ಅರಿವಾಗಿದ್ದು ನಮ್ಮಲ್ಲಿ ಅತ್ಯಲ್ಪ ನೀರು ಉಳಿದಿದೆಯೆಂದು. ಕೃಷ್ಣಪ್ಪನಲ್ಲಿ ಮುಂದೆ ಎಲ್ಲಿ ನೀರು ಸಿಗಬಹುದು ಎಂದು ಕೇಳಿದೆವು. ಇನ್ನು ಪರ್ವತದ ತುದಿಯಲ್ಲಿ ಅಲ್ಲದೆ ಬೇರೆಲ್ಲೂ ನೀರು ಸಿಗುವುದಿಲ್ಲ ಎಂದು ತಿಳಿದು ಎಲ್ಲರೂ ಬಿಳಿಚಿಕೊಳ್ಳತೊಡಗಿದರು. ಆಗಲೇ ನೆತ್ತಿ ಏರಿ ಕುಳಿತಿದ್ದ ಸೂರ್ಯ ನೀರಿಲ್ಲದ ನಮ್ಮನ್ನು ನೋಡಿ ಅಣಕಿಸಿದಂತೆ ಕಂಡಿತು.
ಕಾಡಿನಿಂದ ಹೊರಬಿದ್ದಿದ್ದ ನಮಗೆ ಇಲ್ಲಿನ ದೃಶ್ಯಗಳು ಚೇತೋಹಾರಿಯಾಗಿದ್ದವು. ಈಗ ಉಂಬಳಗಳ ಬಗ್ಗೆ ಭಯಪಡುವ ಅಗತ್ಯವೂ ಇರಲಿಲ್ಲ. ಮುಗಿಲನ್ನೆ ಬಗ್ಗಿಸುವ ತವಕದಲ್ಲಿದ್ದಂತೆ ಕಾಣುತ್ತಿದ್ದ ಎತ್ತರದ ಪರ್ವತ ಶ್ರೇಣಿಗಳು, ಕಂಡಷ್ಟು ದೂರಕ್ಕೂ ತುಂಬಿದ್ದ ಹಸಿರು, ನೀಲಾಗಸ, ತಣ್ಣನೆಯ ಗಾಳಿ ಎಲ್ಲವೂ ನಮ್ಮ ದಣಿವನ್ನು ಕ್ಷಣ ಮಾತ್ರದಲ್ಲಿ ಮರೆಯಾಗಿಸಿತ್ತು. ಇಷ್ಟು ಹೊತ್ತು ಸುಮ್ಮನಿದ್ದ ನಮ್ಮ ಕ್ಯಾಮೆರಾಗಳು ಕಾರ್ಯೋನ್ಮುಖವಾದವು.
ಹೀಗೆ ಮಾತಾಡುತ್ತ, ಫೋಟೋ ತೆಗೆಯುತ್ತಾ, ಒಂದೆರಡು ಗುಡ್ಡಗಳನ್ನು ಹಾಡು ಒಂದು ಎತ್ತರದ ಗುಡ್ಡದ ಬುಡಕ್ಕೆ ಬಂದೆವು. "ಈ ಗುಡ್ಡವನ್ನು ದಾಟಿದರೆ ಅದರ ಹಿಂದಿರುವುದೇ ನರಸಿಂಹ ಪರ್ವತ" ಎಂದು ಕೃಷ್ಣಪ್ಪ ಹೇಳಿದ. ನೀರಿಲ್ಲದೆ ನಾವೆಲ್ಲಾ ಬಸವಳಿದಿದ್ದೆವು. ಮತ್ತೊಮ್ಮೆ ಸ್ವಲ್ಪ ವಿಶ್ರಮಿಸಿಕೊಂಡು ಗುಡ್ಡವನ್ನು ಏರಲು ಶುರು ಮಾಡಿದೆವು. ಆದಷ್ಟು ಬೇಗ ತುದಿಯನ್ನು ತಲುಪುವ ಯೋಚನೆಯಲ್ಲಿದ್ದ ನನ್ನ ಎಣಿಕೆ ಸಂಪೂರ್ಣ ತಲೆಕೆಳಗಾಯಿತು. ಗುಡ್ಡದ ಇಳುಕಲು ಸುಮಾರು ೫೫ ರಿಂದ ೬೫ ಡಿಗ್ರಿ ಇತ್ತು. ಒಂದೊಂದು ಹೆಜ್ಜೆ ಇಡುವುದೂ ದುಸ್ತರವಾಗಿತ್ತು. ಬೆನ್ನಿಗೆ ಚೀಲದ ಭಾರ ಹಾಗು ೬೫ ಡಿಗ್ರಿಯಷ್ಟು ಇಳುಕಲಿದ್ದ ಗುಡ್ದದಿಂದಾಗಿ ಕಾಲುಗಳು ಥರಗುಟ್ಟಿದವು. ಕೇವಲ ಒಂದು ಸ್ಟ್ರೆಚ್ ಇದ್ದ ಗುಡ್ಡವನ್ನು ಏರಲು ನಾನು ಎರಡು ಬಾರಿ ಕೂತು ಸುಧಾರಿಸಿಕೊಳ್ಳಬೇಕಾಯಿತು. ಇದುವರೆಗೆ ಮಾಡಿದ ಪ್ರಯಾಣ ಒಂದು ಸವಾಲಾದರೆ, ಈ ಗುಡ್ಡವೇ ಇನ್ನೊಂದು ಸವಾಲು. ಉಸಿರು ಎಳೆದುಕೊಳ್ಳಲೂ ನಾವೆಲ್ಲಾ ಪರದಾಡಬೇಕಾಯಿತು. ಕೊನೆಗೂ ತುದಿ ತಲುಪಿ, ಒಂದು ಸಣ್ಣ ಕಾಡು ದಾಟಿ ನರಸಿಂಹ ಪರ್ವತದ ನೆತ್ತಿಯನ್ನು ತಲುಪಿಯೇ ಬಿಟ್ಟೆವು. ಸಮಯ ೪ ಗಂಟೆ ಆಗಿತ್ತು.
ಎಲ್ಲರೂ ನೀರು ಸಿಗುತ್ತದೆ ಎಂಬ ಖುಷಿಯಲ್ಲಿ ನೆತ್ತಿಗೆ ಓಡಿದರೆ ಅಲ್ಲಿದ್ದದ್ದು ಮಳೆಗಾಲದಲ್ಲಿ ನೀರು ನಿಂತ ಹೊಂಡವಾಗಿತ್ತು. ಆ ನೀರು ಯಾವುದೇ ರೀತಿಯಲ್ಲಿಯೂ ಕುಡಿಯಲು ಯೋಗ್ಯವಾಗಿರಲಿಲ್ಲ. ಕುಡಿಯಲು ಬಿಡಿ, ಮುಖ ತೊಳೆಯಲೂ ಅಯೋಗ್ಯವಾಗಿತ್ತು. ನಮ್ಮ ಆಸೆಯಲ್ಲ ಬತ್ತಿ ಹೋಯಿತು. ಸ್ವಲ್ಪ ಹೊತ್ತು ಎಲ್ಲರೂ ಸುಮ್ಮನೆ ಮಲಗಿದರು. ಬೇರೆ ಯಾರಾದರೂ ನೋಡಿದ್ದರೆ ಇದೊಂದು "ಸಾಮೂಹಿಕ ಶಾವಾಸನ" ಎಂದುಕೊಳ್ಳುತ್ತಿದರೋ ಏನೋ ಆ ರೀತಿಯಲ್ಲಿ ಎಲ್ಲರೂ ಬಿದ್ದುಕೊಂಡಿದ್ದೆವು. ಬೇರಾವುದೇ ದಾರಿ ಕಾಣದೆ ನಾವು ತಂದಿದ್ದ ರೊಟ್ಟಿ-ಚಪಾತಿ-ಚಟ್ನಿಗಳನ್ನು ತೆಗೆದೆವು. ವಿಪರೀತ ಹಸಿವಾದ್ದರಿಂದ ರೊಟ್ಟಿ-ಚಟ್ನಿ ಅಮೃತದಂತೆ ಅನ್ನಿಸಿತ್ತು. ಆವರಿಸಿಕೊಳ್ಳುತ್ತಿದ್ದ ಮೋಡ ತಂಪು ನೀಡಿತ್ತು.
ಊಟ ಮುಗಿಸಿ ಮತ್ತಷ್ಟು ಆರಾಮು ಮಾಡಿ ನಮ್ಮ ಅವರೋಹಣವನ್ನು ಪ್ರಾರಂಭಿಸಿದೆವು. ಈ ಹಾದಿ ನಾವು ಹತ್ತಿದ ದಾರಿಗೆ ತೀರಾ ವ್ಯತಿರಿಕ್ತವಾಗಿತ್ತು. ಇಲ್ಲಿ ಕಾಲು ಹಾದಿ ಇತ್ತು. ಉಂಬಳಗಳು ಇರಲಿಲ್ಲ. ಸುಲಭವಾಗಿ ಇಳಿಯಲು ಹೇಳಿ ಮಾಡಿಸಿದಂತಿತ್ತು. ಸುಮಾರು ೬ ಗಂಟೆಯ ಹೊತ್ತಿಗೆ ನಾವು ಕಿಗ್ಗಾ ಎಂಬ ಊರನ್ನು ತಲುಪಿದೆವು. ಅಲ್ಲಿ ನಮ್ಮನ್ನು ಹೊತ್ತೊಯ್ಯಲು ಸುಬ್ಬುವಿನ ಜೀಪು ತಯಾರಾಗಿತ್ತು.
ಕೊನೆಯಲ್ಲಿ : ದೊಡ್ಮನೆಯ ತಿಂಡಿ ಹಾಗು ಅಜ್ಜಿಯ ಘಟನೆಗಳನ್ನು ಸ್ವಲ್ಪ ಹಾಸ್ಯಮಯವಾಗಿ ಬರೆದಿದ್ದೇನೆ. ಜೋಕ್ಸ್ ಅಪಾರ್ಟ್, ಹೊಸ್ತಿಲು ದಾಟಲಾಗದ ಆ ವೃದ್ದೆ ತಿಂಡಿ ಮಾಡಿ ಹಾಕುವುದೂ ಕಷ್ಟದ ಕೆಲಸವೇ. ನಮ್ಮ ಗ್ರಹಚಾರಕ್ಕೋ ಏನೋ ಅಂದಿನ ತಿಂಡಿಗಳು ಚನ್ನಾಗಿರಲಿಲ್ಲ. ಹಾಗೆಂದು ಅಲ್ಲಿಯ ತಿಂಡಿ ಕೆಟ್ಟದಾಗೆ ಇರುತ್ತದೆ ಎಂದು ನಾನು ಹೇಳಲಾರೆ. ಮತ್ತೊಂದು ವಿಷಯವೆಂದರೆ, ನರಸಿಂಹ ಪರ್ವತದಂತಹ ಕಠಿಣ ಚಾರಣದ ಜಾಗಗಳಲ್ಲಿಯೂ ತಿಂದು ಬಿಟ್ಟ ಪೇಪರ್ ತಟ್ಟೆಗಳು, ಪ್ಲಾಸ್ಟಿಕ್ ಕವರ್ ಗಳು ಇದ್ದದ್ದು ನೋಡಿ ಬೇಸರವಾಯಿತು. ಅಷ್ಟೊಂದು ಸುಂದರ ಪರಿಸರದಲ್ಲಿ ಗಲೀಜು ಮಾಡಲು ಹೇಗಾದರೂ ಮನಸ್ಸು ಬರುತ್ತದೆ ಜನರಿಗೆ? ನೀವು ಎಂದಾದರೂ ಚಾರಣಕ್ಕೆ ಹೋಗುವುದಾದರೆ ನಮ್ಮ ತಂಡದಿಂದ ಒಂದು ಕೋರಿಕೆ. ದಯವಿಟ್ಟು ನೀವು ಉಪಯೋಗಿಸುವ ಪೇಪರ್ ತಟ್ಟೆಗಳು, ಪ್ಲಾಸ್ಟಿಕ್ ಕವರ್ ಗಳು, ಅಥವಾ ಏನೇ ತ್ಯಾಜ್ಯ ವಸ್ತುಗಳು ಉಳಿದರೂ ನಿಮ್ಮ ಚೀಲದಲ್ಲೇ ಹಾಕಿಕೊಂಡು ಬನ್ನಿ, ಎಲ್ಲಾದರೂ ಕಸದ ಬುಟ್ಟಿ ಕಂಡರೆ ಅದಕ್ಕೆ ಹಾಕಿ. ಪ್ರಜ್ನಾವಂತರಾಗಿ ನಮ್ಮಿಂದ ಪ್ರಕೃತಿಗೆ ಅಷ್ಟಾದರೂ ಮಾಡುವುದು ಕಷ್ಟವಲ್ಲ ಎಂದು ನಮ್ಮ ಅನಿಸಿಕೆ.
(ಮುಗಿಯಿತು)
19 comments:
ಬಹಳ ಚೆನ್ನಾಗಿದೆ ನಿಮ್ಮ ಚಾರಣ ಕಥನ. ಒಮ್ಮೆ ಅಲ್ಲಿಗೆ ಹೋಗಬೇಕೆನಿಸಿದೆ.
ಒಳ್ಳೆಯ ಪ್ರವಾಸ ಕಥನ ಶರತ್ . ಸ್ವಲ್ಪ ಹೊಟ್ಟೆ ಉರಿಯೂ ಆಗುತ್ತದೆ ನಿನ್ನ ಚಾರಣದ ಅನುಭವ ಕೇಳಿ.
Nice article... modala articlenalli kanisidda viper nOdi bhaya aatu!
ಶರತ್,
ಚಾರಣದ ಒಂದೊಂದು ಹೆಜ್ಜೆಯನ್ನೂ ತುಮ್ಬಾ ಚನ್ನಾಗಿ ವಿವರಿಸಿದ್ದೀರಾ. ಬರವಣಿಗೆಯ ಶೈಲಿ ಚನ್ನಾಗಿದೆ.
ಉತ್ತಮ ಮಾಹಿತಿಗೆ ಧನ್ಯವಾದಗಳು......
Nice write up Sharath, I missed this trek :-(.
ಚೆನ್ನಾಗಿದೆ! ನಿಮ್ಮ ಬರಹ ಓದಿ ಅಲ್ಲ, ನಿಮ್ಮ ಚಾರಣದ photo ಗಳನ್ನು ನೋಡಿ ನನಗೆ ಟ್ರೆಕ್ಕಿಂಗ್ ಗೆ ಹೋಗ್ಬೇಕು ಅಂತ ಸಿಕ್ಕಾಪಟ್ಟೆ ಅನಿಸ್ತಿದೆ, :-(
ಬರಹ ತುಂಬಾ ಚೆನ್ನಾಗಿದೆ. ಚಿತ್ರಗಳು ಕೂಡ ಸುಂದರವಾಗಿ ಮೂಡಿ ಲೇಖನದ ಅಂದ ಹೆಚ್ಚಿಸಿದೆ.ನಿಮ್ಮ ಲೇಖನ ಓದಿ ನನಗೆ ಬೇಡಗುಳಿ ,ಜೋಡಿಗೆರೆ ಚಾರಣದ ನೆನಪಾಯಿತು. ನಿಮ್ಮ ಲೇಖನದಲ್ಲಿ ಕಂಡು ಬಂದ ಕಷ್ಟಗಳನ್ನೆಲ್ಲಾ ಅನುಭವಿಸಿ ಪ್ರಕೃತಿ ವಿಸ್ಮಯ ಸವಿಯಲು ಉಮ್ಬಲ ಅಥವಾ ಜಿಗಣೆಗಳಿಗೆ ಧಾರಾಳವಾಗಿ ರಕ್ತ ದಾನ ಮಾಡಿ ಬಂದಿದ್ದೆವು. ಇನ್ನು ಬೆದಗುಲಿಯ ಹಾದಿಯಂತೂ ಜಿಗಣೆಗಳ ಸಾಮ್ರಾಜ್ಯವೇ ಸರಿ . ನೆನಪು ಮೂಡಿಸಿದ ನಿಮಗೆ ಹಾಗು ನಿಮ್ಮ ಲೇಖನಕ್ಕೆ ಜೈ ಹೋ..
ಲೇಖನದ ಒಂದು ಪ್ರತಿಯನ್ನು ದೊಡ್ಮನೆಯ ಕಸ್ತೂರಿ ಅಕ್ಕನಿಗೆ ಕಳಿಸಲೇ?
ಚಿತ್ರಗಳು ಅದ್ಭುತವಾಗಿವೆ. ಲೇಖನದ ನಡುವೆ ಅಲ್ಲಲ್ಲಿರುವ ಹಾಸ್ಯದ ತುಣುಕುಗಳು ಇಷ್ಟವಾದವು.
enanta comment madbeku.. devre balla!! :)
thumba chennagide lekhana :) charanakke raktasaakhi beda ittu :(
ಶರತ್,
ನರಸಿಂಹ ಪರ್ವತ ಚಾರಣ ಚೆನ್ನಾಗಿತ್ತು.
ತ್ಯಾಜ್ಯ ವಸ್ತುಗಳನ್ನು ಚಾರಣದ ಪ್ರದೇಶಗಳಲ್ಲಿ ಬಿಟ್ಟುಬರದೆ ಇರುವ ಬಗ್ಗೆ ಸಹಮತವಿದೆ.
ಪ್ರವಾಸ ಕಥನ ಹಿಡಿಸಿತು!
ಪರಾಂಜಪೆ ಸರ್,
ಖಂಡಿತ ಹೋಗಿ ಬನ್ನಿ... ತುಂಬಾ ಸುಂದರವಾಗಿದೆ ಸ್ಥಳ...
ಸುಮಾ ಚಿಕ್ಕಿ,
ಥ್ಯಾಂಕ್ಸ್ :)
ತೇಜಕ್ಕ,
ಹೌದು.. ಆ ಹಾವು ನೋಡಕ್ಕೆ ಭಯಾನಕವಾಗಿತ್ತು.
ಪ್ರವೀಣ್ ಸರ್,
ನಿಮ್ಮ ಊರನ್ನು ನೋಡಿ ಬಂದೆ, ದೆಹಲಿಗೆ ಬಂದಾಗ ನೀವು ಸಿಗಲಿಲ್ಲ, ಬೆಂಗಳೂರಿಗೆ ಬಂದ್ರೆ ನೀವು ದೆಹಲಿಗೆ ಹಾರಿದ್ರಿ. ನಮ್ಮ ಭೇಟಿ ಯಾವಾಗ ?
ಕಾಂತಿ,
ತುಂಬಾ ಚನ್ನಾಗಿತ್ತು ಟ್ರೆಕ್... ಮುಂದಿನ ಸಲ ಮಿಸ್ ಮಾಡ್ಕಳಡ.
ಹೇಮಾ,
ಯಾವಾಗಲು ಹೊಟ್ಟೆ ಉರ್ಕೋಳದೆ ಆಯ್ತಪ್ಪ ನೀವು
ಬಾಲು ಸರ್,
ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನೀವು ಹೇಳಿದ ಸ್ಥಳಗಳಿಗೂ ಹೋಗಬೇಕು ಅನ್ನಿಸುತ್ತಿದೆ ನನಗೆ :)
ರಾಜೇಶ್ ಸರ್,
ಅವರಿಗೆ ಕಳುಹಿಸಿ, ಆದರೆ ಅವರು ತಪ್ಪು ತಿಳಿದುಕೊಳ್ಳದಿದ್ದರೆ ಸಾಕು. :)
ಕಾರ್ತಿಕ್,
ನಿಮ್ಮ ಕಾಮೆಂಟು ನನಗೆ ತಲುಪಿದೆ :) ಮತ್ತೆ ಕಾಮೆಂಟಿಸುವ ಅವಶ್ಯಕತೆ ಇಲ್ಲ :)
ಈಶ್ವರ ಭಟ್,
ಬ್ಲಾಗಿಗೆ ಬಂದು ಓದಿ ಸಂತೋಷ ಪಟ್ಟು ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದಗಳು. ಜೂನ್ ನಿಂದ ಅಕ್ಟೋಬರ್ ಕೊನೆಯವರೆಗೂ ಎಲ್ಲಿ ಚಾರಣಕ್ಕೆ ಹೋದರು ಜಿಗಣೆಗಳ ಕಾಟ ಇದ್ದದ್ದೇ. ಮುಂದಿನ ಬಾರಿ ರಕ್ತಸಾಕ್ಷಿ ಕೊಡುವುದಿಲ್ಲ ಬಿಡಿ.
@ಅಪ್ಪ-ಅಮ್ಮ,
ಧನ್ಯವಾದಗಳು.
ವಿ.ಆರ್. ಭಟ್ ಸರ್,
ಧನ್ಯವಾದಗಳು ಓದಿ ಪ್ರತಿಕ್ರಿಯಿಸಿದ್ದಕ್ಕೆ.
ಶರತ್,
ನಿರೂಪಣೆ ಮತ್ತು ಫೋಟೋಗಳು ಇಷ್ಟ ಆತು.
ಕಳೆದ ತಿಂಗಳ ನಾನು ಇಲ್ಲಿ ಚಾರಣಕ್ಕೆ ಹೋಗಿದ್ದಿ. ಉಂಬಳ ಸಹವಾಸ ಇದ್ದಿದ್ದೆ. ಆದರೂ ಕಾಡಿನ ದಾರಿಯ ಚಾರಣ ಅದ್ಭುತ..! :-)
-ಪ್ರಶಾಂತ್
ಶರತ್,
ಎಲ್ಲಾ ಪ್ರವಾಸದ ಎಲ್ಲಾ ಭಾಗಗಳನ್ನು ಒಟ್ಟಿಗೆ ಮತ್ತೊಮ್ಮೆ ಓದಿದೆ. ತುಂಬಾ ಚೆನ್ನಾಗಿ ಎಲ್ಲಾ ವಿವರಣೆಯನ್ನು ಕೊಡುವುದರ ಜೊತೆಗೆ ಫೋಟೊಗಳು ಕೂಡ ಖುಷಿಕೊಡುತ್ತವೆ. ನಾನು ಅಲ್ಲಿಗೆ ಹೋಗಬೇಕೆನಿಸಿದೆ.
nimma chaarana kathanada nirupana shaili tumbaa chennagide.nimma varnane nodi namaguu nodabekeniside.jotege bhayavuu aagutte.!
ನರಸಿಂಹ ಪರ್ವತ ತುಂಬ ಚನ್ನಾಗಿದೆ. ಚಿತ್ರಗಳೊಂದಿಗೆ ಸ್ಥಳ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು
ಪದಗಳ ಜೋಡಣೆ ತುಂಬಾ ಚೆನ್ನಾಗಿದೆ.
Hi Sharat, thanks for sharing your experience. I had done this trekking the other way, from Kigga to Agumbe. 4 of us without any guide were lost in forest. We spent the night in the forest, we were without food for almost 20 hours. That was quite an experience.
Post a Comment