ಬೆಳಿಗ್ಗೆ ಹಠಮಾಡಿ ಅಮ್ಮನ ಕೈಯಿಂದ ಪೆಟ್ಟು ತಿಂದು, ದಿನವಿಡೀ ರಂಪ ಮಾಡಿ, ಅಜ್ಜಿಯ ಕೈತುತ್ತು ತಿಂದು ಕಥೆ ಕೇಳಿ ಮಲಗಿದ ಮಗು ಈಗ ಕನಸಿನ ಲೋಕದತ್ತ ಕಳ್ಳ ಹೆಜ್ಜೆ ಇಡುತ್ತಿದೆ. ಆಫೀಸಿನಿಂದ ತಡವಾಗಿ ಮನೆಗೆ ಬಂದ ತಾಯಿಯು ಮುದುಡಿ ಕೈಗಳೆರಡನ್ನೂ ತೊಡೆಯ ಸಂಧಿಯಲ್ಲಿ ಅಡಗಿಸಿ ಮಲಗಿದ ಮುದ್ದು ಕಂದನ ಎದುರು ನಿಂತಿದ್ದಾಳೆ. ಬೆಳಿಗ್ಗೆ ತಾನು ಕೊಟ್ಟ ಪೆಟ್ಟು ಮಗುವಿನ ಮೈಯ್ಯಿಂದ ಮಾಯವಾಗಿದ್ದರೂ ತನ್ನ ಕೈಯ್ಯಲ್ಲಿ ಮಾಯದ ಕಲೆಯಾಗಿ ನಿಂತಿದ್ದನ್ನು ನಿಸ್ಸಹಾಯಕತೆಯಿಂದ ನೋಡಿಕೊಳ್ಳುತ್ತಿದ್ದಾಳೆ. ಬೆಳಿಗ್ಗೆ ಅಸಾಧ್ಯ ಪುಂಡನಂತೆ ಗೋಚರಿಸಿದ ಮಗು ಈಗ ಕಿನ್ನರ ಲೋಕದ ಮಾಯಾವಿಯಂತೆ ಕಾಣುತ್ತಿದೆ. ಪಶ್ಚಾತ್ತಾಪದ ಕಡಲಲ್ಲಿ ಮುಳುಗಿ ಏಳುತ್ತಿರುವ ಹೃದಯವನು ಸಾವರಿಸಿಕೊಳ್ಳಲು ಹೆಣಗುತಿಹಳು ತಾಯಿ. ಅಂದಿನ ಅಧ್ಯಾಯಕ್ಕೆ ತೆರೆ ಎಳೆದಂತೆ, ಆಟವನ್ನು ಮುಗಿಸಿದಂತೆ ಕಂದನು ನಿದ್ದೆಗಣ್ಣಲ್ಲೇ ನಸುನಗುತ್ತಿದೆ. ನಮ್ಮ ಅರಿವಿನ ವಲಯಕ್ಕೆ ನಿಲುಕದ ಶಬ್ದ ರೂಪಗಳನ್ನೂ ದಾಟಿದ ಆಚೆಯ ತೀರದಲ್ಲಿ ಕಂದನೀಗ ವಿಹರಿಸುತ್ತಿರಬಹುದೇ? ತನಗಿಷ್ಟವಾದ ಸಿಹಿ ತಿಂಡಿಗಳನ್ನು ಮೆಲ್ಲುತ್ತಾ, ತನ್ನ ಮುದ್ದಿನ ನಾಯಿ ಮರಿಯ ಮೇಲೆ ಉರುಳುತ್ತಾ, ಅಜ್ಜಿ ಹೇಳಿದ ಕಥೆಯಲ್ಲಿ ಬರುವ ಪಾತ್ರಗಳೊಂದಿಗೆ ಜಿಗಿಯುತ್ತಾ, ಚಿಟ್ಟೆಗಳ ಹಿಂದೆ ಓಡುತ್ತಾ, ತನ್ನ ಮುದ್ದಾದ ಭಾಷೆಯಲಿ ಅಸಂಖ್ಯ ಪ್ರಶ್ನೆಗಳನ್ನು ಕೇಳುತ್ತಿರಬಹುದೇ ತನ್ನ ಪುಟ್ಟ ಕಂದ ? ದುಃಖ್ಖದ ಶ್ರುತಿ ಹಿಡಿದ ತಾಯಿ ಮಗುವಿನ ಪಾದದ ಬಳಿ ಕ್ಷಮೆಯಾಚಿಸುವಂತೆ ಮಂಡಿಯೂರಿ ಕುಳಿತಿದ್ದಾಳೆ.
ಇದಾವುದನ್ನೂ ಅರಿಯದ ಕಂದನ ಮೊಗದಲ್ಲಿ ಇನ್ನೂ ನಸುನಗೆಯೊಂದು ಮಿನುಗುತ್ತಿದೆ. ತನ್ನ ನಿಲುಕಿಗೆ ಸಿಗದ ಕಂದನ ಆ ಲೋಕದಲಿ ತನಗೆ ಸ್ಥಾನವಿದೆಯೆ ಎಂದು ತಾಯಿ ಕಳವಳಗೊಳ್ಳುತ್ತಾಳೆ. ಕಂದನ ಮೇಲೆ ಕೈ ಮಾಡಿದ್ದಕ್ಕಾಗಿ ತನ್ನನ್ನೇ ತಾನು ಶಪಿಸಿಕೊಳ್ಳುತ್ತಾಳೆ. ಎಷ್ಟು ನಿಯಂತ್ರಿಸಿಕೊಂಡರೂ ಸಾಧ್ಯವಾಗದೆ ಕಣ್ಣು ತೇವಗೊಳ್ಳುತ್ತದೆ. ತನ್ನನ್ನು ಮನ್ನಿಸು ಎಂದು ಕಂದನಿಗೆ ಕ್ಷಮಾಪಣೆ ಕೇಳಿದಂತೆ ಮಗುವಿನ ಕೆನ್ನೆಗೊಂದು ಮುತ್ತು ನೀಡಿ ಪ್ರಾಯಶ್ಚಿತಕ್ಕೊಳಗಾಗುತ್ತಾಳೆ ತಾಯಿ...ಮಾತಿಲ್ಲದ ಮೌನ ನಿವೇದನೆಯೊಂದು ಕೊನೆಗೊಳ್ಳುತ್ತದೆ ತನ್ನಷ್ಟಕ್ಕೆ....
(ಮಗುವನ್ನು ಹೆತ್ತು ಬೆಳೆಸಿದ ಪ್ರತಿಯೊಂದು ತಂದೆ-ತಾಯಿಯರು ಅನುಭವಿಸುವ ನೋವು ಇದು. ತಮ್ಮ ಸಾಂಸಾರಿಕ ತಾಪತ್ರಯಗಳ ಮಧ್ಯದಲ್ಲಿ ಮಕ್ಕಳ ಮೇಲೆ ಗದರಿ, ಬಡಿದು, ದಿನದ ಕೊನೆಯ ಮೌನದಲಿ ಪಶ್ಚಾತ್ತಾಪದ ಉರಿಯಲ್ಲಿ ಬೆಂದು ಏಳುತ್ತಾರೆ ತಂದೆ-ತಾಯಿಯರು. ಕೆಲಸ-ಕಾರ್ಯಗಳ ಒತ್ತಡದಲ್ಲಿ ತಮ್ಮ ಮಕ್ಕಳ ಮುದ್ದು ಮಂಗಾಟಗಳನ್ನು ನೋಡಿ ಮನಸ್ಸು ಹಗುರ ಮಾಡಿಕೊಳ್ಳಲೂ ಸಮಯವಿಲ್ಲದಂತಾಗಿದ್ದಾರೆ ಇಂದಿನ ಪಾಲಕರು. ವ್ಯಾಲಿಡಿಟಿ ಮುಗಿದಂತೆ ಮತ್ತೆ ಜರುಗುವ ತಾಳ್ಮೆ ಕಳೆದುಕೊಳ್ಳುವಂತ ಪ್ರಸಂಗಗಳು, ಮತ್ತೆ ಅದನ್ನು ಹಿಂಬಾಲಿಸುವ ಪಶ್ಚಾತ್ತಾಪ, ಈ ಎರಡರಿಂದಲೂ ಮುಕ್ತಿಗೊಳ್ಳಲಿ ತಂದೆ-ತಾಯಿಯರು. ಮಗುವಿನ ತುಂಟಾಟಗಳನ್ನು ನೋಡಿ ಸಂತಸ ಪಡುವಷ್ಟು ಸಮಯ ಅವರಿಗೆ ದಕ್ಕಲಿ)
6 comments:
ನನ್ನ ಮಗನ ಬಾಲ್ಯಕ್ಕೆ ನನ್ನನ್ನು ಕರೆದೊಯ್ದು ನಾನು ಅನುಭವಿಸಿದ ಪಶ್ಚಾತ್ತಾಪವನ್ನು ಪುನಃ ನೆನಪಿಸಿಕೊಟ್ಟೆ..ನೀನೆಂದಂತೆ ಇದು ಎಲ್ಲರ ಜೀವನದಲ್ಲಿಯೂ ನಡೆಯುವಂತದ್ದೆ..ನಾವು ಮೊದಲಿಗೆ ಎಚ್ಚ್ಹೆತ್ತುಕೊಂಡರೆ ತಪ್ಪು ಮಾಡಿದೇನೆನ್ನುವ ಭಾವದಿಂದ ಮುಕ್ತಿ! ನವಿರಾಗಿ ತಿಳಿಹೇಳುವ ಬಗೆ ಇಷ್ಟ ಆಯ್ತು!
ಚೆಂದದ ಬರಹ.ಎಲ್ಲಾ ತಂದೆ ತಾಯಂದಿರೂ ಒಂದಲ್ಲಾ ಒಂದು ಹಂತದಲ್ಲಿ ಅನುಭವಿಸುವ ನೋವು ನಿಮ್ಮ ಬರಹದಲ್ಲಿ ಚೆನ್ನಾಗಿ ಮೂಡಿಬಂದಿದೆ.ನಮಸ್ಕಾರ.
"ಬೆಳಿಗ್ಗೆ ತಾನು ಕೊಟ್ಟ ಪೆಟ್ಟು ಮಗುವಿನ ಮೈಯ್ಯಿಂದ ಮಾಯವಾಗಿದ್ದರೂ ತನ್ನ ಕೈಯ್ಯಲ್ಲಿ ಮಾಯದ ಕಲೆಯಾಗಿ ನಿಂತಿದ್ದನ್ನು ನಿಸ್ಸಹಾಯಕತೆಯಿಂದ ನೋಡಿಕೊಳ್ಳುತ್ತಿದ್ದಾಳೆ."
..ತುಂಬ ಹೃದಯಸ್ಪರ್ಶಿ ಸಾಲು. ಕೊನೆಯ ಹಾರೈಕೆಯೂ ಹಾಗೇ ಇದೆ.
ತುಂಬಾ ಚೆನ್ನಾಗಿದೆ. ಬರಹದ ಲಹರಿಯಲ್ಲಿ ಕಳೆದುಹೋದೆ. ಓದುತ್ತಿರುವಾಗ ಭಾವವೊಂದು ಮೇಳೈಸಿ ಹಳೆಯದು ಮರೆತಂತಾಗಿ ಮತ್ತೆ ಮತ್ತೆ ಹಿಂದಿರುಗಿ ನೋಡಬೇಕಾಯಿತು ..
ಇದು ತಾಯಿ ಮಗುವಿಗೊಂದೇ ಆಗುವ ಸಮಸ್ಯೆ ಅಲ್ಲ.. ಇಬ್ಬರು ದುಡಿಯುತ್ತಿರುವ ಸಂಸಾರದಲ್ಲಿ ಗಂಡ ಹೆಂಡತಿಯರ ನಡುವೆ ಕೂಡ ನಡೆಯುವಂಥದ್ದು.. ಅಲ್ಲಿ ಇನ್ನು ಸಮಸ್ಯೆ ಅಂದರೆ ಪಶ್ಚಾತ್ತಾಪ ಪಡಲು ಅಹಂ ಅಡ್ಡ ಬರುತ್ತದೆ. ಇಲ್ಲಿ ತಪ್ಪು ಯಾರದ್ದೇ ಇರಬಹುದು... ಆದರೆ ಇಬ್ಬರೂ ಅನುಭವಿಸಬೇಕಾದ್ದೆ. ಮಗುವಿನ ಭವಿಷ್ಯಕ್ಕೆಂದೇ ದುಡಿದು ಅದಕ್ಕೆ ಪ್ರೀತಿ, ಮಮತೆಯೊಂದನ್ನು ಬಿಟ್ಟು ಉಳಿದೆಲ್ಲ ಸ್ಥಿರಾಸ್ತಿಗಳನ್ನೂ ಮಾಡಿಡುವ ನಮಗೆ ಜೀವನ ಕೊನೆಯಲ್ಲಿ ಪಶ್ಚಾತ್ತಾಪ ಪಡುವುದೊಂದೇ ದಾರಿಯಾ?
ಇದು ತಾಯಿ ಮಗುವಿಗೊಂದೇ ಆಗುವ ಸಮಸ್ಯೆ ಅಲ್ಲ.. ಇಬ್ಬರು ದುಡಿಯುತ್ತಿರುವ ಸಂಸಾರದಲ್ಲಿ ಗಂಡ ಹೆಂಡತಿಯರ ನಡುವೆ ಕೂಡ ನಡೆಯುವಂಥದ್ದು.. ಅಲ್ಲಿ ಇನ್ನು ಸಮಸ್ಯೆ ಅಂದರೆ ಪಶ್ಚಾತ್ತಾಪ ಪಡಲು ಅಹಂ ಅಡ್ಡ ಬರುತ್ತದೆ. ಇಲ್ಲಿ ತಪ್ಪು ಯಾರದ್ದೇ ಇರಬಹುದು... ಆದರೆ ಇಬ್ಬರೂ ಅನುಭವಿಸಬೇಕಾದ್ದೆ. ಮಗುವಿನ ಭವಿಷ್ಯಕ್ಕೆಂದೇ ದುಡಿದು ಅದಕ್ಕೆ ಪ್ರೀತಿ, ಮಮತೆಯೊಂದನ್ನು ಬಿಟ್ಟು ಉಳಿದೆಲ್ಲ ಸ್ಥಿರಾಸ್ತಿಗಳನ್ನೂ ಮಾಡಿಡುವ ನಮಗೆ ಜೀವನ ಕೊನೆಯಲ್ಲಿ ಪಶ್ಚಾತ್ತಾಪ ಪಡುವುದೊಂದೇ ದಾರಿಯಾ?
Post a Comment